Friday, June 14, 2024

ಸತ್ಯ | ನ್ಯಾಯ |ಧರ್ಮ

ಮ್ಯಾಮ್‌ ಯು ಆರ್‌ ಎ ಫೆಮಿನಿಸ್ಟ್…

ಸ್ತ್ರೀವಾದ ಒಂದು ಬದುಕಿನ ಕ್ರಮ. ಇದು ಮಹಿಳೆಯರಿಗೆ ಮಾತ್ರ ಸಂಬಂಧಿಸಿದ್ದಲ್ಲ. ಆ ಬದುಕಿನ ಕ್ರಮವನ್ನು ಗಂಡು ಹೆಣ್ಣು ಇಬ್ಬರೂ ಪ್ರೀತಿಯಲ್ಲಿ ಕಟ್ಟಿಕೊಳ್ಳಬೇಕು ಎಂಬ ಆಶಯ ಬೆಂಗಳೂರಿನ ಸೈಂಟ್‌ ಜೋಸೆಫ್‌ ಕಾಲೇಜಿನ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿನಿ ದಿವ್ಯಶ್ರೀ ಅದರಂತೆ ಅವರದು.

ಇವತ್ತು ಬೆಳಿಗ್ಗೆ ಇಂಗ್ಲಿಷ್ ಲಿಟರೇಚರ್ ಕ್ಲಾಸ್ ಲಿ Eunice D souza ಎಂಬ ಇಂಗ್ಲಿಷ್ ಮಹಿಳಾ ಬರಹಗಾರ್ತಿಯ Miss Louise ಕವಿತೆಯ ಬಗ್ಗೆ ಉಪನ್ಯಾಸ ನಡೆಯುತ್ತಿತ್ತು. ಕವಿತೆಯನ್ನ ಬಹಳ ಆಪ್ತವಾಗಿ ಸ್ತ್ರೀವಾದಿಯ ನೆಲೆಯಲ್ಲಿ ವಿಮರ್ಶಿಸುತ್ತಿದ್ದ ಉಪನ್ಯಾಸಕಿಗೆ ಒಬ್ಬ ವಿದ್ಯಾರ್ಥಿ “mam you are a feminist” ಎಂದನು. ಚರ್ಚೆ ಗಂಭೀರ ಸ್ವರೂಪ ತಾಳಿತು.

ಚರ್ಚೆ ಮುಂದುವರಿಯುತ್ತಿದ್ದಂತೆ, ಆತ “ನನ್ ಮನೇಲಿ ನನ್ನ ಬಟ್ಟೆಯನ್ನ ನಾನೇ ವಾಶ್ ಮಾಡ್ಕೋತೀನಿ. ಅಪ್ಪನೂ ಅವರೇ ಮಾಡ್ಕೋತಾರೆ. ಅಪ್ಪ ಅಮ್ಮ ಇಬ್ಬರೂ ವರ್ಕ್ ಮಾಡ್ತಾರೆ.. There is an equality between them.. There is no need of feminist thoughts” ಎಂದಿದ್ದಕ್ಕೆ,  ಮೇಡಂ, “what about bedsheets, curtains?  ಎಂಬ ಪ್ರಶ್ನೆಯನ್ನ ಮುಂದಿಟ್ಟರು. ಆಗ ಆ ವಿದ್ಯಾರ್ಥಿ ತುಂಬಾ ಮುಜುಗರ ಮತ್ತು ನಾಚಿಕೆಯಿಂದ, “my mom washes” ಎಂದನು. ಕ್ಲಾಸ್ ಬೆಲ್ ಆಗಿದ್ದರಿಂದ ಚರ್ಚೆ ಅಲ್ಲಿಗೆ ನಿಂತಿತು.

ಮನೇಲಿ ಹೆಣ್ಣೊಬ್ಬಳ ಮುಕ್ಕಾಲು ಭಾಗ ಜೀವನ ಪಾತ್ರೆ, ಬಟ್ಟೆ, ಅಡುಗೆ, ಮಕ್ಕಳ ಪಾಲನೆ, ಗಂಡನ ಆರೈಕೆ ಇದರಲ್ಲೇ ಕೊನೆಗೊಳ್ಳುತ್ತಿದೆ. ಆಕೆ ಸ್ವಂತಕ್ಕೆಂದು ಯಾವತ್ತೂ ಸಮಯ ನಿಗದಿ ಮಾಡಿಕೊಂಡಿಲ್ಲ. ಸ್ತ್ರೀವಾದಿಗಳು ಇದರ ಬಗ್ಗೆ ಪ್ರಶ್ನೆ ಎತ್ತಿದಾಗಲೆಲ್ಲ ಬಂದ ಉತ್ತರಗಳು ” ನಾವು ಗಂಡಸರು ಹೊರಗೆ ದುಡಿದು ಬರುತ್ತೇವೆ. ಮನೆಯಲ್ಲಿರುವ ಹೆಂಗಸರಿಗೆ ಆ ಕೆಲಸಗಳೇನು ಕಷ್ಟ ಆಗಲಾರವು” ಎಂದೇ.

ಸರಿ ಒಪ್ಪಿಕೊಳ್ಳುವ, ಹಾಗಿದ್ದರೆ ಗಂಡಸರಂತೆ ಹೊರಗೆ ದುಡಿದು ಬರುವ ಹೆಣ್ಣುಮಕ್ಕಳ ಜೀವನ ಹೇಗಿದೆ? ಎಂಬುದು ಈಗ ಹುಟ್ಟುವ ಪ್ರಶ್ನೆ. ಹಳ್ಳಿಗಳಲ್ಲಂತು ಯಾವ ಹೆಣ್ಣಿಗೂ ಮನೆಯಲ್ಲಿ ಕೂರುವ ಸ್ಥಿತಿ ಇನ್ನೂ ಬಂದೊದಗಿಲ್ಲ. ಸೂರ್ಯ ಹುಟ್ಟುವ ಮುಂಚೆಯೇ ಎದ್ದು, ಮನೆ ಕೆಲಸ ಮಾಡಿ, ಅಡಿಗೆ ಮಾಡಿ, ಮಕ್ಕಳನ್ನ ಶಾಲೆಗೆ ಕಳಿಸಿ ಅದೇ ಟೈಮ್ಗೆ ತಾನೂ ಅವನೊಟ್ಟಿಗೆ ಕೆಲಸಕ್ಕೆ ಹೊರಡುತ್ತಾಳೆ. ಸೂರ್ಯ ಮುಳುಗುವ ಹೊತ್ತಿನವರೆಗೂ ಆಕೆಯು ದುಡಿಯುತ್ತಾಳೆ.

ಇಬ್ಬರೂ ಮನೆಗೆ ಹಿಂದಿರುಗಿದ ಮೇಲೆ ಅವನು ಕೂತು ಹರಟೆ ಹೊಡೆಯುತ್ತಾನೆ, ಟಿವಿ ನೋಡುತ್ತಾನೆ, ಇಲ್ಲವೇ ಮಕ್ಕಳೊಟ್ಟಿಗೆ ಕೂತು ಸಮಯ ಕಳೆಯುತ್ತಾನೆ. ಆದರೆ ಅವಳ ಸ್ಥಿತಿ? ಮತ್ತೆ ಮನೆ ಕಸ ಗುಡಿಸುವುದು, ರಾತ್ರಿ ಊಟಕ್ಕೆ ಅಡಿಗೆ ಮಾಡುವುದು, ಮಕ್ಕಳಿಗೆ ಊಟ ಮಾಡಿಸುವುದು, ಪಾತ್ರೆ ತೊಳಿಯೋದು ಇದೇ ದಿನಚರಿ. ಎಲ್ಲಾ ಮುಗಿಸಿ ಆಗುವ ಹೊತ್ತಿಗೆ, ಅವನಿಂದ  “ಮಕ್ಕಳು ಮಲಗಿದಾರೆ, ಹಾಸಿಗೆ ಹಾಸು” ಎಂಬ ಆಜ್ಞೆ! ಶಾಲಾಕಾಲೇಜುಗಳಲ್ಲಿ ಶಿಕ್ಷಕಿಯರಾಗಿ, ಉಪನ್ಯಾಸಕಿಯರಾಗಿ, ಕಚೇರಿಗಳಲ್ಲಿ ಬೇರೆ ಬೇರೆ ಹುದ್ದೆಗಳಲ್ಲಿ ಕೆಲಸ ಮಾಡುವ ಮಹಿಳೆಯರ ವಿಷಯದಲ್ಲೂ ಇದೇ ವಾಸ್ತವ.

ಹೀಗಿರುವಾಗ, ಅವಳ ಸ್ವಾತಂತ್ರ್ಯದ ಬಗ್ಗೆ ನಾವೇಕೆ ಧ್ವನಿ ಎತ್ತಬಾರದು? “ನನ್ನ ಹೆಂಡತಿ ಕೆಲಸ ಮಾಡುವಾಗ ಮಗುವನ್ನು ನೋಡಿಕೊಳ್ಳುತ್ತೇನೆ, ಅವಳಿಗೆ ಅಡುಗೆಯಲ್ಲಿ “HELP” ಮಾಡುತ್ತೇನೆ” ಎಂದು ಬಡಾಯಿ ಕೊಚ್ಚಿ ಕೊಳ್ಳುವವರಿಗೆ ಒಂದು ಕಿವಿಮಾತು. ಇದೇ ನಿಮ್ಮ ಮಾತುಗಳು ಅವಳ ಬಾಯಿಂದ ಬಂದರೆ, ಪರಿಸ್ಥಿತಿ ಹೇಗಿರುತ್ತೆ ಎಂದು ನೀವು ಯೋಚಿಸಬೇಕಲ್ಲವೇ? ಆಕೆ ಯಾವತ್ತೂ ನಿಮ್ಮ so called ʼHELPʼ ನ್ನ ಬಯಸುವುದಿಲ್ಲ. ಅದು ನಿಮ್ಮ ಕರ್ತವ್ಯ ಎಂದು ಅರಿತು ನೀವು ಮಾಡಲೇಬೇಕು.

ಗಂಡ ಆಫೀಸ್ ಗೆ ಹೊರಡುವ ವೇಳೆ ಅವನಿಗೆ ಟೈ ಕಟ್ಟುವುದು, ಕೋಟ್ ಹಾಕಿಸುವುದು, ಲಂಚ್‌ ಬಾಕ್ಸ್ ತಂದು ಕೊಡುವುದು ಇವೆಲ್ಲ ಫಿಲಂಗಳಲ್ಲಿ, ಜಾಹೀರಾತುಗಳಲ್ಲಿ ನಿತ್ಯ ಹರಿದಾಡುವ ಸಂಗತಿಗಳು. ಈ ಮೀಡಿಯಾಗಳು ಸಹ ಹೆಣ್ಣನ್ನು ಸೇವಕಿಯಾಗಿ, ಗುಲಾಮಳಾಗಿ  ತೋರಿಸುವುದರಲ್ಲಿ ಹಿಂದೆ ಬಿದ್ದಿಲ್ಲ.  ಇದರ ಬದಲಾಗಿ ಅವನೇ ಅವಳಿಗೆ ಈ ಎಲ್ಲಾ ಸೇವೆಗಳನ್ನು ಮಾಡುತ್ತಿರುವಂತೆ ಯಾಕೆ ತೋರಿಸುತ್ತಿಲ್ಲ ಎಂಬುದರ ಬಗ್ಗೆ ನಾವು ಯೋಚಿಸಬೇಕು. ಅವನಿಗೂ ಕೈ ಕಾಲುಗಳುಂಟು ಅಲ್ಲವೇ? ಇದೆಲ್ಲ ಅವಳಿಂದಲೇ ಆಗಬೇಕು ಎಂಬ ಜಿದ್ದಿಗೆ ಬಿದ್ದಿರುವುದಾದರೂ ಏಕೆ?

ಈ ಹಳ್ಳಿಗಳ ಸಾಂಪ್ರದಾಯಿಕ ಮದುವೆಗಳಲ್ಲಿ ಹೆಣ್ಣುಮಗಳು ತಲೆತಗ್ಗಿಸಿಕೊಂಡೇ ನಿಲ್ಲುವುದು, ಹತ್ತಾರು ಬಾರಿ ಅವನ ಕಾಲಿಗೆ ನಮಸ್ಕರಿಸುವುದು, ಅವನ ಎಡಭಾಗಕ್ಕೆ ಆಕೆ ನಿಲ್ಲುವುದು (negativity), ಅವನನ್ನು ಬಹುವಚನದಲ್ಲಿ ಸಂಬೋಧಿಸುವುದು, ಅವಳ ಹೆಸರಿನ ಮುಂದೆ ಅವನ ಹೆಸರಿನ ಸೇರ್ಪಡೆ ಇವೆಲ್ಲವುಗಳು ತಲೆತಲಾಂತರದಿಂದ ಅವಳಿಗೆ ಗೊತ್ತಿಲ್ಲದಂತೆ ಅವಳನ್ನು ಮೇಲೇಳದಂತೆ ಅತ್ಯಂತ ಸಮರ್ಪಕವಾಗಿ ನಡೆಸಿಕೊಂಡು ಬಂದ ಹುನ್ನಾರಗಳು ಎಂಬುದು ನಾವೆಲ್ಲರೂ ತಿಳಿಯಲೇಬೇಕಾದ ಮುಖ್ಯ ಸಂಗತಿಗಳು.

ಈ ಎಲ್ಲಾ ಅನ್ಯಾಯ, ಅಸಮಾನತೆಗಳ ವಿರುದ್ಧ ಮಾತನಾಡುವ ಸ್ತ್ರೀವಾದಿಗಳ ಕುರಿತು ಅಸಹನೆಯಿಂದ ಕುಹಕವಾಡುವವರಿದ್ದಾರೆ. ‌ಸ್ತ್ರೀವಾದಿಗಳೆಂದರೆ ಗಂಡಸರನ್ನು ತುಳಿದು ತಮ್ಮದೇ ಸಾಮ್ರಾಜ್ಯ ಕಟ್ಟ ಹೊರಟವರಲ್ಲ. ‘ಗಂಡಿನಂತೆಯೇ ಹೆಣ್ಣಿಗೂ ಸ್ವ-ಇಚ್ಛೆಯಂತೆ ಬದುಕುವ ಸ್ವಾತಂತ್ರ್ಯವಿದೆ ಎನ್ನುವ ಸ್ತ್ರೀ-ಪುರುಷ ಮನಸುಗಳು.  ಸಮಾನತೆಗೆ ಹೆಣ್ಣೊಬ್ಬಳೇ ಹೋರಾಡಿದರೆ ಸಾಲದು, ಪುರುಷರಲ್ಲೂ ಸ್ತ್ರೀವಾದ ಹುಟ್ಟಬೇಕು. ಆಗ ಮಾತ್ರ ಸದೃಢ ಸಮಾಜದ ನಿರ್ಮಾಣ ಸಾಧ್ಯ.. 

ದಿವ್ಯಶ್ರೀ ಅದರಂತೆ

ಬೆಂಗಳೂರಿನ ಸೈಂಟ್‌ ಜೋಸೆಫ್‌ ಕಾಲೇಜಿನ ಇಂಗ್ಲಿಷ್‌ ಸಾಹಿತ್ಯದ ವಿದ್ಯಾರ್ಥಿನಿ

Related Articles

ಇತ್ತೀಚಿನ ಸುದ್ದಿಗಳು