ಹೊಸದೆಹಲಿ: ರದ್ದಾಗಿರುವ ದೆಹಲಿ ಅಬಕಾರಿ ನೀತಿಗೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಮವಾರ 15 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕೇಜ್ರಿವಾಲ್ ಅವರ ಜಾರಿ ನಿರ್ದೇಶನಾಲಯದ ಕಸ್ಟಡಿ ಇಂದು ಅಂತ್ಯಗೊಂಡಿದ್ದು, ಆರೋಪಿಯನ್ನು ರೂಜ್ ಅವೆನ್ಯೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕೇಜ್ರಿವಾಲ್ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಅವರು ಆರೋಪಿಯನ್ನು ಏಪ್ರಿಲ್ 15ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದ್ದಾರೆ.
ಎಎಪಿ ಸಚಿವರಾದ ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳವು ಮಾರ್ಚ್ 21ರಂದು ಕೇಜ್ರಿವಾಲ್ ಅವರನ್ನು ಬಂಧಿಸಿತ್ತು. ಮರುದಿನ, ವಿಶೇಷ ನ್ಯಾಯಾಧೀಶ ಕಾವೇರಿ ಬವೇಜಾ ಆರೋಪಿ ದೆಹಲಿ ಸಿಎಂ ಅವರನ್ನು ಮಾರ್ಚ್ 28 ರವರೆಗೆ ಜಾರಿ ನಿರ್ದೇಶನಾಲಯ (ಇಡಿ) ಕಸ್ಟಡಿಗೆ ಕಳುಹಿಸಿದರು. ನಂತರ, ಕೇಜ್ರಿವಾಲ್ ಅವರ ಇಡಿ ಕಸ್ಟಡಿಯನ್ನು ಏಪ್ರಿಲ್ 1ರವರೆಗೆ ನಾಲ್ಕು ದಿನಗಳವರೆಗೆ ವಿಸ್ತರಿಸಲಾಯಿತು.
ಕಸ್ಟಡಿ ವಿಚಾರಣೆ ವೇಳೆ ಐದು ದಿನಗಳ ಕಾಲ ಕೇಜ್ರಿವಾಲ್ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ಅವರು ಅಸ್ಪಷ್ಟ ಉತ್ತರಗಳನ್ನು ನೀಡುತ್ತಿದ್ದಾರೆ ಎಂದು ಹೊಸ ರಿಮಾಂಡ್ ಅರ್ಜಿಯಲ್ಲಿ ಇಡಿ ಹೇಳಿದೆ. ಕಸ್ಟಡಿ ಅವಧಿಯಲ್ಲಿ ಇತರ ಮೂವರ ಹೇಳಿಕೆಗಳನ್ನು ಸಹ ದಾಖಲಿಸಲಾಗಿದೆ ಎಂದು ಕೇಂದ್ರ ತನಿಖಾ ದಳ ತಿಳಿಸಿದೆ.