Wednesday, May 1, 2024

ಸತ್ಯ | ನ್ಯಾಯ |ಧರ್ಮ

ಪೆನ್ ಡ್ರೈವ್ ಪೀಕಲಾಟ : ಕುಮಾರಣ್ಣನಿಗೆ ಬಿಸಿ ತುಪ್ಪವಾಗ್ತಿರೋ ಬಿಜೆಪಿ

ಪೆನ್ ಡ್ರೈವ್ ಪ್ರಕರಣದ ನಂತರ ಜೆಡಿಎಸ್ ಪಕ್ಷವೇನೋ ಪ್ರಜ್ವಲ್ ರೇವಣ್ಣನನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಕೈ ತೊಳೆದುಕೊಳ್ಳೋ ಕೆಲಸಕ್ಕೆ ಮುಂದಾಗಿದೆ. ಕುಮಾರಸ್ವಾಮಿ ಕೂಡ ನಮಗೂ (ಜೆಡಿಎಸ್ ಪಕ್ಷ ಅಥವಾ ದೇವೇಗೌಡರ ಕುಟುಂಬ ಅನ್ನೋದು ಬಿಡಿಸಿ ಹೇಳಿಲ್ಲ) ರೇವಣ್ಣನ ಕುಟುಂಬಕ್ಕೂ ಸಂಬಂಧ ಇಲ್ಲ. ನಮ್ಮ ಕುಟುಂಬಕ್ಕೂ ಅವರನ ತಳುಕು ಹಾಕಬೇಡಿ. ಅವರು ಅವರದೇ ಸಂಸಾರ ಅಂತ ಬೇರೆ ಇದ್ದಾರೆ ಅಂತೆಲ್ಲಾ ಹೇಳಿ ತಿಪ್ಪೆ ಸಾರಿಸೋಕೆ ನೋಡ್ತಿದ್ದಾರೆ. ಆದರೆ ರಕ್ತ ಸಂಬಂಧ ಅನ್ನೋದನ್ನ ಈ ಜನ್ಮ ಇರೋ ವರೆಗೂ ಅಳಿಸೋಕೆ ಸಾಧ್ಯವೇ ಕುಮಾರಣ್ಣಾ?

ಇರಲಿ. ಈ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಇಲ್ಲಿಯವರೆಗೂ ಕೇವಲ ಪ್ರಜ್ವಲ್ ರೇವಣ್ಣನ ಹೆಸರು ಮಾತ್ರ ಓಡಾಡಿತ್ತು. ಫೋಟೋ ವಿಡಿಯೋ ಸಾಕ್ಷಿಗಳು ಜಗಜ್ಜಾಹೀರಾದ್ವು. ಸ್ವಪಕ್ಷದವರೇ ಛೀ ತೂ ಅಂದ್ರು. ಆದರೆ ವಿಷಯ ಗುಲ್ಲಾಗಿ, ಸಂತ್ರಸ್ತರು ಪೊಲೀಸ್ ಸ್ಟೇಷನ್ ಮೆಟ್ಟಿಲು ಹತ್ತುತಿದ್ದಂತೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ತಮ್ಮ ಅಣ್ಣ ರೇವಣ್ಣನ ಹೆಸರೂ ಓಡಾಡ್ತಿದೆ. ದೌರ್ಜನ್ಯ ಪ್ರಕರಣವೊಂದರಲ್ಲಿ ಕುಮಾರಸ್ವಾಮಿ ಅವರ ಅಣ್ಣ ರೇವಣ್ಣ ಕೂಡ  A1 ಆರೋಪಿ. ಇಲ್ಲಿ ಪ್ರಜ್ವಲ್ ಹಾಗೂ ರೇವಣ್ಣ ಇಬ್ಬರ ಮೇಲೂ ಆರೋಪ ಸಾಭೀತಾಗಿಲ್ಲ.. ಹೀಗಿರುವಾಗ ರೇವಣ್ಣನನ್ನು ಜೆಡಿಎಸ್ ಪಕ್ಷ ಉಚ್ಛಾಟಿಸೋದು ಯಾವಾಗ ಕುಮಾರಣ್ಣ?

ಇದು ಪಕ್ಷದ ಆಂತರಿಕ ವಿಚಾರ. ಹೇಳಬೇಕಾದ ಪ್ರಮುಖ ವಿಚಾರ ಏನೆಂದರೆ ಪ್ರಜ್ವಲ್ ರೇವಣ್ಣನ ಲೈಂಗಿಕ ಹಗರಣದ ಅಸಂಖ್ಯಾತ ವಿಡಿಯೋಗಳು ಇವೆ ಎಂದು ಮೊದಲು ಬಾಯ್ಬಿಟ್ಟದ್ದೇ ಹಾಸನದ ಬಿಜೆಪಿ ನಾಯಕರು. ಈ ಬಗ್ಗೆ ಅಲ್ಲಲ್ಲಿ ಗುಸುಗುಸು ಹರಿದಾಡುವಾಗಲೇ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವಾಗ ಹಾಸನದ ಬಿಜೆಪಿ ನಾಯಕ ದೇವರಾಜೇ ಗೌಡ ಒಂದು ಪ್ರೆಸ್ ಮೀಟ್ ಮಾಡುವ ಮೂಲಕ ಎಲ್ಲಾ ಹೊರಹಾಕಿದ್ರು. ಅಲ್ಲಿಂದ ಪ್ರಜ್ವಲ್ ರೇವಣ್ಣನ ಕಾಮಕಾಂಡವೊಂದು ಇದೆ ಅಂತ ಎಲ್ಲರ ಬಾಯಲ್ಲೂ ಓಡಾಡೋಕೆ ಶುರು ಆಯ್ತು. ವಿಶೇಷ ಎಂದರೆ ಈ ಇಷ್ಟೂ ಹಂತದಲ್ಲೂ ಕಾಂಗ್ರೆಸ್ ಎಲ್ಲೂ ಸಹ ತನ್ನ ಪಾತ್ರ ತೋರಿಸಿಲ್ಲ ಎಂಬುದು ಗಮನಾರ್ಹ.

ದೇವರಾಜೇ ಗೌಡ ಕಳೆದ ವಿಧಾನಸಭಾ ಚುನಾವಣೆಯಲ್ಲೂ ಸಹ ಈ ಬಗ್ಗೆ ಪ್ರಸ್ತಾಪಿಸಿ ಜನರ ಗಮನ ಸೆಳೆಧಿದ್ದರು. ಜೆಡಿಎಸ್ ಭದ್ರಕೋಟೆಯಂತಿದ್ದ ಹೊಳೆನರಸೀಪುರದಲ್ಲೂ ಹೆಚ್.ಡಿ.ರೇವಣ್ಣ ಸ್ವಲ್ಪ ಯಾಮಾರಿದ್ದರೂ ತನ್ನ ಕ್ಷೇತ್ರ ಕಳೆದುಕೊಳ್ಳುವ ಮಟ್ಟಕ್ಕೆ ಜೆಡಿಎಸ್ ತನ್ನ ಮತ ಕಳೆದುಕೊಂಡಿತ್ತು. ಇದಕ್ಕೆ ಪ್ರತ್ಯಕ್ಷ ಕಾರಣ ಇದೇ ಅಶ್ಲೀಲ ಪೆನ್ ಡ್ರೈವ್ ಹಗರಣವೇ ಆದರೂ ಇಲ್ಲೂ ಸಹ ತನ್ನ ಪಾತ್ರ ವಹಿಸಿದ್ದು ಬಿಜೆಪಿ ಎಂಬುದು ಮರೆಯುವಂತಿಲ್ಲ.

ಲೋಕಸಭಾ ಚುನಾವಣೆ ಹಂತದಲ್ಲೂ ಸಹ ಬಿಜೆಪಿ ಜೆಡಿಎಸ್ ಮೈತ್ರಿ ಸಂದರ್ಭದಲ್ಲಿ ಹಾಸನ ಬಿಜೆಪಿ ನಾಯಕರೇ ಮೈತ್ರಿ ವಿರುದ್ಧ ದೊಡ್ಡ ಮಟ್ಟದ ಅಪಸ್ವರ ಎತ್ತಿದ್ದರು. ಯಾವ ಕಾರಣಕ್ಕೂ ಈ ಮೈತ್ರಿ ಒಪ್ಪುವುದಿಲ್ಲ ಎಂದೇ ತಮ್ಮ ರಾಷ್ಟ್ರೀಯ ನಾಯಕರಿಗೆ ತಿಳಿಸುತ್ತಲೇ ಬಂದಿದ್ದರು. ಹಾಸನ ಕ್ಷೇತ್ರದ ಮಾಜಿ ಶಾಸಕ ಪ್ರೀತಂ ಗೌಡ ಸಹ ಪ್ರಜ್ವಲ್ ರೇವಣ್ಣ ಸ್ಪರ್ಧೆ ಮಾಡುವುದಾದರೆ ನಮ್ಮ ಬೆಂಬಲ ಇರುವುದಿಲ್ಲ ಎಂದು ಬಹಿರಂಗವಾಗಿ ಹೇಳಿದ್ದರು. ಅಷ್ಟೇ ಅಲ್ಲದೇ ತಮ್ಮ ರಾಷ್ಟ್ರೀಯ ನಾಯಕರಿಗೆ ಪತ್ರ ಬರೆದು ಪ್ರಜ್ವಲ್ ರೇವಣ್ಣನ ಅಶ್ಲೀಲ ವಿಡಿಯೋಗಳಿವೆ, ಆ ವ್ಯಕ್ತಿಯನ್ನೇ ಮೈತ್ರಿ ಅಭ್ಯರ್ಥಿ ಎಂದು ಘೋಷಿಸಿದರೆ ಮುಂದೆ ಬಿಜೆಪಿ ಪಕ್ಷ ರಾಷ್ಟ್ರ ಮಟ್ಟದಲ್ಲಿ ತಲೆ ತಗ್ಗಿಸುವ ಸ್ಥಿತಿ ಬರುತ್ತದೆ ಎಂದು ಪತ್ರ ಮತ್ತು ಇ ಮೇಲ್ ಮೂಲಕವೂ ಎಚ್ಚರಿಸಿದ್ದು ಮರೆಯುವಂತಿಲ್ಲ.

ಸರಿ. ಪೆನ್ ಡ್ರೈವ್ ಅಂತೂ ರಿಲೀಸ್ ಆಯ್ತು. ಆಗ ಬಿಜೆಪಿ ಮುಖಂಡ ದೇವರಾಜೇ ಗೌಡ ಪೆನ್ ಡ್ರೈವ್ ಬಿಡುಗಡೆ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ, ಪೆನ್ ಡ್ರೈವ್ ನನಗೆ ಸಿಗುವುದಕ್ಕಿಂತ ಮೊದಲೇ ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್ ಗೆ ತಲುಪಿದೆ ಎಂಬ ಹೇಳಿಕೆ ಕೊಟ್ಟಿದ್ದರು. ಹೇಗಿದ್ದರೂ ಬಿಜೆಪಿ ಜೆಡಿಎಸ್ ಮೈತ್ರಿ ಇದೆ. ಕುಮಾರಣ್ಣ ಹೋದಲ್ಲಿ ಬಂದದ್ದೆಲ್ಲ ಕಾಂಗ್ರೆಸ್ ನಾಯಕರ ವಿರುದ್ಧ ಹರಿಹಾಯ್ತಿದ್ದಾರೆ. ಹೀಗಿರುವಾಗ ಪೆನ್ ಡ್ರೈವ್ ರಿಲೀಸ್ ಹಿಂದೆ ಕಾಂಗ್ರೆಸ್ ನಾಯಕರ ಕೈವಾಡವಿದೆ ಎನ್ನುವ ಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿ ಹೊಡೆಯುವ ತಂತ್ರ ಯೋಜಿಸಿದ್ದರು. ಆದರೆ ಮೊದಲು ಪೆನ್ ಡ್ರೈವ್ ನೀಡಿದ್ದೇ ದೇವರಾಜೇ ಗೌಡರಿಗೆ, ನಾನು ಡಿಕೆಶಿ ಮತ್ತು ಡಿಕೆ ಸುರೇಶ್ ಭೇಟಿ ಮಾಡಿದ್ದು ನಿಜ, ಆದರೆ ಅವರಿಗೆ ನಾನು ಪೆನ್ ಡ್ರೈವ್ ಕೊಟ್ಟೇ ಇಲ್ಲ ಎಂದು ಎಂದು ಪ್ರಜ್ವಲ್ ರೇವಣ್ಣ ಕಾರ್ ಡ್ರೈವರ್ ಹೇಳಿಕೆ ಕೊಟ್ಟು, ಅದನ್ನು ಎಸ್ಐಟಿ ಗೂ ಹೇಳಿರುವುದಾಗಿ ಕೇಳಿ ಬಂದಿದೆ.

ಹೀಗೇ ಅಶ್ಲೀಲ ಪೆನ್ ಡ್ರೈವ್ ಹಗರಣದಲ್ಲಿ ಮುಂಚಿನಿಂದಲೂ ನೇರವಾಗಿ ಬಿಜೆಪಿಯೇ ಕೈವಾಡ ಮೆರೆದಿದ್ದರೂ ಜೆಡಿಎಸ್ ನಾಯಕ ಕುಮಾರಸ್ವಾಮಿ ಹೋದಲ್ಲಿ ಬಂದಲ್ಲಿ ಕಾಂಗ್ರೆಸ್ ಪಕ್ಷದ ಮೇಲೆ ಮುಗಿ ಬೀಳುತ್ತಿದ್ದಾರೆ. ಅಷ್ಟಕ್ಕೂ ಕುಮಾರಸ್ವಾಮಿ ಈ ವರೆಗೆ ಹೆಚ್ಚಿನ ಪಾತ್ರ ಇರುವ ಬಿಜೆಪಿ ವಿರುದ್ದವಾಗಿ  ಒಂದೂ ಹೇಳಿಕೆ ಕೊಟ್ಟಿಲ್ಲ. ಇದಕ್ಕೆ ಅಸಲಿ ಕಾರಣ ನೋಡ್ತಾ ಹೋದರೆ ಸಿಗೋದು, ಕುಮಾರಸ್ವಾಮಿಗೆ ಬಿಜೆಪಿ ಮೇಲಿರುವ ಭಯ ಎದ್ದು ಕಾಣುತ್ತಿದೆ.

ಸಧ್ಯದ ಪರಿಸ್ಥಿತಿಯಲ್ಲಿ ಜೆಡಿಎಸ್ ಪಕ್ಷ ಸುಮ್ಮನೆ ಸ್ವತಂತ್ರವಾಗಿ ಸ್ಪರ್ಧಿಸಿದ್ದರೂ ಒಂದೆರಡು ಸೀಟು ಪಡೆಯಲು ಮೋಸ ಇರಲಿಲ್ಲ. ಆದರೆ ತಾವಾಗೇ ಬಿಜೆಪಿಗೆ ಜುಟ್ಟು ಕೊಡುವ ಮೂಲಕ ದೊಡ್ಡ ಪೀಕಲಾಟ ಎದುರಿಸುವಂತಾಗಿದೆ. ಕುಮಾರಸ್ವಾಮಿಗೆ ಚುನಾವಣೆ ಫಲಿತಾಂಶ ಬರುವ ಮೋದಲೇ ಈಗ ಬಿಜೆಪಿ ಸಹವಾಸ ಬೇಡ ಎನ್ನಿಸಿದ್ದರೂ ಬಿಜೆಪಿ ವಿರುದ್ಧವಾಗಿ ಉಸಿರೆತ್ತದ ಉಸಿರುಗಟ್ಟಿಸುವ ವಾತಾವರಣದಿಂದ ಅನಿವಾರ್ಯವಾಗಿ ಡಿಕೆ ಶಿವಕುಮಾರ್ ಮೇಲೆ ಹರಿಹಾಯ್ತಿದ್ದಾರೆ. ಕುಮಾರಸ್ವಾಮಿಯವರು ಪ್ರತೀ ಬಾರಿ ಮಾಧ್ಯಮಗಳ ಪ್ರಶ್ನೆ ಎದುರಿಸುವಾಗಲೂ ಹತಾಶೆ ಎದ್ದು ಕಾಣುತ್ತಿದೆ. ಪ್ರಜ್ವಲ್ ರೇವಣ್ಣನ  ಪೆನ್ ಡ್ರೈವ್ ಕಾಮಕಾಂಡಕ್ಕೆ ಮಂಡ್ಯದಲ್ಲೂ ತಮ್ಮ ಗೆಲುವು ಅನುಮಾನ ಎಂಬಂತಾಗಿದೆ.

ನೇರವಾಗಿ  ಬಿಜೆಪಿ ನಾಯಕರಿಗೆ ಬೈದರೆ ಎಲ್ಲಿ ತಮ್ಮ ಅಸ್ತಿತ್ವ ಅಲುಗಾಡುತ್ತೋ ಎಂಬ ಭಯ ಕುಮಾರಸ್ವಾಮಿಯವರಲ್ಲಿ ಎದ್ದು ಕಾಣುತ್ತಿದೆ. ಪ್ರಜ್ವಲ್ ರೇವಣ್ಣನ ಅಶ್ಲೀಲ ಹಗರಣದ ಒಂದೇ ಒಂದು ಕಾರಣಕ್ಕೆ ಕುಮಾರಸ್ವಾಮಿಯಂತಹ ಮನುಷ್ಯ ಹೋದಲ್ಲಿ ಬಂದಲ್ಲಿ ತಲೆ ತಗ್ಗಿಸಬೇಕಾದ ಸ್ಥಿತಿ ಉದ್ಭವವಾಗಿದೆ.

ಒಟ್ಟಿನಲ್ಲಿ ಜೆಡಿಎಸ್ ಗೆ ಬಿಜೆಪಿ ಸಹವಾಸವೇ ಬೇಡದಿತ್ತು. ಆದರೆ ಗೊತ್ತಿದ್ದೂ ಬಿಜೆಪಿಗೆ ತನ್ನ ಜುಟ್ಟು ಕೊಡುವ ಮೂಲಕ ದಶಕಗಳಿಂದ ಕೇವಲ ಹಳೆ ಮೈಸೂರು ಭಾಗದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದ್ದ ಪ್ರಾದೇಶಿಕ ಪಕ್ಷ ಜೆಡಿಎಸ್ ಈಗ ಬಿಜೆಪಿ ಕಪಿಮುಷ್ಟಿಯಲ್ಲಿ ಸಿಲುಕಿಕೊಂಡಿದೆ. ಪ್ರಜ್ವಲ್ ರೇವಣ್ಣನ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರ ಇನ್ನೆಂದೂ ತಲೆ ಎತ್ತದ ಸ್ಥಿತಿಗೆ ಜೆಡಿಎಸ್ ಬಂದು ನಿಂತದ್ದು, ಬಹುಶಃ ಜೆಡಿಎಸ್ ನ ಅಂತ್ಯಕ್ಕೆ ಬಿಜೆಪಿ ಪಕ್ಷವೇ ಕೊನೆ ಮೊಳೆ ಹೊಡೆಯಲು ಸಿದ್ಧವಾಗಿದೆ. ಈ ಸತ್ಯ ಜೆಡಿಎಸ್ ನಾಯಕರಿಗೆ ಗೊತ್ತಿದ್ದರೂ ಪ್ರತಿರೋಧಿಸುವಂತಿಲ್ಲ.

Related Articles

ಇತ್ತೀಚಿನ ಸುದ್ದಿಗಳು