Monday, May 6, 2024

ಸತ್ಯ | ನ್ಯಾಯ |ಧರ್ಮ

ರೋಹಿತ್ ವೇಮುಲ ಕುಟುಂಬದ ದುರಂತ ಕಥೆ ಇಲ್ಲಿದೆ

ಹಿಂದೂಸ್ತಾನ್ ಟೈಮ್ಸ್ ನಲ್ಲಿ ಪ್ರಕಟವಾಗಿದ್ದ ಸುದೀಪ್ತೊ ಮಂಡಲ್ ಅವರ ಲೇಖನದ ಮುಖ್ಯಾಂಶಗಳು.

ಗುಂಟೂರಿನ ಪ್ರಶಾಂತನಗರದಲ್ಲಿ ಮಕ್ಕಳ ಗುಂಪೊಂದು ಬೇವಿನ ಮರದಡಿ ಆಟವಾಡುತ್ತಿತ್ತು. ಆ ಗುಂಪಿನಲ್ಲಿ ಮುದ್ದಾದ ಹೆಣ್ಣು ಮಗುವೊಂದೂ ಇತ್ತು. ಅದಿನ್ನೂ ಅಂಬೆಗಾಲಿಡುತ್ತಿತ್ತು. ಒಂದು ವರ್ಷದ ಮಗು ಇರಬಹುದು. ಆ ಮಗುವೇ ರೋಹಿತ್ ವೇಮುಲನ ತಾಯಿ ರಾಧಿಕ. ಆ ಮಗು (ರಾಧಿಕ) ವಿನ ತಂದೆ ತಾಯಿ ವಲಸೆ ಬಂದಿದ್ದ ಕೂಲಿಗಳು. ಆ ಹೆಣ್ಣು ಮಗುವನ್ನು ಅಂಜನಿ ಎಂಬ ಮಹಿಳೆ ತನಗೆ ಕೊಡುತ್ತೀರಾ ಎಂದಾಗ ಆ ಕೂಲಿ ಕಾರ್ಮಿಕರು ಸಂತೋಷದಿಂದ ಒಪ್ಪಿಕೊಂಡರು. ಅಂಜನಿ ಎನ್ನುವ ಆ ಮಹಿಳೆ ವಡೇರು ಎಂಬ ಜಾತಿಗೆ ಸೇರಿದವರು. ರಾಧಿಕ ತಂದೆ ತಾಯಿ ಮಾಲ ಜಾತಿಗೆ ಸೇರಿದವರು.

ಅಂಜನಿಯವರು ರಾಧಿಕರನ್ನು ಅವರದೇ ಜಾತಿಯ ಹುಡುಗ ಮಣಿಕುಮಾರ್ ಎಂಬುವನಿಗೆ ಕೊಟ್ಟು ಮದುವೆ ಮಾಡಿದರು. ಆದರೆ ರಾಧಿಕರವರ ಜಾತಿಯ ಬಗ್ಗೆಯಾಗಲೀ, ಅವರನ್ನು ಪಡೆದ ಬಗ್ಗೆಯಾಗಲೀ ಮಣಿಕುಮಾರಗೆ ತಿಳಿಸಲಾಗಿರಲಿಲ್ಲ. ಹೀಗೆ ಮದುವೆಯಾದ ರಾಧಿಕರವರಿಗೆ ಮೂರು ಮಕ್ಕಳಾದವು. ಹಿರಿ ಮಗಳು ನೀಲಿಮಾ, ನಂತರದವನೇ ರೋಹಿತ್ ವೇಮುಲ, ಕೊನೆಯ ಮಗ ರಾಜ. ಮದುವೆಯಾದ ಮೊದಲ ಐದು ವರ್ಷಕ್ಕೆ ಈ ಮೂರು ಮುದ್ದು ಮಕ್ಕಳಿಗೆ ರಾಧಿಕರವರು ಜನ್ಮ ಕೊಟ್ಟರು. ಮಣಿಕುಮಾರ್ ಒಬ್ಬ ಬೇಜವಾಬ್ದಾರಿ ಮತ್ತು ಕ್ರೂರಿಯಾಗಿದ್ದ.

ಹೀಗಿರುವಾಗ ವಿವಾಹವಾಗಿ ಐದನೇ ವರ್ಷದಲ್ಲಿ ಮಣಿಕುಮಾರನಿಗೆ ರಾಧಿಕರವರ ನೈಜ ಜಾತಿ ತಿಳಿಯಿತು. ಪ್ರಶಾಂತ ನಗರದ ಯಾರೋ ಅದನ್ನು ತಿಳಿಸಿದ್ದರು. ಆಗಿನಿಂದ ಮಣಿಕುಮಾರನ ಹಿಂಸೆ ಅತಿಯೇ ಆಯಿತು. ಇನ್ನೂ ಕ್ರೂರಿಯಾದ. ‘ನಾನು ಅಸ್ಪೃಶ್ಯಳನ್ನು ಮದುವೆಯಾದೆ, ನನಗೆ ಮೋಸ ಮಾಡಿದಿರಿ’ ಎಂದು ನಿಂದಿಸುತ್ತಿದ್ದ. ಹೀಗಿರುವಾಗ ಅಂಜನಿಯವರು ತಮ್ಮ ಮಗಳು ರಾಧಿಕ ಹಾಗೂ ಮೂರು ಮೊಮ್ಮಕ್ಕಳನ್ನು ತಮ್ಮಲ್ಲಿಗೆ 1990 ರಲ್ಲಿ ಕರೆಸಿಕೊಂಡರು.

ಹಿಂದೂಸ್ತಾನ್ ಟೈಮ್ಸ್ ರೋಹಿತ್ ವೇಮುಲನ ಹುಟ್ಟೂರಿಗೆ ಹೋದಾಗ ಅಲ್ಲಿ ತಿಳಿದ ವಿಚಾರಗಳು ದಂಗು ಬಡಿಸಿದವು. ಇದುವರೆಗೆ ಅಂಜನಿಯವರು ಹೇಳಿದ್ದಕ್ಕಿಂತ ಭಿನ್ನವಾದ ವಿಚಾರಗಳು ರೋಹಿತ್ ವೇಮುಲನ ಆಪ್ತ ಸ್ನೇಹಿತ ಶೇಕ್ ರಿಯಾಜನಿಂದ ಬೆಳಕಿಗೆ ಬಂದವು. ರೋಹಿತ್, ರಿಯಾಜ್ ಎಷ್ಟು ಆಪ್ತರೆಂದರೆ ರೋಹಿತನ ತಮ್ಮ ರಾಜನ ನಿಶ್ಚಿತಾರ್ಥ ಕಾರ್ಯಗಳನ್ನು ರಿಯಾಜರೇ ನೆರವೇರಿಸಿಕೊಟ್ಟಿದ್ದರು ಕಾರಣ ರೋಹಿತ್ ಗೆ ಹೈದರಾಬಾದ್ ಯೂನಿವರ್ಸಿಟಿಯ ಕಿರುಕುಳ ಅದಾಗಲೇ ಆರಂಭವಾಗಿತ್ತು.

ರಿಯಾಜ್ ಹೇಳುವಂತೆ ರಾಧಿಕ ಆಂಟಿ ಹಾಗೂ ಅವರ ಮೂರು ಮಕ್ಕಳು ಅಂಜನಿಯವರ ಮನೆಯಲ್ಲಿ ಮನೆ ಆಳುಗಳಂತೆ ಇದ್ದರು. ಇವರು ಎಲ್ಲಾ ಕೆಲಸಗಳನ್ನು ಮಾಡುವಾಗ ಮಿಕ್ಕವರು ಕುಂತುಣ್ಣುತ್ತಿದ್ದರು. ಚಿಕ್ಕ ವಯಸ್ಸಿನಿಂದಲೂ ರಾಧಿಕರವರೇ ಮನೆ ಕೆಲಸ ನಿರ್ವಹಿಸುತ್ತಿದ್ದರು. ಆಗೇನಾದರು ಚೈಲ್ಡ್ ಲೇಬರ್ ಆಕ್ಟ್ ಜಾರಿಯಲ್ಲಿದ್ದರೆ ಅದರಡಿ ಅಂಜನಿ ದೇವಿಯವರು ಶಿಕ್ಷೆಗೆ ಒಳಗಾಗುತ್ತಿದ್ದರು. ಏಕೆಂದರೆ ರಾಧಿಕರವರನ್ನು ಅವರು ಕೆಲಸಕ್ಕೆ ಇಟ್ಟುಕೊಂಡಿದ್ದರು. ರಾಧಿಕರವರು ಮದುವೆಯಾದಾಗ ಅವರಿಗೆ 14 ವರ್ಷ ವಯಸ್ಸಾಗಿತ್ತು. ರಾಧಿಕ ಅವರಿಗೆ ತಮ್ಮ ನಿಜವಾದ ಇತಿಹಾಸ ಗೊತ್ತಾಗಿದ್ದು ಅವರಿಗೆ 12 ಅಥವಾ 13 ವರ್ಷವಾಗಿದ್ದಾಗ.

‘ಅಂಜನಿಯವರ ತಾಯಿ, ರಾಧಿಕಳಿಗೂ ಮತ್ತು ಅಂಜನಿಯವರಿಗೂ ಜಾತಿಯ ಕಾರಣಕ್ಕಾಗಿ ಬೈಯುತ್ತಿದ್ದರು’ ಎಂದು ಆ ಊರಿನ ಉಪ್ಪಾಳಪಟ್ಟಿ ದಾನಮ್ಮ ಹೇಳಿದರು. ಸುತ್ತ ಮುತ್ತಲ ಜನರ ಪ್ರಕಾರ ‘ರಾಧಿಕರವರು ಅಂಜನ ದೇವಿಯವರ ಮನೆ ಆಳಾಗಿ ಬದುಕುತ್ತಿದ್ದರು’

ಅಲ್ಲಿ ವಡೇರಾ ಜನಾಂಗದವರು ‘ಮಣಿಕುಮಾರನಿಗೆ ರಾಧಿಕಳನ್ನು ಮದುವೆ ಮಾಡಿ ನಮ್ಮ ಜಾತಿಯವರಿಗೆ ಮೋಸ ಮಾಡಿದರು’ ಎಂದು ಅಂಜನಾ ದೇವಿಯವರನ್ನು ಹಳಿಯುತ್ತಾರೆ.

ರಿಯಾಜ್ ಹೇಳುತ್ತಾರೆ ‘ರೋಹಿತನಿಗೆ ಮನೆಗೆ ಹೋಗಲು ಇಷ್ಟವಿರುತ್ತಿರಲಿಲ್ಲ ಏಕೆಂದರೆ ಯಾವಾಗಲೂ ತನ್ನ ತಾಯಿ ಆಳಿನಂತೆ ಅಲ್ಲಿ ದುಡಿಯುತ್ತಿದ್ದರು. ಅವರಿಲ್ಲದಿದ್ದರೆ ನೀಲಿಮಾ ಅಥವಾ ರಾಜ ದುಡಿಯುತ್ತಿದ್ದರು. ರಾಧಿಕ ಮತ್ತು ಮಕ್ಕಳು ಬೇರೆ ಮನೆ ಮಾಡಿಕೊಂಡು ಹೋದ ಮೇಲೂ ಇದು ಮುಂದುವರೆಯಿತು. ಬಿಎಸ್ಸಿ ಓದುವಾಗ ರೋಹಿತ್ ಅಪರೂಪಕ್ಕೆ ಮನೆಗೆ ಹೋಗುತ್ತಿದ್ದ. ಅವನು ತನ್ನ ಓದಿಗೆ ಬೇಕಾಗುವ ಹಣವನ್ನು ಕಟ್ಟಡ ಕಾರ್ಮಿಕನಾಗಿ ಹಾಗೂ ಊಟ ಸಪ್ಲೆ ಮಾಡುವುದರ ಮೂಲಕ ಸಂಪಾಧಿಸುತ್ತಿದ್ದ. ಜೊತೆಗೆ ಪಾಂಪ್ಲೆಟ್ ಹಂಚುತ್ತಿದ್ದ ವಸ್ತು ಪ್ರದರ್ಶನಗಳಲ್ಲಿ ಕೆಲಸಮಾಡುತ್ತಿದ್ದ’ ಮುಂದುವರೆದು ರಿಯಾಜ್ರವರು ‘ಅಂಜನಿಯವರಿಗೆ ರಾಧಿಕರವರನ್ನು ಬಿಟ್ಟು 4 ಮಕ್ಕಳಿದ್ದರು. ಅವರಲ್ಲಿ ಇಬ್ಬರು ರಾಧಿಕ ಬಂದ ನಂತರ ಹುಟ್ಟಿದ್ದರು. ಒಬ್ಬ ಮಗ ಇಂಜಿನಿಯರ್, ಇನ್ನೊಬ್ಬ ಸಿವಿಲ್ ಕಂಟ್ರಾಕ್ಟರ್, ಮಗಳು ಬಿಎಸ್ಸಿ, ಬಿ.ಎಡ್, ಇನ್ನೊಬ್ಬಾಕೆ ಮಗಳು ಬಿಕಾಂ ಬಿ.ಎಡ್. ಸ್ವತಃ ಅಂಜನಿ ದೇವಿಯವರೇ ಎಂ.ಎ, ಎಂ.ಇಡಿ ಮಾಡಿದ್ದರು ಹಾಗೂ ಮುನಿಸಿಪಲ್ ಕಾರ್ಪೋರೇಷನ್ ಹೈಸ್ಕೂಲ್, ಗುಂಟೂರಿನ ಮುಖ್ಯಗುರುಗಳಾಗಿದ್ದರು. ಅವರ ಗಂಡ ಸರ್ಕಾರಿ ಮುಖ್ಯ ಇಂಜಿನಿಯರ್ ಆಗಿದ್ದರು. ಅಂಜನಿ ದಂಪತಿ ಪ್ರಕಾಶ್ ನಗರದಲ್ಲಿ ಹಳೆಯದಾದ ಬೃಹತ್ ಬಂಗಲೆಯನ್ನು ಹೊಂದಿದ್ದಾರೆ. ಅಂಜನಿಯವರು ಸ್ವತಃ ಶಿಕ್ಷಣವೇತ್ತರಾಗಿದ್ದು ‘ತನ್ನ ಸ್ವಂತ ಮಗಳೆಂದು’ ಹೇಳಿಕೊಳ್ಳುವ ರಾಧಿಕರವರಿಗೆ ಶಿಕ್ಷಣ ಕೊಡಿಸಲಿಲ್ಲ. ಆದರೆ ತಾವು ಹಡೆದ 4 ಮಕ್ಕಳಿಗೂ ಒಳ್ಳೆಯ ಶಿಕ್ಷಣ ಹಾಗು ಸ್ಥಾನವನ್ನು ಕಲ್ಪಿಸಿಕೊಟ್ಟರು. ಇದು ನಮಗೆ ಅಂಜನಿಯವರು ರೋಹಿತ್ ಗಿಂತ ಬಹಳ ಚನ್ನಾಗಿ ಇಂಗ್ಲಿಷನ್ನು ಹೇಗೆ ಮಾತಾಡುತ್ತಾರೆ ಎಂಬುದಕ್ಕೆ ಸಾಕ್ಷ್ಯ ನೀಡುತ್ತದೆ. ರಾಧಿಕರವರ ವಿಷಯದಲ್ಲಿ ಅಂಜನಿಯವರು ಒಬ್ಬ ಯಜಮಾನಿಯಾಗಿದ್ದರೇ ಹೊರತು ಒಳ್ಳೆಯ ತಾಯಾಗಿರಲಿಲ್ಲ. ರೋಹಿತ್ ತನ್ನ ಸ್ನೇಹಿತರಲ್ಲಿ ಪಿ.ಹೆಚ್ ಡಿ ಮಾಡುವಾಗಲೂ ತನ್ನ ಕುಟುಂಬದ ಬಗ್ಗೆ ಹೆಚ್ಚು ಹೇಳಿಕೊಂಡಿರಲಿಲ್ಲ.

ರಾಜು ಮತ್ತು ರೋಹಿತ್ ವೇಮುಲ ಇಬ್ಬರಿಗೂ ಅಂಜನಿಯವರು ಉನ್ನತ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಲಿಲ್ಲ.

ಮತ್ತೊಂದು ವಿಷಯವೆಂದರೆ ರಾಧಿಕರವರು ತಮ್ಮ ಮಕ್ಕಳ ಜೊತೆ ಪದವಿಯನ್ನು ಮುಗಿಸುತ್ತಾರೆ. ರೋಹಿತ್ ಅಂತಿಮ ಪದವಿಯಲ್ಲಿದ್ದಾಗ ಅವನ ತಾಯಿ ರಾಧಿಕ ದ್ವಿತೀಯ ಬಿ.ಎ ಓದುತ್ತಿದ್ದರು. ರಾಜ ಪ್ರಥಮ ಬಿಎಸ್.ಸಿ ಓದುತ್ತಿದ್ದ. ಮೊದಲು ರೋಹಿತ್ ಪದವಿ ಮುಗಿಸಿದರೆ, ರಾಧಿಕ ನಂತರ ಮುಗಿಸಿದರು ಆ ನಂತರ ರಾಜ ಪದವಿಯನ್ನು ಪಡೆದ. ಕೆಲವೊಮ್ಮೆ ಅಮ್ಮ ಮಕ್ಕಳಿಗೆ ಒಂದೇ ದಿನ ಪರೀಕ್ಷೆ ಇರುತ್ತಿದ್ದವು ಎಂದು ರಿಯಾಜ್ ಸ್ಮರಿಸುತ್ತಾರೆ.

ಅಂಜನಿಯವರಿಗೆ ಅವರು ಮಾಡಿದ ತಾರತಮ್ಯದ ಬಗ್ಗೆ ಪ್ರಶ್ನಿಸಿದಾಗ ಅವರು ದುರುಗುಟ್ಟಿ ‘ನನಗೆ ಗೊತ್ತಿಲ್ಲ’ ಎಂದು ಹೇಳುತ್ತಾರೆ. ನಿಮಗೆ ನನ್ನನ್ನು ತೊಂದರೆಯಲ್ಲಿ ಸಿಕ್ಕಿಸಬೇಕೆಂದಿರುವಿರಾ ಎಂದು ಪ್ರಶ್ನಿಸುತ್ತಾರೆ.

ರೋಹಿತನಿಗೆ ಅಂತರ್ಜಾಲದ ಬಗ್ಗೆ ತುಂಬಾ ತಿಳಿದಿತ್ತು. ತರಗತಿಯ ಸಿಲಬ್ಬಸ್ ಎಲ್ಲಾ ಔಟ್ ಡೇಟೆಡ್ ಅಂತ ತಿಳಿಸುತ್ತಿದ್ದ. ವಿಜ್ಞಾನದ ವೆಬ್ ಸೈಟ್ ಗಳ ಬಗ್ಗೆ ಅವನಿಗೆ ಶಿಕ್ಷಕರಿಗಿಂತ ಹೆಚ್ಚು ಗೊತ್ತಿತ್ತು. ಅವನ ಜೀವನವೆಂದರೆ ಎರಡೇ . ಒಂದು ಪಾರ್ಟ್ ಟೈಮ್ ಕೆಲಸ ಹುಡುಕುವುದು. ಇನ್ನೊಂದು ಅಂತರ್ಜಾಲದಲ್ಲಿ ಸಮಯ ಕಳೆಯುವುದು. ಅವನು ಜೂಲಿಯನ್ ಅಸ್ಸಾಂಜೆಯ ಅಭಿಮಾನಿಯಾಗಿದ್ದ. ವಿಕಿಲೀಕ್ಸ್ ಫೈಲ್ಸ್ ಜೊತೆ ಹೆಚ್ಚು ಸಮಯ ಕಳೆಯುತ್ತಿದ್ದ.

ರೋಹಿತ್ ಸಾಯುವ ಒಂದು ವಾರದ ಮುಂಚೆ ರಿಯಾಜಿಗೆ ಕರೆ ಮಾಡಿ ‘ನನ್ನ ಪಿ.ಎಚ್.ಡಿ ಯನ್ನು ಅರ್ಧಕ್ಕೆ ನಿಲ್ಲಿಸಬೇಕಾಗಬಹುದೆಂದು ಭಯವಾಗುತ್ತಿದೆ ಎಂದು ಹೇಳಿದ್ದ. ಎ.ಬಿ.ವಿ.ಪಿ ಯವರು ತುಂಬಾ ಬಲಿಷ್ಠರಾಗಿದ್ದಾರೆ. ಏಕೆಂದರೆ ಅವರ ಪರವಾಗಿ ಎಂ.ಪಿ, ಎಂ.ಎಲ್.ಎ, ಮಿನಿಸ್ಟರ್ ಹಾಗೂ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸಹಕಾರ ತುಂಬಾ ಇದೆ’ ಎಂದು ಹೇಳಿದ್ದ. ಅವನಿಗೆ ಗೆಲ್ಲುವ ಛಲ ಹೊರಟುಹೋಗಿತ್ತು.

Related Articles

ಇತ್ತೀಚಿನ ಸುದ್ದಿಗಳು