Monday, May 6, 2024

ಸತ್ಯ | ನ್ಯಾಯ |ಧರ್ಮ

ಸೂರ್ಯ ಒಂದು ಬೆರಗು, ಪವಾಡವಲ್ಲ

ಸೂರ್ಯನ ಬೆಳಕೊಂದು ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಜಾಗಕ್ಕೆ ಬೀಳುವಂತಹ ವ್ಯವಸ್ಥೆಯ ರಚನೆಯನ್ನು ಬೇಕಾದರೆ ಒಂದು ವಿಶೇಷ ಎನ್ನಬಹುದೇ ಹೊರತು ಪವಾಡ ಅಥವ ಕೌತುಕ ಎಂದೆನ್ನಲಾಗದು. ಮಾಧ್ಯಮಗಳು ಸೂರ್ಯನ ಕುರಿತು ಮಾಡುವ  ಪ್ರಚಾರಗಳೆಲ್ಲ ಇನ್ನಷ್ಟು ಮೌಢ್ಯಗಳಿಗೆ ದಾರಿ ಮಾಡಿ ಕೊಡಬಲ್ಲದು ಎನ್ನುವುದನ್ನು ಯಾವತ್ತೂ ಮರೆಯಬಾರದು ಎನ್ನುತ್ತಾರೆ ಲೇಖಕ ಶಂಕರ್‌ ಸೂರ್ನಳ್ಳಿ 

ಭೂಮಿಯ ಆದಿಮ ಜನರಲ್ಲಿ ಅತೀತ ಶಕ್ತಿಯ ಕಲ್ಪನೆ ಹುಟ್ಟಲು ಮೂಲ ಕಾರಣನೇ ಸೂರ್ಯ. ಬೆಳಿಗ್ಗೆ ಹುಟ್ಟಿ ಸಂಜೆ ಮತ್ತೆಲ್ಲೋ ಮರೆಯಾಗಿ ಮತ್ತೆ ಬೆಳಿಗ್ಗೆ ತಪ್ಪದೇ ಯಥಾವತ್ ಪ್ರತ್ಯಕ್ಷವಾಗುವ ಕತ್ತಲು ಬೆಳಕಿಗೆ ಕಾರಣನಾಗಿ ಪ್ರತ್ಯಕ್ಷ ಗೋಚರಿಸುವ ಸೂರ್ಯ ಯಾವತ್ತಿಗೂ ಒಂದು ವಿಸ್ಮಯವೇ… ನಾವು ಬಾಲ್ಯದಲ್ಲಿ ಹಿರಿಯರಿಂದಲೋ, ಇಲ್ಲಾ ಶಾಲೆ ಪಠ್ಯಗಳಿಂದಲೂ ಭೂಮಿಯ ತಿರುಗುವಿಕೆ (ಪರಿಭ್ರಮಣ/ಪರಿಕ್ರಮಣ, Rotation/Revolution) ಮತ್ತು ಹಗಲು ರಾತ್ರಿ ಪ್ರಕ್ರಿಯೆಯ ಹಿನ್ನೆಲೆಯನ್ನು ಕಲಿತಿರುತ್ತೇವೆ. ಒಂದು ವೇಳೆ ಇವ್ಯಾವುದೇ ಅರಿವಿನ ಅವಕಾಶಗಳು ನಮಗೆ ಇಲ್ಲದೇ ಇದ್ದಲ್ಲಿ ಯಾರೇ ಆದರೂ ನಮ್ಮ ಅರಿವಿಗೆ ಗೋಚರಿಸದ ಈ ಭೂಮಿಯ ತಿರುಗುವಿಕೆಯನ್ನಾಗಲೀ ಸೂರ್ಯನು ರಾತ್ರಿ ಎಲ್ಲಿ ಮರೆಯಾಗುತ್ತಾನೆ ಎನ್ನುವುದಾಗಲೀ ಸುಲಭದಲ್ಲಿ ಅರ್ಥೈಸಿ ಕೊಳ್ಳುವುದು ಕಷ್ಟ .ಅಸಲಿಗೆ ಈ ಭೂಮಿ ಗುಂಡಗಿದೆ, ರಾತ್ರಿಯ ವೇಳೆಯಲ್ಲಿ ಸೂರ್ಯ ಭೂಮಿಯ ಮತ್ತೊಂದು ಭಾಗದಲ್ಲಿ ಗೋಚರಿಸಿರುತ್ತಾನೆ ಎನ್ನುವುದನ್ನು ಯಾರೋ ಹೇಳಿಯೇ ನಮಗೆ ಗೊತ್ತೇ ಹೊರತು ಮರದಲ್ಲಿನ ಹಣ್ಣು ಕಾಯಿಗಳು ಗೋಚರಿಸುವಂತೆ ನೇರವಾಗಿ ನಮ್ಮ ಅರಿವಿಗೆ ಬರುವಂತಹ ವಿಷಯ ಇದಲ್ಲವೇ ಅಲ್ಲ. ಯಾಕೆಂದರೆ, ಮೇಲ್ನೋಟಕ್ಕೆ
ಹೇಗೆ ನೋಡಿದರೂ ಚಪ್ಪಟೆಯಂತೆ ತೋರುವ ಈ ಭೂಮಿ ನಮ್ಮ ಅಂದಾಜಿಗೂ ಮೀರಿ ವಿಶಾಲವಾಗಿದೆ.

ಖಾಸಗಿ ಟಿವಿ ಚಾನೆಲ್ ಗಳು ಬಂದ ಬಳಿಕ ಈ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಅಸ್ತಿತ್ವದ ಉಳಿಕೆಗಾಗಿಯೋ ಇಲ್ಲಾ ಟಿ ಆರ್ ಪಿ  ಯ ವ್ಯಾಮೋಹಕ್ಕೋ ಕಟ್ಟುಬಿದ್ದು ಜನರನ್ನು ಸೆಳೆಯಲು ಏನೇನೋ ಕಾರ್ಯಕ್ರಮಗಳನ್ನೆಲ್ಲಾ ಅವು ಬಿತ್ತರಿಸತೊಡಗಿವೆ. ಅದು ಜನೋಪಯೋಗಿಯೋ, ಮೌಢ್ಯ ಹಬ್ಬಿಸುವಂಥಾದ್ದೋ, ರಾಜಕೀಯ ಪ್ರೇರಿತವೋ, ವೈಚಾರಿಕತೆಯದ್ದೋ, ಪ್ರಚೋದನಾತ್ಮಕವೋ ..ಏನೋ ಒಂದು. ಒಟ್ಟಾರೆ, ಜನರನ್ನು ಸೆಳೆಯುವಂತಿದ್ದು ಟಿ ಆರ್ ಪಿ ಶ್ರೇಯಾಂಕದಿಂದ ಜಾಹೀರಾತುದಾರರನ್ನು ಸೆಳೆಯುವಂತಿರಬೇಕು ಅಷ್ಟೆ.


ನೀವು ರಸ್ತೆ ಬದಿಯಲ್ಲಿರುವ ಅಥವಾ ಯಾವುದೋ ಒಂದು ಕಾರ್ಯಕ್ರಮದಲ್ಲಿ ಹಾಕಲ್ಪಟ್ಟ ಪುಸ್ತಕ ಮಳಿಗೆಯನ್ನು ಗಮನಿಸಿದರೆ ಅದರಲ್ಲಿ ಅರ್ಧಕ್ಕಿಂತಲೂ ಹೆಚ್ಚಿಗೆ ಇರುವಂತಹ ಪುಸ್ತಕಗಳೆಂದರೆ ದೇವರದ್ದು, ಭಜನೆಯದ್ದು, ಜೋತಿಷ್ಯದ್ದು, ಧಾರ್ಮಿಕ ನಂಬಿಕೆಗಳದ್ದು, ಲಲಿತ ಸಹಸ್ರನಾಮದ್ದು, ಪುರಾಣದ್ದು. ವಿಶೇಷವೆಂದರೆ, ಸಾರ್ವಕಾಲಿಕವಾಗಿ ಯಾವತ್ತಿಗೂ ಡಿಮ್ಯಾಂಡ್ ಇರುವಂಥಾದ್ದು ಇಂತಹ ಪುಸ್ತಕಗಳಿಗೇನೇ..ಅಂದರೆ ಕೊಂಡೊಯ್ದು ಅದನ್ನ ಓದುತ್ತಾರಂತಲ್ಲ. ಓದಲೂ ಬಹುದು ಓದದಿದ್ದರೆ ಮಕ್ಕಳು ಮನೆಯವರಾದರೂ ಓದಲಿ ಎಂದೋ ಅಥವಾ ಯಾವುದೋ ಶುಭವಸ್ತುವೆಂದೇ ಬಗೆದು ಅದನ್ನ ಖರೀದಿಸಿ ಮನೆಗೆ ಕೊಂಡೊಯ್ಯುತ್ತಾರೆ. ಉದಾಹರಣೆಗೆ ಭಗವದ್ಗೀತೆಯ ಪುಸ್ತಕವನ್ನು ಬೇಕಷ್ಟು ಮಂದಿ ಖರೀದಿಸಿ ಕೊಂಡೊಯ್ದಿರಬಹುದು. ಆದರದನ್ನು ಓದಿದವರಿಗಿಂತ ಕಪಾಟಿನಲ್ಲಿ ಪ್ರದರ್ಶನಕ್ಕಾಗಿ ಇಟ್ಟಂತವರೇ ಹೆಚ್ಚು. ಜನರ ಈ ಧಾರ್ಮಿಕ ನಂಬಿಕೆಯ ನಾಡಿಮಿಡಿತವನ್ನು ಟೀವಿ ಮಾಧ್ಯಮಗಳೂ ಸಹ ಚೆನ್ನಾಗಿ ಅರ್ಥ ಮಾಡಿಕೊಂಡು ಹೀಗೂ ಉಂಟೆ.. ಹಾಗೂ ಉಂಟೆ.. ಸಿಕ್ಸ್ತ್ ಸೆನ್ಸ್, ಸೆವೆನ್ತ್ ಸೆನ್ಸ್ ಅಂತ ಇಂತಹದೇ ಕಾರ್ಯಕ್ರಮಗಳನ್ನ ಆಗಾಗ ಅಥವಾ ಸಾಂಧರ್ಭಿಕವಾಗಿ ಪ್ರಸಾರ ಮಾಡುತ್ತಲೇ ಬಂದಿವೆ.


ಸ್ವಯಂ ಭಗವಂತನಿಗೂ ರಜೆ ಇದ್ದಂತಹ ಮೊನ್ನೆಯ ಕೋವಿಡ್ ಕಾಲವನ್ನು ಹೊರತು ಪಡಿಸಿ ಕಳೆದ ಹತ್ತನ್ನೆರಡು ವರ್ಷಗಳಿಂದ ಮಕರ ಸಂಕ್ರಾಂತಿ ಬಂತೆಂದರೆ ಬೆಂಗಳೂರಿನ ಯಾವುದೋ ಒಂದು ದೇಗುಲದಲ್ಲಿ ಅಲ್ಲಿನ ಈಶ್ವರಲಿಂಗಕ್ಕೆ ಸೂರ್ಯ ರಶ್ಮಿಯ ಸ್ಪರ್ಶದ ಬಗ್ಗೆ ಟೀವಿ ಮಾಧ್ಯಮಗಳು ಇನ್ನಿಲ್ಲದ ಪವಾಡ ಎಂಬಂತೆ ಲೈವ್ ಸುದ್ದಿ ಬಿತ್ತರಿಸುತ್ತಾ ಬಂದಿವೆ. ಕೆಲವೊಂದು ನಂಬಿಕೆಗಳ ಒಳ ಹೊಕ್ಕು ನೋಡಿದಾಗ ಕೆಲವೊಮ್ಮೆ ಅದು ತೀರಾ ಬಾಲಿಶವಾಗಿ ಕಾಣುವುದುಂಟು. ಸಾಮಾನ್ಯವಾಗಿ ಅದು ಅವರವರ ನಂಬಿಕೆಗೆ ಬಿಟ್ಟಂತಹ ವಿಚಾರಗಳೆಂದು ಸುಮ್ಮನೆ ಬಿಡಬಹುದಾದರೂ ಅಂತಹ ವಿಚಾರಗಳ ಬಗೆಗಿನ ಇನ್ನಿಲ್ಲದ ಸಮರ್ಥನೆಗಳು
ಮತ್ತು ಅವುಗಳ ಕುರಿತಂತೆ ಅತಿರಂಜಿತ ಪ್ರಚಾರಗಳೆಲ್ಲ ಇನ್ನಷ್ಟು ಮೌಢ್ಯಗಳಿಗೆ ದಾರಿ ಮಾಡಿ ಕೊಡಬಲ್ಲದು ಎನ್ನುವುದನ್ನು ಯಾವತ್ತೂ ಮರೆಯಬಾರದು.


ಭೂಮಿ ಚಪ್ಪಟೆಯಾಗಿದೆ. ವಿಶ್ವದಲ್ಲಿ ಭೂಮಿಯೇ ಕೇಂದ್ರ. ಸೂರ್ಯ ಚಂದ್ರ ನಕ್ಷತ್ರಗಳೆಲ್ಲ ಸಾಮಾನ್ಯ ಆಕಾಶಕಾಯಗಳಷ್ಟೆ (ಭೂ ಕೇಂದ್ರವಾದ). ಭೂಮಿ ಸ್ಥಿರವಾದದ್ದು ಭೂಮಿಯ ಮೇಲಿಂದ ಸೂರ್ಯ ಪ್ರತಿದಿನ ಸಂಚರಿಸುತ್ತಾನೆ. ಸಹಜವಾಗಿ ತೋರಿಬರುವ ಮೇಲಿನ ಈ ಕಲ್ಪನೆಗಳು ತೀರಾ ಹಳೆಯದೇನೂ ಅಲ್ಲ. ಶತಮಾನದ ಹಿಂದೆಯೇ ಈ ನಂಬಿಕೆ ಸಾರ್ವತ್ರಿಕವಾಗಿ ಚಾಲ್ತಿಯಲ್ಲಿತ್ತು. (ಇದಕ್ಕೆ ವ್ಯತಿರಿಕ್ತವಾಗಿ ವೈಜ್ಞಾನಿಕ ಸತ್ಯವನ್ನು ಮಾತನಾಡ ಹೋದ ಗೆಲಿಲಿಯೋ, ಕೊಪರ್ನಿಕಸ್ ರಂತವರು ಶಿಕ್ಷೆಗೆ ಗುರಿಯಾದದ್ದು ಇತಿಹಾಸ) ಮಾತೆತ್ತಿದರೆ ಪಾಶ್ಚಾತ್ಯರಿಗೂ ಮೊದಲೇ ಭಾರತೀಯರಿಗೆ ಇವೆಲ್ಲ ಹಿಂದಿನಿಂದಲೂ ಋಷಿ ಮುನಿಗಳಿಂದಾಗಿ ತಿಳಿದಿತ್ತು ಅನ್ನುವವರಿದ್ದಾರೆ. ವರಾಹಮಿಹಿರ, ಆರ್ಯಭಟರಂತಹ ಸೀಮಿತ ವಿದ್ವಾಂಸರಿಗೆ ಈ ಸತ್ಯ ತಿಳಿದಿರಬಹುದೇ ವಿನಹ ಈ ತಿಳುವಳಿಕೆ ಇಲ್ಲೇನು ಸಾರ್ವತ್ರಿಕವಾಗಿದ್ದಿರಲಿಲ್ಲ. ಉದಾಹರಣೆಗೆ, ತೀರಾ ಈಚೆಗಿನ ಚಿತ್ರ ಅಥವ ಶಿಲ್ಪಗಳಲ್ಲಿ ದಶಾವತಾರದ ವರಾಹಾವತಾರಿ ವಿಷ್ಣು ಕೋರೆಯಲ್ಲಿ ದುಂಡಗಿನ ಭೂಮಿಯನ್ನು ಎತ್ತಿ ಹಿಡಿವ ಚಿತ್ರಣವಿದ್ದರೆ ಹಳೆಯ ಚಿತ್ರಣಗಳಲ್ಲಿ ಚಾಪೆಯಂತೆ ಮಡಚಿದ ಭೂಮಿ(ಚಪ್ಪಟೆ ಭೂಮಿ)ಯ ಚಿತ್ರಣಗಳಿವೆ. ಅದೇ ರೀತಿ ಭೂಮಿ “ಕೆಳಗಿನ” ಪಾತಾಳ ಎಂಬ ಜಗತ್ತಿನ ಕಲ್ಪನೆಯೂ ಕೂಡ ಚಪ್ಪಟೆ ಭೂಮಿ ಸಿದ್ಧಾಂತದ ಕಲ್ಪನೆಯಿಂದಲೇ ಸೃಷ್ಟಿ ಗೊಂಡಂತದ್ದು. ಯಾಕೆಂದರೆ, ಭೂಮಿಯ ಗುರುತ್ವಾಕರ್ಷಣ ಬಲದ ಕಾರಣ ಭೂಮಿಯ ಯಾವುದೇ ಭಾಗದಲ್ಲೂ ನೀವು ಹೋಗಿ ನಿಂತರೂ ಕೂಡ ನಿಂತಂತಹ ಆ ಭಾಗವೇ ಮೇಲ್ಭಾಗದಂತೆ ತೋರುತ್ತದೆಯೇ ವಿನ: ಭಾರತ ಅಥವ ಕರ್ನಾಟಕ ಗ್ಲೋಬ್ ನಲ್ಲಿ ಬದಿಯಲ್ಲಿದ್ದಂತೆ ಕಾಣುವ ಕಾರಣಕ್ಕೆ ನಾವು ಬದಿಯಲ್ಲಿದ್ದೇವೆ ಅಥವಾ ದಕ್ಷಿಣ ಧ್ರುವ ಪ್ರದೇಶದ ಅಂಟಾರ್ಟಿಕ್ ಖಂಡಕ್ಕೆ ಹೋದರೆ ತಲೆಕೆಳಗಾಗಿ ನಡೆಯಬೇಕು ಎನ್ನುವ ಭಾವ ಯಾವತ್ತೂ ಬಾರದು. ಈ ಅರ್ಥದಲ್ಲಿ ಭೂಮಿಯ “ಕೆಳಭಾಗ” ಅನ್ನೋದೇ ವಾಸ್ತವದಲ್ಲಿ ಇಲ್ಲ. ಮೇಲ್ನೋಟಕ್ಕೆ ಕಂಡುಬರುವ ಚಪ್ಪಟೆ ಭೂಮಿ ಸಿದ್ಧಾಂತದ ಹಿನ್ನೆಲೆಯಲ್ಲಿಯೇ ಈ ಪಾತಾಳ ಲೋಕದ ಕಲ್ಪನೆ ಹುಟ್ಟಿಕೊಂಡದ್ದು.



ಅದೇ ರೀತಿ ರಾಮಾಯಣದ ಯುದ್ಧದಲ್ಲಿ ಪೆಟ್ಟು ತಿಂದು ಮೂರ್ಛೆ ಹೋದ ಲಕ್ಷ್ಮಣನನ್ನು ಸೂರ್ಯ ಮೂಡುವುದರೊಳಗೇ ದೂರದ ಹಿಮಾಲಯದಿಂದ ಹನುಮಂತ ತರುವ ಸಂಜೀವಿನಿ ಕೊಟ್ಟು ಬದುಕಿಸುವ ಕಾಲದ ಗಡುವು ಇರುತ್ತದೆ. ಆ ಕಾರಣಕ್ಕೆ ಸೂರ್ಯನೇ ಹುಟ್ಟದಂತೆ ಹನುಮ ಸೂರ್ಯನನ್ನೇ ಹಿಡಿದು ಅಪಹರಿಸುತ್ತಾನೆ. ಅರ್ಥಾತ್ ಸೂರ್ಯನೇ ಭೂಮಿಗೆ ಸುತ್ತು ಬರುವನೆಂಬ ಕಲ್ಪನೆ ಈ ಕಥೆಯಲ್ಲಿ ಸ್ಪಷ್ಟವಿದೆ. ಇಂತಹ ನೂರಾರು ಕಥೆಗಳು, ನಂಬಿಕೆಗಳು, ಸಂಪ್ರದಾಯಗಳ ಉದಾಹರಣೆಗಳನ್ನು ನೀಡಬಹುದು.


ಭೂಮಿಯು ತನ್ನ ಅಕ್ಷದಲ್ಲೇ ಸುತ್ತುವ ಪ್ರಕ್ರಿಯೆಯಿಂದ ಸೂರ್ಯನೇ ಭೂಮಿಗೆ ಸುತ್ತಿದಂತೆ (ಬಸ್ಸಿನಲ್ಲಿ ಹೋಗುವಾಗ ಕುಳಿತವರಿಗೆ ಮರಗಳು ಓಡಿದಂತೆ) ಕಂಡು ಬಂದು ಆ ಕಾರಣಕ್ಕೆ ರಾತ್ರಿ ಹಗಲುಗಳು ಘಟಿಸಿದರೆ ಇದೇ ಭೂಮಿ ಸ್ವಲ್ಪ ವಾಲಿಕೊಂಡು ಸೂರ್ಯನ ಸುತ್ತ ತನ್ನ ಪಥದಲ್ಲಿ ಸುತ್ತುವಾಗ ಭೂಮಿಯಲ್ಲಿ ಬೇರೆ ಬೇರೆಯ ಕಾಲಮಾನಗಳು ಘಟಿಸುತ್ತವೆ. ರಾತ್ರಿ ಹಗಲಿಗೆ ಕಾರಣವಾಗುವ ಪರಿಭ್ರಮಣ ಪೂರ್ಣಗೊಳ್ಳುವ ಕಾಲಾವಧಿ 24 ಘಂಟೆಗಳಾದರೆ, ಭೂಮಿಯು ತನ್ನ ಪಥದಲ್ಲಿ ಸೂರ್ಯನ ಸುತ್ತ ಒಂದು ಸುತ್ತು ಪೂರ್ಣಗೊಳ್ಳಲು ಭೂ ಪರಿಭ್ರಮಣದ 365 ಪಟ್ಟು ಅರ್ಥಾತ್ 365 ದಿನಗಳ ಕಾಲ ಬೇಕಾಗುತ್ತದೆ. ಪ್ರಾಥಮಿಕ ಶಾಲಾಮಕ್ಕಳಿಗೂ ಗೊತ್ತಿರುವ ಇದನ್ನು ಇಲ್ಲಿ ಹೇಳಲು ಕಾರಣವೆಂದರೆ, ಇವೆರಡರಲ್ಲಿ ಮೇಲ್ನೋಟಕ್ಕೆ ಕಂಡುಬರುವ ಸೂರ್ಯನ ಚಲನೆಯ (ಹಾಗಂತ ಭಾವಿಸಿಕೊಂಡು) ವೇಗವನ್ನು ಗಮನಿಸಿ. 

ಭೂ ಪರಿಭ್ರಮಣ (Rotation)ದ ಕಾರಣ ಒಂದೆಡೆ ಕೇವಲ ಅರ್ಧ ದಿನದಲ್ಲೇ ಅರ್ಧ ಭೂಮಿಯನ್ನು ಸೂರ್ಯ ಪೂರ್ವ ಪಶ್ಚಿಮವಾಗಿ ನಮ್ಮ ಗೋಚರಕ್ಕೆ ಬರುವ ರೀತಿಯಲ್ಲಿ ಕ್ರಮಿಸಿದರೆ ಇನ್ನೊಂದೆಡೆ ಭೂಮಿ ತನ್ನ ಪಥದಲ್ಲಿನ ಪರಿಕ್ರಮಣ (Revolution) ದ ಕಾರಣದಲ್ಲಿ ಉತ್ತರ ದಕ್ಷಿಣ (ಕರ್ಕಾಟಕ- ಮಕರ ಸಂಕ್ರಾಂತಿ ವೃತ್ತದೆಡೆ)ವಾಗಿ ಸೂರ್ಯ ಕಿರಣದ ಬಾಗುವಿಕೆಯ ಬದಲಾವಣೆಗಳು ನಮ್ಮ ಗಮನಕ್ಕೂ ಬಾರದಷ್ಟು ತೀರಾ ನಿಧಾನ ಗತಿಯಲ್ಲಿರುತ್ತದೆ. ಪ್ರಾಚೀನ ಭಾರತವು ಶಿಲ್ಪಕಲೆ, ವಾಸ್ತು ಕಲೆ, ಲೋಹ ವಿದ್ಯೆ ಮೊದಲಾದವುಗಳಿಗೆ ಖ್ಯಾತವಾಗಿದ್ದುದಲ್ಲದೇ ಇಂದಿಗೂ ಕೂಡ ವಿಶ್ವವಿಖ್ಯಾತ ತಾಜ್ ಮಹಲ್, ಗೋಲ್ ಗುಂಬಜ್, ಕುತುಬ್ ಮಿನಾರ್ ನಿಂದ ಹಿಡಿದು ಅನೇಕ ಪುರಾತನ ಭವ್ಯವಾದ ಕಲ್ಲಿನ ಬಸದಿಗಳು, ದೇಗುಲಗಳಾಗಲೀ, ಅರಮನೆಗಳಾಗಲೀ, ಬದಾಮಿ ಅಂಜಂತಾ ಎಲ್ಲೋರಾಗಳ ವಿನ್ಯಾಸಗಳಾಗಲೀ ಅಚ್ಚರಿ ಪಡುವಂತಾದ್ದಾಗಿದೆ. ಕುತುಬ್ ಮಿನಾರ್ ಪಕ್ಕದಲ್ಲಿರುವ ತುಕ್ಕು ಹಿಡಿಯದ ಕಬ್ಬಿಣದ ಕಂಬದ ರಹಸ್ಯ ಗೂಢವಿದ್ದರೂ ಆ ತಂತ್ರಜ್ಞಾನ ಕೇವಲ ದೆಹಲಿಗಷ್ಟೇ ಸೀಮಿತವೇನೂ ಇದ್ದಿರಲಿಲ್ಲ. ಕರಾವಳಿ ಕುಂದಾಪುರದ ಕೊಡಚಾದ್ರಿ ಬೆಟ್ಟದಲ್ಲೂ ಕೂಡ ಇಂತಹದೇ ಲೋಹದ ರಚನೆಯ ತ್ರಿಶೂಲವಿದೆ! 

ಈ ಬಗೆಯಲ್ಲಿ ಸೂರ್ಯನ ಬೆಳಕೊಂದು ನಿರ್ದಿಷ್ಟ ಕಾಲದಲ್ಲಿ ನಿರ್ದಿಷ್ಟ ಜಾಗಕ್ಕೆ ಬೀಳುವಂತಹ ವ್ಯವಸ್ಥೆಯ ರಚನೆಯನ್ನು ಬೇಕಾದರೆ ಒಂದು ವಿಶೇಷ ಎನ್ನಬಹುದೇ ಹೊರತು ಪವಾಡ ಅಥವ ಕೌತುಕ ಎಂದೆನ್ನಲಾಗದು. ಅಷ್ಟೇ ಅಲ್ಲದೇ ಮೇಲೆಯೇ ವಿವರಿಸಿದಂತೆ ಸೂರ್ಯನ ಮಕರ / ಕರ್ಕಾಟಕ ಸಂಕ್ರಾಂತಿ ವೃತ್ತಗಳತ್ತ ಕಿರಣಗಳ ಬಾಗುವಿಕೆಯ ಚಲನೆ ತೀರಾ ನಿಧಾನ ಗತಿಯದ್ದು. ಅಂದರೆ, ಪರಿಕ್ರಮಣ (Revolution)ದ ಮೂಲಕ ಘಟಿಸುವ ಈ ಕಿರಣ ಸ್ಪರ್ಶದ ಪ್ರಕ್ರಿಯೆ ಯಾವತ್ತೂ ಕೇವಲ ಒಂದು ದಿನಕ್ಕಷ್ಟೆ ಸೀಮಿತವಾಗೇನೂ ಇರದು. ಅಂದರೆ ಜನವರಿ 1 ರ 10 ಘಂಟೆಗೆ ಸೂರ್ಯ ಕಿರಣ ನಿರ್ದಿಷ್ಟ ಸ್ಥಳದ ಮೇಲೆ ಬಿದ್ದರೆ ಆ ಕಿರಣ ಅಕ್ಕ ಪಕ್ಕ (ಒಂದೆರಡು ವಾರ ಆಚೆ ಈಚೆಗಿನ) ದ ಡಿಸೆಂಬರ್ 15ರಿಂದ ಜನವರಿ 15ರವರೆಗೂ ಇದೇ ಸೂಚಿತ ಸಮಯದಲ್ಲಿ ಅದೇ ಸ್ಥಳಕ್ಕೆ ಬಿದ್ದೇ ಬೀಳುತ್ತದೆಯೇ ವಿನ: ಅಂತಾ ವ್ಯತ್ಯಾಸವೇನೂ ಇರದು. 

ಉದಾಹರಣೆಗೆ, ಮಾಮೂಲಿನಂತೆ ಜ. 14ರಂದು ಮಕರ ಸಂಕ್ರಾಂತಿ ಹಬ್ಬ ಆಚರಿಸುವಾಗ 14ನೇ ತಾರೀಖಿನಂದು ಕಿರಣ ಲಿಂಗದ ಮೇಲೆ ಬಿದ್ದರೆ ನಂತರದ ವರ್ಷ ಒಂದು ದಿನ ಬಿಟ್ಟು ಜ. 15ಕ್ಕೆ ಹಬ್ಬ ಆಚರಿಸಿದಾಗಲೂ ಕೂಡ ಆ ದಿವಸವೂ ಸಹ ಕಿರಣ ಸ್ಪರ್ಶವಾಗಿರುತ್ತದೆ. ಮುಂದೊಂದು ಬಾರಿ 12-13ಕ್ಕೆ ಸಂಕ್ರಾಂತಿ ಮಾಡಿದರೂ ಲಿಂಗದ ಮೇಲೆ ಕಿರಣದ ಬೀಳುವಿಕೆಗೆ ಖಂಡಿತ ಮೋಸವಿರದು. ಇನ್ನೂ ವಿಶೇಷವೆಂದರೆ ಪ್ರತಿ ಜನವರಿ 14ಕ್ಕೆ ಈ ಮಕರ ಸಂಕ್ರಾಂತಿ ವೃತ್ತದಿಂದ ಉತ್ತರ ದಿಕ್ಕಿನೆಡೆಗೆ ಸೂರ್ಯಕಿರಣಗಳ ಮುಂಚಲನೆ ಅನ್ನುವುದೇ ವಾಸ್ತವದಲ್ಲಿ ತಪ್ಪು ಕಲ್ಪನೆ. ಯಾಕೆಂದರೆ, ವೈಜ್ಞಾನಿಕವಾಗಿ ಆ ಪ್ರಕ್ರಿಯೆ ಆರಂಭಗೊಳ್ಳುವುದು ಡಿಸೆಂಬರ್ 21ಕ್ಕೆ. ಅಂದರೆ ಸೂರ್ಯದೇವ ದಕ್ಷಿಣಾಯನದ ಗೆರೆಗೆ ಬೆನ್ನು ತೋರಿ ಮೂರುವರೆ ವಾರಗಳು ಕಳೆದ ಬಳಿಕವಷ್ಟೇ ನಾವು ಮಕರ ಸಂಕ್ರಾಂತಿ ಹಬ್ಬ ಆಚರಿಸೋದು.


ಶಂಕರ್ ಸೂರ್ನಳ್ಳಿ.

ಲೇಖಕರು

Related Articles

ಇತ್ತೀಚಿನ ಸುದ್ದಿಗಳು