Thursday, June 20, 2024

ಸತ್ಯ | ನ್ಯಾಯ |ಧರ್ಮ

ʼಮೇಡಂ, ಅಮೆರಿಕದ ನೌಕಾಪಡೆಯ ಯುದ್ಧನೌಕೆಗಳು ಬಂಗಾಳ ತೀರವನ್ನು ಪ್ರವೇಶಿಸಿವೆ’

ಇಂದು ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮದಿನ. ಭಾರತದ ಪ್ರಧಾನಿಗಳ ಪಟ್ಟಿಯಲ್ಲಿ ಹಲವು ಕಾರಣಗಳಿಗಾಗಿ ಎದ್ದು ಕಾಣುವ ಹೆಸರು ಇಂದಿರಾ ಗಾಂಧಿಯವರದು. ಈ ಹಿನ್ನೆಲೆಯಲ್ಲಿ ನಮ್ಮ ಪೀಪಲ್‌ ಮೀಡಿಯಾ ಸಂಸ್ಥೆಯ ಪ್ರಧಾನ ಸಂಪಾದಕರಾದ ದಿನೇಶ್‌ ಕುಮಾರ್‌ ಎಸ್‌ ಸಿ ಅವರು ಬರೆದಿರುವ ಒಂದು ವಿಶೇಷ ಲೇಖನ ನಿಮ್ಮ ಓದಿಗಾಗಿ

ಯಾವುದೇ ದೇಶದ ಪ್ರಧಾನಿಯ ಎದೆ ನಡುಗಿಸುವ ಸುದ್ದಿ ಅದು. ಆದರೆ ಇಂದಿರಾ ಗಾಂಧಿ ಕೇಳಿಯೂ ಕೇಳದಂತೆ ಸುಮ್ಮನಿದ್ದರು. ಈ ಸುದ್ದಿಯನ್ನು ಹೇಳುತ್ತಿರುವವರು ಬೇರೆ ಯಾರೂ ಅಲ್ಲ, ಭಾರತ ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಎಸ್.ಎಂ.ನಂದ. ಇನ್ನೇನು ಬಾಂಗ್ಲಾದೇಶ ವಿಮೋಚನೆಗಾಗಿ ಭಾರತ ಪಾಕಿಸ್ತಾನದ ಜತೆ ನಿರ್ಣಾಯಕ ಕದನಕ್ಕೆ ಸಜ್ಜಾದಾಗ ಪ್ರಧಾನಿ ಇಂದಿರಾಗಾಂಧಿ ಭೂಸೇನೆ, ವಾಯುಸೇನೆ ಮತ್ತು ನೌಕಾಪಡೆಯ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸುತ್ತಿದ್ದರು.

ಇಂದಿರಾಗಾಂಧಿ ಏನೂ ಪ್ರತಿಕ್ರಿಯೆ ನೀಡದೇ ಇದ್ದರಿಂದಾಗಿ ಚರ್ಚೆ ಮುಂದುವರೆಯಿತು. ತಾನು ಹೇಳಿದ್ದನ್ನು ಇಂದಿರಾ ಕೇಳಿಸಿಕೊಂಡರೋ ಇಲ್ಲವೋ ಎಂಬ ಧಾವಂತ ಅಡ್ಮಿರಲ್ ನಂದ ಅವರಿಗೆ. ಹೀಗಾಗಿ ಮತ್ತೆ ಮಧ್ಯೆ ಪ್ರವೇಶಿಸಿ, ‘ಮೇಡಂ, ಅಮೆರಿಕದ ಯುದ್ಧನೌಕೆಗಳು ಬಂಗಾಳ ತೀರ ಪ್ರವೇಶಿಸಿವೆ. ಇದನ್ನು ನಾನು ತಮ್ಮ ಗಮನಕ್ಕೆ ತರಲೇಬೇಕಿದೆ’ ಎಂದರು. ಇಂದಿರಾ ಥಟ್ಟನೇ ಹೇಳಿದರು: ‘ಅಡ್ಮಿರಲ್, ನೀವು ಮೊದಲ ಬಾರಿ ಹೇಳಿದಾಗಲೇ ನಾನು ಅದನ್ನು ಕೇಳಿಸಿಕೊಂಡೆ. ಆ ಕುರಿತು ಚಿಂತೆ ಬೇಡ. ಚರ್ಚೆ ಮುಂದುವರೆಯಲಿ’

ಅಡ್ಮಿರಲ್ ನಂದ ಅವರೊಂದಿಗೆ ಅಂದಿನ ಪ್ರಧಾನಿ ಇಂದಿರಾಗಾಂಧಿ ಮಾತುಕತೆ
ಸಭೆಯಲ್ಲಿದ್ದ ಎಲ್ಲ ಅಧಿಕಾರಿಗಳು ಒಮ್ಮೆ ಬೆಚ್ಚಿಬಿದ್ದರು. ಪ್ರಧಾನಿಯ ಆ ಧೈರ್ಯದ ಮನೋಭಾವ ಎಲ್ಲರ ನೈತಿಕ ಶಕ್ತಿಯನ್ನು ಹೆಚ್ಚಿಸಿಬಿಟ್ಟಿತ್ತು. ಜಗತ್ತಿನ ಅತಿದೊಡ್ಡ ನೌಕಾಪಡೆಯನ್ನು ಹೊಂದಿದ್ದ ಅಮೆರಿಕದ ನೌಕೆಗಳು ಬಂದಿವೆ ಎಂದರೂ ಬೆದರದ ಇಂದಿರಾ, ಅಮೆರಿಕದ ಹಸ್ತಕ್ಷೇಪದ ಬಗ್ಗೆ ತೋರಿದ ತಿರಸ್ಕಾರ ಭಾರತ ಸಶಸ್ತ್ರ ಪಡೆಗಳ ಮನೋಬಲವನ್ನು ಹೆಚ್ಚಿಸಿತ್ತು.

ಇಂದಿರಾಗಾಂಧಿ ಹೀಗೆ ಅಮೆರಿಕದ ಬೆದರಿಕೆಯನ್ನು ತಿರಸ್ಕಾರದಿಂದ ನೋಡುವುದಕ್ಕೆ ಕಾರಣವೂ ಇತ್ತು. ಆಕೆಗೆ ಒಂದು ಯುದ್ಧವನ್ನು ಹೇಗೆ ಎಲ್ಲ ಬಗೆಯ ಪೂರ್ವತಯಾರಿಗಳೊಂದಿಗೆ ನಡೆಸಬೇಕು ಎಂಬುದು ಖಚಿತವಾಗಿ ಗೊತ್ತಿತ್ತು. ಯುದ್ಧವ್ಯೂಹವನ್ನು ರಚಿಸಲು ಅವರು ಭದ್ರತಾಪಡೆಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿ ಅವರನ್ನು ಕೆಲಸಕ್ಕೆ ಹಚ್ಚಿ ರಾಜತಾಂತ್ರಿಕ ತಂತ್ರಗಳನ್ನು ಹೆಣೆಯುತ್ತ ಬಂದರು. ಪಾಕಿಸ್ತಾನದಲ್ಲಿ ದಂಗೆ ಶುರುವಾದ ಹೊತ್ತಿನಲ್ಲೇ ಇಂದಿರಾ ಯುದ್ಧವನ್ನು ಊಹಿಸಿದ್ದರು ಮತ್ತು ಲೋಕಸಭೆಯಲ್ಲಿ ಈ ಸಂಬಂಧ ಕೇಳಲಾದ ಪ್ರಶ್ನೆಗಳಿಗೆ ಮಾ.27ರಂದು ಅತ್ಯಂತ ಜವಾಬ್ದಾರಿಯುತ ಪ್ರತಿಕ್ರಿಯೆ ನೀಡಿದ್ದರು. ‘ಇಂಥ ಗಂಭೀರ ಸಂದರ್ಭದಲ್ಲಿ ಒಂದು ಸರ್ಕಾರವಾಗಿ ಅತಿ ಕಡಿಮೆ ಮಾತನಾಡುವುದು ಒಳ್ಳೆಯದು’. ಅದೇ ದಿನ ರಾಜ್ಯಸಭೆಯಲ್ಲಿ ಮಾತನಾಡುತ್ತ ಇಂದಿರಾಗಾಂಧಿ ಎಚ್ಚರಿಸಿದರು: ‘ಒಂದು ತಪ್ಪು ಹೆಜ್ಜೆ, ಒಂದು ತಪ್ಪು ಶಬ್ದ ನಾವು ಏನನ್ನು ಮಾಡಲು ಹೊರಟಿದ್ದೇವೋ ಅದನ್ನು ಸಂಪೂರ್ಣ ಹಾಳುಗೆಡವಬಹುದು’

ಅಲ್ಲಿಂದಾಚೆಗೆ ಆರು ತಿಂಗಳ ಕಾಲ, ಇಂದಿರಾ ಒಂದು ತಪ್ಪು ಶಬ್ದ ಮಾತನಾಡಲಿಲ್ಲ, ಒಂದು ತಪ್ಪು ಹೆಜ್ಜೆ ಇಡಲಿಲ್ಲ. ನಿರಂತರವಾಗಿ ಜಾಗತಿಕ ನಾಯಕರುಗಳಿಗೆ ಪತ್ರಗಳನ್ನು ಬರೆದರು. ಭಾರತ ಗಡಿಯಲ್ಲಿ ಉದ್ಭವಿಸಿರುವ ಸನ್ನಿವೇಶವನ್ನು ಬಿಡಿಸಿ ಹೇಳಿದರು. ಬ್ರಿಟನ್, ಬೆಲ್ಜಿಯಂ, ಜರ್ಮನಿ, ಫ್ರಾನ್ಸ್ ಮತ್ತು ಅಮೆರಿಕಕ್ಕೆ ತಾವೇ ಖುದ್ದಾಗಿ ಭೇಟಿ ನೀಡಿ ಪಾಕ್ ಅಂತರ್ಯುದ್ಧದ ಸನ್ನಿವೇಶವನ್ನು ವಿವರಿಸಿದರು. ಪಶ್ಚಿಮ ಪಾಕಿಸ್ತಾನವು ಪೂರ್ವ ಪಾಕಿಸ್ತಾನದ ನಾಗರಿಕರ ಮೇಲೆ ನಡೆಸುತ್ತಿರುವ ಮಿಲಿಟರಿ ಕಾರ್ಯಾಚರಣೆ, ಭೀಕರ ನರಮೇಧಗಳು, ಲಕ್ಷಾಂತರ ಬೆಂಗಾಲಿ ಮಹಿಳೆಯರ ಮೇಲಿನ ಅತ್ಯಾಚಾರಗಳ ಕುರಿತು ಅಂತಾರಾಷ್ಟ್ರೀಯ ಸಮುದಾಯಕ್ಕೆ ಮನವರಿಕೆ ಮಾಡಿಕೊಟ್ಟರು. ಭಾರತದ ಪರಮಾಪ್ತ ರಾಷ್ಟ್ರ ಸೋವಿಯತ್ ಯೂನಿಯನ್ ಜತೆ ಐತಿಹಾಸಿಕ ಮೈತ್ರಿ ಮತ್ತು ಪರಸ್ಪರ ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದರು.

ಪೂರ್ವ ಪಾಕಿಸ್ತಾನದಲ್ಲಿ ಎದ್ದ ದಂಗೆಯ ನಂತರ ಪಾಕಿಸ್ತಾನದ ವಿರುದ್ಧ ಯುದ್ಧ ಹೂಡುವುದು ಅನಿವಾರ್ಯ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಆದರೆ ಅದಕ್ಕೆ ಅವರು ಆತುರ ತೋರಲಿಲ್ಲ. ಅವರು ಮಾಡಿದ ಮೊದಲ ಕೆಲಸವೇ ಸೇನಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು. ‘ಭಾರತ ಈ ಸಂದರ್ಭದಲ್ಲಿ ಯುದ್ಧ ಮಾಡಲು ಸಾಧ್ಯವೇ?’ ಎಂದು ಅವರು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಅವರನ್ನು ಕೇಳಿದ್ದರು. ಮಾಣಿಕ್ ಷಾ ಅತ್ಯಂತ ನೇರವಾಗಿ ‘ಆಗುವುದಿಲ್ಲ, ಅದಕ್ಕೆ ಸಮಯ ಬೇಕಾಗುತ್ತದೆ’ ಎಂದಿದ್ದರು. ಇಂದಿರಾ ಮರುಮಾತನಾಡದೇ ಅವರು ಕೇಳಿದಷ್ಟು ಸಮಯ ನೀಡಿದರು, ತಯಾರಿಗಳನ್ನು ಮಾಡಿಕೊಳ್ಳಲು ಆದೇಶಿಸಿದ್ದರು. ಬಾಂಗ್ಲಾ ವಿಮೋಚನೆಯ ಯುದ್ಧ ಘೋಷಣೆಯಾದ ನಂತರ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಈ ಯುದ್ಧವನ್ನು ಮುಗಿಸಿಬಿಡಲು ಇಂದಿರಾಗಾಂಧಿ ಬಯಸಿದ್ದರು. ಅಂತಾರಾಷ್ಟ್ರೀಯ ಸಮುದಾಯಗಳು ಪರಿಸ್ಥಿತಿಯ ಲಾಭ ಪಡೆಯಲು, ಮಧ್ಯ ಪ್ರವೇಶಿಸಲು ಅವಕಾಶವಿಲ್ಲದಂತೆ ಯುದ್ಧ ಪೂರ್ಣಗೊಳ್ಳಬೇಕು ಎಂಬುದು ಅವರ ಸ್ಪಷ್ಟ ನಿಲುವಾಗಿತ್ತು. ಅವರು ಅಂದುಕೊಂಡ ಹಾಗೆಯೇ ಆಯಿತು. 1971 ಡಿಸೆಂಬರ್ 3ರಂದು ತಡರಾತ್ರಿ ಆರಂಭಗೊಂಡ ಯುದ್ಧ ಡಿಸೆಂಬರ್ 16ರಂದು ಮುಗಿದೇ ಹೋಗಿತ್ತು. ಪಾಕಿಸ್ತಾನದ 91,000 ಸೈನಿಕರು (ಈ ಪೈಕಿ ಕೆಲ ನಾಗರಿಕರು, ಸೈನಿಕ ಕುಟುಂಬದವರು, ರಜಾಕರೂ ಇದ್ದರು) ಭಾರತ ಸೈನ್ಯದೆದುರು ಮಂಡಿಯೂರಿ ಶರಣಾಗತರಾಗುವುದರೊಂದಿಗೆ ಬಾಂಗ್ಲಾದೇಶ ಎಂಬ ಹೊಸ ರಾಷ್ಟ್ರ ಉದ್ಭವಿಸಿತು. ಎರಡನೇ ವಿಶ್ವಸಮರದ ನಂತರ ನಡೆದ ಬಹುದೊಡ್ಡ ಯುದ್ಧ ಇದಾಗಿತ್ತು. ಎರಡನೇ ಮಹಾಯುದ್ಧದ ನಂತರ ಇಷ್ಟು ದೊಡ್ಡ ಸಂಖ್ಯೆಯ ಯುದ್ಧಕೈದಿಗಳು ಉದ್ಭವಿಸಿದ ಯುದ್ಧವೂ ಇದಾಗಿತ್ತು. ಪಾಕಿಸ್ತಾನ ಎಂಥ ಹೀನಾಯವಾದ ಸೋಲನ್ನಪ್ಪಿತು ಎಂದರೆ ತನ್ನ ಅರ್ಧದಷ್ಟು ನೌಕಾಪಡೆಯನ್ನು ಅದು ಕಳೆದುಕೊಳ್ಳಬೇಕಾಯಿತು, ಮಾತ್ರವಲ್ಲ ಕಾಲುಭಾಗದಷ್ಟು ವಾಯುಪಡೆಯನ್ನು ಮೂರನೇ ಒಂದು ಭಾಗದಷ್ಟು ಭೂಸೇನೆಯನ್ನು ಕಳೆದುಕೊಂಡಿತು. ಪಾಕಿಸ್ತಾನ ಎರಡು ಭಾಗವಾಗಿ ಹೋಯಿತು. ತನ್ನ ಶೇ.60 ರಷ್ಟು ಭೂಭಾಗವನ್ನು, ಜನಸಂಖ್ಯೆಯನ್ನು ಶಾಶ್ವತವಾಗಿ ಕಳೆದುಕೊಂಡಿತು.

ದಿನೇಶ್‌ ಕುಮಾರ್‌ ಎಸ್‌ ಸಿ

Related Articles

ಇತ್ತೀಚಿನ ಸುದ್ದಿಗಳು