Thursday, June 20, 2024

ಸತ್ಯ | ನ್ಯಾಯ |ಧರ್ಮ


ಟರ್ಕಿ: ಹತಾಶೆ ಮತ್ತು ಭರವಸೆಯ ನಡುವಿನ ಕ್ಷಣಗಳು

ಭೂಕಂಪದ ಪರಿಣಾಮವಾಗಿ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಲೇ ಇದೆ. ಘಟನೆಯ ವರದಿಗಾಗಿ ತೆರಳಿದ ಟೆರ್ರಿ ಶುಲ್ಟ್ಜ್  (ಡಿ ಡಬ್ಲ್ಯೂ ನ್ಯೂಸ್) ಅಲ್ಲಿ ತಾನು ಕಂಡದ್ದನ್ನು ಎದೆಯಾಳದಿಂದ ಬರೆದಿದ್ದಾರೆ. ರಂಜಿತಾ ಎಸ್‌ ಇದರ ಕನ್ನಡಾನುವಾದವನ್ನು ಮಾಡಿದ್ದಾರೆ. ಮನ ಕಲಕುವ, ಹೃದಯಸ್ಪರ್ಶಿಯಾದ ಕೆಲ ಕ್ಷಣಗಳನ್ನು ಓದಿ.   

ಕುಕುರೊವಾದಲ್ಲಿ ಎಲ್ಲರೂ ಒಂದು  ಪವಾಡಕ್ಕಾಗಿ ಕಾಯುತ್ತಿದ್ದರು. ಅದಾನಾ ಜಿಲ್ಲೆಯಲ್ಲಿ ಮೊದಲ ಬಾರಿಯ ಭೂಕಂಪನದಿಂದ ಕುಸಿತ ಸಂಭವಿಸಿದಾಗ,  ಈ  ಬಹುಮಹಡಿ ಅಪಾರ್ಟ್‌ಮೆಂಟ್ ಕಟ್ಟಡದ ಹೆಚ್ಚಿನ ನಿವಾಸಿಗಳು  ಸಾವನ್ನಪ್ಪಿದರು. ಆದರೆ 36 ಗಂಟೆಗಳ ನಂತರ, ಕುಸಿದುಬಿದ್ದ  ಕಾಂಕ್ರೀಟ್‌ನ ಬೃಹತ್ ರಾಶಿಯಿಂದ ವಾಟ್ಸಾಪ್ ಮೂಲಕ  ಒಂದು SOS ಮೆಸೇಜು  (ರಕ್ಷಣೆ ಕೋರಿ ಕಳಿಸುವ ಸಂದೇಶ ) ಬಂದಿತು. ಅಲ್ಲಿ ಯಾರೋ ಇನ್ನೂ ಜೀವಂತವಾಗಿದ್ದರು.

ಯಾರಾದರೂ ಬದುಕುಳಿದಿರಬಹುದೆಂದು  ಯೋಚಿಸಲು ಆಸಾಧ್ಯವಾದುದೇನೂ ಆಗಿರಲಿಲ್ಲ. ಏಕೆಂದರೆ ಮಂಗಳವಾರ 

ಅವಶೇಷಗಳಡಿ ಬದುಕಿದ್ದ ಒಬ್ಬರನ್ನು ಸುರಕ್ಷಿತವಾಗಿ ಹೊರತೆಗೆಯಲಾಗಿತ್ತು . ಆದ್ದರಿಂದ ಟರ್ಕಿಯ ರಕ್ಷಣಾ  ತಂಡಗಳು ಅದಾನಕ್ಕೆ ಆಗಮಿಸಿದ ಮೊದಲ ಅಂತರರಾಷ್ಟ್ರೀಯ ಸಂಸ್ಥೆಗಳಲ್ಲಿ ಒಂದಾದ ಬಲ್ಗೇರಿಯನ್ ರೆಡ್‌ಕ್ರಾಸ್ ಮತ್ತು ಅವರ ರಕ್ಷಣಾ ಕಾರ್ಯದಲ್ಲಿ ಪಳಗಿದ್ದ ನಾಯಿಗಳ ಸಹಾಯ ಕೋರಿದರು. ಸಾಮಾನ್ಯವಾಗಿ  ಶವಗಳ ಬಗ್ಗೆ ಸಂಕೇತ ನೀಡದ, ಜೀವಂತ ವ್ಯಕ್ತಿಗಳನ್ನು ಕಂಡರೆ ಮಾತ್ರ ಪ್ರತಿಕ್ರಿಯಿಸುವ ಈ ನಾಯಿಗಳು ಕೂಡ ಅವಶೇಷಗಳ ಸುತ್ತ ಮೂಸಿ ಅಲ್ಲಿ ಒಬ್ಬ ವ್ಯಕ್ತಿಯು ಇನ್ನೂ ಜೀವಂತವಾಗಿರಬಹುದು ಎಂಬ ಸಂದೇಹವನ್ನು ದೃಢಪಡಿಸಿದವು. ಆ ಸರಿ ರಾತ್ರಿಯಲ್ಲೇ ಉತ್ಖನನದ ಪ್ರಯತ್ನಗಳು ದ್ವಿಗುಣಗೊಂಡವು.  ಯಂತ್ರಗಳು, ತರಬೇತಿ ಪಡೆದ ತಜ್ಞರು ಮತ್ತು ಸಾಮಾನ್ಯ ನಾಗರಿಕರು ಕೂಡ,  ಪ್ಲಾಸ್ಟಿಕ್ ಪಾತ್ರೆಗಳಿಂದಲೂ, ಅವರ ಕೈಗಳಿಂದಲೂ  ಅಗೆಯಲು ಶುರು ಮಾಡಿದರು.

ಅಕ್ಕಪಕ್ಕದಲ್ಲಿ ಸುದ್ದಿ ಹರಡಿ, ನೋಡಲು ಜನ ಜಮಾಯಿಸಿದ್ದರು. ಈಗ ಅದಾನದ ಬೀದಿಗಳಲ್ಲಿ ವಾಸಿಸುತ್ತಿರುವ – ಕುಸಿಯಬಹುದಾದ ಕಟ್ಟಡಗಳಿಂದ ದೂರವಿರಲು ಮತ್ತು  ಅತಿ ಶೀತದಿಂದ ಪಾರಾಗಲು ಬೆಂಕಿಯ ಮೊರೆ ಹೋಗಿರುವ ಸಾವಿರಾರು ಜನರು  ಯಾವುದಾದರೊಂದು  ಸುದ್ದಿಯನ್ನು  ಸ್ವಾಗತಿಸಲು ಕಾಯುತ್ತಿದ್ದರು .

ಭೂಕಂಪನದ ಕೇಂದ್ರ ಬಿಂದುವಿನಿಂದ 200 ಕಿಲೋಮೀಟರ್‌ಗಿಂತ ಹೆಚ್ಚು ದೂರದಲ್ಲಿರುವ ನಗರದಲ್ಲಿಯೂ ಸಹ, ಹಲವಾರು ದೊಡ್ಡ ಕಟ್ಟಡಗಳು ನಾಶವಾಗಿ  ಸಾಕಷ್ಟು ಸಾವು-ನೋವು  ಮತ್ತು ಸ್ಥಳಾಂತರಕ್ಕೆ ಕಾರಣವಾಯಿತು. ಆನಂತರ ಬುಧವಾರ ಬೆಳಿಗ್ಗೆ ಒಂದು ಮೃತದೇಹ ಪತ್ತೆಯಾಯಿತು. ಹೀಗಾದಾಗಲೆಲ್ಲಾ ಜನರಿಗೆ  ಘಟನೆಯ ಗಂಭೀರತೆಯನ್ನು ತಿಳಿಸಲು ಮತ್ತು ಮೃತದೇಹವನ್ನು  ಗೌರವಯುತವಾಗಿ ಸುತ್ತಲು ಬಟ್ಟೆಯೊಂದನ್ನು ರಕ್ಷಣಾ ತಂಡಗಳು ಗಾಳಿಯಲ್ಲಿ  ಹಿಡಿಯುತ್ತವೆ.  ಅವಶೇಷಗಳಡಿಯಿಂದ ದೇಹವನ್ನು  ಹೊರತೆಗೆಯುವಾಗ ಒಂದು ಕ್ಷಣ ಜನ ಸಮೂಹ  ಮೌನವಾಯಿತು. ಆನಂತರ ದೇಹವನ್ನು ಕೊಂಡೊಯ್ಯುವಾಗ “ಅಲ್ಲಾಹು ಅಕ್ಬರ್” ಎಂದು ಜನರು ಪಠಿಸುತ್ತಾ ಪ್ರಾರ್ಥಿಸಿದರು. 

 ನೋವಿನಿಂದ  ಇದನ್ನು ನೋಡುತ್ತಾ  ನಿಂತಿದ್ದ  ನನಗೆ, ‘ವಾಟ್ಸಾಪ್ ಸಂದೇಶವನ್ನು ಕಳುಹಿಸಿದವರು  ಇವರೇ? ಹಾಗಿದ್ದಲ್ಲಿ ಯಾರಾದರೂ ಬದುಕಿರಬಹುದೆಂಬ ಭರವಸೆಯನ್ನು ನಾವು ಕೈ ಬಿಡಬೇಕೇ?’ ಎಂಬುದನ್ನು ಖಚಿತ ಮಾಡಿಕೊಳ್ಳಬೇಕಿತ್ತು. ಯಾರಾದರೂ ಇಂಗ್ಲಿಷ್ ಮಾತನಾಡುತ್ತಾರೆಯೇ ಎಂದು ನಾನು ಅಗೆಯುವವರ ಸುತ್ತಲೂ ಓಡಾಡಿದೆ  ಮತ್ತು ಬಲ್ಗೇರಿಯನ್ ರೆಡ್ ಕ್ರಾಸ್ ತಂಡದ ಟೆರ್ವೆಲ್ ಟೊಟೆವ್ ಅವರನ್ನು ಭೇಟಿಯಾದೆ.

“ನಾವು ರಕ್ಷಣಾ ಪ್ರಯತ್ನ ನಿಲ್ಲಿಸುವುದಿಲ್ಲ. ಮೆಸೇಜು ಬರುವ ಮುಂಚೆಯೇ ಈ ದೇಹದ ಬಗ್ಗೆ  ತಿಳಿದಿತ್ತು. ಕೈಗಳು ಬಹಳ ಸಮಯದಿಂದ ನಿಶ್ಚೇತವಾಗಿ ಬಿದ್ದಿದ್ದವು” ಎಂದು ಅವರು ವಿವರಿಸಿದರು. ಸುಮಾರು ಒಂದು ಗಂಟೆಯ ನಂತರ ನಾಯಿಗಳು ಮತ್ತೆ ಹುಡುಕಾಡಲು ಹಿಂತಿರುಗಿದವು.

ಜನ ಸಮೂಹವು ಸಂಪೂರ್ಣ ಮೌನವಾಗಿತ್ತು.  ನಾಯಿಗಳು ಅವಶೇಷಗಳ ಸುತ್ತಲೂ ಕೆದಕಿ ಹುಡುಕುವಾಗ  ಬೊಗಳಿದರೆ ಎಲ್ಲರೂ ಕೇಳಿ ಸಹಾಯಕ್ಕೆ ಧಾವಿಸಬಹುದು ಎಂದು. ಮತ್ತೊಮ್ಮೆ ನಾಯಿಗಳು  ಹುಡುಕಾಟದಲ್ಲಿ ಮಗ್ನವಾಗಿರುವುದನ್ನು ಕಂಡು ಮೊದಲ ಭೂಕಂಪದ  48 ಗಂಟೆಗಳ ಬಳಿಕವೂ ಇದು ‘ಮೃತ ದೇಹಗಳನ್ನು ಹೊರತೆಗೆಯುವ  ಕಾರ್ಯವಾಗದೆ  ಬದುಕಿದ್ದವರನ್ನು ‘ರಕ್ಷಿಸುವ’ ಕಾರ್ಯಾಚರಣೆ ಎಂಬ ಭರವಸೆಗೆ ಅಂಟಿಕೊಳ್ಳುವಂತೆ ನಮ್ಮನ್ನು ಪ್ರೋತ್ಸಾಹಿಸಿತು.

ಕುಕುರೊವಾ ನಿವಾಸಿಗಳು ಸಾಮೂಹಿಕವಾಗಿ ರಕ್ಷಣಾ ಕಾರ್ಯದಲ್ಲಿ ಮುಂದುವರಿದರು. ಅವರಲ್ಲಿ ಅನೇಕರು ತಮ್ಮ ನಡುವೆ  ಹಾಗೂ ಹೆಚ್ಚುತ್ತಿರುವ ಪತ್ರಕರ್ತರ ಗುಂಪಿನೊಂದಿಗೆ ನೀರು, ಆಹಾರ, ಚಹಾ ಹಾಗೂ ಚಳಿಗಾಲದ  ಕೈಗವಸುಗಳನ್ನು ಹಂಚಿಕೊಂಡರು. ಕಾರಿನಲ್ಲಿ ನನ್ನ ಕೈಗವಸುಗಳನ್ನು  ಮರೆತು ನಡುಗುವ ಕೈ ಗಳಿಂದ ಮೈಕ್ ಹಿಡಿದಿದ್ದ ನನಗೂ ಒಂದು ಜೊತೆ ಕೈಗವಸುಗಳನ್ನು ಒತ್ತಾಯ ಪೂರ್ವಕವಾಗಿ ಕೊಟ್ಟು “ನಿಮಗೆ ಇನ್ನೇನಾದರೂ  ಬೇಕೇ?” ಎಂದು  ಕೇಳಿದರು. ಮತ್ತು “ಇಲ್ಲಿಗೆ ಬಂದಿದ್ದಕ್ಕಾಗಿ ಧನ್ಯವಾದಗಳು. ನಮಗೆ ಸಹಾಯ ಬೇಕು ಎಂದು ಜಗತ್ತಿಗೆ ತೋರಿಸಿದ್ದಕ್ಕಾಗಿ ಧನ್ಯವಾದಗಳು” ಎಂದರು.

ಭಾರೀ ಸರಪಳಿ ಮತ್ತು ಕ್ರೇನ್ ನ್ನು ಒಳಗೊಂಡ ದೊಡ್ಡ ಹಾಗೂ ಸೂಕ್ಷ್ಮವಾದ ಕಾರ್ಯಾಚರಣೆಯಲ್ಲಿ ಕಾಂಕ್ರೀಟ್ ರಾಶಿಯ ಮೇಲಿಂದ ಬೃಹತ್ ಕಾಂಕ್ರೀಟ್ ತುಂಡನ್ನು ಎತ್ತಲಾಯಿತು. ತಂಡಗಳು ‘ನಿರ್ಣಾಯಕ ಪ್ರದೇಶ’ವೆಂದು ನಂಬಲಾದ ಸ್ಥಳಕ್ಕೆ ಈಗ ಹೋಗಬಹುದಾದ್ದರಿಂದ ಉತ್ಸಾಹ ಅಲ್ಲಿ ಹೆಚ್ಚಾಯಿತು.

ಆದರೆ ಎಲ್ಲರೂ ಉಸಿರು ಬಿಗಿಹಿಡಿದು ನೋಡುತ್ತಿರುವಾಗ ʼಇಲ್ಲ, ಇಲ್ಲಿ ಯಾರೂ ಇಲ್ಲ. ಹಾಗಾಗಿ ರಕ್ಷಣಾ ಕಾರ್ಯ ಮುಂದುವರಿಯುವುದಿಲ್ಲʼ ಎಂಬುದನ್ನು ತಂಡವು ಬಟ್ಟೆಯನ್ನು  ಗಾಳಿಯಲ್ಲಿ ಎತ್ತಿ ಹಿಡಿದು ಸೂಚಿಸಿತು .

ಈ ಹತಾಶೆ  ವೈಯಕ್ತಿಕ ಅನಿಸಿತು. ಇಲ್ಲ, ಇದು ನಿಜವಾಗಿಯೂ ಸಂದೇಶ ಕಳುಹಿಸಿದ್ದ ವ್ಯಕ್ತಿಗೆ ನ್ಯಾಯ ಸಲ್ಲಿಸಿದಂತಾಗಲಿಲ್ಲ ಎಂದು ನನಗನ್ನಿಸಿತು. ಆದರೆ ಇದು ಕೇವಲ ನನ್ನೊಬ್ಬಳ  ಭಾವನೆಯಲ್ಲ ಎಂದೂ ನನಗೆ  ಸ್ಪಷ್ಟವಾಗಿತ್ತು. ಪ್ರತಿ ಗಂಟೆಗೂ ಸಾವಿನ ಸಂಖ್ಯೆ ಸಾವಿರಗಳಲ್ಲಿ  ಹೆಚ್ಚಾಗುತ್ತಿರುವಾಗ, ಸ್ಥಳೀಯರು ಮತ್ತು ವಿದೇಶೀಯರು  ಒಂದು ಸಂತೋಷದ ಫಲಿತಾಂಶಕ್ಕಾಗಿ ಅಲ್ಲಿ ಹತಾಶರಾಗಿ  ಕಾಯುತ್ತಿದ್ದರು. ನಾನು ಸಾಧ್ಯವಾದಾಗಲೆಲ್ಲಾ  ಟರ್ಕಿಯ  ಟೆಲಿವಿಷನ್‌ ವೀಕ್ಷಿಸಿ, ಇತರ ನಗರಗಳಲ್ಲಿ ಜನರನ್ನು ಇನ್ನೂ ಉಳಿಸಲಾಗುತ್ತಿದೆ ಎಂಬುದನ್ನು ಕೇಳಿ ನನ್ನ ಹತಾಶೆಯನ್ನು ಕಡಿಮೆಮಾಡಿಕೊಂಡೆ.

ಬದುಕುಳಿದವರೊಂದಿಗೆ ಮಾತನಾಡುವುದು ಸ್ವಲ್ಪ ಸಮಾಧಾನಕರವಾಗಿತ್ತು. ಕೆಲವು ಬ್ಲಾಕ್‌ಗಳ ದೂರದಲ್ಲಿ 400 ಟೆಂಟ್ ಗಳಲ್ಲಿ  ವಸತಿಹೀನರಾದ ಸುಮಾರು 1,200 ಜನರು ನೆಲೆಸಿದ್ದರು. ಅಲ್ಲಿದ್ದ ಕುಕುರೊವಾದ  ಮೇಯರ್ ಸೋನರ್ ಸೆಟಿನ್,  ಇನ್ನೂ ಸಾವಿರಾರು ಜನರಿಗೆ ತುರ್ತಾಗಿ ಆಶ್ರಯ ಬೇಕಾಗಿದೆ, ಆದರೆ ಕಂಪನದ  ಆಘಾತಗಳು( Aftershocks ) ನಿಂತ ಆನಂತರ ಅವರಲ್ಲಿ ಕೆಲವರಾದರೂ  ಸುರಕ್ಷಿತವಾಗಿರುವ ಕಟ್ಟಡಗಳಿಗೆ ಮರಳಬಹುದೇ ಎಂದು ನೋಡಲು ಅಧಿಕಾರಿಗಳು ಕಟ್ಟಡಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ಹೇಳಿದರು.

ಸ್ಥಳಕ್ಕೆ ಸಹಾಯ  ಬಂದದ್ದು ನಿಧಾನವಾಗಿದ್ದಕ್ಕೆ ಟರ್ಕಿಯ ಸರ್ಕಾರ ಮತ್ತು ಅಂತರರಾಷ್ಟ್ರೀಯ ಸಮುದಾಯದ ಬಗೆಗಿನ ಟೀಕೆಯ ಕುರಿತ ನನ್ನ ಪ್ರಶ್ನೆಗಳಿಗೆ ಸೆಟಿನ್ ಉತ್ತರಿಸಲಿಲ್ಲ. 4,00,000 ಜನಸಂಖ್ಯೆಯ ಸಮುದಾಯದಲ್ಲಿ ಸುಮಾರು 400 ಜನ ಮೃತ ಪಟ್ಟಿದ್ದು  ಆಹಾರ ಪೂರೈಕೆಯ ವಿಷಯದಲ್ಲಿ ತುಲನಾತ್ಮಕವಾಗಿ ಉತ್ತಮ ಕಾರ್ಯ ನಡೆಯುತ್ತಿದೆ, ಆದರೆ ಬೆಚ್ಚಗಿನ ಕಂಬಳಿಗಳ ಅವಶ್ಯಕತೆ ಇನ್ನೂ ಇದೆ ಎಂದು ಅವರು ಹೇಳಿದರು.

ಶಿಬಿರದಲ್ಲಿ ಜನರು ತಮ್ಮ ದಾಸ್ತಾನುಗಳಿಂದ ನನಗೆ ಏನಾದರೂ ಬೇಕೇ ಎಂದು ಮತ್ತೆ ಮತ್ತೆ ಕೇಳುತ್ತಿದ್ದರು. “ನಿಮಗೆ ಸೂಪ್ ಬೇಕೇ? ಚಹಾ? ಜ್ಯೂಸ್? ಹೀಗೆ…ಆದರೆ ನಾನು ಟರ್ಕಿಗೆ ಬಂದ ನಂತರ, ಮೊದಲ ಬಾರಿಗೆ ನನ್ನಿಂದಲೂ  ಏನನ್ನೋ ಕೇಳಲಾಯಿತು.

ನನ್ನ ಕ್ಯಾಮೆರಾಮನ್ ಮತ್ತು ನಾನು ಟೆಂಟ್ ಗಳನ್ನು ಸಮೀಪಿಸಿದಾಗ, ಮೂರು ಮತ್ತು ಎಂಟು ವರ್ಷ ವಯಸ್ಸಿನ ಇಬ್ಬರು ಮುದ್ದಾದ  ಹುಡುಗಿಯರು ಬೆಂಕಿಯ ಬಳಿ ಕೂತಿದ್ದ ತಮ್ಮ ಹೆತ್ತವರ ಬಳಿಯಿಂದ ನಮ್ಮೆಡೆಗೆ ಓಡಿ ಬಂದರು. ಅವರಿಗೆ ಏನು ಬೇಕು ಎಂದು ಕೇಳಿದೆ. ಅವರು ನನ್ನ  ಮುಖದೆಡೆ ಬೆರಳು ಮಾಡಿ, ತಮ್ಮ  ಮುಖ, ತುಟಿಗಳನ್ನು ತೋರಿಸುತ್ತಾ ಸನ್ನೆ ಮಾಡಿದರು.

ಲಿಪ್ ಸ್ಟಿಕ್ ! ನಿಜವಾಗಿಯೂ?! ನಾನು ನನ್ನ ಜೇಬಿನಿಂದ ಲಿಪ್ ಸ್ಟಿಕ್ಕನ್ನು ಹೊರತೆಗೆದು ಅವರ ತುಟಿಗಳಿಗೆ ಹಚ್ಚಿದೆ ಮತ್ತು ಅದನ್ನು ಅವರಿಗೆ ಕೊಟ್ಟೆ, ಅವರು ಸಂತೋಷದಿಂದ ಅವರ ಹೆತ್ತವರಿಗೆ ತೋರಿಸಲು  ಹಿಂತಿರುಗಿ ಓಡಿಹೋದರು.

ಅವರ ಬಳಿ ಈಗ  ಕೆಲವೇ  ಬಟ್ಟೆಗಳು ಮತ್ತು ಆಟಿಕೆಗಳು ಉಳಿದಿರಬಹುದು. ಮುಂದಿನ ಕೆಲವು ದಿನಗಳು ಅವರಿಗೆ ಅತ್ಯಂತ ಕಷ್ಟದ ದಿನಗಳಾಗಬಹುದು. ಆದರೆ ಅವರ ಗಮನ ಬೇರೆಡೆ ಹರಿಯಲು ಸದ್ಯ ಅವರ ಬಳಿ ಕನಿಷ್ಠ ಅವರಿಗಿಷ್ಟವಾದ ಒಂದು ಸಣ್ಣ ಆಕರ್ಷಣೆಯ ವಸ್ತು ಇದೆ. ಅವರು ಸಂತೋಷದಿಂದ ನನ್ನ ಕೆನ್ನೆಗಳ ಮೇಲೆ ಬಿಟ್ಟ ಗುಲಾಬಿ ಬಣ್ಣದ ಮುತ್ತುಗಳು  ನನ್ನ ಕಣ್ಣುಗಳಲ್ಲಿ ಕಣ್ಣೀರನ್ನು ತಂದವು. ಮತ್ತು ಅವರ ಮನೆಗಳು, ನಗರಗಳು ಮತ್ತು ಭವಿಷ್ಯವನ್ನು ಪುನರ್ನಿರ್ಮಿಸಬಹುದೆಂದು ನನ್ನ ಹೃದಯಕ್ಕೆ ಅವು ಭರವಸೆ ನೀಡಿದವು .

ಟೆರ್ರಿ ಶುಲ್ಟ್ಜ್  (ಡಿ ಡಬ್ಲ್ಯೂ ನ್ಯೂಸ್) 

ಕನ್ನಡಕ್ಕೆ: ರಂಜಿತಾ ಜಿ ಎಚ್

Related Articles

ಇತ್ತೀಚಿನ ಸುದ್ದಿಗಳು