Monday, June 17, 2024

ಸತ್ಯ | ನ್ಯಾಯ |ಧರ್ಮ

ಟೀಕ್ ಹೈ ಮಾ.. ಮೈ ಬಿ ವೇಟ್ ಕರುಂಗಾ..‌

ಧರ್ಮ ಧರ್ಮ ಅಂತ ನಮ್ಮೊಳಗೆ ವಿಷದ ಬೀಜ ಬಿತ್ತುತ್ತಿರುವವರು ಅರ್ಥ ಮಾಡಿಕೊಳ್ಳಬೇಕು ಧರ್ಮ‌ ಅಂದ್ರೆ ಸಮಾನತೆ, ಮಾನವೀಯತೆ, ಜೀವನದ ಪ್ರೀತಿ ಅಂತ. ಧರ್ಮ ಅಂದ್ರೆ ಮನುಷ್ಯ ಮನುಷ್ಯರ ನಡುವಿನ ಪ್ರೀತಿ ಅಂತ. ಇದು ಪ್ರಿಯಾಂಕಾ ಮಾವಿನಕರ್ ಅವರ ಇಂದಿನ ಯುವ ನೋಟ.

ನಮ್ಮೂರು ಅಂದ್ರೆ ಹಿಂದೂ ಮುಸ್ಲಿಂ ಕೂಡಿ ಆಡಿದ ನೆಲ, ಸೌಹಾರ್ದತೆಯ ನೆಲ. ಅದರಲ್ಲೂ ನಾನು ವಾಸಿಸುವ ಏರಿಯಾ ರಾಮಜಿ ನಗರ. ಅದರ ಎಡಕ್ಕ ಮೆಹಬೂಬ್ ನಗರ. ಬಲಕ್ಕೆ ನೂರಾನಿ ಮೊಹಲ್ಲಾ. ಹಿಂದೆ ಬಂದೆನವಾಜ್ ದರ್ಗಾ. ಮುಂದೆ ಮಾಲಗತ್ತಿ ಕ್ರಾಸ್. ನಾವೆ ನಟ್ಟ ನಡಬರಕ್ ಇದ್ದೀವಿ. ಕನ್ನಡ, ಹಿಂದಿ, ಉರ್ದು ಮಿಕ್ಸ್ ಭಾಷೆಯ ಸೊಗಡು, ಭಾವೈಕ್ಯತೆಯಿಂದ ಕೂಡಿದ ನಮ್ಮೂರ ಅಂದ್ರ ನನಗೆ ಭಾಳ ಹೆಮ್ಮ ಆಗುತ್ತಾದ. 

ಹಿಂದೂ ಮುಸ್ಲಿಂರೆಲ್ಲ  ಹಿಂಗೆ ಕೂಡಿ ಬದುಕು ಕಟ್ಟಿಕೊಂಡಿದ್ದೀವಿ. ಎಲ್ಲಾ ಹಬ್ಬನೂ ಭೇದಭಾವ ಇಲ್ಲದೆ ಹಂಗ್ ಆಚರಣೆ ಮಾಡಕೊಂಡು ಬರ್ತಿದ್ದೀವಿ. ಸಾಹೇಬ್ ಚಾಚಾನ ಮನ್ಯಾಗಿನ ಸುರಕುಂಬಾ ಬಿರಿಯಾನಿ ನಮ್ಮ ಮನಿಗಿ ಬಂದರೆ, ನಮ್ಮ ಮನಿ ಹೋಳಿಗಿ ಆಂಬುರ ಅವರ ಮನಿ ಸೇರತದ. ಇನ್ನ ಮದ್ವೆ ಇತ್ತು ಅಂದ್ರೆ ಕನ್ನಡದಲ್ಲಿ ಮದ್ವಿ ಕಾರ್ಡ ಪ್ರಿಂಟ್ ಹಾಕಸಿ ನಮಗೆ ಕೊಡ್ತಾರೆ.  ನಮ್ಮ ಮನ್ಯಾಗಿನ ಕಾರ್ಯಕ್ರಮಕ್ಕೆ ಅವರು ಬರ್ತಾರೆ. ಹಿಂಗೆ ಜಾತಿ ಧರ್ಮ ಇಲ್ಲದಂಗೆ ನಾವು ಬದುಕುತ್ತಿರುವಾಗ  ಜಾತಿ ಧರ್ಮದ ಹೆಸರಿನಲ್ಲಿ ಒಡೆದಾಳುತ್ತಿದ್ದಾರೆ ಇಂದಿನ ಆಳುವ ಸರ್ಕಾರ.

ಮೊನ್ನೆ  ಏನಾಯ್ತು ಅಂದ್ರೆ ಆಫೀಸ್ ಕೆಲಸದ ಸಲ್ಯಾಕ್ ನಾ ಹೊಸಪೇಟಿಗಿ ಹೋಗಬೇಕಿತ್ತು. ಮುಂಜಾನಿಂದ ಬಸ್ ಬುಕ್ ಮಾಡಬೇಕು  ಅಂತ ಅನ್ನಕೊಳ್ಳೊದು ಮತ್ ಮರಿಯೋದು, ಮತ್ ನೆನಪಾದಾಗ  ಫೋನ್ ಕೈಯಾಗ ಹಿಡಿಯೋದು ಮತ್ತೆ ಮರಿಯೋದು. ಯಾಕೆಂದರ   ಹಿಂದ ಒಂದು ಸಲ ಮುಂಚಿತವಾಗಿ ಟಿಕಿಟ್ ಬುಕ್ ಮಾಡಿದ್ದಿಲ್ಲ, ಆದರೆ ಬಸ್ ಸಿಕ್ಕಿತು. ಬಸ್ ಸ್ಟ್ಯಾಂಡ್ ನ್ಯಾಗ ಹೋಗಿ ಬುಕ್ ಮಾಡ್ಕೊಂಡು ಹೊಸಪೇಟಿಗಿ ಹೋಗಿದ್ರಾಯ್ತು ಅಂತ ಸುಮ್ನಾದೆ.  

ಬಟ್ಟಿ ಬರಿ ಬ್ಯಾಗನ್ಯಾಗ ಹಾಕೊಂಡ ತಯಾರೇನೋ ಆದೆ. ಆದ್ರ ಹೋಗೋದು ಹೆಂಗ್. ಮನಿಲಿಂದ ಜಲ್ದಿ ಹೋಗಿ ಬಸ್ ಬುಕ್ ಮಾಡಬೇಕ ಅಂದ್ರ ಆ ಕಡಿ ನನ್ನ ತಮ್ಮ ಗಾಡಿ ತರ್ತಿನಿ ಅಂದವ ಫೋನ್ ಎತ್ತಾಲಗ್ಯಾನ. ಈ ಕಡಿ ಬಸ್ ನೂ ಬುಕ್ ಮಾಡಿಲ್ಲ. ಇದೆಂತ ಫಜೀತಿ, ಏನ್ ಮಾಡ್ಲಿ ಒಂದು ತಿಳಿಯದಂಗಾಗಿ ಗಾಬರಿ ಆದೆ. ಗಾಬರಿ ಆದ್ರೆ ಏನ್ ಮಾಡ್ಲಿಕ್ ಅಗತ್ತಾದ? ಊರಿಗಂತೂ ಹೋಗಲೆಬೇಕ, ನಾ ಬ್ಯಾರೆ ದಾರಿನೇ ಇಲ್ಲ. 

ಮನಸ್ಸು ಗಟ್ಟಿ ಮಾಡಿ 10.45 ಕ್ಕ  ಮನಿ ಬಿಟ್ಟ ಸೀದಾ ರೋಡಿನ ಹಾದಿ ಹಿಡದ. ನಮ್ಮವ್ವನ ಹೊಟ್ಟ್ಯಾಗ ಕಸವಿಸಿ. ಇಕಿ ಒಬ್ಬಾಕಿನೆ ಹೆಂಗ್ ಹೋಗತ್ತಾಳ ಇಟ್ಟ ರಾತ್ರ್ಯಾಗಂತ, ಟೈಮ್ ಬ್ಯಾರೆ ಗ್ಯಾರಾ (11ಗಂಟೆ) ಆಗ್ಯಾದ ಅನ್ನೊ ಚಿಂತಿ ಅಕಿಗಿ. ನಡಿ ನಾ ಬರ್ತಿನಿ ನಿನ್ನ ಜೋಡ್ ಬಸ್ ಸ್ಟ್ಯಾಂಡಿಗಿ ಅಂದ್ಳು. ಏ ಯವ್ವ ನಾ ಏನ್ ಸಣ್ ಕೂಸ ಇದ್ದೀನಿ ಏನು..?  ಬರ್ಬೇಡ  ನಾ ಒಬ್ಬಾಕಿನೆ ಹೋಗತ್ತಿನಿ ಫುಲ್ ಆಟೋ ಮುಗಿಸ್ಕೊಂಡು ಹೋದ್ರ ಸೀದಾ ಬಸ್ ಸ್ಟ್ಯಾಂಡದಾಗೆ ಇಳಿತ್ತಿನಿ ಸುಮ್ ನೀ ಯಾಕ್ ಬರ್ತಿ, ನಾ ಒಬ್ಬಾಕಿನೆ ಹೋಗತ್ತಿನಿ ಅಂತ ಹೇಳದೆ. ಆದ್ರೂ ಅಕಿಗಿ ಸಮಾಧಾನಿಲ್ಲ ಆಟೋದಾಗರೆ  ಕುಂಡ್ರಿಸ್ತಿನಿ ಅಂತ ಹಿಂದೆ ಹಿಂದೆ ಬಂದ್ಳು.

ರಾತ್ರ್ಯಾಗಂತೂ ಯಾವ ಆಟೋ ಬರಲ್ಲ ಬಂದ್ರ ಜಾಸ್ತಿ ರೊಕ್ಕ ಕೇಳತ್ತಾರೆ.  ಹಂಗ್ ಹಿಂಗ್ ಮಾಡಿ ಒಂದ ಆಟೋ ಬಂತು. 

ಆಟೋ ಬೈಯಾ ಎಲ್ಲಿಗಿ ಅಂತ ಕೇಳಿದ್ನೂ ಬಸ್ ಸ್ಟ್ಯಾಂಡ್ ಅಂದೆ,  “ದೋ ಜನೆ ಹೈ ಕ್ಯಾ?” ಅಂತ ಕೇಳದ, ಅದಕ್ಕೆ ನಾ “ನಹಿ ಬೈಯಾ ಮೈ ಅಕೆಲಿ ಹ್ಮ,  ಓ ಅಮ್ಮಿ ಮುಜೆ ಛೋಡ್ನೆ ಆಯಿ” ಅಂದೆ. ಅದ್ಕೆ ಬೈಯಾ ತಿರುಗಿ ಹೇಳದ “ಮಾ ಹೈ ನಾ ಬೇಟಿ ಫಿಕರ್ ತೊ ರಹೇತಿ ಹೈ” ಅಂತ ಆಟೋ ಮುಂದ್ ತಗೊಂಡು ಹೊಂಟನು.

ಆಟೋ ಅಣ್ಣ ನನ್ನ ಜೊತಿ ಮಾತ ಶುರು ಮಾಡದ, ಎಲ್ಲಿಗಿ ಹೊಂಟಿದ, ಯಾಕ್ ಇಷ್ಟು ರಾತ್ರಿ ಆಗ್ಯಾದ ಒಬ್ಬಾಕಿನೆ ಹೊಂಟಿದಿ  ಅಂತೆಲ್ಲ ಕೇಳಿದ ಹಂಗೆ ಮಾತುಕತಿ ನಡೆದಿತ್ತು. ಸೀಟ್ ಸಿಕ್ಕರೆ ಹಾಕೊತಿನಿ ನಿಂಗ್ ಬಿಟ್ಟು ಬರಾಗ ನಾ ಖಾಲಿ ಆಟೋ ತರಬೇಕಾಗುತ್ತಾದ ಅಂತ ಭಾಳ ವಿನಯದಿಂದ ಕೇಳಿದನು. ನಂಗ್ ಬಿ ಅನ್ನಸ್ತು ಖರೇನೆ ಖರೆ  ಇನ್ನಾ ಮೂರು ಮಂದಿ ಕುಡಷ್ಟು ಜಾಗ ಅದಾ ಕೂಡತ್ತಾರ ತಗೊ ಬೈಯಾ ಅಂತ ಹೇಳಿ ಸುಮ್ಮ ಕುಂತೆ. ಆರ್ ಟಿ ಓ, ಸರ್ಕಾರ ದವಾಖಾನಿ, ತಿಮ್ಮಾಪುರ ಚೌಕ್  ಅಂತ ಸೀಟ್ ಸಿಕ್ಕವು. 

ಆ ದಿನ ಕಲಬುರಗಿಗಿ ಸಿ ಎಂ ಬರೊ ತಯಾರಿ. ರೋಡಗೋಳು ನೋಡಬೇಕ ಒಂದಕ್ಕಿಂತ ಒಂದ್  ಭಾರಿ ಕಾಣ್ಲಾತ್ತಿವು 

ನಾಳಿಗಿ ಮುಂಜಾನಿ ಅಂದ್ರ ಕಲಬುರಗಿದಾಗ  ಸಿ ಎಂ ಬರ್ತಾರ ಅನ್ನೊ ತಯಾರಿದಾಗ ಇಡೀ ಕಲಬುರಗಿ ಅನ್ನೊ ಕಲಬುರಗಿ ಮದಿಮಗುಳ ಹಂಗ್ ಮಿಂಚಾಕತ್ತಿತ್ತು ನೋಡ್. ರೋಡ್ ನೋಡ್ಕೊತ್ತಾ, ಅವರೆಲ್ಲ ಮಾತಾಡೋದು ಕೇಳಕೋತಾ ಮತ್ ಬಸ್ ಸಿಗುತ್ತೊ ಇಲ್ವೊ ಅನ್ನೊ ಚಿಂತ್ಯಾಗ ಇದ್ದೆ ನಾ. 

ರಾಜಕೀಯ ಚರ್ಚೆ ಬಲು ಜೋರ ನಡಸಿರು. ಪಬ್ಲಿಕ್ ಕಟ್ಟಿದ ಟ್ಯಾಕ್ಸ್ ರೊಕ್ಕಾದಾಗ ಇಷ್ಟೆಲ್ಲ ಪೋಸ್ಟರ್, ಬ್ಯಾನರ್, ಲೈಟ್ ಹಾಕ್ಯಾರಲ್ಲ, ಹಿಂಗೆ ಮನಿದು ರೊಕ್ಕ  ಖರ್ಚ ಮಾಡಿ ಮಾಡು ಅಂದ್ರ ಮಾಡ್ತಾರೇನು ಇವರು.? ಯಾರದೊ ದುಡ್ಡ ಯಲ್ಲಮ್ಮನ ಜಾತ್ರಿ. 

ಈಗೆಲ್ಲ ಹಿಂಗ್ ಕಣ್ಣಿಗಿ ಮಿಂಚಂಗ್ ಎಲ್ಲಾ ಹಾಕ್ಯಾರ ನಾಳಿಗಿ ನೋಡ್ರಿ ರೋಡ್ ಮ್ಯಾಲ್ ಎಲ್ಲಿ ಅಂದ್ರ ಅಲ್ಲಿ ಬಿದ್ದಿರ್ತಾವ ಎಲ್ಲ ಪೋಸ್ಟರ ಬ್ಯಾನರ್ ಅನಾಥ ಮಕ್ಕಳಂಗೆ ಅಂತ‌ ಬೈತ್ತಿದ್ದರೂ. ನನಗೂ ಅವರೆಲ್ಲರ ಮಾತ ಕೇಳಿ ಹಾಲ ಕುಡಿದಷ್ಟೆ ಸಂತೋಷ ಆಯ್ತು.

ಇನ್ನ ಮಾತ ಮುಗಿಸಿದಿಲ್ಲ ಆದ್ರೆ ಒಬ್ಬೊಬ್ಬರೆ ಇಳಿಬೇಕಾದ ಜಾಗ ಬಂದಿದಕ್ಕ ಎಲ್ಲರೂ ಇಳಿದ್ರೂ. ನಂದೆ ಲಾಸ್ಟ್ ಸ್ಟಾಪ್. ನಾ ಬೈಯಾನ ಜೊತಿ ಮಾತಾದೋಡು ಶುರು ಮಾಡಿದೆ.

“ಬೈಯಾ ಮೇರಾ ತೊ ಬಸ್ ಕಾ ಟಿಕೆಟ್ ಬಿ ಬುಕ್ ನಹಿ ಹುವಾ ಹೈ, ಬಸ್ ಮಿಲಿತೊ ಟೀಕ್ ಹೈ  ನಹಿ ಮಿಲಾ ತೋ ಮೈ ಪಾಪಸ್ ಆತಿ ಹ್ಮೂ” ಅಂದೆ ಅದ್ಕೆ ಆತ “ಟೀಕ್ ಹೈ ಮಾ ಮೈ ಬಿ ವೇಟ್ ಕರುಂಗಾ” ಅಂತೇಳಿ ಬಸ್ ಸ್ಟ್ಯಾಂಡ್ ದಾಗ ಬಿಟ್ಟರು. 

ನೀ ಟಿಕೆಟ್ ಕೇಳಕೊಂಡ ಬಾ, ನಾ ಕಾಯಿತ್ತಿನೆಂದ ಹೇಳಿದ. ಭಾಳ ಗಾಬರಿ ಆಗಿದ್ದ ನಂಗೆ ಆತನ ಮಾತಿನಿಂದ ಸಮಾಧಾನ ಆಯ್ತು. 

 ಬಸ್ ಸ್ಟ್ಯಾಂಡ್ ನ್ಯಾಗ  ಹೋಗಿ ಬಸನ್ಯಾಗ ಸೀಟ್ ಇದೆನಾ ಇಲ್ಲ ಅಂತ ಕೇಳದೆ‌. ಕಂಡಕ್ಟರ್ ನಂಗ ನೋಡಿ ಸಿಂಗಲ್ ಸೀಟ್ ಕೊಟ್ಟರು. ಟಿಕೆಟ್ ಕೈಯಾಕ್ ಹಿಡಿದು ರೋಡ್ ಕಡಿ ಒಂದ್ ಸಲ ನೋಡದೆ. ಬೈಯಾ ಕಾಯಿತಾ ಇದ್ರೂ. ಮತ್ತೆ ಅಲ್ಲಿಗಿ ಓಡೋಡಿ ಹೋಗಿ ಬೈಯಾ ಟಿಕೆಟ್ ಮಿಲಾ ಅಂದೆ,  ಅಂದ್ಕೆ ಅವನು  “ಅಚ್ಛಾ ಹುವಾ ಆರಾಮಸೆ ಜಾ ಮಾ ಹ್ಯಾಪಿ ಜರ್ನಿʼ ಎಂದು ಆಟೋ ತಗೊಂಡು ವಾಪಸ್ ಹೋದ್ರೂ. 

ನನಗೆ ಆಗ ಅನ್ನಸಿದ್ದೆನಂದ್ರಾ ನಮ್ಮೊಳಗಿನ ಮನುಷ್ಯತ್ವ ಪ್ರೀತಿ ಮುಂದ ಈ ಜಾತಿ, ಧರ್ಮ ಎಲ್ಲ ಭಾಳ ಸಣ್ಣದಾಗಿ ಕಾಣಿಸ್ತು. ಎಲ್ಲಾ ಮೀರಿ ಬದುಕಿನ ರುಚಿ ಸವಿದಾಗ ಮಾತ್ರ ಈ ಬದುಕು ಇನ್ನಷ್ಟು ಚೆಂದ ಅನ್ನಸುತ್ತೆ. ರಕ್ತ ಹಂಚಕೊಂಡು ಹುಟ್ಟಿಲ್ಲ ಆದ್ರೂ ಅಣ್ಣಾನೆ ಜೊತಿಗ ಇದ್ದ ಅನ್ನೊ ಧೈರ್ಯ ಕೊಟ್ಟ ಆಟೋ ಬೈಯಾಗೆ ಪ್ರೀತಿಯ ಶರಣು. ಧರ್ಮ ಧರ್ಮ ಅಂತ ನಮ್ಮೊಳಗೆ ವಿಷದ ಬೀಜ ಬಿತ್ತುತ್ತಿರುವವರು ಅರ್ಥ ಮಾಡಿಕೊಳ್ಳಬೇಕು ಧರ್ಮ‌ ಅಂದ್ರೆ ಸಮಾನತೆ, ಮಾನವೀಯತೆ, ಜೀವನದ ಪ್ರೀತಿ  ಅಂತ. 

ಕಾರ್ಲ್ ಮಾರ್ಕ್ಸ್ ಅವರು  ಧರ್ಮ ಎಂದರೆ ” ತುಳಿತಕ್ಕೆ ಒಳಗಾದವರ ನಿಟ್ಟುಸಿರು” ಹೃದಯ ಹೀನ ಜಗತ್ತಿನ ಭಾವನಾತ್ಮಕತೆ” ” ಆತ್ಮ ಹೀನ ಪರಿಸ್ಥಿತಿಯ ಒಂದು ಆತ್ಮ” ” ಧರ್ಮವು ಜನಸಾಮಾನ್ಯರ ಅಫೀಮು ಎಂದು ಹೇಳಿದ್ದಾರೆ. ಹಾಗೆಯೇ ಡಾ ಬಿ. ಆರ್ ಅಂಬೇಡ್ಕರ್ ಅವರು ” ಸಮಾನತೆ, ಸೋದರತ್ವ, ಸ್ವಾತಂತ್ರ್ಯ, ಹಾಗೂ ನ್ಯಾಯದ ಅಸ್ತಿತ್ವವನ್ನು ಧರ್ಮವೆಂದು ಹೇಳಿದ್ದಾರೆ. 

ಇದೇ ಅಲ್ವಾ ನಿಜವಾದ ಧರ್ಮ ಅಂದ್ರೆ.. ಮನುಷ್ಯ ಮನುಷ್ಯರ ನಡುವಿನ ಪ್ರೀತಿಯೇ ಧರ್ಮ ಅನ್ನುವುದನ್ನು ಎಲ್ಲರೂ ಅರ್ಧ ಮಾಡಿಕೊಳ್ಳಬೇಕು. ಹಿಂದೂ, ಮುಸ್ಲಿಂ, ಸಿಖ್, ಇಸಾಯಿ ಹಮ್ ಸಬ್ ಹೈ ಭಾಯಿ ಬೇಹೆನ್ ಅನ್ನುವದನ್ನ ಅರಿತುಕೊಂಡು ಮುನ್ನಡೆಯಬೇಕಿದೆ. 

ಪ್ರಿಯಾಂಕಾ ಮಾವಿನಕರ್

ಹವ್ಯಾಸಿ ಬರಹಗಾರ್ತಿ, ಕಲಬುರ್ಗಿ

Related Articles

ಇತ್ತೀಚಿನ ಸುದ್ದಿಗಳು