Wednesday, May 1, 2024

ಸತ್ಯ | ನ್ಯಾಯ |ಧರ್ಮ

ಪಿಂಕ್‌ ಸಿಟಿಗೆ ಅದಾಗಲೇ ʼಮಮ್ಮಿʼಬಂದಿದ್ದರು! -ತಿರುಗಾಡಿ ಬಂದೊ-9

ಸುಜಾತ ಮತ್ತು ರೋಹಿಣಿ ಮೇಡಂ ಅವರ ಶಾಪಿಂಗ್‌ ಚೌಕಾಶಿ ಬೇಗ ಮುಗಿಯಲೆಂದೇ ಯಾವಾಗಲೂ ಬಯಸುತ್ತಿದ್ದ ರೋಹಿತ್‌  ಅಂದು ಮಾತ್ರ ಅದು ಲಂಬಿಸಲೆಂದು ಹಾರೈಸುತ್ತಿದ್ದರು. ಏಕಿರಬಹುದು? ರೋಹಿತ್‌ ಅಗಸರಹಳ್ಳಿಯವರ ತಿರುಗಾಟದ ಅನುಭವದ ಒಂಬತ್ತನೇ ಕಂತು ಇಲ್ಲಿದೆ.

ಜಲ್ ಮಹಲ್ ನೋಡಿದ್ದಕ್ಕಿಂತ ನಮ್ಮ ತಂಡದ ಸದಸ್ಯರು ಫೋಟೋ ಕ್ಲಿಕ್ಕಿಸಿಕೊಂಡದ್ದೇ ಹೆಚ್ಚು. ಬಿಡುವು ನೀಡಿದ್ದ ಮಳೆ ಮತ್ತೆ ಆರಂಭವಾಯ್ತು. ಊಟದ ಕರ್ತವ್ಯ ಪೂರೈಸಲು ಹೋಟೆಲೊಂದಕ್ಕೆ ನುಗ್ಗಿದೆವು. ಬಿಲ್ ಪಾವತಿಸಿ ಬರುವ ಹೊತ್ತಿಗೆ ಮಳೆ ಕೊಂಚ ಬಿರುಸು ಕಳಕೊಂಡಿತ್ತು. ಅನತಿ ದೂರದಲ್ಲಿಯೇ ಹವಾ ಮಹಲ್. ಹವಾ ಮಹಲ್ ಇರುವ ಬೀದಿಯೇ ಪೂರ ಪಿಂಕ್ ಪಿಂಕ್.  ಪಿಂಕ್ ಸಿಟಿಯ ಅಭಿದಾನಕ್ಕೆ ಕಾರಣ ಆ ವೀಧಿಯೇ ಇರಬೇಕು. ಅಲ್ಲಿರುವ ಎಲ್ಲ ಸರ್ಕಾರಿ, ಖಾಸಗೀ ಕಟ್ಟಡಗಳೂ ಪಿಂಕ್ ಬಣ್ಣ ಬಳಿದುಕೊಂಡು ವಿಶಿಷ್ಟವಾಗಿ ಕಾಣುತ್ತವೆ. 

ಕಿಟಕಿಗಳೇ ಕಾಣುವ ಹವಾ ಮಹಲ್

 ಹವಾ ಮಹಲ್ ನೋಡಿದರೆ ಬರೇ ಕಿಟಕಿಗಳೇ ಕಾಣುತ್ತವೆ. ಹತ್ತಿರ ಹತ್ತಿರ ಸಾವಿರ ಕಿಟಕಿಗಳಿರುವ ಐದು ಅಂತಸ್ತಿನ ಕಟ್ಟಡವದು. ಕಟ್ಟಡದ ಎದುರು(?) ನಿಂತು ಫೋಟೋ ಕ್ಲಿಕ್ಕಿಸಿಕೊಂಡವರು ಒಳ ಪ್ರವೇಶ ಮಾಡಬೇಕೆಂದಾಗಷ್ಟೇ ಬಾಗಿಲೆಲ್ಲೆಂದು ಹುಡುಕೋದು. ಅದಕ್ಕೆ ರಸ್ತೆಗೆ ಅಭಿಮುಖವಾಗಿ ಬಾಗಿಲೇ ಇಲ್ಲ! ಏಕೆಂದರೆ ರಸ್ತೆಗೆ ಎದ್ದು ನಿಂತು ಎತ್ತರವಾಗಿಯೂ ಸುಂದರವಾಗಿಯೂ ಕಾಣುವ ಭಾಗ ಅರಮನೆಯ ಮುಂಭಾಗವಲ್ಲ ಹಿತ್ತಿಲು. ಹಿತ್ತಿಲು ಏಕೆಂದರೆ 1799 ರಲ್ಲಿ ನಿರ್ಮಾಣವಾದ ಈ ಅರಮನೆಯ ಈ ಭಾಗದ ಅಂದರೆ ರಸ್ತೆಗಿರುವ ಹಿಂಭಾಗದ ಉದ್ದೇಶವೇ ಪರದೆಯ ಹಿಂದೆಯೇ ಇರುವ ಜನಾನಾದ ರಾಣಿ ವಾಸದವರಿಗೆ ಊರ ಚಟುವಟಿಕೆ, ಉತ್ಸವ, ಮೆರವಣಿಗೆ ಇತ್ಯಾದಿ ನೋಡಲೆಂದು. ಗುಲಾಬಿ ಮತ್ತು ಕೆಂಪು ‌ಬಣ್ಣದ ಮರಳು ಶಿಲೆಗಳಿಂದ ಕೂಡಿ ನಯನ ಮನೋಹರವಾಗಿ‌ ಕಾಣುವ ಕಿಟಕಿಗಳ ಭಾಗ ಕಾಣುತ್ತದೆ. ಹೆಣ್ಣು ಮಕ್ಕಳ ವಿಷಯದಲ್ಲಿ ದೇಶದ ಎಲ್ಲ ಮತಗಳ ರಾಜರೂ ಒಂದೇ ಮನೋಭಾವದವರು. ರಾಣೀವಾಸದವರೆಂದೂ ಹಿತ್ತಿಲಲ್ಲೇ ಇರಬೇಕು; ಜಗಲಿಗೆ ಬರಲೇಬಾರದು. ಅದಕ್ಕೆ ಹಿತ್ತಿಲನ್ನೇ ಜಗಲಿಯಂತೆ ಮಾರ್ಪಡಿಸಿ ಬಿಟ್ಟಿದ್ದಾರೆ-ನಮ್ಮ ಕನಕನ ಕಿಂಡಿಯಂತೆ. ಕೃಷ್ಣ ಹಿಂದೆ ತಿರುಗಿದನೋ ಇಲ್ಲವೋ ಕಿಂಡಿಯಂತೂ ದೇವಾಲಯದ ಹಿಂಭಾಗಕ್ಕಿದೆ. ಅಂದ ಹಾಗೆ ಇದನ್ನು ಕಟ್ಟಿಸಿದ ದೊರೆ ಸವಾಯಿ ಪ್ರತಾಪ್ ಸಿಂಗ್ ಮತ್ತು ಶಿಲ್ಪಿ ಲಾಲ್ ಚಂದ್ ಉಸ್ತಾದ್ ಅಂತೆ.

ವಾಸ್ತುಶಿಲ್ಪದ ದೃಷ್ಟಿಯಿಂದ ವಿಶಿಷ್ಟವಾದ ಮತ್ತು ಸುಂದರ ಕಟ್ಟಡ ಹವಾ ಮಹಲ್. ಬಿರುಬಿಸಿಲಿನ ನಾಡಲ್ಲಿ ತಂಪನೆಯ ಗಾಳಿ ಬೀಸಿಬರುವಂತೆ ಕಟ್ಟಲಾಗಿದೆಯಂತೆ. ಹವಾ ಮಹಲ್ ಸಿಕ್ಕ ಕೂಡಲೆ ಫೋಟೋ ತೆಗೆಯಲು ಯತ್ನಿಸುವವರಿಗೊಂದು ಸವಾಲು ಎದುರಾಗುತ್ತದೆ. ಪೇಟೆಯ ರಸ್ತೆಯಲ್ಲಿಯೇ ಇರುವುದರಿಂದ ಈ ಎತ್ತರದ ಕಟ್ಟಡ ಪೂರ್ಣವಾಗಿ ಕೆಮೆರಾ ಕಣ್ಣಿಗೆ ದಕ್ಕದು. ಪೂರ ಕವರ್ ಮಾಡಬೇಕೆಂದರೆ ಎದುರಿನ ಫುಟ್ಪಾತ್ ನಲ್ಲಿ ಕೊಂಚ ಪಾರ್ಶ್ವಕ್ಕೆ ಹೊರಳಬೇಕು. ಹಾಗೆ ಹೊರಳಿಕೊಂಡ ಕೂಡಲೆ ಓರೆ ಚಿತ್ರ‌ ಮಾತ್ರ ಲಭ್ಯ. ಇದಕ್ಕೊಂದು ಪರಿಹಾರವೂ ಇದೆ. ಈ ಅರಮನೆಯ ಎದುರೇ ಇರುವ ವಾಣಿಜ್ಯ ಕಟ್ಟಡಗಳಲ್ಲಿ ಒಂದು ಹೋಟೆಲೂ, ಮತ್ತೆ ಕೆಲವು ಕನಕೇತರ ಲೋಹಗಳ ಒಡವೆ ವಸ್ತುಗಳನ್ನು ಮಾರುವ ಮಳಿಗೆಗಳಿವೆ. (ಕಾರ್ಪೆಟ್ ಮತ್ತು ಇಂಥ ಒಡವೆಗಳನ್ನು ತಯಾರಿಸುವುದು ರಾಜಸ್ಥಾನದ ದೊಡ್ಡ ಉದ್ಯಮವಂತೆ) ಮೂರನೇ ಮಹಡಿಯ ಹೋಟೆಲು ಮುಚ್ಚಿತ್ತು. ಆ ಹೋಟೆಲಿಂದ ಸೆಲ್ಫಿ ಹಿಡಿದರೆ ಹವಾ ಮಹಲ್ ಪೂರ ಕವರ್ ಆಗುವುದೆಂದು ದಿನೇಶ್ ಮೊದಲೇ ಸಂಶೋಧನೆ ಮಾಡಿ ಕಂಡುಕೊಂಡಿದ್ದರು. ಎರಡನೇ ಮಹಡಿಯ ಅಂಗಡಿ ಮಳಿಗೆಯ ಮಾಲಕನೊಬ್ಬ ತನ್ನ ಅಂಗಡಿಯ ಬಾಲ್ಕನಿಯಿಂದ ಅರಮನೆಯ ಪೂರ ಎದುರುನೋಟ ಕವರ್ ಆಗುವ ಜಾಗಕ್ಕೆ ಹಗ್ಗ ಕಟ್ಟಿ ನಿರ್ಬಂಧಿಸಿದ್ದ. ಅವನ ಅಂಗಡಿ ವ್ಯಾಪಾರಕ್ಕೆ ಹೋದವರಿಗೆ ಮಾತ್ರ ನೋಡಲು ಫೋಟೋ ಕ್ಲಿಕ್ಕಿಸಲು ಅವಕಾಶ. ಆಗ ನಮ್ಮ ಸಹಾಯಕ್ಕೆ ಬಂದದ್ದು ಸುಜಾತ ಮತ್ತು ರೋಹಿಣಿ ಮೇಡಂ ಅವರ ಶಾಪಿಂಗು! ಎಂದೂ ಅವರ ಚೌಕಾಶಿ ಬೇಗ ಮುಗಿಯಲೆಂದೇ ಬಯಸುತ್ತಿದ್ದ ನಾನು, ಅಂದು ಮಾತ್ರ ಅದು ಲಂಬಿಸಲೆಂದು ಹಾರೈಸುತ್ತಿದ್ದೆ. ಅವರು ನಮ್ಮ ಚಿತ್ತವನ್ನರಿತೋ ಏನೊ ಒಂದೆರಡು ಬೆಂಡೋಲೆ, ಹ್ಯಾಂಗಿಂಗ್ ಗಳನ್ನು ಬಹಳೇ ಹೊತ್ತು ಚೌಕಾಶಿ ಮಾಡಿಯೇ ಕೊಂಡರು.

ಹವಾ ಮಹಲ್‌ ಒಳಹೋಗಲು ದಾರಿ ಹುಡುಕಿದರೆ, ಅದೊಂದು ದೂರದ ಕಟ್ಟಡದ‌ ಮೂಲೆಯಲ್ಲಿತ್ತು. ಅಲ್ಲಿ ಪ್ರವೇಶ ಮಾಡಿದರೆ‌ ಅರಮನೆಯ ಮುಂಭಾಗ ಸಿಗುತ್ತದೆ. ಅಲ್ಲಿಯೇ ಪಾರ್ಕಿಂಗ್ ಇತ್ಯಾದಿ ಇವೆ. ಒಳ ಹೋದ ಕೂಡಲೆ ಒಂದು ಕಾರಂಜಿಯೂ ಮತ್ತು ಎಡಭಾಗದಲ್ಲಿ ಮೇಲಿನ ಮಹಡಿಗೆ ಸ್ಟೇರ್ ಕೇಸ್ ಇದೆ; ಆದರೆ‌ ಮೆಟ್ಟಿಲ ಬದಲಿಗೆ ಸುರುಳಿಯಾಕಾರದ ರ‍್ಯಾಂಪ್ ಇದೆ. ರಸ್ತೆಯಿಂದ ನೋಡುವ ಅರಮನೆಯೇ ಬೇರೆ‌ ಒಳಾವರಣದಲ್ಲಿ ನೋಡುವುದೇ ಬೇರೆ. ರಸ್ತೆಗೆ ಭವ್ಯವಾಗಿ ಕಾಣುವ ಹಿಂಭಾಗವೇ ಅರಮನೆಯ ಜೀವಾಳ. ಒಳಬಂದರೆ ಕೇವಲ ಹಂದರ ಮಾತ್ರ. ಒಂದೊಂದೇ ಫ್ಲೋರು ಏರುತ್ತಲೂ ಜಾಗ ಕಿರಿದಾಗುತ್ತಾ ಹೋಗಿ ಕೊನೆಯ ಫ್ಲೋರು ತಲುಪುವ ಹೊತ್ತಿಗೆ ಒಬ್ಬರ ಹಿಂದೊಬ್ಬರು   ನಡೆಯುವಷ್ಟು ಇಕ್ಕಟ್ಟು. ಪ್ರತೀ ಮಹಡಿ ತಲುಪಿದಾಗಲೂ  ಅಲ್ಲಿರುವ ಕಲ್ಲಿನ ಜಾಲಂಧ್ರ ಮತ್ತು ಕಿರಿದಾದ ಮರದ ಕಿಟಕಿಗಳ ಮೂಲಕ ಜೈಪುರದ ವಿಹಂಗಮ ನೋಟ ಸಿಗುತ್ತದೆ. ಐದನೇ ಮಹಡಿಯಲ್ಲಿ ಕಿಟಕಿ ಬಳಿ ಹೋಗುವುದೇ ಒಂದು ಸರ್ಕಸ್.  ಅತೀ ಇಕ್ಕಟ್ಟಿನ ಕಿಟಕಿ ಬಳಿ ನುಸುಳಿ ಎತ್ತರದಿಂದ ಊರು ನೋಡುವುದೇ ಒಂದು ಚೆಂದ.

ಅಚ್ಚಕನ್ನಡದಲ್ಲಿಯೇ ಚೌಕಾಶಿ!

 ಕೆಳಗಿಳಿದು ಬರೋ ಹೊತ್ತಿಗೆ‌ ಸುಜಾತ ಸುಸ್ತಾಗಿ ಮೂರನೇ ಮಹಡಿಯಿಂದ ವಾಪಾಸು ಬಂದಿದ್ದಳು. ನೆಲಮಹಡಿಯ ಕಾರಂಜಿಯ ಎದುರೊಂದು ಗುಂಪುಚಿತ್ರ ಸೆರೆಹಿಡಿದುಕೊಂಡು ಹೊಂಟೆವು. ಹವಾ ಮಹಲ್ ತಲುಪಿಸುವಾಗಲೇ ಡ್ರೈವರ್ ಇಲ್ಲಿ ಮುಗಿಸಿ ಪಕ್ಕದಲ್ಲೇ ಇರುವ ಜಂತರ್ ಮಂತರ್ ಗೆ ಬಂದುಬಿಡಿ, ಇಲ್ಲಿ ಪಾರ್ಕಿಂಗ್ ಇಲ್ಲ ಅಲ್ಲೇ ಕಾಯುತ್ತಿರುತ್ತೇನೆ ಎಂದಿದ್ದ. ಜಂತರ್ ಮಂತರ್ ಕೂಗಳತೆ ದೂರದಲ್ಲೇ ಇತ್ತು. ಒಳಹೊಕ್ಕು ನೋಡಿದರೆ ಏನೇನೂ ಅರ್ಥವಾಗದು. ಅರ್ಥವಾಗಲು ಮಾರ್ಗದರ್ಶಕರು ಬೇಕೇನೊ.‌ ದಿಲ್ಲಿಯ ಜಂತರ್ ಮಂತರ್ ಗಿಂತ ಇದು ವಿಶಾಲವಾದುದೂ ಹೆಚ್ಚು ಸಂಕೀರ್ಣ ರಚನೆಗಳನ್ನು ಒಳಗೊಂಡುದೂ ಆಗಿದೆ. ದೇಶದಲ್ಲಿರುವ ಮೂರು ರಚನೆಗಳಲ್ಲಿ ಇದೂ ಒಂದಂತೆ. ಅತಿಬೇಗ ಅಲ್ಲಿಂದ ಹೊರಬಂದೆವು. ಹೆಣ್ಣು ಮಕ್ಕಳು ಮೈಚಳಿ ಬಿಟ್ಟು ಶಾಪಿಂಗ್ ಮೂಡಿಗೆ ತಿರುಗುತ್ತಿದ್ದರು. ನಾನು ದಿನೇಶ್ ಮಟ್ಕಾ ಚಹಾ ಹುಡುಕಾಡುತ್ತಿದ್ದರೆ ಹೆಮ್ಮಕ್ಕಳು ಏನೋ ಕೊಳ್ಳಲು ಚೌಕಾಶಿಗಿಳಿದಿದ್ದರು.  ನಮ್ಮ ಗುಂಪಿನಲ್ಲಿ ಭಾಷೆಯ ತೊಡಕು ಅಷ್ಟಾಗಿ ಕಾಡದಿದ್ದುದು ಸುಜಾತ ಮತ್ತು ಆರುಷನಿಗೆ ಮಾತ್ರ. ದಿನೇಶ್ ಭಯ್ಯಾ ಎಂದು ಆರಂಭಿಸಿ ಅಚ್ಚಗನ್ನಡದಲ್ಲಿ ಡೈಲಾಗ್ ಮುಗಿಸುತ್ತಿದ್ದರು. ನಾನು ಹರುಕು ಮುರುಕು ಹಿಂದಿ ಪದಗಳನ್ನು ಜೋಡಿಸುತ್ತಾ, ನಾಲಗೆ ತೊಡರಿಕೊಂಡ ಕೂಡಲೆ ಸುಜಾತಾಗೆ ದಾಟಿಸಿ ಬಿಡುತ್ತಿದ್ದೆ! ರೋಹಿಣಿ ಮೇಡಂ ಅಂತೂ ಯಾವ ಬೇಧ ಭಾವ ಮಾಡದೆ ಎಲ್ಲರ ಬಳಿಯೂ ಅಚ್ಚಕನ್ನಡದಲ್ಲಿಯೇ ಚೌಕಾಶಿ ಮಾಡುತ್ತಿದ್ದರಂತೆ. ಅಲ್ಲಿ ನಮ್ಮ ಕೈಹಿಡಿಯುತ್ತಿದ್ದುದು ಇಂಗ್ಲಿಷ್ ಅಂಕಿಗಳು ಮಾತ್ರ! ಹಿಂದಿಯಲ್ಲಂತೂ ಬೀಸ್ ವರೆಗೆ ಮಾತ್ರ ನಂಗೆ ಅರ್ಥವಾಗೋದು. ಪಚ್ಚಾಸ್ ಮತ್ತು ಪಚ್ಚೀಸ್ ಎರಡೂ ಈಗ್ಲೂ ಬಹಳ ಸರ್ತಿ ಕೈಕೊಡೋದೆ.

ನೆನಪಲ್ಲುಳಿದ ರಾಜಸ್ಥಾನದ ಟೀ

ರಾಜಸ್ಥಾನದಲ್ಲಿ ಟೀ ಅದ್ಭುತವಾಗಿ ಮಾಡ್ತಾರೆ ಅಂತ ಬಹಳ ಬೇಗ ಅರ್ಥವಾಗಿತ್ತು; ಅದಕ್ಕೇ ಅವಕಾಶವಾದಾಗಲೆಲ್ಲ ಟೀಗೆ ಮುಗಿಬೀಳುತ್ತಿದ್ದೆವು. ಸಿಟಿ ಪ್ಯಾಲೇಸ್ ಎದುರು ರಸ್ತೆ ಬದಿ ಒಬ್ಬ ಚಾ ಮಾರುವಾತ, ಈಗಷ್ಟೇ ಮುಗಿದಿದೆ ಫ್ರೆಶ್ ಟೀ ಕೊಡುವೆ ಇರಿ ಎಂದು ಆಸೆ ತೋರಿಸಿದ. ಸುಮಾರು ಇಪ್ಪತ್ತು ನಿಮಿಷ ಕಾಯಿಸಿ ಕೊಟ್ಟ. ಕಾಯುವಿಕೆಗೂ ಒಂದು ಸಾರ್ಥಕತೆ ಒದಗಿತ್ತು. ಹಿತ್ತಾಳೆ ಪಾತ್ರೆಯಲ್ಲಿ ಮಾಡುವ ಕಾರಣಕ್ಕೆ ಆ ರುಚಿ ಎಂದು ಹೇಳಿದ ಸುಜಾತ, ಬಂದ ಕೂಡಲೆ ಅಮೇಜಾನ್ ಗೆ ಬಲೆ ಬೀಸಿ ಹಿತ್ತಾಳೆ ಟೀ ಗಿಂಡಿಯೊಂದನ್ನು ಹುಡುಕಿ, ಕೊಳ್ಳಲು ಗಂಟುಬಿದ್ದಿದ್ದಳು. ಒಮ್ಮೆ ಬುಕ್ ಮಾಡಿ ಅದು ದೊಡ್ಡದಾಯ್ತು ಎಂದು ಕ್ಯಾನ್ಸೆಲ್ ಮಾಡಿದ್ದೂ ಆಯ್ತು. ಅಲ್ಲಿಂದ ಬಂದ ಇಷ್ಟು ದಿನಗಳ ನಂತರವೂ ಮಣ್ಣ ಕುಡಿಕೆಯ ಟೀ ರುಚಿ ಹಾಗೇ ನಾಲಗೆ ಮೇಲೆ ನಿಂತಿದೆ. ಜಂತರ್ ಮಂತರ್ ಎದುರೇ ಸಿಟಿ ಪ್ಯಾಲೇಸ್ ಇತ್ತು. ನಮ್ಮ ಕಾಂಬೋ ಟಿಕೇಟಲ್ಲಿ ಇಲ್ಲದ ಕಾರಣಕ್ಕೋ, ಇಲ್ಲವೇ ಈಗಾಗಲೇ ಎರಡು ಅರಮನೆ ನೋಡಿ, ಆಲ್ಬರ್ಟ್ ಮ್ಯೂಸಿಯಂ ಕಡೆ ಹೊರಡುತ್ತಿದ್ದ ಕಾರಣಕ್ಕೋ, ಇಲ್ಲವೇ ಅರಮನೆಗಳಲ್ಲಿ ಮಹಾ ಏನಿದ್ದೀತು ಎಂಬ ಉದಾಸೀನವೋ ಸಿಟಿ ಪ್ಯಾಲೇಸ್ ಗೆ ಹೋಗಬೇಕೆಂಬ ನಿರ್ಬಂಧ ಯಾರಲ್ಲೂ ಹುಟ್ಟಲಿಲ್ಲ.   

ಆಲ್ಬರ್ಟ್ ಮ್ಯೂಸಿಯಂ

ಅಂದು ನಾವು ಮಿಸ್ ಮಾಡಿಕೊಂಡ ಮತ್ತೊಂದು ಜಾಗೆ ನಹಾರ್ಗಡ ಕೋಟೆ. ಅದು ನಮ್ಮ ಟ್ರಾವೆಲ್ ಏಜೆಂಟನ ಪಟ್ಟಿಯಲ್ಲಿ ಇರಲಿಲ್ಲ. ಇನ್ನು ಉಳಿದದ್ದು ಆಲ್ಬರ್ಟ್ ಮ್ಯೂಸಿಯಂ ಮಾತ್ರ. ಇದರ ಪೂರ್ಣ ಹೆಸರು ಆಲ್ಬರ್ಟ್ ಹಾಲ್ ಮ್ಯೂಸಿಯಂ. ಈ ಹೆಸರಿಗೆ ಕಾರಣ ಇಂಗ್ಲೆಂಡ್ ರಾಜ ಆಲ್ಬರ್ಟ್. ಈ ಕಟ್ಟಡಕ್ಕೆ 1876 ರಲ್ಲಿ ಅಡಿಗಲ್ಲು ಹಾಕಿದ ಕಾರಣಕ್ಕಂತೆ‌ 1887 ರಲ್ಲಿ ಕಟ್ಟಡ ಪೂರ್ಣಗೊಂಡಾಗ ಇದನ್ನು ಜೈಪುರದ ಟೌನ್ ಹಾಲ್ ಮಾಡುವ ಯೋಚನೆ ಇತ್ತಂತೆ; ಅದರೆ ದೊರೆ ಮಾಧೋಸಿಂಗ್ ಇದನ್ನು ಮ್ಯೂಸಿಯಂ ಮಾಡಬೇಕೆಂದು ತೀರ್ಮಾನಿಸಿದನಂತೆ. ರಾಜಸ್ಥಾನದ ಕಲೆ, ಕರಕುಶಲ ವಸ್ತುಗಳು ಮತ್ತು  ದೇಶದ ಮತ್ತು ಜಗತ್ತಿನ ಹಲವು ಅಮೂಲ್ಯ ವಸ್ತುಗಳು ಮತ್ತು ಚಿತ್ರಗಳು ಇಲ್ಲಿ ಪ್ರದರ್ಶನಕ್ಕಿವೆ. ಇದು ಇಂಡೋಸರಾಸೆನಿಕ್ ಶೈಲಿಯ ಸುಂದರ ಕಟ್ಟಡ. ಹೊರಗಿನಿಂದ ನಮ್ಮ ಮೈಸೂರು ಅರಮನೆಯಂತೆಯೂ, ಒಳಾಂಗಣದಲ್ಲಿ ಜಗನ್ಮೋಹನ ಅರಮನೆಯಂತೆಯೂ ಕಾಣುತ್ತದೆ. ಅಮೂಲ್ಯ ಕಲಾಕೃತಿಗಳು ಮತ್ತು ವಸ್ತುಗಳೇನೊ ಇವೆ. ಕೆಲವೆಡೆ ಕ್ರಮಬದ್ಧವಾಗಿಲ್ಲ ಎನಿಸಿತು. ಮತ್ತೂ ಕೆಲವೆಡೆ ಧೂಳು ಮೆತ್ತಿಕೊಂಡ ವಸ್ತುಗಳು ಮೇಂಟೆನೆನ್ಸ್ ಕೊರತೆಯನ್ನು ಸದ್ದಿಲ್ಲದೆ ಅರುಹುತ್ತಿದ್ದವು. ಮ್ಯೂಸಿಯಂ ತುಂಬಿಸಬೇಕೆಂಬ ಉತ್ಸಾಹದಲ್ಲಿ ಭಗ್ನಗೊಂಡ ಹಲವು ಶಿಲ್ಪಗಳು ಮತ್ತು ಜೀರ್ಣಾವಸ್ಥೆಗೆ ಸಲ್ಲಲು ಹವಣಿಸುತ್ತಿರುವ ಸಾಧಾರಣ ಪೇಟಿಂಗುಗಳನ್ನು ಹಲವೆಡೆ ಪೇರಿಸಲಾಗಿದೆ. ಪಿಂಗಾಣಿ ಮತ್ತು ದೊಡ್ಡ ಹಿತ್ತಾಳೆಯ ತಟ್ಟೆಗಳ ಮೇಲೆ ಪುರಾಣದ ಹಲವು ಕತೆಗಳನ್ನು ಚಿತ್ರಿಸಲಾಗಿದೆ. ಕೆಲವು ತಟ್ಟೆಗಳು ಎಂಟು ಹತ್ತು ಅಡಿ ಸುತ್ತಳತೆಯಷ್ಟು ದೊಡ್ಡವು. ಈ ತಟ್ಟೆಗಳ ಮೇಲಿನ ಚಿತ್ರಣ ನಮ್ಮ ಬಿದರಿ ಕಲೆಯನ್ನು ಹೋಲುವಂಥದು. 

ಮಳೆಯಲ್ಲೊಂದು ಗೊಂಬೆ ನಾಟಕ

ರಾಜಸ್ತಾನದ ಮಣ್ಣಿನ ಕುಶಲವಸ್ತುಗಳು ಮತ್ತು ಲೋಹ ಶಿಲ್ಪಗಳಲ್ಲದೆ ಆನೆಯ ದಂತದ ಕಲಾಕೃತಿಗಳು ಮತ್ತು ಕಾಷ್ಟ ಕೆತ್ತನೆಯ ಬೃಹತ್ ವಸ್ತುಗಳೂ ಪ್ರದರ್ಶಿಸಲ್ಪಟ್ಟಿವೆ. ಎಲ್ಲಕ್ಕೂ ಕಲಶಪ್ರಾಯದಂತೆ ಒಂದು ʼಮಮ್ಮಿʼಯೂ ಇದೆ. ಎಷ್ಟೋ ಸಾವಿರ ವರ್ಷಗಳ ಹಳತಂತೆ‌. ರಜಪೂತ ದೊರೆಗಳ ಬಂದೂಕು, ಕತ್ತಿಗಳು ಮತ್ತು ಉಡುಪುಗಳು ಕೂಡ ಪ್ರದರ್ಶನಕ್ಕಿವೆ. ಇವೇನೂ ನನಗೆ ಅಷ್ಟು ಆಕರ್ಷಣೆ ಹುಟ್ಟಿಸಲಿಲ್ಲ. ಸಾವಧಾನದ ಬೆನ್ನೇರಿದಂತೆ ಬರುತ್ತಿದ್ದ ನನ್ನನ್ನು ಮಕ್ಕಳಿಬ್ಬರೂ (ಪ್ರಣತಿ, ಆರುಷ) ಓಡಿಬಂದು ಗೊಂಬೆನಾಟಕ ಇದೆಯಂತೆ ನೋಡಲು ಬರಬೇಕಂತೆ ಎಂದರು. ಮಳೆ ಮತ್ತೆ ಜೋರಾಗಿ ಬಡಿಯತೊಡಗಿತ್ತು, ಆದರೆ ಒಳಗಿದ್ದ ನಮಗೆ ಇದರ ಸೂಚನೆ ಇರಲಿಲ್ಲ. ಎಲ್ಲ ಮುಗಿಸಿ ಮ್ಯೂಸಿಯಂನ ಎಕ್ಸಿಟ್ ಗೆ ಬರುವ ಹೊತ್ತಿಗೆ ಜನಜಾತ್ರೆಯೇ ನೆರೆದಿತ್ತು.‌ ಗೊಂಬೆ ನಾಟಕ ಮುಗಿದು ಜನಪದ ಹಾಡುಗಾರಿಕೆ ಆರಂಭವಾಗಿತ್ತು. ಜನ ಇಡಿಕಿರಿದಿದ್ದುದು ನಾಟಕ ಸಂಗೀತದ‌ ಕಾರಣಕ್ಕಾಗಿ ಅಲ್ಲ; ಮಳೆ ಅವರ್ಯಾರೂ ಹೊರ ಹೋಗದಂತೆ ತಡೆದಿತ್ತು ಎಂಬುದು ಬೇಗ ಅರ್ಥವಾಯ್ತು. ಮಳೆ ಕೊಂಚ ಇಳಿದದ್ದೇ ನಮ್ಮ ರಥದ ಸಾರಥಿಗೆ ಬರಲು ಫೋನು ಹಚ್ಚಿ ಹೋಟೆಲ್ ರೂಮ್ ಸೇರಿಕೊಂಡೆವು.‌ ಬೆಳಗಿನಿಂದ ನಮ್ಮೊಂದಿಗೆ ಬೆಂದಿದ್ದ ಡ್ರೈವರಣ್ಣನನ್ನೇ ನಾಳಿನ ಮತ್ತು ಕೊನೆಯ ದಿನದ ಅಜ್ಮೇರ್ ಮತ್ತು ಪುಷ್ಕರ್ ಗೂ ನಿಕ್ಕಿ ಮಾಡಿಕೊಂಡೆವು. ಬೆಳಿಗ್ಗೆ ಆರಕ್ಕೇ ಹೊರಟು ಬರಲು ಹೇಳಿದೆವು. ಕಳೆದೊಂದು ವಾರದಿಂದ ನಮ್ಮ ತಂಡದ ಹೆಂಗೂಸುಗಳು ಶಾಪಿಂಗಿಗೆ ಸರಿಯಾದ ಜಾಗ ಮತ್ತು ಕೊಳ್ಳುವ ಐಟಮ್ ಗಳು ಸಿಗದೆ ಚಡಪಡಿಸುತ್ತಿದ್ದವು. ಇಂದು ಸಮಯ ಕೂಡಿ ಬಂದಿತ್ತು. ಊಟಕ್ಕೆ ಹೇಗೂ ಹೊರ ಹೋಗಬೇಕಿತ್ತು. ಅದೇ ನೆವ ಹಿಡಿದು ಇಬ್ಬರೂ ಬಾಪು ಬಝಾರ್ ಗೆ ತೆರಳಿ ಅರಿಯದೆರಡು ಕೂಸುಗಳನ್ನು ಅವರ‌ವರ ಅಪ್ಪಂದಿರ ಸುಪರ್ದಿಗೆ ಒಪ್ಪಿಸಿ ಮಾಯವಾದರು. ಮತ್ತೆ ಮಳೆ ಆರಂಭವಾಗಿ‌ ನಿಲ್ಲುವ ಲಕ್ಷಣವೇ ಇಲ್ಲ. ಮಳೆಯಾದರೂ ನಿಂತೀತು; ಇವರ ಶಾಪಿಂಗು‌ ಮುಗಿಯಲೊಲ್ಲದು.

ನಡುವೆ ಒಂದೆಡೆ ಇಬ್ಬರನ್ನೂ ಎಬ್ಬಿಸಲೋಗಿ ಅಂಗಡಿಯ ಯಜಮಾನನಿಂದ ಹೋಟೆಲೊಂದರ ವಿಳಾಸ ಪಡೆದು ಬಂದೆವು. ಅದು ಬಾಪೂ ಬಝಾರಿನ ಪಕ್ಕದ ನೆಹ್ರೂ ಬಝಾರಿನ ಅಂಚಿನಲ್ಲಿತ್ತು. ಅಂತೂ ರಾತ್ರಿ ಒಂಬತ್ತು ದಾಟೋ ಹೊತ್ತಿಗೆ ಅಂಗಡಿ ಸಾಲು ಬಾಗಿಲಿಕ್ಕಿಕೊಳ್ಳಲು ಆರಂಭವಾಗಲಾಗಿ ನಮ್ಮ ಹೆಣ್ಣುಮಕ್ಕಳು ಅನಿವಾರ್ಯವಾಗಿ ಜಾಗ ಖಾಲಿ ಮಾಡಿದರು. ಸಮಯ ಮೀರಿದ ಕಾರಣಕ್ಕೆ ಆಟೊ ಸಿಗದೆ ಮಳೆಯಲ್ಲಿ ನೆನೆಯುತ್ತಾ ಎಲೆಕ್ಟ್ರಿಕ್ ಆಟೋವೊಂದಕ್ಕೆ ಕೈ ಅಡ್ಡ ಹಾಕಿ ಹೋಟೆಲ್ ಸೇರಿಕೊಳ್ಳುವ ಹೊತ್ತಿಗೆ ರಾತ್ರಿ ಹತ್ತಾಗಿತ್ತು. ಹೊಟ್ಟೆ ಬಿರಿಯೆ ಬಿರಿಯಾನಿ ತಿಂದು ದಿನ ಮುಗಿಸಿದೆವು.

ರೋಹಿತ್‌ ಅಗಸರಹಳ್ಳಿ

ಹಾಸನದ ನಿವಾಸಿಯಾದ ರೋಹಿತ್‌ ಅಗಸರಹಳ್ಳಿ ವೃತ್ತಿಯಿಂದ ಕನ್ನಡ ಉಪನ್ಯಾಸಕರು. ಪ್ರವೃತ್ತಿ ಓದು, ಸಿನೆಮಾ ಮತ್ತು ತಿರುಗಾಟ.

Related Articles

ಇತ್ತೀಚಿನ ಸುದ್ದಿಗಳು