Friday, June 14, 2024

ಸತ್ಯ | ನ್ಯಾಯ |ಧರ್ಮ

ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ಹೆಸರಲ್ಲಿ ಹಣ ಸಂದಾಯ ಪ್ರಕರಣ : ಡಿವೈಎಫ್ಐ ಖಂಡನೆ

ವಾಡಿಕೆಯಂತೆ ಮುಖ್ಯಮಂತ್ರಿ ಕಛೇರಿಯಿಂದ ದೀಪಾವಳಿ ಗಿಫ್ಟ್ ನಲ್ಲಿ ಆಯ್ದ ಪತ್ರಕರ್ತರಿಗೆ ಎರಡೂವರೆ ಲಕ್ಷ ರೂಪಾಯಿ ಗಿಫ್ಟ್ ಕಳುಹಿಸಿದ ಬಗ್ಗೆ ಇಂದು ಪೀಪಲ್ ಮೀಡಿಯಾ Exclusive ವರದಿ ಮಾಡಿತ್ತು. ಈ ವರದಿಯ ಬೆನ್ನಲ್ಲೇ ಕೆಲವಷ್ಟು ವೆಬ್ ಮಾದ್ಯಮಗಳೂ ಸಹ ವರದಿ ಮಾಡಿ ಸುದ್ದಿ ಎಲ್ಲೆಡೆ ವೈರಲ್ ಕೂಡಾ ಆಗಿತ್ತು. ಹಾಗೆಯೇ ಈಗ ಈ ಬಗ್ಗೆ ಸಾಮಾಜಿಕವಾಗಿ ಎಲ್ಲೆಡೆ ವ್ಯಾಪಕ ಜನಾಕ್ರೋಶ ಕೂಡಾ ವ್ಯಕ್ತವಾಗಿದೆ.

ರಾಜ್ಯದ ಮುಖ್ಯಮಂತ್ರಿ ಕಛೇರಿಯಿಂದಲೇ ಭ್ರಷ್ಟಾಚಾರಕ್ಕೆ ಮುಂದಾಗಿರುವುದನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್‌ (ಡಿವೈಎಫ್ಐ) ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಮತ್ತು  ರಾಜ್ಯ ಸಮಿತಿಯು ಖಂಡನೆ ವ್ಯಕ್ತಪಡಿಸಿ, ತನಿಖೆಗೆ ಆಗ್ರಹಿಸಿದೆ.

ರಾಜ್ಯದ ಜನತೆಯ ಸರ್ವತೋಮುಖ ಬೆಳವಣಿಗೆಗೆ ಶ್ರಮಿಸುವ ಶಕ್ತಿ ಕೇಂದ್ರವಾಗಬೇಕಾದ ಮುಖ್ಯಮಂತ್ರಿಗಳ ಕಛೇರಿ ಭ್ರಷ್ಟಾಚಾರದ ಕೇಂದ್ರವಾಗಿರುವುದು ಆತಂಕಕಾರಿಯಾಗಿದೆ. ಲೋಕಾಯುಕ್ತ ಸಂಸ್ಥೆ ಇತ್ತ ಗಮನ ಹರಿಸಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

ಇಂದು ಬೆಳಗ್ಗಿನಿಂದ ಕರ್ನಾಟಕದಲ್ಲಿ ಮುಖ್ಯಮಂತ್ರಿಗಳ ಕಚೇರಿಯಿಂದ, ಸಚಿವರ ಕಚೇರಿಗಳಿಂದ ರಾಜ್ಯದ ಹಲವು ಪತ್ರಕರ್ತರಿಗೆ ದೀಪಾವಳಿ ಇನಾಮಿನ ಜೊತೆಯಲ್ಲಿ ನಗದು ಹಣವನ್ನು ನೀಡಲಾಗಿದೆ ಎಂಬುದನ್ನು ಮಾಧ್ಯಮಗಳಲ್ಲಿ ವರದಿಯಾಗಿದೆ. ಇದು ನಿಜವಾಗಿ ಘಟಿಸಿದ್ದಲ್ಲಿ ಚುನಾವಣಾ ಪೂರ್ವ ಭ್ರಷ್ಟಾಚಾರ ಎಂದು ಇದನ್ನು ಪರಿಗಣಿಸುವುದು ಕರ್ನಾಟಕದ ಸಾರ್ವಜನಿಕ ಸ್ವಾಸ್ಥ್ಯದ ದೃಷ್ಟಿಯಿಂದ ಅತ್ಯಗತ್ಯ. ತಾವು ತಕ್ಷಣ ಈ ಬಗ್ಗೆ ಕೂಲಂಕಷ ತನಿಖೆ ನಡೆಸಬೇಕು ಮತ್ತು ಭ್ರಷ್ಟಾಚಾರ ನಡೆದಿರುವುದು ಹೌದೆಂದಾದರೆ ಆ ಬಗ್ಗೆ ತಕ್ಷಣ ಕಾನೂನು ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದೆ. ರಾಜ್ಯದ ಆಡಳಿತ ಚುಕ್ಕಾಣಿಯ ಕೇಂದ್ರದ ಈ ನಡೆಯನ್ನು ರಾಜ್ಯದ ಜನತೆ ತೀವ್ರವಾಗಿ ಪ್ರತಿರೋಧಿಸಬೇಕು ಎಂದು ಡಿವೈಎಫ್ಐ ಕರೆ ನೀಡಿದೆ.

ಮುಖ್ಯಮಂತ್ರಿ ಕಛೇರಿಯ ಈ ನಡೆಯನ್ನು ವಿರೋಧಿಸಿ ಹಣ ಹಿಂದಿರುಗಿಸಿದ ಪತ್ರಕರ್ತರು ಹಾಗೂ ಮಾಧ್ಯಮ ಸಂಸ್ಥೆಗಳಿಗೆ ಅಭಿನಂದನೆ ಸಲ್ಲಿಸುತ್ತದೆ ಎಂದು ಮಾಧ್ಯಮಗಳಿಗೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

Related Articles

ಇತ್ತೀಚಿನ ಸುದ್ದಿಗಳು