Friday, June 14, 2024

ಸತ್ಯ | ನ್ಯಾಯ |ಧರ್ಮ

ಮುಜರಾಯಿ ಇಲಾಖೆ ಟೆಂಡರ್‌: ದಲಿತ ಸಮುದಾಯದವರ ಕ್ಷಮೆಯಾಚಿಸುವಂತೆ ಸರ್ಕಾರಕ್ಕೆ ಕಾಂಗ್ರೆಸ್‌ ಆಗ್ರಹ

ಬೆಂಗಳೂರು: ಸರ್ಕಾರದ ಮುಜರಾಯಿ ಇಲಾಖೆಯು ದೇವಸ್ಥಾನದಲ್ಲಿ ಚಪ್ಪಲಿ ಕಾಯುವ ಟೆಂಡರನ್ನು ದಲಿತ ಸಮುದಾಯಕ್ಕೆ ಮೀಸಲಿಟ್ಟ ವಿಷಯದ ಕುರಿತು ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್‌ ಘಟಕ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಮತ್ತು ಮುಜರಾಯಿ ಸಚಿವರು ದಲಿತ ಸಮುದಾಯದವರಲ್ಲಿ ಕ್ಷಮೆ ಕೇಳುವಂತೆ ಒತ್ತಾಯಿಸಿದೆ.

ಸರ್ಕಾರದ ವ್ಯಾಪ್ತಿಯಲ್ಲಿರುವ ಬೆಂಗಳೂರಿನ ದೊಡ್ಡಗಣಪತಿ ಮತ್ತು ಸಮೂಹ ದೇವಸ್ಥಾನಗಳ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿ ಅಕ್ಟೋಬರ್‌ 31ರಂದು ನಡೆಸಿದ ಬಹಿರಂಗ ಹರಾಜು ಪ್ರಕಟಣೆಯಲ್ಲಿ, ದೇವಸ್ಥಾನದ ಆವರಣದಲ್ಲಿ ಪೂಜಾ ಸಾಮಾಗ್ರಿ, ಎಳನೀರು ಮಾರಾಟ, ಸುಂಕ ವಸೂಲಿ ಹಕ್ಕುಗಳು ಸಾಮಾನ್ಯ ವರ್ಗಕ್ಕೆ ಮೀಸಲಿಟ್ಟಿದ್ದು, ಚಪ್ಪಲಿ ನೋಡಿಕೊಳ್ಳುವ ಹಕ್ಕನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟಿದ್ದು, ಈ ಬಗ್ಗೆ ಬಾರಿ ಆಕ್ರೋಶಕ್ಕೆ ಕಾರಣವಾಗಿತ್ತು.

ಈ ಕುರಿತು ರಾಜ್ಯ ಕಾಂಗ್ರೆಸ್‌ ಘಟಕ ಟ್ವೀಟ್‌ ಮಾಡಿದ್ದು, ದೇವಸ್ಥಾನದಲ್ಲಿ ಚಪ್ಪಲಿ ಕಾಯುವ ಟೆಂಡರನ್ನು ದಲಿತರಿಗೆ ಮೀಸಲಿರಿಸುವ ಮೂಲಕ ಬಿಜೆಪಿ ಸರ್ಕಾರ ತನ್ನೊಳಗಿನ ಕೊಳಕಿನ ಮನುವಾದವನ್ನು ಜಾರಿಯಲ್ಲಿಡಲು ಯತ್ನಿಸಿದೆ. ಜನಾಕ್ರೋಶದ ನಂತರ ಪ್ರಕಟಣೆ ಬದಲಾಗಿರಬಹುದು, ಆದರೆ ಬಿಜೆಪಿಯ ದಲಿತವಿರೋಧಿ ಮನಸ್ಥಿತಿ ಬದಲಾಗಿಲ್ಲ ಎಂದು ಟೀಕಿಸಿದೆ.

ಈ ಹಿನ್ನಲೆಯಲ್ಲಿ, ಸಿಎಂ ಹಾಗೂ ಮುಜರಾಯಿ ಸಚಿವರು ದಲಿತರಲ್ಲಿ ಕ್ಷಮೆ ಕೇಳಬೇಕು ಎಂದು ರಾಜ್ಯ ಕಾಂಗ್ರೆಸ್‌ ಘಟಕ ಆಗ್ರಹಿಸಿದೆ.

Related Articles

ಇತ್ತೀಚಿನ ಸುದ್ದಿಗಳು