Saturday, April 27, 2024

ಸತ್ಯ | ನ್ಯಾಯ |ಧರ್ಮ

ಸರ್ಕಾರದ ಅಯೋಗ್ಯತನಕ್ಕೆ ಕನ್ನಡಿ ಹಿಡಿದು ತೋರಿಸಿದ ಶ್ರೀರಾಮುಲು: ಕಾಂಗ್ರೆಸ್‌ ಟೀಕೆ

ಬಳ್ಳಾರಿ: ಬಳ್ಳಾರಿ ಉಸ್ತುವಾರಿ ಸಚಿವ ಶ್ರೀರಾಮುಲು ಕಾಲುವೆಗೆ ನೀರು ಹರಿಸಬೇಕೆಂದು ವೇದಾವತಿ ನದಿಯ ಬಳಿ ವಾಸ್ತವ್ಯ ಹೂಡಿದ್ದರು. ಈ ಹಿನ್ನಲೆಯಲ್ಲಿ ಶ್ರೀರಾಮುಲು ಅವರನ್ನು ರಾಜ್ಯ ಕಾಂಗ್ರೆಸ್‌ ಟೀಕಿಸಿದೆ

ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಹರಿಯುತ್ತಿರುವ ವೇದಾವತಿ ನದಿಗೆ ಇತ್ತೀಚೆಗೆ ದಾಖಲೆಯ ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರು ಹರಿದು ಬಂದಿದ್ದು, ಮೇಲ್ಸೇತುವೆಯ ಪಿಲ್ಲರ್ ಕುಸಿದ ಪರಿಣಾಮ ಈ ಭಾಗ ಮತ್ತು ನೆರೆಯ ಆಂಧ್ರಪ್ರದೇಶದ ಕರ್ನೂಲು ಭಾಗದ ರೈತರಿಗೂ ಹೆಚ್ಚು ಹಾನಿ ಆಗಿತ್ತು. ಪಿಲ್ಲರ್ ಕುಸಿದ ಹಿನ್ನೆಲೆಯಲ್ಲಿ ಕಳೆದ 20 ದಿನಗಳಿಂದ ಈ ಭಾಗಕ್ಕೆ ನೀರು ಹರಿಸುವುದನ್ನು ನಿಲ್ಲಿಸಲಾಗಿತ್ತು. ಇದರಿಂದ 20 ಗ್ರಾಮಗಳಲ್ಲಿ ಭತ್ತ ಬೆಳೆದ ರೈತರಿಗೆ ತೀವ್ರ ಸಮಸ್ಯೆ ಉಂಟಾಗಿತ್ತು.

ಈ ಸಂಬಂಧ ರೈತರ ಅಹವಾಲುಗಳನ್ನು ಸ್ವೀಕರಿಸಿದ ಶಾಸಕ ನಾಗೇಂದ್ರ ಸ್ಥಳಕ್ಕೆ ಭೇಟಿ ನೀಡಿ, ಸ್ಥಳೀಯ ರೈತರು, ಸಂಘಟನೆಗಳು, ಸ್ಥಳೀಯ ಮುಖಂಡರು ಮತ್ತು ಗುತ್ತಿಗೆದಾರರ ಜೊತೆಗೆ ಮಾತನಾಡಿ, ತ್ವರಿತಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಜೊತೆಗೆ ಪಕ್ಕದ ಆಂಧ್ರ ಪ್ರದೇಶದ ಜನಪ್ರತಿನಿಧಿಗಳ ಜೊತೆಗೆ ಮಾತನಾಡಿ ಸ್ಥಳಕ್ಕೆ ಭೇಟಿ ನೀಡುವಂತೆ ಆಹ್ವಾನಿಸಿ, ತಾತ್ಕಾಲಿಕ ಪಿಲ್ಲರ್ ನಿರ್ಮಾಣಕ್ಕೆ ಕಾಮಗಾರಿ ಶುರು ಮಾಡಿದ್ದರು.

ಇದರ ಬಗ್ಗೆ ಮಾಹಿತಿ ಅರಿತ ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಕಾಮಗಾರಿ ನಡೆಯುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿ, ಅಧಿಕಾರಿಗಳೊಂದಿಗೆ ಚರ್ಚಿಸಿ, “ನಾನು ಇಲ್ಲೇ ಇದ್ದು ರೈತರಿಗೆ ನೀರು ಬಿಡಿಸಿಯೇ ಇಲ್ಲಿಂದ ತೆರಳುವುದು. ಅಲ್ಲಿಯವರೆಗೆ ಇಲ್ಲಿಂದ ನಿರ್ಗಮಿಸುವುದಿಲ್ಲ” ಎಂದು ಕಾಮಗಾರಿ ಸ್ಥಳದಲ್ಲೇ ವಾಸ್ತವ್ಯ ಹೂಡಿದರು. ಇನ್ನೂ ಮುಂದುವರಿದು ಅಲ್ಲಿಗೇ ಹಾಸಿಗೆ ತರಿಸಿ ಕಾಮಗಾರಿ ಸ್ಥಳದಲ್ಲೇ ನಿದ್ರೆಗೂ ಜಾರಿದ್ದರು.

ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಕಾಂಗ್ರೆಸ್‌, ʼಬಸವರಾಜ ಬೊಮ್ಮಾಯಿಯವರ ಅಸಾಮರ್ಥ್ಯವನ್ನು ಎತ್ತಿ ತೋರಿಸಲು ಸಚಿವ ಶ್ರೀ ರಾಮುಲು ಅವರು ಬಳ್ಳಾರಿ ವೇದಾವತಿ ನದಿ ಬಳಿ ಪ್ರತಿಭಟನೆ ಕುಳಿತಿದ್ದಾರೆ. ಅಧಿಕಾರಿಗಳು ಸಿಎಂ ಮಾತು ಕೇಳುವುದಿಲ್ಲ, ಸಚಿವರಿಗೂ, ಸಿಎಂಗೂ ಹಾಗೂ ಅಧಿಕಾರಿಗಳ ಮದ್ಯ ಸಮನ್ವಯತೆ ಇಲ್ಲ, ಇವರ ಧರಣಿ ಸರ್ಕಾರದ ಅಯೋಗ್ಯತನಕ್ಕೆ ಹಿಡಿದ ಕನ್ನಡಿʼ ಎಂದು ಕಾಂಗ್ರೆಸ್‌ ಟೀಕಿಸಿದೆʼ

Related Articles

ಇತ್ತೀಚಿನ ಸುದ್ದಿಗಳು