Home ದೇಶ ʼಪ್ರಮುಖ ಪ್ರಕರಣಗಳʼ ತನಿಖೆಯ ಪ್ರಗತಿ ಪರಿಶೀಲನೆ: ಚುನಾವಣೆಯ ಹೊಸ್ತಿಲಿನಲ್ಲಿರುವ ತಮಿಳುನಾಡಿನತ್ತ ಹೊರಟ ಇಡಿ ನಿರ್ದೇಶಕ ರಾಹುಲ್...

ʼಪ್ರಮುಖ ಪ್ರಕರಣಗಳʼ ತನಿಖೆಯ ಪ್ರಗತಿ ಪರಿಶೀಲನೆ: ಚುನಾವಣೆಯ ಹೊಸ್ತಿಲಿನಲ್ಲಿರುವ ತಮಿಳುನಾಡಿನತ್ತ ಹೊರಟ ಇಡಿ ನಿರ್ದೇಶಕ ರಾಹುಲ್ ನವೀನ್

0

ಜಾರಿ ನಿರ್ದೇಶನಾಲಯದ (ED) ನಿರ್ದೇಶಕ ರಾಹುಲ್ ನವೀನ್ ಅವರು ತಮಿಳುನಾಡಿನಲ್ಲಿ ಸಂಸ್ಥೆಯು ನಡೆಸುತ್ತಿರುವ ಪ್ರಮುಖ ತನಿಖೆಗಳ ಪ್ರಗತಿಯನ್ನು ಪರಿಶೀಲಿಸಲು ಈ ವಾರಾಂತ್ಯದಲ್ಲಿ ಚೆನ್ನೈಗೆ ಭೇಟಿ ನೀಡುತ್ತಿದ್ದಾರೆ. ರಾಜ್ಯ ಸಚಿವ ಕೆ.ಎನ್. ನೆಹರೂ ಮತ್ತು ಇತರರ ವಿರುದ್ಧದ ಹೈ-ಪ್ರೊಫೈಲ್ ಪ್ರಕರಣಗಳನ್ನು ಅವರು ವಿಶೇಷವಾಗಿ ಗಮನಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುರುವಾರ ರಾತ್ರಿಯೇ ಚೆನ್ನೈ ತಲುಪಲಿರುವ ಅವರು, ಶುಕ್ರವಾರ ದಕ್ಷಿಣ ವಲಯದ ಎಲ್ಲಾ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಶನಿವಾರ ದೆಹಲಿಗೆ ಮರಳುವ ಕಾರ್ಯಕ್ರಮವಿದೆ.

ಈ ಭೇಟಿಯ ಸಮಯದಲ್ಲಿ ಇಡಿ ಮುಖ್ಯಸ್ಥರು ತಮಿಳುನಾಡಿನಲ್ಲಿ ದಾಖಲಾಗಿರುವ ಅಕ್ರಮ ಹಣ ವರ್ಗಾವಣೆ ಮತ್ತು ವಿದೇಶಿ ವಿನಿಮಯ ಉಲ್ಲಂಘನೆ ಪ್ರಕರಣಗಳನ್ನು ಪರಾಮರ್ಶಿಸಲಿದ್ದಾರೆ. ವಿಶೇಷವಾಗಿ ನ್ಯಾಯಾಲಯಗಳು ಇತ್ತೀಚೆಗೆ ನಿರ್ದೇಶನ ನೀಡಿರುವ ಪ್ರಕರಣಗಳ ಮೇಲೆ ಅವರು ಹೆಚ್ಚಿನ ಗಮನ ಹರಿಸಲಿದ್ದಾರೆ. ಪೌರಾಡಳಿತ ಮತ್ತು ಜಲಮಂಡಳಿ ಇಲಾಖೆಯ ನೇಮಕಾತಿಯಲ್ಲಿ ನಡೆದಿದೆ ಎನ್ನಲಾದ ಲಂಚದ ಆರೋಪಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎನ್. ನೆಹರೂ ವಿರುದ್ಧ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಮದ್ರಾಸ್ ಹೈಕೋರ್ಟ್ ಕಳೆದ ವಾರವಷ್ಟೇ ಅಲ್ಲಿನ ಭ್ರಷ್ಟಾಚಾರ ವಿರೋಧಿ ದಳಕ್ಕೆ (DVAC) ಆದೇಶಿಸಿದೆ.

ಈ ಪ್ರಕರಣದಲ್ಲಿ ಇಡಿ ಸಂಸ್ಥೆಯು ಈಗಾಗಲೇ ತಮಿಳುನಾಡು ಸರ್ಕಾರದೊಂದಿಗೆ ಕೆಲವು ಪ್ರಮುಖ ಪುರಾವೆಗಳನ್ನು ಹಂಚಿಕೊಂಡಿದ್ದು, ಎಫ್‌ಐಆರ್ ದಾಖಲಾದ ಕೂಡಲೇ ಅಕ್ರಮ ಹಣ ವರ್ಗಾವಣೆಯ ತನಿಖೆಯನ್ನು ಆರಂಭಿಸಲು ಸಿದ್ಧತೆ ನಡೆಸುತ್ತಿದೆ. ಈ ಹಿಂದೆ ಬ್ಯಾಂಕ್ ಸಾಲ ವಂಚನೆ ಪ್ರಕರಣವೊಂದರ ತನಿಖೆ ನಡೆಸುವಾಗ ನೆಹರೂ ವಿರುದ್ಧ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಸಂಸ್ಥೆ ಹೇಳಿದೆ. ಈ ನೇಮಕಾತಿ ಹಗರಣವು ಸುಮಾರು 2,538 ಸಹಾಯಕ ಇಂಜಿನಿಯರ್‌ಗಳ ಹುದ್ದೆಗಳಿಗೆ ಸಂಬಂಧಿಸಿದ್ದಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳು ಈಗಾಗಲೇ ಆರು ತಿಂಗಳಿನಿಂದ ಸೇವೆಯಲ್ಲಿದ್ದಾರೆ.

ಚುನಾವಣಾ ಹೊಸ್ತಿಲಲ್ಲಿರುವ ತಮಿಳುನಾಡಿನಲ್ಲಿ ಇಡಿ ನಿರ್ದೇಶಕರ ಈ ಭೇಟಿ ರಾಜಕೀಯವಾಗಿ ಮಹತ್ವ ಪಡೆದಿದೆ. ತನಿಖೆಗಳ ಪ್ರಗತಿಯ ಜೊತೆಗೆ ಚೆನ್ನೈನಲ್ಲಿರುವ ಎರಡು ವಲಯ ಕಚೇರಿಗಳು ಮತ್ತು ಇತರ ಉಪ-ವಲಯ ಘಟಕಗಳ ಆಡಳಿತಾತ್ಮಕ ಹಾಗೂ ಕಾರ್ಯಾಚರಣೆಯ ವಿಷಯಗಳ ಬಗ್ಗೆಯೂ ಅವರು ಪರಿಶೀಲನೆ ನಡೆಸಲಿದ್ದಾರೆ. ಸಚಿವ ನೆಹರೂ ಅವರು ಈ ಮೊದಲೇ ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದಾರೆ ಎಂಬುದು ಗಮನಾರ್ಹ.

You cannot copy content of this page

Exit mobile version