Wednesday, May 1, 2024

ಸತ್ಯ | ನ್ಯಾಯ |ಧರ್ಮ

ದೆಹಲಿಯ 60ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ, ಪೊಲೀಸರು ಅಲರ್ಟ್, ಮುಂದುವರೆದ ಶೋಧ

Delhi Schools Bomb Threat: ಬಾಂಬ್ ಬೆದರಿಕೆ ಬಂದ ನಂತರ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್‌ನ ಶಾಲೆಗಳಲ್ಲಿ ಭೀತಿ ಉಂಟಾಗಿದೆ. ಬುಧವಾರ, ದೆಹಲಿಯ ವಿವಿಧ ಶಾಲೆಗಳಿಗೆ ಇಮೇಲ್‌ಗಳ ಮೂಲಕ ಬಾಂಬ್ ಬೆದರಿಕೆಗಳು ಬಂದವು.

ಬೆಳಿಗ್ಗೆ ಈ ಬೆದರಿಕೆ ಬಂದ ನಂತರ, ಪೊಲೀಸರು ತಕ್ಷಣ ಮಕ್ಕಳನ್ನು ಶಾಲೆಗಳಿಂದ ಹೊರಹಾಕಿದರು.

ಚಾಣಕ್ಯಪುರಿಯಲ್ಲಿರುವ ಸಂಸ್ಕೃತಿ ಶಾಲೆ, ಪೂರ್ವ ದೆಹಲಿಯ ಮಯೂರ್ ವಿಹಾರ್‌ನಲ್ಲಿರುವ ಮದರ್ ಮೇರಿ ಶಾಲೆ ಮತ್ತು ದ್ವಾರಕಾದ ದೆಹಲಿ ಪಬ್ಲಿಕ್ ಶಾಲೆಗಳು ಇಂದು ಮುಂಜಾನೆ ಬೆದರಿಕೆಗೆ ಒಳಗಾದ ಮೊದಲ ಶಾಲೆಗಳಲ್ಲಿ ಸೇರಿವೆ. ಅಲ್ಲಿಂದ ಶಾಲಾ ಆವರಣದಲ್ಲಿ ಬಾಂಬ್‌ ಇರಿಸಲಾಗಿದೆಯೆನ್ನುವ ಇಮೇಲ್‌ ಸುಮಾರು 60 ಇತರ ಶಾಲೆಗಳಿಗೂ ಬಂದಿವೆ. ಇಂದು ಈ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದ್ದು, ಆವರಣವನ್ನು ತೆರವು ಮಾಡಿ ಕೂಲಂಕಷ ತನಿಖೆ ನಡೆಸಲಾಗುತ್ತಿದೆ.

ಘಟನೆ ನಡೆದ ಸ್ಥಳದಲ್ಲಿ ಪೊಲೀಸ್ ಅಧಿಕಾರಿಗಳು ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಆದರೆ, ತನಿಖಾ ತಂಡಕ್ಕೆ ಇನ್ನೂ ಯಾವುದೇ ಅನುಮಾನಾಸ್ಪದ ಸಂಗತಿ ಪತ್ತೆಯಾಗಿಲ್ಲ. ಎನ್‌ಡಿಟಿವಿ ಪ್ರಕಾರ, ಬಾಂಬ್ ಬೆದರಿಕೆ ಬಂದಿರುವ ಶಾಲೆಗಳಲ್ಲಿ ನಾವು ಎಲ್ಲಾ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಎಂದು ದೆಹಲಿ ಪೊಲೀಸ್ ವಕ್ತಾರ ಸುಮನ್ ನಲ್ವಾ ಹೇಳಿದ್ದಾರೆ. ಅನುಮಾನಾಸ್ಪದವಾಗಿ ಏನೂ ಪತ್ತೆಯಾಗದ ಕಾರಣ ಪೋಷಕರು ಭಯಪಡಬೇಡಿ ಎಂದು ನಾನು ವಿನಂತಿಸುತ್ತೇನೆ ಎಂದು ಹೇಳಿದ್ದಾರೆ. ದೆಹಲಿ ಪೊಲೀಸರ ಪ್ರಕಾರ, ಬೆದರಿಕೆ ಇಮೇಲ್‌ನ ಐಪಿ ವಿಳಾಸವನ್ನು ಕಂಡುಹಿಡಿಯಲು ಪ್ರಯತ್ನಿಸಲಾಗುತ್ತಿದೆ ಆದರೆ ಇಲ್ಲಿಯವರೆಗೆ ಯಾರು ಇಮೇಲ್ ಕಳುಹಿಸಿದ್ದಾರೆ ಮತ್ತು ಎಲ್ಲಿಂದ ಕಳುಹಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ.

‘‘ಇದೊಂದು ಚೇಷ್ಟೆ, ಭಯಭೀತರಾಗಲು ಇಷ್ಟು ದೊಡ್ಡ ಮಟ್ಟದಲ್ಲಿ ಎಲ್ಲ ಶಾಲೆಗಳಿಗೆ ಮೇಲ್ ಕಳುಹಿಸಲಾಗಿದೆ. ಸೈಬರ್ ಸೆಲ್ ಘಟಕವೂ ಇಮೇಲ್ ಮತ್ತು ಐಪಿ ವಿಳಾಸ ಪತ್ತೆ ಹಚ್ಚಲು ಪ್ರಯತ್ನಿಸುತ್ತಿದೆ’’ ಎಂದು ಪೊಲೀಸರು ತಿಳಿಸಿದ್ದಾರೆ.

ಬಾಂಬ್ ಬೆದರಿಕೆ ಬಂದ ಶಾಲೆಗಳಲ್ಲಿ ಒಂದಾದ ಮದರ್ ಮೇರಿ ಶಾಲೆಯಲ್ಲಿ ಇಂದು ಪರೀಕ್ಷೆ ನಡೆಸಲಾಯಿತು, ಆದರೆ ಬೆದರಿಕೆ ಮೇಲ್ ಬಂದ ನಂತರ ಪರೀಕ್ಷೆಯನ್ನು ನಿಲ್ಲಿಸಿ ಶಾಲೆಯನ್ನು ಸ್ಥಳಾಂತರಿಸಲಾಯಿತು ಎಂದು ಹೇಳಲಾಗುತ್ತಿದೆ.

ಬಾಂಬ್ ಪತ್ತೆ ತಂಡಗಳು, ಬಾಂಬ್ ನಿಷ್ಕ್ರಿಯ ದಳ ಮತ್ತು ದೆಹಲಿ ಅಗ್ನಿಶಾಮಕ ಸೇವೆಯ ಅಧಿಕಾರಿಗಳನ್ನು ಶಾಲೆಗಳಿಗೆ ಕಳುಹಿಸಲಾಗಿದೆ. ಯಾವುದೇ ಬೆದರಿಕೆಗಳನ್ನು ಸ್ವೀಕರಿಸದ ಕೆಲವು ಶಾಲೆಗಳು ಮುನ್ನೆಚ್ಚರಿಕೆಯಾಗಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿವೆ.

ದೆಹಲಿಯ ಶಿಕ್ಷಣ ಸಚಿವೆ ಅತಿಶಿ ಇದನ್ನು ದೃಢಪಡಿಸಿದ್ದಾರೆ ಮತ್ತು ಇಲ್ಲಿಯವರೆಗೆ ಯಾವುದೇ ಶಾಲೆಯಲ್ಲಿ ಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬಂದಿಲ್ಲ ಎಂದು ಹೇಳಿದ್ದಾರೆ. “ಇಂದು ಬೆಳಗ್ಗೆ ಕೆಲವು ಶಾಲೆಗಳಿಗೆ ಬಾಂಬ್ ಬೆದರಿಕೆಗಳು ಬಂದಿವೆ. ವಿದ್ಯಾರ್ಥಿಗಳನ್ನು ಸ್ಥಳಾಂತರಿಸಲಾಗಿದೆ ಮತ್ತು ದೆಹಲಿ ಪೊಲೀಸರು ಆ ಆವರಣಗಳನ್ನು ಶೋಧಿಸುತ್ತಿದ್ದಾರೆ. ಇದುವರೆಗೆ ಯಾವುದೇ ಶಾಲೆಗಳಲ್ಲಿ ಏನೂ ಪತ್ತೆಯಾಗಿಲ್ಲ. ನಾವು ಪೊಲೀಸರೊಂದಿಗೆ ಕೆಲಸ ಮಾಡುತ್ತಿದ್ದೇವೆ ಮತ್ತು ನಿರಂತರ ಸಂಪರ್ಕದಲ್ಲಿದ್ದೇವೆ. ಶಾಲೆಗಳು, ಪೋಷಕರು ಮತ್ತು ನಾಗರಿಕರು ಭಯಪಡಬಾರದು” ಎಂದು ಅತಿಶಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಶಾಲಾ ಅಧಿಕಾರಿಗಳು ಅಗತ್ಯವಿರುವ ಕಡೆ ಪೋಷಕರೊಂದಿಗೆ ಸಂಪರ್ಕದಲ್ಲಿರುತ್ತಾರೆ ಎಂದೂ ಅವರು ಹೇಳಿದ್ದಾರೆ.

ಏತನ್ಮಧ್ಯೆ, ದೆಹಲಿ ಪೊಲೀಸರು ಟ್ವಿಟರ್ ಪೋಸ್ಟ್ ಮೂಲಕ, ದೆಹಲಿ ಪೊಲೀಸರು ಪ್ರೋಟೋಕಾಲ್ ಪ್ರಕಾರ ಎಲ್ಲಾ ಶಾಲೆಗಳ ಸಂಪೂರ್ಣ ತನಿಖೆ ನಡೆಸಿದ್ದಾರೆ. ಅನುಮಾನಸ್ಪದವಾದ ಯಾವುದೇ ವಸ್ತು ಕಂಡುಬಂದಿಲ್ಲ. ಈ ಕರೆಗಳು ನಕಲಿ ಎಂದು ತೋರುತ್ತಿದೆ ಎಂದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು