Friday, June 14, 2024

ಸತ್ಯ | ನ್ಯಾಯ |ಧರ್ಮ

ಹಿಜಾಬ್‌ ಪ್ರಕರಣ: ತೀರ್ಪಿನಲ್ಲಿ ನ್ಯಾಯಮೂರ್ತಿಗಳು ಹೇಳಿರುವುದೇನು?

ದೆಹಲಿ : ರಾಜ್ಯ ಮತ್ತು ದೇಶದಲ್ಲಿ ತಿಂಗಳುಗಳ ಕಾಲ ವಿವಾದ ಎಬ್ಬಿಸಿದ್ದ ಹಿಜಾಬ್‌ ಪ್ರಕರಣ ಕುರಿತಂತೆ ಸುಪ್ರೀಂ ಕೋರ್ಟ್ ಇಂದು ತನ್ನ ತೀರ್ಪು ನೀಡಿದೆ. ಅರ್ಜಿದಾರರ ಪರ-ವಿರೋಧ ವಾದಗಳನ್ನು ಆಲಿಸಿದ ನಂತರ ಈ ತೀರ್ಪು ಹೊರಬಿದ್ದಿದೆ. ಆದರೆ ಈಗ ಬಂದಿರುವ ತೀರ್ಪು ಒಮ್ಮತವಿಲ್ಲದ ತೀರ್ಪಾಗಿದ್ದು ನ್ಯಾಯಾಧೀಶರಾದ ಹೇಮಂತ್‌ ಗುಪ್ತಾ ಹಾಗೂ ನ್ಯಾ. ಸುಧಾಂಶು ಧುಲಿಯಾ ತದ್ವಿರುದ್ಧ ತೀರ್ಪು ನೀಡಿದ್ದಾರೆ.  

ಐಶಾತ್‌ ಶಿಫಾ ವಿರುದ್ಧ ಸ್ಟೇಟ್‌ ಆಫ್‌ ಕರ್ನಾಟಕ ಪ್ರಕರಣದಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್‌ ಧರಿಸಿ ಕಾಲೇಜಿಗೆ ಹೋಗುವಂತಿಲ್ಲ ಎಂಬ ಕರ್ನಾಟಕ ಸರ್ಕಾರದ ಆದೇಶವನ್ನು ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪ್ರಕರಣ ಇದಾಗಿದೆ.

ಇಂದಿನ ತೀರ್ಪಿನಲ್ಲಿ ಪೀಠದ ಮುಖ್ಯಸ್ಥ ನ್ಯಾ.ಹೇಮಂತ್‌ ಗುಪ್ತಾ ಅವರು ಕರ್ನಾಟಕ ಸರ್ಕಾರದ ಆದೇಶವನ್ನು ಎತ್ತಿ ಹಿಡಿದಿದ್ದರೆ ನ್ಯಾ.ಸುಧಾಂಶು ಧುಲಿಯಾ ಕರ್ನಾಟಕ ಸರ್ಕಾರದ ಆದೇಶವನ್ನು ತಳ್ಳಿ ಹಾಕಿದರು. ಹೀಗೆ ತದ್ವಿರುದ್ಧ ತೀರ್ಪು ಬಂದ ಕಾರಣ ಮುಖ್ಯ ನ್ಯಾಯಮೂರ್ತಿಗಳು ಪ್ರಕರಣವನ್ನು ತ್ರಿಸದಸ್ಯ ಪೀಠಕ್ಕೆ ವರ್ಗಾಯಿಸುವ ಸಾಧ್ಯತೆ ಎದುರಾಗಿದೆ.

ನ್ಯಾ.ಸುಧಾಂಶು ಧುಲಿಯಾರವರು ತಮ್ಮ ತೀರ್ಪಿನಲ್ಲಿ, “ಹೆಣ್ಣು ಮಕ್ಕಳು ಶಾಲೆಯ ಬಾಗಿಲುಗಳನ್ನು ತೆರೆದು ಒಳಹೋಗುವ ಮೊದಲು ಹಿಜಾಬ್‌ ತೆಗೆಯುವಂತೆ  ಹೇಳುವುದು ಅವರ ಖಾಸಗಿತನದ ಮೇಲಿನ ಆಕ್ರಮಣವಾಗಿದೆ; ಅವರ ಗೌರವ ಘನತೆಯ ಮೇಲಿನ ದಾಳಿಯಾಗಿದೆ; ಅಂತಿಮವಾಗಿ ಅವರಿಗೆ ಜಾತ್ಯತೀತ ಶಿಕ್ಷಣದ ನಿರಾಕರಣೆಯಾಗಿದೆ; ಅಷ್ಟಲ್ಲದೆ ಸಂವಿಧಾನದ 19(1)(A̧) 21 ಮತ್ತು 25(1) ನೇ ವಿಧಿಗಳ ಸ್ಪಷ್ಟ ಉಲ್ಲಂಘನೆಯಾಗಿದೆ”ಎಂದು ಹೇಳಿದ್ದಾರೆ.

ನಮ್ಮ ಸಾಂವಿಧಾನಿಕ ಯೋಜನೆಯಲ್ಲಿ, ಹಿಜಾಬ್‌ಅನ್ನು ಧರಿಸುವುದು ಕೇವಲ ಆಯ್ಕೆಯ ವಿಷಯವಾಗಿರಬೇಕು. ಇದು ಅತ್ಯಗತ್ಯ ಧಾರ್ಮಿಕ ಆಚರಣೆಯ ವಿಷಯವಾಗಿರಬಹುದು ಅಥವಾ ಅಲ್ಲದಿರಬಹುದು ಆದರೆ ಇದು ಆತ್ಮಸಾಕ್ಷಿ, ನಂಬಿಕೆ ಮತ್ತು ಅಭಿವ್ಯಕ್ತಿಯ ವಿಷಯವಾಗಿದೆ” ಎಂದು ತಿಳಿಸಿದ್ದಾರೆ. ಕರ್ನಾಟಕದ ಹೈ ಕೋರ್ಟು ಈ ವಿಷಯದಲ್ಲಿ ಹಿಜಾಬ್‌ ನ ಧಾರ್ಮಿಕ ಅಗತ್ಯತೆಯ ಕುರಿತು ಪರಿಶೀಲನೆಗೆ ತೊಡಗಿದ್ದು ಪ್ರಕರಣವನ್ನು ತಪ್ಪು ದಾರಿಗೆ ಎಳೆದಿದೆ’ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.

‘ಒಬ್ಬ ಹೆಣ್ಣು ಮಗಳು ತನ್ನ ಆಯ್ಕೆಯಿಂದ ತರಗತಿಯ ಒಳಗೂ ಹಿಜಾಬ್ ಧರಿಸಲು ಬಯಸಿದರೆ, ಅವಳನ್ನು ನಿಲ್ಲಿಸಲಾಗುವುದಿಲ್ಲ. ಏಕೆಂದರೆ ಆಕೆಯ ಸಂಪ್ರದಾಯವಾದಿ ಕುಟುಂಬವು ಅವಳನ್ನು ಶಾಲೆಗೆ ಹೋಗಲು ಅನುಮತಿ ನೀಡಬೇಕಾದರೆ ಹಿಜಾಬ್‌ ಧರಿಸುವುದೇ ಅವಳ ಏಕೈಕ ಮಾರ್ಗವಾಗಿರುತ್ತದೆ. ಶಿಕ್ಷಣದಲ್ಲಿ ಹಿಜಾಬ್‌ ಅನ್ನುವ ವಿಷಯ ಅವಳ ಆಯ್ಕೆಯ ವಿಷಯವಾಗಿರುತ್ತದೆ’ ಎಂದು ನ್ಯಾ.ಸುಧಾಂಶುರವರು ಹೆಣ್ಣು ಮಕ್ಕಳ ಪರಿಸ್ಥಿತಿಗಳನ್ನು ಮುಂದಿಟ್ಟು ತಮ್ಮ ನಿಲುವು ದಾಖಲಿಸಿದ್ದಾರೆ.

“ನನ್ನ ದೃಷ್ಟಿಯಲ್ಲಿ ಅತ್ಯಂತ ಮುಖ್ಯವಾದ ವಿಷಯ ಏನಾಗಿತ್ತೆಂದರೆ ಒಬ್ಬ ಹೆಣ್ಣು ಮಗುವಿನ ಶಿಕ್ಷಣ. ಒಬ್ಬ ಹೆಣ್ಣು ಮಗಳು ಅನೇಕ ಕಡೆಗಳಲ್ಲಿ ಅದರಲ್ಲೂ ಹಳ್ಳಿ ಮತ್ತು ಸಣ್ಣ ಪಟ್ಟಣಗಳಲ್ಲಿ ಸಾಕಷ್ಟು ಕಷ್ಟಗಳನ್ನು ಎದುರಿಸುತ್ತಾಳೆ. ಆಕೆ ಶಾಲೆಗೆ ಹೋಗುವ ಮೊದಲು ಪಾತ್ರೆ ತೊಳೆದು ಬಟ್ಟೆ ಒಗೆದು ಅಮ್ಮನಿಗೆ ಮನೆ ಕೆಲಸದಲ್ಲಿ ಸಹಾಯ ಮಾಡಬೇಕೀರುತ್ತದೆ. ಹೀಗಿರುವಾಗ ಹಿಜಾಬ್‌ ನಿಷೇಧಿಸಿ ನಾವು ಆಕೆಯ ಜೀವನವನ್ನು ಉತ್ತಮಗೊಳಿಸುತ್ತಿದ್ದೇವೆಯೇ?” ಎಂಬ ಪ್ರಶ್ನೆಯನ್ನು ನ್ಯಾ. ಧುಲಿಯಾ ಅವರು ತಮಗೆ ತಾವೇ ಕೇಳಿಕೊಂಡಿದ್ದಾಗಿ ತಿಳಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು