Friday, April 26, 2024

ಸತ್ಯ | ನ್ಯಾಯ |ಧರ್ಮ

ಅಮೆರಿಕಾ ಎಂಬ ಬಲೂನಿಗೆ ಹವಾಮಾನದ ಮಿಸೈಲುಗಳು| ಮುಂದಿನ ಸರದಿ ಯಾರದ್ದೋ?

ಹವಾಮಾನ ಬದಲಾವಣೆ ಮತ್ತು ಹವಾಮಾನ ವಿಪರೀತಗಳ ಬಗ್ಗೆ ನಾವು ಗಮನಹರಿಸಿದ್ದು ಬಹಳ ಕಡಿಮೆ. ಜಗತ್ತು ಈ ಬಗ್ಗೆ ತೀವ್ರ ಗಮನ ಹರಿಸಬೇಕೆನ್ನುವ ಸಂದೇಶವನ್ನು ಈಗಾಗಲೇ ಜಗತ್ತಿನ ಹಲವು ದೇಶಗಳ ಪ್ರಕೃತಿ ವಿಕೋಪಗಳು ನೀಡಿವೆ. ಎಚ್ಚರಗೊಳ್ಳಬೇಕಾದ ಸರದಿ ಈಗ ನಮ್ಮದು. ಅಮೆರಿಕಾದ ಕ್ಯಾಲಿಫೋರ್ನಿಯಾದಲ್ಲಿ ಇತ್ತೀಚೆಗೆ ಬಾಂಬ್ ಸೈಕ್ಲೋನ್ ಮತ್ತು ಅದರ ಹಿಂದೆಯೆ ಪೆಸಿಫಿಕ್ ಹೆಗ್ಗಡಲು ಕಳಿಸಿಕೊಟ್ಟ ಬಾನ್ನೊಳೆ ಕ್ಯಾಲಿಫೋರ್ನಿಯಾವನ್ನು ತೊಳೆದು ಸಾರಿಸಿಬಿಟ್ಟ ದುರ್ಘಟನೆಯ ಕುರಿತ ಕೆಎಸ್‌ ರವಿಕುಮಾರ್‌ ಅವರ ಈ ಲೇಖನ ಓದಿ.

ಮುಂದಿನ ಸರದಿ ಯಾರದ್ದೋ, ಎಲ್ಲೋ ಎಂದು ಬರಹವನ್ನು ಕೊನೆಗೊಳಿಸಿದ ಕೆಲವೇ ದಿನಗಳಲ್ಲಿ ಮತ್ತೊಂದು ಬಾಂಬ್ ಸೈಕ್ಲೋನ್ ಮತ್ತೆ ಅಪ್ಪಳಿಸಿದ್ದು ಅಮೆರಿಕಾದ ಮೇಲೆಯೆ! ಈಗ ಅದು ದೌಡಾಯಿಸಿ ಬಂದದ್ದು ಆರ್ಕಟಿಕ್ ಕಡೆಯಿಂದ ಅಲ್ಲ. ಪೆಸಿಫಿಕ್ ಹೆಗ್ಗಡಲಿನಿಂದ. ಅಮೆರಿಕಾದ ಪಶ್ಚಿಮ ಕರಾವಳಿಗೆ ಈ ಬಾಂಬ್ ಸೈಕ್ಲೋನ್ ಅಪ್ಪಳಿಸಿ ಕ್ಯಾಲಿಫೋರ್ನಿಯಾ ರಾಜ್ಯವು ಹಿಂದೆಂದೂ ಕಾಣದಂತಹ ಮಳೆ, ಮಂಜು, ನೆರೆ, ನೆಲಕುಸಿತಗಳನ್ನು ಕಂಡಿತು. ನಿಡುಗಾಲದ ಬರಗಾಲ ಮತ್ತು ಸಾಲುಸಾಲು ಕಾಡ್ಗಿಚ್ಚುಗಳಿಂದ ಬಸವಳಿದು ಹೋಗಿದ್ದ ಅದು ಈಗ ನೆರೆಯ ತೆಕ್ಕೆಗೆ ಬಿದ್ದು ನರಳಿತ್ತು. ನಾಲ್ಕಾರು ದಿನಗಳಲ್ಲಿ ನೆರೆಯಿಳಿದು ಮಾಮೂಲು ಸ್ಥಿತಿ ಮರಳಬಹುದು ಎಂದುಕೊಳ್ಳುವಷ್ಟರಲ್ಲೆ ಉಷ್ಣವಲಯದ ಕಡೆಯಿಂದ ಬಂದ ‘ಬಾನ್ನೊಳೆ’ಯೊಂದು ಕ್ಯಾಲಿಫೋರ್ನಿಯಾದ ಮೇಲೆ ಧುಮ್ಮಿಕ್ಕಿತು. ಏನಿದು ಬಾನ್ನೊಳೆ? Atmospheric river ಎಂದು ತಾಂತ್ರಿಕವಾಗಿ ಕರೆಸಿಕೊಳ್ಳುವ ಹೊಳೆಯೊಂದು ಬಾನಿನಲ್ಲಿ ಹರಿದುಬರುವುದನ್ನು ಕಲ್ಪಿಸಿಕೊಳ್ಳಿ. ಅಂದಹಾಗೆ ಬಾನಿನಲ್ಲಿ ಹರಿಯಲು ಸಾಧ್ಯವಿಲ್ಲ, ತೇಲಬೇಕು.

ಅಸಾಮಾನ್ಯ ವಾತಾವರಣದ ಕಾವಿಗೆ ಬಿಸಿಯಾದ ಕಡಲ ನೀರು ಹೇರಳ ಪ್ರಮಾಣದಲ್ಲಿ ನೀರಾವಿಯನ್ನು ಉತ್ಪಾದಿಸಿ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ. ಒಂದು ಹೆಬ್ಬೊಳೆಯಲ್ಲಿ ಹರಿಯುವ ನೀರಿಗೆ ಸಮನಾದಷ್ಟು ಅಥವಾ ಇನ್ನೂ ಹೆಚ್ಚಿನ ನೀರಾವಿ ಆಗಸದಲ್ಲಿ ಹೊನಲಿನಂತೆ ತೇಲಿ ಹೋಗುತ್ತದೆ. ಕ್ಯಾಲಿಫೋರ್ನಿಯಾದ ಮೇಲೆ ಮುಗಿಬಿದ್ದ ಬಾನ್ನೊಳೆಯಲ್ಲಿ ಎರಡು ಅಮೆಜಾನ್ ನದಿಗಳನ್ನು ಹುಟ್ಟುಹಾಕಲು ಬೇಕಾಗುವಷ್ಟು ನೀರು ನೀರಾವಿ ರೂಪದಲ್ಲಿತ್ತು. ಅಂದರೆ ಈ ನೀರಾವಿ ಮಳೆಯಾಗಿ ಬಿದ್ದರೆ ಎರಡು ಅಮೆಜಾನ್ ನದಿಗಳಿಗೆ ಸಾಲುವಷ್ಟು ನೀರು ನೆಲಸೇರುತ್ತದೆ. ಈ ಪ್ರಮಾಣದ ಮಳೆ ಬಿದ್ದರೆ ಈ ತನಕ ಕಲ್ಪಿಸಿಕೊಳ್ಳಲೂ ಸಾಧ್ಯವಾಗದ ನೆರೆನೀರು ಹುಚ್ಚೆದ್ದು ಎಲ್ಲ ದಿಕ್ಕುಗಳಿಗೂ ನುಗ್ಗುತ್ತದೆ. ಬಾಂಬ್ ಸೈಕ್ಲೋನ್ ಹಿಂದೆಯೆ ಪೆಸಿಫಿಕ್ ಹೆಗ್ಗಡಲು ಕಳಿಸಿಕೊಟ್ಟ ಬಾನ್ನೊಳೆ ಕ್ಯಾಲಿಫೋರ್ನಿಯಾವನ್ನು ಹೊಸ ವರುಷದ ಜನವರಿಯಲ್ಲಿ ಮನಸೋಇಚ್ಛೆ ತೊಳೆದು ಸಾರಿಸಿಬಿಟ್ಟಿತು. 17 ದಿನಗಳಲ್ಲಿ 95 ಟ್ರಿಲಿಯನ್ (95ರ ಮುಂದೆ 12 ಸೊನ್ನೆಗಳು) ಲೀಟರುಗಳಷ್ಟು ಮಳೆ ಬಿದ್ದಿತ್ತು. ಸಾವಿನ ಸಂಖ್ಯೆ ಕಮ್ಮಿಯಿದ್ದರೂ ಆಸ್ತಿಪಾಸ್ತಿಗೆ ಆದ ಹಾನಿ ಮಾತ್ರ ಅಪೂರ್ವವಾಗಿತ್ತು. ಈ ಹಾನಿಯು 34 ಬಿಲಿಯನ್ (34ರ ಮುಂದೆ 9 ಸೊನ್ನೆಗಳು) ಡಾಲರ್‌ಗಳು ಎಂದು ಲೆಕ್ಕಿಸಲಾಗಿದೆ.

ಅಂತೂ ಇಸವಿ 2023ರ ವಾತಾವರಣ ಒಂದು ಹದಕ್ಕೆ ಬಂತೆಂದು ಈಶಾನ್ಯ ಅಮೆರಿಕಾದ ಜನ ಬೆಚ್ಚಗೆ ನಿರಾಳ ನಿದ್ದೆ ತೆಗೆದದ್ದು ನಾಲ್ಕು ವಾರಗಳವರೆಗಷ್ಟೆ. ಆಮೇಲೆ ಫೆಬ್ರವರಿ ಮೊದಲ ವಾರದಲ್ಲೆ ನಾಲ್ಕೈದು ದಿನಗಳವರೆಗೆ ವಕ್ಕರಿಸಿತು ನೋಡಿ ಆರ್ಕಟಿಕ್ ಗಾಳಿ ಉಡಾಯಿಸಿದ ‘ಥಂಡಿ ಸಿಡಿತ’ (cold blast). ಆರ್ಕಟಿಕ್ ಗಾಳಿ ತಂದ ಥಂಡಿಯಾದ್ದರಿಂದ ಅದನ್ನು Arctic blast  ಅಂತಲೂ ಕರೆಯುತ್ತಾರೆ. ಆದರೆ ವ್ಯತ್ಯಾಸವಿಷ್ಟೆ, ಬಾಂಬ್ ಸೈಕ್ಲೋನ್ ಸುರುಳಿಗಟ್ಟಿಕೊಂಡು ಬೀಸಿಬಂದರೆ, ಥಂಡಿ ಸಿಡಿತ ತಂದ ಗಾಳಿ ಎಲ್ಲ ದಿಕ್ಕುಗಳಿಗೂ ಪಸರಿಸುತ್ತ ತನ್ನ ಅಳವಿಗೆ ಸಿಲುಕಿದ್ದನ್ನೆಲ್ಲ ಮಿಂಚಿನಂತೆ ಮಂಜುಗಟ್ಟಿಸಿತು. ಹೌದು, ಥಂಡಿ ಸಿಡಿಯಿತು ಎನ್ನುವುದೆ ಸರಿ. ನಾವು ಬಿಸಿಯಾದದ್ದು ಮಾತ್ರ ಸಿಡಿಯುತ್ತದೆ ಅಂತ ತಿಳಿದಿದ್ದೇವೆ. ಆದರೆ ತೀವ್ರ ಥಂಡಿಯಲ್ಲಿ ತಾಪ ಊಹೆಗೂ ಮೀರಿ, ಒಮ್ಮೆಲೆ ಹಲವು ಪಟ್ಟು ಅಸಹಜವಾಗಿ ಕುಸಿದರೆ ಅದೂ ಸಿಡಿತಕ್ಕೆ ಸಮನಾಗಿರುತ್ತೆ. ಸಿಡಿಯಲು ಹಿಗ್ಗಲೇ ಬೇಕಿಲ್ಲ! ಈ ಬಾರಿ ಈಶಾನ್ಯ ಅಮೆರಿಕಾದ ರಾಜ್ಯಗಳಲ್ಲಿ ಆದದ್ದೂ ಹಾಗೆಯೆ. ಥರ್ಮಾಮೀಟರ್ರೆ ‘ನಡುಗಿ’ ನರ್ತಿಸುವ ಹಾಗೆ ತಾಪವು ನ್ಯೂಹ್ಯಾಂಪ್‍ಶೈರ್ ರಾಜ್ಯದ ಮೌಂಟ್ ವಾಷಿಂಗ್ಟನ್ (ಕಡಲ ಮಟ್ಟದಿಂದ 1920 ಮೀಟರ್‍ ಗಳು, ನಮ್ಮ ಮುಳ್ಳಯ್ಯನಗಿರಿಯಷ್ಟು ಎತ್ತರದ ಬೆಟ್ಟವಿದು) ನೆತ್ತಿಯಲ್ಲಿ 03.02.2023ರ ಶುಕ್ರವಾರದಂದು ಸೊನ್ನೆಯ ಕೆಳಗೆ 78 ಡಿಗ್ರಿ ಸೆಲ್ಸಿಯಸ್ಸಿಗೆ ಜರಿದು ಹೋಯಿತು. ಅಮೆರಿಕಾದ ಚರಿತ್ರೆಯಲ್ಲೆ ತಾಪ ಇಷ್ಟು ಕುಸಿದಿರಲಿಲ್ಲ. ಬಯಲು ನಾಡುಗಳಲ್ಲೂ ತಾಪ ಸೊನ್ನೆಯ ಕೆಳಗೆ 50ರ ಆಸುಪಾಸಿನಲ್ಲಿತ್ತು. ಇದೇನು ಕಮ್ಮಿಯಲ್ಲ. ಕ್ರಿಸ್‍ಮಸ್ ವೇಳೆಯ ಬಾಂಬ್ ಸೈಕ್ಲೋನಿಗೂ ತಾಪ ಇಷ್ಟೊಂದು ಕುಸಿದಿರಲಿಲ್ಲ. ಜನವರಿ ಸಾಮಾನ್ಯವಾಗಿ ಅತಿ ಥಂಡಿಯ ತಿಂಗಳು ಎಂದು ಈ ಭಾಗದಲ್ಲಿ ಅಗ್ಗಳಿಕೆ ಹೊಂದಿತ್ತು. ಆದರೆ ಈ ವರುಷ ಫೆಬ್ರವರಿ ಆ ಅಗ್ಗಳಿಕೆಯನ್ನು ಕಸಿದುಕೊಂಡಿತು.

ಫೆಬ್ರವರಿಯ ಥಂಡಿ ಸಿಡಿತದ ಸಮಯದಲ್ಲೆ ಅಮೆರಿಕಾ ಮಿಲಿಟರಿಯ ಈ-22 ಜೆಟ್ ವಿಮಾನವು 200 ಅಡಿ ಎತ್ತರದ ಚೀನಾ ಹಾರಿಬಿಟ್ಟ ಬಲೂನಿ(ಚೀನಾ ಪ್ರಕಾರ ಇದು ಹವಾಮಾನ ಅಧ್ಯಯನದ ಬಲೂನು, ಅಮೆರಿಕಾ ಪ್ರಕಾರ ಇದು ಬೇಹುಗಾರಿಕೆ ಉದ್ದೇಶದ ಬಲೂನು, ಇರಲಿ ಎಂತದೋ ಒಂದು. ಜೆಟ್ ವಿಮಾನ ಮಾತ್ರ ತನ್ನ ಒಂದು ಹಾರಾಟದಲ್ಲೆ ಟನ್ನುಗಟ್ಟಲೆ ಕಾರ್ಬನ್ ಅನ್ನು ವಾತಾವರಣಕ್ಕೆ ಉಗುಳುತ್ತದೆ)ನ ಮೇಲೆ ಮಿಸೈಲನ್ನು ಎಸೆದು ಅದನ್ನು ಹರಿದು ಚಿಂದಿ ಮಾಡುತ್ತಿತ್ತು. ಇತ್ತ ಥಂಡಿ ಸಿಡಿತವು ಥಂಡಿ ಪೀಡಿತರ ನಿತ್ಯದ ಬದುಕನ್ನು ಹರಿದು ಹಿಸ್ಸೆ ಮಾಡುತ್ತಿತ್ತು. ಹಲವೆಡೆ ನೆಲದಿಂದ ಕಂಪನದ ಸಪ್ಪಳಗಳು ಕೇಳಿಬಂದವು. ತೀವ್ರ ಚಳಿಗಾಲದ ವೇಳೆ ನೆಲದಡಿಯಲ್ಲಿ ಸೀಳುಬಿಟ್ಟಂತಹ ಸಪ್ಪಳ ಕೇಳಿಬರುವುದು ಸಾಮಾನ್ಯ. ಶೀತವಲಯದ ತಾಣಗಳಲ್ಲಿ ನೆಲ ತೀವ್ರ ಹೆಪ್ಪುಗಟ್ಟಿ ಹೋಗುತ್ತದೆ. ಥಂಡಿ ಆಳಕ್ಕೆ ಇಳಿದಂತೆ ನೆಲದ ಟೊಳ್ಳುಭಾಗಗಳಲ್ಲಿ ಶೇಖರಗೊಂಡಿರುವ ನೀರು ಹೆಪ್ಪುಗಟ್ಟಿ ಹಿಗ್ಗುತ್ತದೆ. ತಾಪ ಸೊನ್ನೆಯ ಕೆಳಕ್ಕಿಳಿದಂತೆ ಹಿಗ್ಗುವ ಒಂದೇ ದ್ರವವೆಂದರೆ ನೀರು. ಹೆಪ್ಪುಗಟ್ಟಿ ಹಿಗ್ಗಿದ ನೀರು ಸುತ್ತಮುತ್ತಲ ಕಲ್ಲುಮಣ್ಣುಗಳ ಮೇಲೆ ಒತ್ತಡ ಹೇರಿ ಅವು ಬಿರಿಯುವಂತೆ ಮಾಡುತ್ತದೆ. ಹೀಗೆ ಬಿರಿಯುವಾಗ ಬರುವ ಸಪ್ಪಳವು ನೆಲದ ಮೇಲುಮೈನಲ್ಲಿ ಇರುವವರಿಗೆ ಭೂಕಂಪನದ ಸಪ್ಪಳವೇನೊ ಎಂಬಂತೆ ಕೇಳಿಬರುತ್ತದೆ. ನಿಜಕ್ಕೂ ಇದು ಮಂಜುಕಂಪನ (Frostquake). ಹಿಂದೆಲ್ಲ ಮಂಜುಕಂಪನದ ಸಪ್ಪಳಗಳನ್ನು ಜನ ಕೇಳಿಯೇ ಇದ್ದರು. ಆದರೆ ಈಗಿನಂತೆ ಅಂದು ಗುಂಡಿಗೆ ಅದುರುತ್ತಿರಲಿಲ್ಲ. ಹಾಗೆಯೆ ಕಾಂಡದೊಳಗಿರುವ ನೀರಿನಂಶ ಹೆಪ್ಪುಗಟ್ಟಿದಾಗ ಗಿಡಮರಗಳು ಸೀಳುಬಿಟ್ಟು (Frost crack) ನಿಲ್ಲುವುದನ್ನು ಜನ ಕಂಡಿದ್ದರು. ಆದರೆ ಈ ಬಾರಿಯ ಥಂಡಿ ಸಿಡಿತದಲ್ಲಿ ದಪ್ಪ ತೊಗಟೆಯ, ತೋರ ಬೊಡ್ಡೆಯ ಹೆಮ್ಮರಗಳೂ ‘ನಂಬಲೇ ಆಗುತ್ತಿಲ್ಲ’ ಎನ್ನುವಷ್ಟರ ಮಟ್ಟಿಗೆ ನೋಡುಗರ ಎದೆ ಬಿರಿಯುವಂತೆ ಆಳವಾಗಿ ಸೀಳುಬಿಟ್ಟವು.

ಒಟ್ಟಾರೆ ಹವಾಮಾನ ಏನೇನೊ ಗುಟ್ಟುಗಳನ್ನು ಅಡಗಿಸಿಟ್ಟುಕೊಂಡಿದ್ದು ಅವನ್ನೆಲ್ಲ ಹೊರಹಾಕಲು ಬಹಳ ಅವಸರದಲ್ಲಿರುವಂತಿದೆ.                                              

ಕೆ.ಎಸ್.ರವಿಕುಮಾರ್ ಹಾಸನ

ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.

ಮೊ: 9964604297

Related Articles

ಇತ್ತೀಚಿನ ಸುದ್ದಿಗಳು