Tuesday, January 28, 2025

ಸತ್ಯ | ನ್ಯಾಯ |ಧರ್ಮ

ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಸಿಕ್ಕಿರುವ ದೇಣಿಗೆಯಲ್ಲಿ 87% ಹೆಚ್ಚಳ!

ಬೆಂಗಳೂರು: 2022-2023 ರಿಂದ 2023-2024 ರವರೆಗೆ ಬಿಜೆಪಿಗೆ ಸಿಕ್ಕಿರುವ ದೇಣಿಗೆಯು  87% ಕ್ಕಿಂತ ಹೆಚ್ಚು ಏರಿಕೆಯಾಗಿದೆ. ಚುನಾವಣಾ ಬಾಂಡ್‌ಗಳ ಪಾಲು ಅರ್ಧಕ್ಕಿಂತ ಕಡಿಮೆಯಿದ್ದರೂ ಸಹ ಪಕ್ಷಕ್ಕೆ ಸಿಕ್ಕಿರುವ ದೇಣಿಗೆಯಲ್ಲಿನ ಏರಿಕೆಯನ್ನು ಚುನಾವಣಾ ಆಯೋಗಕ್ಕೆ ತನ್ನ ಆಡಿಟ್ ವರದಿಯಲ್ಲಿ ಬಿಜೆಪಿ ತೋರಿಸಿದೆ.

2023-2024ರ ಬಿಜೆಪಿಯ ವಾರ್ಷಿಕ ಲೆಕ್ಕಪರಿಶೋಧನಾ ವರದಿಯು 2022-2023ರಲ್ಲಿ ಬಿಜೆಪಿಗೆ 2,120.06 ಕೋಟಿ ರುಪಾಯಿಗಳಿಂದ 2023-2024ರಲ್ಲಿ 3,967.14 ಕೋಟಿ ರುಪಾಯಿಗಳಿಗೆ ಏರಿಕೆಯಾಗಿರುವುದನ್ನು ಎಂದು ತೋರಿಸಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ಬಿಜೆಪಿ ಚುನಾವಣಾ ಬಾಂಡ್‌ಗಳ ಮೂಲಕ 1,685.62 ಕೋಟಿ ರೂಪಾಯಿಗಳನ್ನು (ಒಟ್ಟು ದೇಣಿಗೆಯ 42.4%) ಸ್ವೀಕರಿಸಿದೆ. ಇದಕ್ಕೆ ಹೋಲಿಸಿದರೆ 2022-2023ರಲ್ಲಿ, ಸದ್ಯ ರದ್ದಾಗಿರುವ ಎಲೆಕ್ಟೋರಲ್ ಬಾಂಡ್‌ಗಳ ಮೂಲಕ 1,294.14 ಕೋಟಿ ರುಪಾಯಿ (ಒಟ್ಟು ದೇಣಿಗೆಯ 61%) ಪಡೆದುಕೊಂಡಿತ್ತು.

ಲೋಕಸಭೆ ಚುನಾವಣೆಗೆ ಮುಂಚಿತವಾಗಿ 2022-2023 ರಿಂದ 2023-2024 ರವರೆಗೆ ಕಾಂಗ್ರೆಸ್‌ಗೆ ಸಿಕ್ಕಿರುವ ದೇಣಿಗೆಯಲ್ಲಿ 320% ಹೆಚ್ಚಾಗಿದೆ ಎಂದು ಅದರ ಆಡಿಟ್ ವರದಿ ತೋರಿಸಿದೆ. ಪಕ್ಷವು 2022-2023ರಲ್ಲಿ 268.62 ಕೋಟಿ ರುಪಾಯಿ ಮತ್ತು 2023-2024ರಲ್ಲಿ 1,129.66 ಕೋಟಿ ರುಪಾಯಿ ದೇಣಿಗೆಯನ್ನು ಪಡೆದಿತ್ತು. ಇದರಲ್ಲಿ ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆ 2022-2023ರಲ್ಲಿ 63.6% ಮತ್ತು 2023-2024ರಲ್ಲಿ 73.3% ರಷ್ಟಿದ್ದವು.

ಸುಪ್ರೀಂ ಕೋರ್ಟ್ 2024 ರ ಫೆಬ್ರವರಿಯಲ್ಲಿ ಚುನಾವಣಾ ಬಾಂಡ್‌ ಯೋಜನೆಯನ್ನು ಅಸಂವಿಧಾನಿಕ ಎಂದು ರದ್ದುಗೊಳಿಸಿತು. ಹೀಗಾಗಿ 2023-2024 ನೇ ಹಣಕಾಸು ವರ್ಷದಲ್ಲಿ ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಸ್ವೀಕರಿಸಿದ ಕೊನೆಯ ವರ್ಷವಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page