Saturday, June 15, 2024

ಸತ್ಯ | ನ್ಯಾಯ |ಧರ್ಮ

ಆದಿಲ್‌ ಶಾಹಿ ಸಂಪುಟಗಳ ತಲೆಬುಡ ತಿಳಿಯದೇ ಮಾತಾಡಿದ ಚಕ್ರತೀರ್ಥಗೆ ಸಂಪಾದಕರ ಖಡಕ್‌ ಉತ್ತರ

ವಿಜಯಪುರ ಜಿಲ್ಲೆಯ ಬಿ ಎಲ್ ಡಿ ಇ ಸಂಸ್ಥೆಯ ವಚನ ಪಿತಾಮಹ ಡಾ. ಫ ಗು ಹಳಕಟ್ಟಿ ಸಂಶೋಧನ ಕೇಂದ್ರ ಕನ್ನಡದಲ್ಲಿ ಆದಿಲ್ ಶಾಹಿ ಇತಿಹಾಸ ಸಂಪುಟಗಳನ್ನು ಹೊರತಂದಿದೆ. ಡಿಸೆಂಬರ್ 18 ರಂದು ಭಾನುವಾರ ಬೆಂಗಳೂರಿನ ಬಸವ ಸಮಿತಿ ಸಭಾಂಗಣದಲ್ಲಿ ಲೋಕಾರ್ಪಣೆ ಮಾಡಲಾಯಿತು. ಹಸ್ತ ಪ್ರತಿಗಳಲ್ಲಿ ಅಡಗಿದ್ದ ಹಾಗೂ ಪರ್ಶಿಯನ್ ಅರೇಬಿಕ್ ಹಾಗೂ ಧಖಣಿ ಭಾಷೆಯಲ್ಲಿದ್ದ ಆದಿಲ್ ಶಾಹಿಗಳ ಇತಿಹಾಸ ಒಂದು ಕಡೆ ಅಂತಾ ಇರಲಿಲ್ಲ. ದೇಶದ ವಿವಿಧ ಭಾಗಗಳಲ್ಲಿ ಹರಿದು ಹಂಚಿಹೋಗಿತ್ತು. ಕಾರಣ ಅಷ್ಟೊಂದು ಸಲೀಸಾಗಿ ಹಸ್ತಪ್ರತಿಗಳನ್ನು ಒಂದೆಡೆ ಕ್ರೋಡೀಕರಿಸುವ ಕೆಲಸ ಸರಳವಾಗಿರಲಿಲ್ಲ. ಡಾ ಕೃಷ್ಣ ಕೋಲ್ಹಾರ ಕುಲಕರ್ಣಿ ಅವರ ನೇತೃತ್ವದಲ್ಲಿ 2014 ರಿಂದ ಆರಂಭವಾದ ಆದಿಲ್ ಶಾಹಿಗಳ ಇತಿಹಾಸ ಭಾಷಾಂತರ ಕಾರ್ಯ ಇದೀಗ ಮುಕ್ತಾಯವಾಗಿದೆ. ಒಟ್ಟು 19 ಸಂಪುಟಗಳು ಕನ್ನಡದಲ್ಲಿ, 2 ಸಂಪುಟ ಇಂಗ್ಲೀಷ್ ನಲ್ಲಿ, 1 ಸಂಪುಟ ಉರ್ದು ಭಾಷೆಯಲ್ಲಿ ಬಿಡುಗಡೆ ಮಾಡಲಾಗುತ್ತಿದೆ. ಈ ಕುರಿತು ರೋಹಿತ ಚಕ್ರತೀರ್ಥ ಅವರು ಪ್ರತಿಕ್ರಿಯೆ ನೀಡಿದ್ದು ಈಗ ಚರ್ಚೆಗೆ ಕಾರಣವಾಗಿದೆ ಅದರ ಕುರಿತು ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿ ಅವರ ಮಾತುಗಳು ಇಲ್ಲಿವೆ.

ಹಿರಿಯ ಸಂಶೋಧಕ ಕೃಷ್ಣ ಕೊಲ್ಹಾರ ಕುಲಕರ್ಣಿಯವರು ಸಂಪಾದಿಸಿದ ಅದಿಲ್ ಶಾಹೀ ಸಂಪುಟಗಳ ಬಗ್ಗೆ ರೋಹಿತ್ ಚಕ್ರತೀರ್ಥ ಬರೆದದ್ದಕ್ಕೆ ಕುಲಕರ್ಣಿಯವರ ನೀಡಿದ ಉತ್ತರ ಇಲ್ಲಿದೆ

ಮಾನ್ಯ ರೋಹಿತ ಚಕ್ರತೀರ್ಥ,

ಎರಡು ದಿನಗಳ ಹಿಂದೆ ನೀವು ಸಾಮಾಜಿಕ ಜಾಲತಾಣದಲ್ಲಿ (ಫೇಸ್ ಬುಕ್‌) ವಿಜಯಪುರದ ಡಾ.ಫ.ಗು ಹಳಕಟ್ಟಿ ಸಂಶೋಧನ ಕೇಂದ್ರದಿಂದ ಆದಿಲ್‌ ಶಾಹಿ ಕಾಲದ ಪರ್ಶಿಯನ್ ಅರೇಬಿಕ್ ಮತ್ತು ದಖನಿ ಉರ್ದು ಪುಸ್ತಕ ಕನ್ನಡ ಅನುವಾದ 18 ಸಂಪುಟಗಳ ಬಿಡುಗಡೆ ಬಗ್ಗೆ ನಿಮ್ಮ ಅಮೊಘ ವಿಚಾರಗಳನ್ನು ಹರಿಬಿಟ್ಟಿದ್ದೀರಿ. ಬೇರೆ ಯಾರಾದರೂ ಬರೆದಿದ್ದರೆ ಅದನ್ನು ತಲೆಗೆ ಹಚ್ಚಿಕೊಳ್ಳುತ್ತಿರಲಿಲ್ಲ. ಆದರೆ ತಾವು ಅಖಂಡ ಕರ್ನಾಟಕದ ಮಕ್ಕಳಿಗೆ ಪಾಠ ಹೇಳಿಕೊಡುವ ಪಠ್ಯಪುಸ್ತಕಗಳನ್ನು ಸಿದ್ಧ ಪಡಿಸಿದ ಸಮಿತಿಯ ಅಧ್ಯಕ್ಷರಾಗಿದ್ದವರು. ಅಖಂಡ ಕರ್ನಾಟಕದ ಮಕ್ಕಳು ಅವುಗಳನ್ನು ಓದಬೇಕು. ನಾನು ನಿಮ್ಮ ವಿಚಾರಗಳಿಗೆ ಸ್ಪಂದಿಸದಿದ್ದರೆ ಸರಿಯಲ್ಲ ಎಂದುಕೊಂಡೆನು.
ನಿಮ್ಮ ವಿಚಾರಗಳು

೧. ಹೆಸರು ಡಾ.ಫ.ಗು ಹಳಕಟ್ಟಿ ಸಂಶೋಧನ ಕೇಂದ್ರ, ಸರ್ಕಾರ ಕೊಟ್ಟದ್ದು 75 ಲಕ್ಷ ಅನುದಾನ. ಯೋಜನೆ ಆದಿಲ್ ಶಾಹಿ ಕಾಲದ ಅರೇಬಿಕ್ ಪರ್ಶಿಯನ್ ಉರ್ದು ಭಾಷೆಯ ಫರ್ಮಾನುಗಳ ಅನುವಾದ, ಈ ಕೇಂದ್ರಕ್ಕೂ ಮಾಡಿರುವ ಕೆಲಸಕ್ಕೂ ಏನು ಸಂಬಂಧ ಸ್ವಾಮಿ, ಪಠ್ಯ ಪುಸ್ತಕಗಳ ಸಮಿತಿಗೆ ಅಧ್ಯಕ್ಷರಾದ ತಾವು ಸಂಶೋಧನೆ ಕೇಂದ್ರಕ್ಕೂ ಈ ಅನುವಾದ ಕೆಲಸಕ್ಕೂ ಏನು ಸಂಬಂಧ ಅಂತೀರಲ್ಲ? ಏನು ಹೇಳಬೇಕು? ಸಂಶೋಧನ ಕೇಂದ್ರ ಎಂದು ಹೇಳುತ್ತೀರಿ ಮತ್ತೆ ಅದು ಏನು ಮಾಡಬೇಕು ಜಗತ್ತಿನ ತುಂಬೆಲ್ಲ ಹರಡಿ ಹಂಚಿ ಹೋಗಿದ್ದ ನಮ್ಮ ನೆಲದ ಪುಸ್ತಕಗಳನ್ನು ಹುಡುಕಿ ತಂದು ಅದರಲ್ಲಿ ಏನಿದೆ ಎಂದು ತಿಳಿದುಕೊಳ್ಳುವುದು ಬೇಡವೆ? 200 ವರುಷಗಳ ಕಾಲ ಅದರಲ್ಲೂ 100 ವರುಷ ನೀವು ನಾವು ಅಂದರೆ ಇಂದಿನ ಅಖಂಡ ಕರ್ನಾಟಕದ ಜನರು ಅವರ ಗುಲಾಮರಾಗಿದ್ದೆವು ಅನ್ನುವುದು ನಿಮಗೆ ಗೊತ್ತೆ? ಕೆಲವು ಕಾಲ ಇಂದಿನ ಬೆಂಗಳೂರು ಅವರ ರಾಜ್ಯದಲ್ಲಿತ್ತು.

ಶಿವಾಜಿಯ ತಂದೆ ರಾಜ್ಯಪಾಲನಾಗಿದ್ದನು. ಮೈಸೂರು ರಾಜ್ಯ ಎಂದೆನ್ನುವ ಶ್ರೀರಂಗಪಟ್ಟಣದ ರಾಜರು ಅವರಿಗೆ ಸಾಮಂತರಾಗಿದ್ದರು. ಅದರ ಅಭ್ಯಾಸ ಬೇಡವೆ? ಇನ್ನೂ ಆ ಬ್ರಿಟೀಷರು ಬರೆದಿಟ್ಟ ಇತಿಹಾಸವನ್ನೇ ಓದಬೇಕೆ / ಅಥವಾ ಏನೂ ಗೊತ್ತಿರದಿದ್ದ ನಿಮ್ಮಂಥವರು ರಚಿಸಿದ ಇತಹಾಸವನ್ನು ಓದಬೇಕೆ? ನಿಮ್ಮ ಬರಹದಲ್ಲಿ ಫರ್ಮಾನುಗಳ ಅನುವಾದ ಎಂದು ಅಪ್ಪಣೆ ಕೊಡಿಸಿದ್ದೀರಿ. ಫರ್ಮಾನು ಎಂದರೆ ಏನು ಗೊತ್ತಾ? ಸಂದೇಶಗಳು, ಸುತ್ತೋಲೆಗಳು ಆದರೆ ಈ ಅನುವಾದದ ಸಂಪುಟಗಳಲ್ಲಿಯ ಒಂದು ಸಂಪುಟ! ಉಳಿದ ಸಂಪುಟಗಳು ಸಮಕಾಲೀನ ಲೇಖಕರು ಬರೆದ ಇತಿಹಾಸದ 21 ಪುಸ್ತಕಗಳನ್ನು 18 ಸಂಪುಟಗಳಲ್ಲಿ ಅನುವಾದಿಸಿದೆ.
ಫೆರಿಸ್ತಾನ ಹೆಸರು ಕೇಳಿದ್ದೀರಾ? ಆತ ಬರೆದ ಭಾರತದಲ್ಲಿಯ ಮುಸ್ಲೀಮರ ಚರಿತ್ರೆ ಅದನ್ನು ಜಗತ್ತಿನಾದ್ಯಂತದ ಇತಿಹಾಸದ ಅಭ್ಯಾಸಿಗಳು ಓದುತ್ತಾರೆ. ಆತ ವಿಜಯಪುರದಲ್ಲಿ ಇದ್ದು ತಾನಿರುವವರೆಗಿನ ಸಂಗತಿಗಳನ್ನು ( ಕ್ರಿ ಶ 1924) ಬರೆದಿಟ್ಟಿದ್ದಾನೆ. 2000 ಪುಟಗಳನ್ನು ನಾಲ್ಕು ಸಂಪುಟಗಳಲ್ಲಿ ತಂದಿದೆ. ಹೀಗೆ ಉಳಿದ ಸಂಪುಟಗಳು ಪುಸ್ತಕಗಳ ಮುಖವನ್ನೂ ನೋಡಿಲ್ಲ, ಅದರಲ್ಲಿ ಏನಿದೆ ಎಂಬುದೂ ಗೊತ್ತಿಲ್ಲ, ಏನಕೇನ ಪ್ರಕಾರೇಣ ಕರ್ನಾಟಕದ ಬುದ್ಧಿವಂತ ಎಂದು ಹೆಸರು ಗಳಿಸಿ ಬಾಯಿಗೆ ಬಂದದ್ದನ್ನು ಬರೆದರೆ ಆಯಿತಾ?
ಸಂಶೋಧನ ಕೇಂದ್ರಕ್ಕೆ ಹಳಕಟ್ಟಿ ಅವರ ಹೆಸರಿಟ್ಟಾಕ್ಷಣ ಇಂಥ ಸಂಶೋಧನೆಗಳನ್ನು ಮಾಡಬಾರದಾ?
ಏನು ನಿಮ್ಮ ವಿಚಾರ? ಆ ಹಳಕಟ್ಟಿ ಅವರ ಬಗ್ಗೆ ಏನಾದರೂ ಗೊತ್ತಾ? ಹೋಗಲಿ ಬಿಡಿ ಅದೆಲ್ಲ ನನಗ್ಯಾಕೆ, ನೀವು ಏನು ಓದೀರಿ? ಏನು ಓದಿಲ್ಲ? ಎಂದು ಕೇಳಲು ನಾನ್ಯಾರು? ಆದಿಲ್‌ ಶಾಹಿಗಳು ಇನ್ನೂರು ವರುಷ ಆಳಿದರೂ ನಿಮ್ಮ ಮನೆತನ ಚಕ್ರತೀರ್ಥ ಉಳಿದದ್ದು ಹೇಗೆ ಎಂದು ವಿಚಾರಿಸಿದ್ದೀರಾ? ಇನ್ನು 75 ಲಕ್ಷ ರೂಪಾಯಿ ಕೊಟ್ಟದ್ದು. ಇನ್ನು ಹತ್ತು ವರುಷಗಳ ಹಿಂದಿನ ಯೋಜನೆ. ಆಗಲೂ ಬಿಜೆಪಿ ಸರ್ಕಾರ ಇತ್ತು ಅವರೇ ಅನುದಾನ ನೀಡಿದ್ದು. ಇಷ್ಟಕ್ಕೂ ಯೋಜನೆ ಪ್ರಾರಂಭವಾಗಿತ್ತು. ಅದಕ್ಕೆ ನಮ್ಮ ಸಂಸ್ಥೆಯ ಅಧ್ಯಕ್ಷ ಮಾಜಿ ಸಚಿವ ಡಾ.ಎಂ.ಬಿ ಪಾಟೀಲರು ಪೂರ್ತಿ ಹಣವನ್ನು ಮಂಜೂರಿ ಮಾಡಿದ್ದರು. ಅನುದಾನ ಸಿಕ್ಕರೆ ಸಿಗಲಿ ಎಂದು ಸರ್ಕಾರಕ್ಕೆ ಅರ್ಜಿ ಗುಜರಾಯಿಸಿದ್ದೆವು. ಭಾಗಶಃ ಅನುದಾನ ದೊರೆಯಿತು. ಅಷ್ಟೆ.
ಉಳಿದ ನಿಮ್ಮ ಪ್ರಶ್ನೆಗಳಿಗೂ ನಮಗೂ ಸಂಬಂಧವೇ ಇಲ್ಲ. ಈಗ ಬಹುಶಃ ನಿಮ್ಮ ತಲೆಯಲ್ಲಿ ಸಂಶೋಧನೆ ಎಂದರೇನು ಅದಕ್ಕೆ ಜಾತಿ ಧರ್ಮ ಇರುವುದಿಲ್ಲ. ಎಂಬುದು ಕಿಂಚಿತ್ ಹೋಗಿರಬಹುದಲ್ಲ? ನಿವು ನನ್ನ ಮೇಲೆ ಇಟ್ಟ ಗೌರವಕ್ಕೆ ಧನ್ಯವಾದಗಳು, ಆದರೆ ನಿಮಗೆ ದುಖಃ ತರುವಂತಹ ಇಂತಹ ಇನ್ನೂ ಹತ್ತುಯೋಜನೆಗಳು ಮಾಡಲು ಸಿಧ್ಧ.

ನಮಸ್ಕಾರಗಳು

Related Articles

ಇತ್ತೀಚಿನ ಸುದ್ದಿಗಳು