Thursday, June 27, 2024

ಸತ್ಯ | ನ್ಯಾಯ |ಧರ್ಮ

ನರೇಂದ್ರ ಮೋದಿ ಅವರೇ ನಮ್ಮ ಕ್ಷೇತ್ರಕ್ಕೂ ಬನ್ನಿ, ರಸ್ತೆಗಳು ಸರಿ ಹೋಗುತ್ತವೆ: ಅಶೋಕ್ ಮೃತ್ಯುಂಜಯ

ಬೆಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿಯವರೇ ಇಲ್ಲಿನ ಮಹದೇವಪುರ ಕ್ಷೇತ್ರಕ್ಕೆ ಬನ್ನಿ, ನಮ್ಮ ರಸ್ತೆಗಳು ಸರಿ ಹೋಗುತ್ತವೆ ಎಂದು ಆಮ್‌ ಆದ್ಮಿ ಪಕ್ಷದ ಮಹದೇವಪುರ ಕ್ಷೇತ್ರದ ಅಧ್ಯಕ್ಷರಾದ ಅಶೋಕ್ ಮೃತ್ಯುಂಜಯ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರು ಸಂಚರಿಸುವ ಮಾರ್ಗಗಳಲ್ಲಿನ ರಸ್ತೆ ಗುಂಡಿಗಳನ್ನು ಮಾತ್ರ ಬಿಬಿಎಂಪಿ ಮುಚ್ಚುತ್ತಿರುವ ಹಿನ್ನೆಲೆಯಲ್ಲಿ, ಆಮ್‌ ಆದ್ಮಿ ಪಾರ್ಟಿಯು ಬುಧವಾರದಿಂದ “ನಮ್ಮಲ್ಲಿಗೂ ಬನ್ನಿ ಮೋದಿ” ಅಭಿಯಾನವನ್ನು ಹಮ್ಮಿಕೊಂಡಿತ್ತು.

ಅಭಿಯಾನದ ಹಿನ್ನಲೆಯಲ್ಲಿ, ಅಶೋಕ್ ಮೃತ್ಯುಂಜಯ ನೇತೃತ್ವದ ತಂಡ ನರೇಂದ್ರ ಮೋದಿಯವರನ್ನು ಮಹದೇವಪುರ ಕ್ಷೇತ್ರಕ್ಕೆ ಬನ್ನಿ ಎಂದು ಒತ್ತಾಯಿಸಿದ್ದಾರೆ.

ನಗರದ ಬೆಳ್ಳಂದೂರಿನ ಮದರ್‌ವುಡ್‌ ರಾಮ್‌ದೇವ್‌ ಮೆಡಿಕಲ್‌ ರಸ್ತೆಯಲ್ಲಿ ಸುಮಾರು 20ಕ್ಕಿಂತ ಹೆಚ್ಚು ಬಾರಿ ರಸ್ತೆಗೆ ಮರು ಡಾಂಬಾರಿಕರಣ ಮಾಡಲಾಗಿದೆ, ಆದರೂ ಸಹ ಕಳಪೆ ಕಾಮಗಾರಿಯಿಂದಾಗಿ ರಸ್ತೆಯ ಉದ್ದಕ್ಕೂ ಗುಂಡಿಗಳು ತುಂಬಿಕೊಂಡಿದ್ದು, ಜನರು ಸಂಚಾರ ನಡೆಸಲು ತೊಂದರೆಯಾಗುತ್ತಿದೆ. ಈ ರಸ್ತೆಗುಂಡಿಗಳಿಂದ ಹಲವಾರು ಜನರು ಗಾಯಗೊಂಡಿದ್ದಾರೆ, ಇನ್ನೂ ಕೆಲವರು ತಮ್ಮ ಪ್ರಾಣಕಳೆದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ರಸ್ತೆಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದಲೂ ಮತ್ತು ಬಿಬಿಎಂಪಿಯವರಿಂದಲೂ ಮುಚ್ಚಿಸಲು ಸಾಧ್ಯವಾಗಲಿಲ್ಲ, ಆದರೆ ನರೇಂದ್ರ ಮೋದಿಯವರು ಬಂದರೆ ಇದು ಸಾದ್ಯವಾಗುತ್ತದೆ. ಹೀಗಾಗಿ ಕರ್ನಾಟಕ ವಿಧಾನಸಭೆಯ ಸದಸ್ಯರಾದ ಅರವಿಂದ ಲಿಂಬಾವಳಿಯವರಿಗೆ ಮನವಿ ಮಾಡಿಕೊಂಡ ಅವರು, ನರೇಂದ್ರ ಮೋದಿಯವರನ್ನು ಈ ಕ್ಷೇತ್ರಕ್ಕೆ ಕರೆತನ್ನಿ. ಆಗ ನೀವುಗಳೆ ನಿಂತು ಕೆಲಸ ಮಾಡಿಸುತ್ತೀರಿ, ಆಗ ಇಲ್ಲಿ ಜನರ ಸಂಚಾರಕ್ಕೆ ಅನುಕೂಲಕರವಾಗುತ್ತದೆ ಮತ್ತು ನಗರದ ಎಲ್ಲಾ ರಸ್ತೆಗಳು ಸುಂದರವಾಗಿ ಕಾಣುತ್ತವೆ ಎಂದು ವ್ಯಂಗಿಸಿದರು.

ಕಳೆದ ಬಾರಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಭೇಟಿ ನೀಡಿದ ಹಿನ್ನಲೆಯಲ್ಲಿ, ರಾಜ್ಯ ಸರ್ಕಾರವು 23 ಕೋಟಿ ರೂ. ಖರ್ಚುಮಾಡಿ, ಅವರು ಸಂಚರಿಸುವ ಎಲ್ಲಾ ರಸ್ತೆಗಳನ್ನು ಸರಿಪಡಿಸಿದ್ದರು. ಹೀಗಾಗಿ ಬೆಂಗಳೂರಿನಲ್ಲಿ ಶೇ 90 ರಷ್ಟು ರಸ್ತೆಗುಂಡಿಗಳು ಮುಚ್ಚಿಹೋಗಿದ್ದವು. ಈ ಕಾರಣ ಮೋದಿಯವರು ಮಹದೇವಪುರ ಕ್ಷೇತ್ರಕ್ಕೆ ಬಂದರೆ ಇಲ್ಲಿನ ರಸ್ತೆಗಳು ಕೂಡ ಸರಿ ಹೋಗಲಿವೆ ಎಂದು ಅಶೋಕ್ ಮೃತ್ಯುಂಜಯ ಟೀಕಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು