ಛತ್ತೀಸ್‌ಗಢ: ಸೋಮವಾರ ನಕ್ಸಲೀಯರು ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಸಿಬ್ಬಂದಿ ಪ್ರಯಾಣಿಸುತ್ತಿದ್ದ ವಾಹನವನ್ನು ಸ್ಫೋಟಿಸಿದ್ದಾರೆ. ಘಟನೆಯಲ್ಲಿ 9 ಮಂದಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಸತ್ತವರಲ್ಲಿ 8 ಸೈನಿಕರು ಮತ್ತು ಒಬ್ಬ ನಾಗರಿಕ ಸೇರಿದ್ದಾರೆ. ಛತ್ತೀಸ್‌ಗಢದ ಬಿಜಾಪುರದಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಭದ್ರತಾ ಪಡೆಗಳ ಬೆಂಗಾವಲು ವಾಹನ ಸೋಮವಾರ ಬಿಜಾಪುರದ ಕುಟ್ರುಮಾರ್ಗ್ ಮೂಲಕ ಸೈನಿಕರನ್ನು ಕರೆದೊಯ್ಯುತ್ತಿತ್ತು. ಅದೇ ಸಮಯದಲ್ಲಿ ನಕ್ಸಲೀಯರು ಸ್ಫೋಟಕ ಸಾಮಗ್ರಿಗಳೊಂದಿಗೆ ಹೊಂಚು ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ಎರಡು ವರ್ಷಗಳಲ್ಲಿ ಭದ್ರತಾ ಸಿಬ್ಬಂದಿ ಮೇಲೆ ನಕ್ಸಲೀಯರು ನಡೆಸಿದ ಅತಿ ದೊಡ್ಡ ದಾಳಿ ಇದಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಏಪ್ರಿಲ್ 6, 2023ರಂದು ದಂತೇವಾಡ ಜಿಲ್ಲೆಯಲ್ಲಿ ಭದ್ರತಾ ಸಿಬ್ಬಂದಿಯ ಬೆಂಗಾವಲು ವಾಹನವನ್ನು ನಕ್ಸಲೀಯರು ಸ್ಫೋಟಿಸಿದ ಘಟನೆಯಲ್ಲಿ ಹತ್ತು ಪೊಲೀಸ್ ಸಿಬ್ಬಂದಿ ಮತ್ತು ಒಬ್ಬ ನಾಗರಿಕ ಸಾವನ್ನಪ್ಪಿದ್ದರು.
ಈ ಮಧ್ಯೆ ಸೋಮವಾರ ನಕ್ಸಲೀಯರ ದಾಳಿಯಲ್ಲಿ ಯೋಧರು ಹುತಾತ್ಮರಾದ ಬಗ್ಗೆ ಛತ್ತೀಸ್‌ಗಢ ಉಪ ಸಿಎಂ ಅರುಣ್ ಸಾವೊ ವಿಷಾದ ವ್ಯಕ್ತಪಡಿಸಿದ್ದಾರೆ. ಯೋಧರ ಸಾವಿಗೆ ಅವರು ಸಂತಾಪ ಸೂಚಿಸಿದರು.