Monday, May 6, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು- 25 : ಪಂಚತಂತ್ರ ಮತ್ತು ಸರ್ವಾಧಿಕಾರಿ ಮಂಕಿ!

ಪಂಚತಂತ್ರದ ಹಲವಾರು ಕತೆಗಳನ್ನು ಬಹುತೇಕ ಮಂದಿ ಶಾಲೆಗಳಲ್ಲೂ, ಬೇರೆ ಕಡೆಗಳಲ್ಲೂ ಬೇರೆಬೇರೆ ರೂಪಗಳಲ್ಲಿ ಓದಿರುತ್ತೀರಿ. ಹೆಚ್ಚಿನವರು ತಿಳಿದಂತೆ ಇವು ಬಿಡಿಬಿಡಿಯಾದ ಕತೆಗಳಲ್ಲ. ಅವು ಐದು ಅಧ್ಯಾಯಗಳಲ್ಲಿ ಒಂದಕ್ಕೊಂದು ಹೆಣೆದುಕೊಂಡು, ಒಂದು ಇನ್ನೊಂದರ ಒಳಗೆ ಬರುತ್ತಾ ಬೆಳೆಯುತ್ತವೆ. ಈ ಕತೆಗಳ ಸರಣಿಯಲ್ಲಿ ಕರಟಕ ದಮನಕ ಎಂಬ ನರಿಗಳು ಕುವೆಂಪು ಅವರ “ಮಲೆಗಳಲ್ಲಿ ಮದುಮಗಳು” ಕಾದಂಬರಿಯ ನಾಯಿಗುತ್ತಿ ಮತ್ತು ಗುತ್ತಿನಾಯಿಯಂತೆ ಎಲ್ಲೆಡೆ ಇದ್ದು, ಪರೋಕ್ಷ ಸೂತ್ರಧಾರಿಗಳು. ಇಲ್ಲಿನ ಕತೆಗಳು ಎಲ್ಲರೂ ಭಾವಿಸಿರುವಷ್ಟು ಸರಳವಲ್ಲ. ಕತೆಯ ನಡುನಡುವೆ ಮತ್ತು ಕೊನೆಯಲ್ಲಿ ಪದ್ಯರೂಪದ ಚರ್ಚೆಗಳು ನಡೆದು ಆ ಕಾಲದ ಸಾಮಾಜಿಕ ಮತ್ತು ರಾಜಕೀಯ ತಂತ್ರಗಳನ್ನು ವಿವರಿಸಿ, ಇನ್ನೊಂದು ಕತೆಗೆ ಮುಂದುವರಿಯುತ್ತದೆ.

ಈ ಕತೆಗಳ ಆರಂಭದಲ್ಲೇ ಬರುವಂತೆ ದಕ್ಷಿಣದ ರಾಜನೊಬ್ಬ ತನ್ನ ಮೂವರು ರಾಜಕುಮಾರರಿಗೆ ಪಾಠ ಹೇಳಲು ಒಬ್ಬ ಗುರುವನ್ನು ನೇಮಿಸುತ್ತಾನೆ. ಅವನು ಕತೆಗಳ ಮೂಲಕ ಈ ರಾಜಕುಮಾರರಿಗೆ ಸಮಾಜದ ನಡವಳಿಕೆಗಳು, ಸ್ವಭಾವಗಳು ಮತ್ತು ರಾಜನೀತಿಯ ಕುರಿತು ಹೇಳಿಕೊಡುತ್ತಾನೆ. ಇಲ್ಲಿ ಸಮಾಜದ ಬೇರೆಬೇರೆ ಸ್ತರಗಳ ಜನರು ಪಾತ್ರಗಳಾಗಿ ಇದ್ದರೂ, ಬಹುತೇಕ ಪಾತ್ರಗಳು ನರಿ, ಸಿಂಹ, ಹೋರಿ, ಕಾಗೆ, ಗೂಬೆ… ಹೀಗೆ ಪ್ರಾಣಿ, ಪಕ್ಷಿಗಳೇ ಆಗಿವೆ. ಇನ್ನೊಂದು ವಿಷಯವೆಂದರೆ, ಇವು ಮಕ್ಕಳ ಕತೆಗಳೆಂದು ಹೆಚ್ಚಿನವರು ಭಾವಿಸಿದ್ದಾರೆ. ಹಾಗಿಲ್ಲ. ಇಲ್ಲಿ ಅಶ್ಲೀಲ ಎನಿಸಬಹುದಾದ ವ್ಯಭಿಚಾರದ ಕತೆಗಳೂ ಇವೆ. ಇವೆಲ್ಲವುಗಳನ್ನು ಅವುಗಳ ಗೂಢಾರ್ಥದೊಂದಿಗೆ ಅರ್ಥಮಾಡಿಕೊಳ್ಳಲು ಸಾಕಷ್ಟು ಬುದ್ಧಿಮತ್ತೆ ಬೇಕು. ವಿಶೇಷವೆಂದರೆ ಈ ಕತೆಗಳನ್ನು ಸರಳವಾಗಿಯೂ ಹೇಳಬಹುದು ಮತ್ತು ಬೇರೆಬೇರೆ ಸಂದರ್ಭಗಳಿಗೆ ಅಳವಡಿಸಬಹುದು.

ಕುತೂಹಲಕ್ಕೆಂದು ಈ ಕತೆಗಳ ಹಿನ್ನೆಲೆಯನ್ನು ನೋಡೋಣ. ಅನುವಾದಗಳ ಮೂಲಕ ಪರ್ಷಿಯಾ, ಸಿರಿಯಾ, ಅರೇಬಿಯಾಗಳಲ್ಲೂ, ಐರೋಪ್ಯ ದೇಶಗಳಲ್ಲೂ ಚಾಲ್ತಿಯಲ್ಲಿರುವ ಈ ಕತೆಗಳನ್ನು, ವಿದ್ವಾಂಸ ಡಾ. ಹರ್ಟೆಲ್ ಅವರ ಪ್ರಕಾರ ಕಾಶ್ಮೀರದಲ್ಲಿ ಕ್ರಿ.ಪೂ. 200ರ ಸುಮಾರಿಗೆ ಒಂದು ಸಮಗ್ರ ರೂಪದಲ್ಲಿ ಬರೆಯಲಾಯಿತು. ಆದರೆ, ಇಲ್ಲಿ ಬರುವ ಕೆಲವು ಬಿಡಿ ಕತೆಗಳು ಅದಕ್ಕಿಂತಲೂ ಹಳೆಯವು ಎಂದು ಅವರು ಹೇಳುತ್ತಾರೆ. ಈ ಕತೆಯಲ್ಲಿ ಗುರುವಾಗಿ ಬರುವ ವಿಷ್ಣುಶರ್ಮನ್ ಎಂಬವನೇ ಇದನ್ನು ಬರೆದವನೆಂದೂ ಹೇಳಲಾಗುತ್ತದೆ.

ನಂತರ ಕ್ರಿ.ಶ. 1199ರ ಸಂಸ್ಕೃತ ಪಠ್ಯವನ್ನು ಉಪಯೋಗಿಸಿಕೊಂಡು 1924ರಲ್ಲಿ ವಿದ್ವಾಂಸ ಸ್ಟ್ಯಾನ್ಲಿ ರೈಸ್ ಇಂಗ್ಲೀಷ್ ಅನುವಾದ ಒಂದನ್ನು ತಂದರು. ನಂತರ ಅದಕ್ಕಿಂತ ಉತ್ತಮವೆಂದು ಹೇಳಲಾಗುವ ಅನುವಾದವನ್ನು 1926ರಲ್ಲಿ ಯುಎಸ್ಎಯ ಕ್ಯಾಲಿಫೋರ್ನಿಯಾದ ವಿದ್ವಾಂಸ ಅರ್ಥರ್ ಡಬ್ಲ್ಯೂ. ರೈಡರ್ ಅವರು ತಂದರು. ಇದನ್ನು ಭಾರತದಲ್ಲಿ ಜೈಕೋ ಬುಕ್ಸ್‌ನವರು ಪ್ರಕಟಿಸಿದ್ದಾರೆ.

ಅದಿರಲಿ, ಮುಖ್ಯವಾಗಿ ರಾಜನೀತಿಯನ್ನು ಕಲಿಸುವ ಇಲ್ಲಿನ ಕತೆಗಳಿಗೂ ನಮ್ಮ ಸರ್ವಾಧಿಕಾರಿಗೂ ಏನು ಸಂಬಂಧ? ಇಲ್ಲಿನ ಕೆಲವು ಕತೆಗಳನ್ನು ಸುಲಭವಾಗಿ ಆತನಿಗೂ, ಆತನ ಚೇಲಾಗಳಿಗೂ, ಎಲ್ಲಾ ಸರ್ವಾಧಿಕಾರಿಗಳಿಗೂ ಅನ್ವಯಿಸಬಹುದು. ಕೆಲ ವರ್ಷಗಳ ಹಿಂದೆ ನಾನು ಸಿಂಹ, ನರಿ ಮತ್ತು ಮೆದುಳಿಲ್ಲದ ಕತ್ತೆಯ ಕತೆಯನ್ನು ಆಳುವ ಕಂಕನರಿಗಳಿಗೆ ಅನ್ವಯಿಸಿ ಬರೆದಿದ್ದೆ. ಇತ್ತೀಚೆಗೆ ಅದಕ್ಕೆ ಇನ್ನಷ್ಟು ಧನಾತ್ಮಕ ವಿವರಗಳನ್ನು ಸೇರಿಸಿ ಯಾರೋ ಬರೆದದ್ದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿತ್ತು. ಅದನ್ನು ನೋಡದಿರುವವರಿಗಾಗಿ, ಮೂಲದಲ್ಲಿ ದೊಡ್ಡದಾಗಿದ್ದು, ಹಲವು ವಂಚನಾ ತಂತ್ರಗಳನ್ನು ವಿವರಿಸುವ ಈ ಕತೆಯನ್ನು ಅತ್ಯಂತ ಚುಟುಕಾಗಿ ಹೇಳುತ್ತೇನೆ.

ಮೆದುಳಿಲ್ಲದ ಕತ್ತೆ

ಕಾಡಿನ ರಾಜನೆಂದು ಹೇಳಿಕೊಳ್ಳುವ ಒಂದು ಮುದಿ ಗಡ್ಡದ ಸಿಂಹಕ್ಕೆ ಬೇಟೆಯಾಡಲು ಕಷ್ಟವಾಗುತ್ತದೆ. ಆಗ ಒಂದು ವಂಚಕ ಬೋಡ ನರಿ ಅದನ್ನು ಸೇರಿಕೊಳ್ಳುತ್ತದೆ. ನರಿಯು ಬೇರೆ ಪ್ರಾಣಿಗಳನ್ನು ವಂಚಿಸಿ ಸಿಂಹದ ಗುಹೆಗೆ ಕರೆತರುತ್ತದೆ. ಅಲ್ಲಿ ಸಿಂಹವು ಆ ಪ್ರಾಣಿಯನ್ನು ಕೊಂದು, ತನಗೆ ಬೇಕಾದುದನ್ನು ತಿನ್ನುತ್ತದೆ. ಉಳಿದುದನ್ನು ನರಿ ತಾನು ತಿಂದು, ತನ್ನ ಗೆಳೆಯರಿಗೆ ಹಂಚುತ್ತದೆ. ಒಂದು ದಿನ ಒಂದು ಕತ್ತೆಗೆ ತಗುಲಿಹಾಕಿಕೊಳ್ಳುವ ವಂಚಕ ನರಿಯು ಕತ್ತೆಯ ಗಾಯನವನ್ನು ಹೊಗಳಿ ಅಟ್ಟಕ್ಕೇರಿಸಿ, ನಮ್ಮ ಮಹಾರಾಜರು ನಿನಗೆ ಸನ್ಮಾನ ಮಾಡುತ್ತಾರೆ ಎಂದು ನಂಬಿಸಿ, ಅದನ್ನು ಗುಹೆಗೆ ಕರೆದುಕೊಂಡು ಹೋಗುತ್ತದೆ. ಅಲ್ಲಿ ಸಿಂಹವು ಅದರ ತಲೆಗೆ ಹೊಡೆದು ಕೊಲ್ಲುತ್ತದೆ. ತಿನ್ನುವ ಮೊದಲು ಸ್ವಲ್ಪ ನೀರು ಕುಡಿಯುವ ಎಂದು ಹತ್ತಿರದ ತೊರೆಗೆ ಹೋಗುತ್ತದೆ. ಅದು ಬರುವುದರೊಳಗೆ ವಂಚಕ ನರಿಯು ಹೊರಬಿದ್ದ ಕತ್ತೆಯ ಮೆದುಳನ್ನು ತಿನ್ನುತ್ತದೆ. ಮರಳಿ ಬಂದಾಗ ಕತ್ತೆಯ ಮೆದುಳು ಇಲ್ಲದ್ದನ್ನು ನೋಡಿ ಮುದಿ ಗಡ್ಡದ ಸಿಂಹವು ವಿಚಾರಿಸುತ್ತದೆ. ಆಗ ಬೋಡ ನರಿಯು, “ಏನು ಮಹಾರಾಜರೇ? ಈ ಕತ್ತೆಗೆ ಮೆದುಳು ಇದ್ದಿದ್ದರೆ ಅದು ನನ್ನನ್ನು ನಂಬಿ ಸಾಯಲು ಇಲ್ಲಿಗೆ ಬರುತ್ತೀತ್ತೆ?” ಎಂದು ಹೇಳಿ, ಗಡ್ಡದ ಸಿಂಹವನ್ನೂ ವಂಚಿಸುತ್ತದೆ. ಇಲ್ಲಿ ಮುದಿ ಗಡ್ಡದ ಸಿಂಹ, ಚಾಣಕ್ಯ ನರಿ ಮತ್ತು ಮೆದುಳಿಲ್ಲದ ಕತ್ತೆ ಯಾರು ಎಂಬುದನ್ನು ಪಂಚತಂತ್ರದಲ್ಲಿ ವಿವರಿಸಿಲ್ಲವಾದುದರಿಂದ ಅದನ್ನು ನಿಮ್ಮ ಕಲ್ಪನೆಗೆ ಬಿಡುತ್ತೇನೆ!

ನರಿ ಮತ್ತು ಭೇರಿ

ಈಗ ಚುಟುಕಾಗಿ ಇನ್ನೊಂದು ಕತೆ: ಹಸಿದು ಕಂಗಾಲಾದ ನರಿಯೊಂದು ಅಲೆದಾಡುತ್ತಿದ್ದಾಗ ಅದಕ್ಕೆ ರಣಭೇರಿಯ (ನಗಾರಿಯ) ಸದ್ದು ಡಂ, ದುಡುಂ ಎಂದು ಕೇಳಿಸುತ್ತದೆ. ಅದು ಯಾವುದೋ ಸೈನ್ಯದವರು ಬಿಟ್ಟುಹೋದ ಭೇರಿ. ಗಾಳಿಗೆ ಕೊಂಬೆಗಳು ಭೇರಿಗೆ ಬಡಿದಾಗ ಸದ್ದಾಗುತ್ತಿರುತ್ತದೆ. ನರಿಯು ಜಾಗ್ರತೆಯಿಂದ ಬಂದು ನೋಡಿದಾಗ, ಚರ್ಮವಿರುವ ಭೇರಿ. ಒಳಗೆ ತುಂಬಾ ಮಾಂಸವಿರಬಹುದು ಎಂದು ತನ್ನ ಅದೃಷ್ಟವನ್ನು ತಾನೇ ಮೆಚ್ಚಿಕೊಂಡ ನರಿಯು ಭೇರಿಯ ಒಣ ಚರ್ಮವನ್ನು ಸಿಗಿದು ಹಲ್ಲು ಕಳೆದುಕೊಳ್ಳುತ್ತದೆ. ಒಳಗೆ ನೋಡಿದರೆ ಬರೆ ಟೊಳ್ಳು! ಇರುವುದು ಮರದ ಚೌಕಟ್ಟು ಮಾತ್ರ. ನರಿ ನಿರಾಸೆಗೊಳ್ಳುತ್ತದೆ. ಎಲ್ಲಾ ಸರ್ವಾಧಿಕಾರಿಗಳು ಭೇರಿಯಂತೆ ಭಾರೀ ಸದ್ದು ಮಾಡುತ್ತಾ ಆಶ್ವಾಸನೆಗಳನ್ನು ನೀಡುತ್ತಾರೆ. ವಾಸ್ತವದಲ್ಲಿ ಅವರು ಒಳಗೆ ಟೊಳ್ಳಾಗಿರುತ್ತಾರೆ. ಅವರನ್ನು ನಂಬಿದ ಪ್ರಜೆಗಳು ಹಸಿದ ನರಿಯಂತೆ ನಿರಾಶರಾಗಬೇಕಾಗುತ್ತದೆ.

ಅಧಿಕ ಪ್ರಸಂಗಿ ಮಂಕಿ

ಇದು ಬಹುಶಃ ಎಲ್ಲರಿಗೂ ಗೊತ್ತಿರುವ ಕತೆ. ಒಂದು ಕಾಡಿನಲ್ಲಿ ಕೆಲವರು ಮರಕಡುಕರು ಒಂದು ಮರದ ದಿಮ್ಮಿಯನ್ನು ಕೊಯ್ಯುತ್ತಿರುತ್ತಾರೆ. ಮಧ್ಯಾಹ್ನ ಊಟಕ್ಕೆ ಹೋದಾಗ, ಅರ್ಧ ಸಿಗಿದ ಮರದ ಸಂದಿಗೆ ಕೀಲೊಂದನ್ನು ಸಿಕ್ಕಿಸಿರುತ್ತಾರೆ. ಆಗ ಒಂದು ಅಧಿಕಪ್ರಸಂಗಿ ಮಂಗ ಅಲ್ಲಿಗೆ ಬಂದು ಮರದ ದಿಮ್ಮಿಯ ಮೇಲೇರಿ ಕೀಲನ್ನು ಎಳೆಯಲು ಆರಂಭಿಸುತ್ತದೆ. ಅದರ ಬಾಲ ಮತ್ತು ಬೀಜಗಳು ನಡುವೆ ನೇತಾಡುತ್ತಿರುತ್ತವೆ. ಕೊನೆಗೂ ಕೀಲನ್ನು ಕಿತ್ತಾಗ ಮರದ ಎರಡೂ ಭಾಗಗಳು ಪಟಾರನೇ ಹತ್ತಿರ ಬರುತ್ತವೆ. ನಂತರ ಏನಾಯಿತು ಎಂದು ನಗದೇ ಗಂಭೀರವಾಗಿ ನೀವೇ ಊಹಿಸಿಕೊಳ್ಳಿ. ಸರ್ವಾಧಿಕಾರಿ ಮಂಕಿಗಳೂ ಹೀಗೆಯೇ ಸಂವಿಧಾನ ಬದಲಿಸಲು, ಹೊರಡುವ, ಕೋಮುವಾದ ಹರಡುವ, ಬಹುತ್ವವನ್ನು ನಾಶ ಮಾಡುವ ದೇಶಕ್ಕೆ ಅಪಾಯಕಾರಿಯಾದ ಅಧಿಕಪ್ರಸಂಗದಲ್ಲಿ ತೊಡಗುತ್ತವೆ. ಕೀಲು ಎಳೆದ ಮಂಗದ ಗತಿಯೇ ಮುಂದೆ ಈ ಸರ್ವಾಧಿಕಾರಿಗಳಿಗೆ ಆಗುತ್ತದೆ.

ದೀರ್ಘವಾದ, ಹಲವಾರು ಪದ್ಯರೂಪದ ವಿಶ್ಲೇಷಣೆಗಳನ್ನು ಹೊಂದಿರುವ ಕತೆಗಳನ್ನು ಸರಳವಾಗಿ ಹೇಳಿದ್ದೇನೆ. ಸರ್ವಾಧಿಕಾರಿ, ಶೋಕಿಲಾಲರಿಗೆ ಅನ್ವಯಿಸುವ ಇನ್ನಷ್ಟು ಕತೆಗಳನ್ನು ಮುಂದೆ ನೋಡೋಣ!

Related Articles

ಇತ್ತೀಚಿನ ಸುದ್ದಿಗಳು