Friday, June 14, 2024

ಸತ್ಯ | ನ್ಯಾಯ |ಧರ್ಮ

ಉತ್ತರಾಖಂಡ್ ನಿವಾಸಿಗಳ ನಿದ್ದೆ ಕಸಿಯುವ ಎರಡು ಯೋಜನೆಗಳು

ಜೋಶಿಮಠ ಕುಸಿತದ ಹಿನ್ನೆಲೆಯಲ್ಲಿ  ಹದತಪ್ಪಿದ ಅಭಿವೃದ್ಧಿ ಯೋಜನೆಗಳು ಹಿಮಾಲಯದ ನವಿರು ಪರಿಸರಕ್ಕೆ ತಂದಿಟ್ಟ ಬಿಕ್ಕಟ್ಟನ್ನು ತಮ್ಮದೇ ಅನುಭವಗಳ ಮೂಲಕ ಲೇಖನವಾಗಿಸಿದ್ದಾರೆ ಖ್ಯಾತ ವಿಜ್ಞಾನ ಬರಹಗಾರ ಕೆ ಎಸ್‌ ರವಿಕುಮಾರ್. ಜೋಶಿಮಠ ಜರಿಯುವಿಕೆಯಲ್ಲಿ ಹೈಡೆಲ್ ಪವರ್ ಪ್ರೋಜೆಕ್ಟ್‌ಗಳು ಮತ್ತು ಚಾರ್‍ಧಾಮ್ ಹೆದ್ದಾರಿ ಜಾಲಗಳ ಪಾತ್ರವನ್ನು ಈ ನಾಲ್ಕನೆಯ ಸರಣಿಯಲ್ಲಿ ಓದಿ ನಿಮ್ಮ ಅಭಿಪ್ರಾಯ ಬರೆಯಿರಿ.

ಹೈಡೆಲ್ ಪವರ್ ಪ್ರೋಜೆಕ್ಟ್‌ಗಳು

ಈ ಪ್ರೋಜೆಕ್ಟ್‌ಗಳು ಜಾರಿಗೆ ಬರುವುದೇ ನದಿಗಳ ಕಣಿವೆಗಳಲ್ಲಿ ತಾನೇ. ಹಿಮಾಲಯದಲ್ಲಿ ಮೊದಲು ಪ್ರೋಜೆಕ್ಟ್ ಜಾಗಗಳಿಗೆ ರಸ್ತೆಗಳನ್ನು ನಿರ್ಮಿಸಲು ಹೇರಳ ಕಾಡುಗಳನ್ನು ನೆಲಸಮ ಗೊಳಿಸಲಾಗುತ್ತದೆ. ರಸ್ತೆಯ ನಂತರ ಅಣೆಕಟ್ಟುಗಳು ಏಳುತ್ತವೆ. ಅವುಗಳ ಕೆಳಗೆ ವಿದ್ಯುತ್ ತಯಾರಿಸುವ ಸ್ಥಾವರಗಳು ತಲೆ ಎತ್ತುತ್ತವೆ. ಎಲ್ಲ ಕಾಮಗಾರಿಗಳು ಭಾರೀ ಬೆಟ್ಟಗುಡ್ಡಗಳ ಬದಿಯನ್ನು ಬಗೆದೇ ಜರುಗುವುದು. ಸಾಲದ್ದಕ್ಕೆ ನದಿಹರಿವಿನ ಮೇಲು ಭಾಗಗಳಲ್ಲಿ ಸಾಧ್ಯವಿದ್ದೆಡೆಯಲ್ಲೆಲ್ಲ ನದಿಯ ಅಗಲಕ್ಕೆ ಅನುಗುಣವಾಗಿ ಬೇರೆಬೇರೆ ಗಾತ್ರದ ಅಣೆಕಟ್ಟುಗಳನ್ನು ಕಟ್ಟಿ, ಬೆಟ್ಟಗುಡ್ಡಗಳಲ್ಲಿ ಸಿಡಿಮದ್ದು ಸಿಡಿಸಿ, ಸುರಂಗಗಳನ್ನು ಕೊರೆದು ಅವುಗಳ ಮೂಲಕ ನದಿನೀರು ಸಾಕಷ್ಟು ನೇರವಾಗಿ ಮತ್ತು ವೇಗವಾಗಿ ಹರಿದು ಬರುವಂತೆ ಮಾಡಲಾಗುತ್ತದೆ. ಮೊದಲೇ ಸಡಿಲ ರಚನೆ ಹೊಂದಿರುವ ಬೆಟ್ಟಗುಡ್ಡಗಳು ಮತ್ತಷ್ಟು ಸಡಿಲಗೊಳ್ಳುತ್ತವೆ. ನೆಲಕುಸಿತ ಹೆಚ್ಚುತ್ತದೆ. ಮಳೆ ಮತ್ತು ನೆರೆಯ ವೇಳೆ ಇಡೀ ಯೋಜನೆಯ ಕಟ್ಟೋಣಗಳಿಗೆ ಹಾನಿಯಾಗುತ್ತದೆ. ಬೆಟ್ಟಗಳ ಎತ್ತರದ ಭಾಗಗಳಲ್ಲಿರುವ ಗ್ಲೇಸಿಯರ್(ಮಂಜುಹೊಳೆ)ಗಳು ಆಗಾಗ ಹೆಚ್ಚುವರಿ ಮಳೆ ಮತ್ತು ಮಂಜಿನ ಭಾರಕ್ಕೆ ಬಿರುಸಿನಿಂದ ಜರುಗಿ ಅನಿರೀಕ್ಷಿತ ನೆರೆಗಳನ್ನು ಸೃಷ್ಟಿಸಿ ವಿದ್ಯುತ್ ಸ್ಥಾವರಗಳ ಬುಡವನ್ನೇ ಕದಲಿಸುತ್ತವೆ. ತಯಾರಾಗುವ ವಿದ್ಯುತ್ ತರುವ ಲಾಭಕ್ಕಿಂತ ವಿದ್ಯುತ್ ಸ್ಥಾವರಗಳ ನಿರ್ವಹಣೆಯ ವೆಚ್ಚವೇ ಹೆಚ್ಚುತ್ತದೆ. 2021ರ ಫೆಬ್ರವರಿ 7ರಂದು ನಂದಾದೇವಿ ಗ್ಲೇಸಿಯರ್ ಸೃಷ್ಟಿಸಿದ ಮಂಜು, ನೀರು ಮತ್ತು ಕಲ್ಲುಬಂಡೆಗಳ ಒಂದು ಹುಚ್ಚು ನೆರೆಯಲ್ಲಿ ಜೋಶಿಮಠದ ಸಮೀಪವಿರುವ NTPC ನಿರ್ವಹಣೆಯ ತಪೋವನ-ವಿಷ್ಣುಗಢ ಮತ್ತು ರಿಷಿಗಂಗಾ ವಿದ್ಯುತ್ ಸ್ಥಾವರಗಳ ಸಿಬ್ಬಂದಿಗಳೂ ಸೇರಿದಂತೆ 200ಕ್ಕೂ ಹೆಚ್ಚು ಮಂದಿ ಕೊಚ್ಚಿ ಹೋಗಿದ್ದರು. ಸ್ಥಾವರಗಳು ಬಹುಪಾಲು ನಾಶವಾಗಿದ್ದವು. ತಪೋವನ-ವಿಷ್ಣುಗಢ ಯೋಜನೆಯಂತೂ 2006ರಿಂದ ಕುಂಟುತ್ತಲೇ ಸಾಗಿದೆ. ವರುಷ ವರುಷ ತನ್ನ ಯೋಜನಾ ವೆಚ್ಚವನ್ನು ಹೆಚ್ಚಿಸಿ ಕೊಳ್ಳುವುದರಲ್ಲೆ ಇದರ ಸಾಧನೆ ಅಡಗಿದೆ. ಇವತ್ತು ಜೋಶಿಮಠದ ನಿವಾಸಿಗಳು ತಮ್ಮ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳಲು ಈ ವಿದ್ಯುತ್ ಯೋಜನೆಗಳಿಗೆ ಬೆಟ್ಟಗಳನ್ನು ಬಗೆದದ್ದು ಮತ್ತು ಸುರಂಗಗಳನ್ನು ಕೊರೆದದ್ದೇ ಕಾರಣ ಎಂದು ದೂರುತ್ತಿದ್ದಾರೆ (ಇದು ನಿಜವೂ ಹೌದು, ಆದರೆ ಕಾರಣ ಇಷ್ಟಕ್ಕೇ ಸೀಮಿತ ಅಲ್ಲ) ಇಷ್ಟಾದರೂ, ಹಿಮಾಲಯದ ಉದ್ದಕ್ಕೂ ಒಂದೇ ಸಮನೆ ವಿದ್ಯುತ್ ಯೋಜನೆಗಳು ಜಾರಿಗೊಳ್ಳುತ್ತಿವೆ. 2016ರಷ್ಟು ಹಿಂದೆಯೆ ಉತ್ತರಾಖಂಡ್ ರಾಜ್ಯವೊಂದೇ 450 ಯೋಜನೆಗಳನ್ನು ಜಾರಿಗೊಳಿಸಲು ಮುಂದಾಗಿತ್ತು. ಆದರೆ 2013ರ ಭಯಾನಕ ನೆರೆಯ ಕಹಿ ನೆನಪು ಅಡ್ಡ ಬಂದದ್ದರಿಂದ ಕೇವಲ ಕೆಲವಷ್ಟೆ ಜಾರಿಗೊಂಡವು, ಅದೂ ಸುಪ್ರೀಮ್ ಕೋರ್ಟ್ ರಾಜ್ಯ ಸರ್ಕಾರದ ಯೋಜನೆಗಳಿಗೆ ಆಕ್ಷೇಪ ಎತ್ತಿದ ಮೇಲಷ್ಟೆ! ಆದರೆ ಈಗ ಪೂರ್ಣಗೊಳ್ಳುವ ಹಂತದಲ್ಲಿರುವ ಮತ್ತು ಶೇಕಡಾ 50ಕ್ಕಿಂತ ಹೆಚ್ಚು ಪೂರ್ಣಗೊಂಡ ಯೋಜನೆಗಳು ಹೆಚ್ಚಿಲ್ಲವಾದರೂ ಉತ್ತರಾಖಂಡ್ ನಿವಾಸಿಗಳ ಉಳಿದ ಜೀವನದ ನಿದ್ದೆ ಕಸಿಯಲು ಸಾಕು. 

ಯೋಜನಾ ಪ್ರದೇಶ- ದಿ ವೈರ್

ಚಾರ್‍ಧಾಮ್ ಹೆದ್ದಾರಿ ಜಾಲ

ಉತ್ತರಾಖಂಡ್ ರಾಜ್ಯದ ಗರ್ವಾಲ್ ಪ್ರದೇಶ ಆಸ್ತಿಕ ಭಾರತೀಯರಿಗೆ ಬಹಳ ಮುಖ್ಯವಾದ ನಾಲ್ಕು ಪವಿತ್ರ ಸ್ಥಳಗಳನ್ನು ಹೊಂದಿದೆ. ಅವೇ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥ. ಇವೆಲ್ಲವನ್ನು ಸಾಮಾನ್ಯವಾಗಿ ಒಂದು stretch ನಲ್ಲಿ ನೋಡಿ ಬರುವುದು ಯಾತ್ರಿಕರ ಲೆಕ್ಕಾಚಾರ. ಈ ಸ್ಥಳಗಳನ್ನು ತಲುಪಲು ರಸ್ತೆ ಮತ್ತು ಕಾಲುಹಾದಿಗಳ ಸ್ವರೂಪಕ್ಕೆ ತಕ್ಕಂತೆ ಬಸ್ಸು, ವ್ಯಾನು, ಜೀಪು, ಟ್ಯಾಕ್ಸಿ, ಕುದುರೆ, ಡೋಲಿ, ಕಾಲುನಡಿಗೆಗಳಲ್ಲಿ ಚಲಿಸಬೇಕು. ಹೆಚ್ಚುವರಿ ದುಡ್ಡಿರುವವರು ಹೆಲಿಕಾಪ್ಟರ್ ಬಳಸಬಹುದು (ಇವರ ಸಂಖ್ಯೆ ಕಡಿಮೆ). ಮುಖ್ಯವಾಗಿ ರಿಷಿಕೇಶದಿಂದ ಟಿಬೆಟ್ ಗಡಿಯ ಮಾನಾ ಹಳ್ಳಿಯ ತನಕ ಒಂದು ಮುಖ್ಯ ಸರ್ವಋತು ಹೆದ್ದಾರಿಯನ್ನು ನಿರ್ಮಿಸಿ ಅದಕ್ಕೆ ಜೋಡಿಸಿದಂತೆ ಆಚೀಚೆ ಇತರ ಸ್ಥಳಗಳನ್ನು ತಲುಪಲು ಹೆದ್ದಾರಿಗಳ ದೊಡ್ಡ ಜಾಲವನ್ನೇ ರೂಪಿಸುವ ಯೋಜನೆಯನ್ನು ಈಗಿನ ಒಕ್ಕೂಟ ಸರ್ಕಾರವು ಬಹಳ ಪ್ರಚಾರದೊಂದಿಗೆ ಕೈಗೆತ್ತಿಕೊಂಡಿತು. ಹಿಂದೆಂದೂ ಯಾರೂ ಈ ಬಗೆಯ ಸಾಹಸಕ್ಕೆ ಕೈಹಚ್ಚಿರಲಿಲ್ಲ ಎಂದು ಮುಖ್ಯವಾಹಿನಿಯ ಮಾಧ್ಯಮಗಳು ಹುರ್ರೆ ಎಂದವು. 2016ರ ಡಿಸೆಂಬರ್ 27ರಂದು ಭಾರತದ ಪ್ರಧಾನಿಗಳೇ ಡೆಹ್ರಾಡೂನಿನಲ್ಲಿ ಅಡಿಗಲ್ಲು ಹಾಕುವ ಮೂಲಕ ಅಂದಾಜು 12,000 ಕೋಟಿ ರೂಪಾಯಿ ವೆಚ್ಚದ ‘ಚಾರ್‍ಧಾಮ್ ಮಹಾಮಾರ್ಗ್’ ಯೋಜನೆ ನೆಲಕ್ಕಿಳಿಯಿತು. ಹೆದ್ದಾರಿಗಳ ಒಟ್ಟು ಉದ್ದ 825 ಕಿ.ಮೀ.ಗಳು. ಅಗಲ ಕನಿಷ್ಠ 10 ಮೀಟರುಗಳು. ರಚನೆ Double Lane with Paved Shoulder (DL-PS) configuration ಮಾದರಿಯದ್ದು. ಹೆದ್ದಾರಿಗಳಗುಂಟ ನೂರಾರು ಕಡೆ ಬೈಪಾಸ್ ರಸ್ತೆಗಳು, ವಯಾಡಕ್ಟ್‌ಗಳು, ಪಿಟ್ ಸ್ಟಾಪ್‍ಗಳು, ಹೆಲಿಪ್ಯಾಡ್‍ಗಳು, ಪಾರ್ಕಿಂಗ್ ಸೌಲಭ್ಯಗಳು, ತುರ್ತು ಹೆಲಿಕಾಪ್ಟರ್ ಸೇವೆ ಒದಗಿಸುವ ವ್ಯವಸ್ಥೆಗಳನ್ನು ನಿರ್ಮಿಸಲಾಗುತ್ತಿದೆ. ಇವತ್ತಿನವರೆಗೆ 291 ಕಿ.ಮೀ.ನಷ್ಟು ಹೆದ್ದಾರಿ ಪೂರ್ಣಗೊಂಡಿದೆ. ಚಾರ್‍ಧಾಮ್ ಹೆದ್ದಾರಿಗಾಗಿ ಬೆಟ್ಟಗುಡ್ಡಗಳನ್ನು ವ್ಯಾಪಕವಾಗಿ ಸಿಡಿಸುತ್ತಿರುವುದು ಇನ್ನಷ್ಟು ಮತ್ತಷ್ಟು ನೆಲಕುಸಿತಗಳಿಗೆ ಕಾರಣವಾಗಲಿದೆ ಎಂಬ ಪರಿಸರಪ್ರೇಮಿಗಳ ಆತಂಕ ಅವರನ್ನು ಸುಪ್ರೀಮ್ ಕೋರ್ಟ್ ತನಕ ಒಯ್ಯಿತು. ಹೆದ್ದಾರಿ ಯೋಜನೆಗಳನ್ನು ಯಾರು ವಿರೋಧಿಸುವರೊ ಅವರು ದೇಶದ್ರೋಹಿಗಳು ಎಂಬ ಟೀಕೆಯನ್ನು ಹರಿಬಿಡಲಾಯಿತು. ಗಡಿಯಲ್ಲಿ ನೆರೆಯ ದೇಶದ ಬೆದರಿಕೆ ಇರುವುದರಿಂದ ಸೇನಾಪಡೆಗಳು ಗಡಿಗೆ ತ್ವರಿತವಾಗಿ ತಲುಪಲು ಒಂದು ಸುಸಜ್ಜಿತ ಹೆದ್ದಾರಿ ಜಾಲದ ಅಗತ್ಯವಿದೆ ಎಂದು ಒಕ್ಕೂಟ ಸರ್ಕಾರದ ಪರವಾಗಿ ಸೇನೆಯು ಕೋರ್ಟಿನಲ್ಲಿ ಅಫಿಡಾವಿಟ್ ಸಲ್ಲಿಸಿ ಬಹುಪಾಲು ಮೊಕದ್ದಮೆಯನ್ನು ಗೆದ್ದಂತಾಗಿದೆ. ಆದರೆ ಕಾಮಗಾರಿ ಶುರುವಾದ ಮೇಲೆ 2021ರ ನವೆಂಬರ್‌ವರೆಗಿನ ಮಾಹಿತಿ ಪ್ರಕಾರ ಕಾಮಗಾರಿಯ ಕಾರಣಕ್ಕೇ 125 ಗಂಭೀರ ನೆಲಕುಸಿತಗಳು ಜರುಗಿವೆ ಎಂಬುದನ್ನು ಸ್ವತಃ Ministry of Road Transport and Highways (MoRTH) ಒಪ್ಪಿಕೊಂಡಿದೆ. ಹಾಗೆಯೆ ಹಲವು ಕಡೆ ಧಿಡೀರ್ ನೆರೆಗಳು, ಗುಡ್ಡ ಜರಿತಗಳು, ಮಂಜಿನ ಜಾರಿಕೆ (Avalanche)ಗಳಿಂದ ಪೂರ್ಣಗೊಂಡ ಹೆದ್ದಾರಿ ಮತ್ತು ಚಾಲ್ತಿಯಲ್ಲಿರುವ ಕಾಮಗಾರಿಗಳಿಗೆ ಈಗಾಗಲೆ ಸಾಕಷ್ಟು ಹಾನಿ ಸಂಭವಿಸಿದೆ. ಹೊಸದನ್ನು ಕಟ್ಟುತ್ತ ಕಟ್ಟುತ್ತ ಜೊತೆಜೊತೆಗೆ ರಿಪೇರಿಯನ್ನೂ ಮಾಡುತ್ತ ಸಾಗುವ ನಿರ್ಮಾಣದ ಕಲೆಗಾರಿಕೆಗೆ ಬೆನ್ನು ತಟ್ಟೋಣವೆ? ಹೆದ್ದಾರಿಗಳನ್ನು ಹಲವು ಕಡೆ ಸುರಂಗದೊಳಗೆ ನಿರ್ಮಿಸಲಾಗಿದೆ. ಆಸುಪಾಸಿನ ಗುಡ್ಡಗಳನ್ನು ಕೆತ್ತಿ ಕೆತ್ತಿ ಹೊಸಹೊಸ ಸೇತುವೆಗಳನ್ನು ನಿರ್ಮಿಸಲಾಗಿದೆ. ಜೋಶಿಮಠದ ಸಮೀಪ ಸಾಗುವ ಒಂದು ಬೈಪಾಸ್ ರಸ್ತೆಗಾಗಿ ಗುಡ್ಡಗುಡ್ಡಗಳನ್ನೆ ಸಿಡಿಸಲಾಗಿದೆ. ಬಿರುಕು ಬಿಟ್ಟ ಮನೆಗಳ ಜೋಶಿಮಠದ ನಿವಾಸಿಗಳು ಹೈಡೆಲ್ ಪವರ್ ಪ್ರೋಜೆಕ್ಟ್ ಕಡೆಗೆ ಬೆರಳು ತೋರಿಸುವಂತೆಯೇ ಪ್ರಧಾನಮಂತ್ರಿಗಳ ಅತಿ ಮಹತ್ವಾಕಾಂಕ್ಷೆಯ ಹೆದ್ದಾರಿ ಯೋಜನೆಯ ಕಡೆಗೂ ಬೆರಳು ತೋರಿಸುತ್ತಾರೆ. ಗಡಿಭದ್ರತೆಯ ನೆಪವೊಡ್ಡಿ ಒಕ್ಕೂಟ ಸರ್ಕಾರ ಹೆದ್ದಾರಿ ನಿರ್ಮಾಣದ ಅಗತ್ಯವನ್ನು ಸಮರ್ಥಿಸಿಕೊಂಡಿದೆ. ತಮಾಷೆಯೆಂದರೆ ಭಾರತ-ಚೀನಾ ಗಡಿಗೆ ಸೇನೆಯನ್ನು ಒಯ್ಯುವ ಜೋಶಿಮಠ-ಮಲಾರಿ ಮುಖ್ಯ ರಸ್ತೆಯೇ ಮಲಾರಿ ಪಟ್ಟಣದ ಟ್ಯಾಕ್ಸಿ ಸ್ಟ್ಯಾಂಡಿನ ಬಳಿಯೆ ಈಗ ಬಿರುಕುಬಿಟ್ಟಿದೆ.

Courtesy: Hindustan Times

(ಮುಂದಿನ ಸರಣಿಯಲ್ಲಿ ರಿಷಿಕೇಶ್-ಕರ್ಣಪ್ರಯಾಗ ರೈಲು ಮಾರ್ಗ)

ಕೆ ಎಸ್‌ ರವಿಕುಮಾರ್‌

ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ. 

Related Articles

ಇತ್ತೀಚಿನ ಸುದ್ದಿಗಳು