ಎಂಟನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ನ್ಯಾಯಾಂಗ ವ್ಯವಸ್ಥೆಯ ಕುರಿತು ಸೇರಿಸಲಾದ ವಿವಾದಾತ್ಮಕ ಅಧ್ಯಾಯದ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಕೇವಲ ಕ್ಷಮೆಯಾಚನೆ ಸಲ್ಲಿಸುವುದರಿಂದ ವಿಷಯ ಮುಕ್ತಾಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ ನ್ಯಾಯಾಲಯ, ಈ ವಿಷಯದಲ್ಲಿ ತಪ್ಪು ಮಾಡಿದವರನ್ನು ಗುರುತಿಸಿ ಹೊಣೆಗಾರಿಕೆ ನಿಗದಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ.
ವಿಚಾರಣೆ ವೇಳೆ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅವರು, ನ್ಯಾಯಾಂಗದಲ್ಲಿನ ಭ್ರಷ್ಟಾಚಾರ ಹಾಗೂ ಬಾಕಿ ಉಳಿದಿರುವ ಪ್ರಕರಣಗಳ ಉಲ್ಲೇಖಗಳನ್ನು ಪುಸ್ತಕದಲ್ಲಿ ಸೇರಿಸಿರುವ ವಿಧಾನ ಪ್ರಶ್ನಾರ್ಹವಾಗಿದೆ ಎಂದು ಅಭಿಪ್ರಾಯಪಟ್ಟರು. “ಇದು ನ್ಯಾಯಾಂಗವನ್ನು ದೂಷಿಸುವ ಉದ್ದೇಶ ಹೊಂದಿದಂತೆ ಕಾಣುತ್ತದೆ. ಕಾರಣರಾದವರನ್ನು ಪತ್ತೆಹಚ್ಚುವವರೆಗೆ ವಿಚಾರಣೆಯನ್ನು ಮುಕ್ತಾಯಗೊಳಿಸುವುದಿಲ್ಲ,” ಎಂದು ಅವರು ಎಚ್ಚರಿಸಿದರು.
ಸಿಜೆಐ ಸೂರ್ಯ ಕಾಂತ್ ಅವರು ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಡಾ. ದಿನೇಶ್ ಪ್ರಸಾದ್ ಅವರಿಗೆ ಕಾರಣ ಕೇಳಿ ನೋಟಿಸ್ ನೀಡುವ ಕುರಿತು ಸೂಚನೆ ನೀಡಿದರು. “ಈ ಆಕ್ಷೇಪಾರ್ಹ ವಿಷಯಗಳನ್ನು ರಚಿಸಿದವರ ವಿರುದ್ಧ ನ್ಯಾಯಾಂಗ ನಿಂದನೆ ಕಾಯ್ದೆ ಅಥವಾ ಅನ್ವಯಿಸುವ ಇತರ ಕಾನೂನುಗಳಡಿ ಕ್ರಮ ಕೈಗೊಳ್ಳಬಾರದೇ?” ಎಂದು ನ್ಯಾಯಾಲಯ ಪ್ರಶ್ನಿಸಿದೆ.
ನ್ಯಾಯಾಂಗದ ಘನತೆಯನ್ನು ಕುಂದಿಸುವ ಪ್ರಯತ್ನವೋ ಎಂಬ ಅನುಮಾನ ವ್ಯಕ್ತಪಡಿಸಿದ ಸಿಜೆಐ, ಇಂತಹ ವಿಷಯಗಳನ್ನು ಪಠ್ಯಪುಸ್ತಕಗಳಲ್ಲಿ ಸೇರಿಸುವುದು ವಿದ್ಯಾರ್ಥಿಗಳ ಮನಸ್ಸಿನಲ್ಲಿ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ತಪ್ಪು ಸಂದೇಶ ನೀಡುವ ಸಾಧ್ಯತೆ ಇದೆ ಎಂದು ಹೇಳಿದರು.
ಇದಲ್ಲದೆ, ಈ ಅಧ್ಯಾಯವನ್ನು ಸಮರ್ಥಿಸಲು ಮಾಜಿ ಸಿಜೆಐ ಬಿ.ಆರ್.ಗವಾಯಿ ಅವರ ಭಾಷಣದ ಭಾಗವನ್ನು ಉಲ್ಲೇಖಿಸಿರುವುದನ್ನೂ ನ್ಯಾಯಾಲಯ ಗಮನಿಸಿದೆ. ಆದರೆ ನ್ಯಾಯಾಂಗ ಸುಧಾರಣೆಗೆ ಕಳೆದ ಕೆಲವು ವರ್ಷಗಳಲ್ಲಿ ಕೈಗೊಂಡ ಕ್ರಮಗಳ ಬಗ್ಗೆ NCRT ಯಾವುದೇ ಸ್ಪಷ್ಟನೆ ನೀಡಿಲ್ಲ ಎಂಬುದಾಗಿ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.
