Friday, June 14, 2024

ಸತ್ಯ | ನ್ಯಾಯ |ಧರ್ಮ

ಈಗ್ಲೆ ಬುಟ್ ಹೊಂಟ್ ಬುಡ್ತಿನಿ ಅತ್ಲಗೆ..

(ಈ ವರೆಗೆ…)

ನಡು ರಾತ್ರಿಯಲ್ಲಿ ಅದ್ಯಾರೋ ತನ್ನನ್ನು ಕರೆದೊಯ್ಯಲು ಬರುತ್ತಿದ್ದಾನೆ ಎಂದು ಲಕ್ಷ್ಮಿ ಬೊಬ್ಬಿಟ್ಟು ದಾಸಯ್ಯನೊಬ್ಬ ಆತನನ್ನು ಓಡಿಸಿದ, ಬೆಳಗಾಗುವ ಹೊತ್ತಿಗೆ ಆ ದಾಸಯ್ಯ ಮನೆಗೆ ಭಿಕ್ಷೆಗೆ ಬರುವವನಿದ್ದು ತಾನು ಹೊಸ ಸೀರೆ ಉಟ್ಟು ಆತನಿಗೆ ಭಿಕ್ಷೆ ನೀಡಬೇಕು ಎಂದು ಹೊಸ ಸೀರೆ ತರಲು ಅಪ್ಪನಿಗೆ ಹೇಳುತ್ತಾಳೆ.. ಆ ಅಪ ರಾತ್ರಿಯಲ್ಲೇ ಅಪ್ಪ ಹೋಗಿ ತಂದ ಸೀರೆ ಉಟ್ಟು ಸಿಂಗರಿಸಿಕೊಂಡು ಲಕ್ಷ್ಮಿ ದಾಸಯ್ಯನ ದಾರಿ ಕಾಯುತ್ತಾ ಇರುತ್ತಾಳೆ. ದಾಸಯ್ಯ ಬಂದನೇ ? ಓದಿ.. ವಾಣಿ ಸತೀಶ್‌ ಅವರ ತಂತಿ ಮೇಲಣ ಹೆಜ್ಜೆಯ ಹದಿನೆಂಟನೆಯ ಕಂತು.

ಬೆಳಗಿನ ಸುಮಾರು ಆರರ ಸಮಯ. ಅಮವಾಸ್ಯೆಯ ಕತ್ತಲಿಳಿದು ಕೆಂಪನೆಯ ಗುಂಡಗಿನ ಸೂರ್ಯ ಹಿತವಾದ ನೊಚ್ಚನೆಯ ಬೆಳಕಿನೊಂದಿಗೆ  ತನ್ನ ಬಾಹುಗಳ ಚಾಚುತ್ತಾ ಓಡಿ ಬರಲು ಅಣಿಯಾಗ ತೊಡಗಿದ್ದ. ನೀರು ತೊಟ್ಟಿಕ್ಕುತ್ತಿದ್ದ ತಲೆ ಗೂದಲಿಗೆ ಸಣ್ಣ ನೀರು ಜಡೆ ಹೆಣೆದು ಬೆನ್ನ ಮೇಲೆ ಕೂದಲು ಹರವಿ, ಹಣೆಗೆ ಗುಂಡನೆಯ ಕುಂಕುಮವಿಟ್ಟು, ನೀಲಿ ಅಂಚಿನ ಕೆಂಪು ಸೀರೆಯುಟ್ಟು, ರಾಗಿ ತುಂಬಿದ ಮೊರವನ್ನು ಮಡಿಲಲ್ಲಿಟ್ಟುಕೊಂಡು ಅವ್ವನ ಕತೆಯೊಳಗೆ ಮುಳುಗಿ ಹೋಗಿದ್ದ ಲಕ್ಷ್ಮಿ, ಮುಂಜಾನೆಯ ಆ ರಂಗು ರಂಗಾದ ಬೆಳಕ ಕಿರಣದಲ್ಲಿ ಸಾಕ್ಷಾತ್ ಮಹಾ ಲಕ್ಷ್ಮಿಯೇ ಇಳಿದು ಬಂದಂತೆ ಕಾಣುತ್ತಿದ್ದಳು.ಆ ಕ್ಷಣ ಕಥೆ ಹೇಳುತ್ತಿದ್ದ ಅವ್ವನೇ  ಮಾತು ಮರೆತವಳಂತೆ ಅಂದಗಾತಿ ಮಗಳ ಚಂದ  ನೋಡುತ್ತಾ ಕುಳಿತುಬಿಟ್ಟಳು.  ಅವ್ವನ ಕಣ್ಣಿಗೆ ತನ್ನ ಕೈ ಅಡ್ಡ ಹಿಡಿದ ಲಕ್ಷ್ಮಿ “ಏ..ಯಾಕವ್ವ ಹಂಗ್ ನೋಡ್ತಿ ಕತೆ ಮುಂದೊರ್ಸು” ಎಂದು ಮುತ್ತಿನಂತ ನಗು ಚೆಲ್ಲಿದಳು. ಮೈಮರೆತು ಕೂತಿದ್ದ ಅವ್ವ ಬೆಚ್ಚಿದವಳಂತೆ “ಕರಿದಿಮ್ಮಿ ಕಂಕಳಲ್ಲಿ ಗೆಜ್ಜೆ ಕಾಲಿನ ಮಗಿನೆತ್ಕೊಂಡು,  ಬೆಳ್ಳಿಗಿಂಡಿಲಿ ಘಮ್ಮನೆ ತುಪ್ಪ ಹಿಡ್ಕೊಂಡು” ಎಂದು ಕಥೆ ಮುಂದುವರೆಸಿದಳು.

 “ಶ್ರೀಮದ್ ರಮಾರಮಣ ಗೋವಿಂದ ಗೋ…ವಿಂದ” ಎಂದು ದೊಡ್ಡಕಂಠದಲ್ಲಿ ಕೂಗುತ್ತಾ ಕೆಳಗಿನ ಬೀದಿಯಿಂದ ಇವರತ್ತಲೇ ಬರುತ್ತಿದ್ದ  ದಾಸಯ್ಯನ ದನಿ, ಕತೆಯೊಳಗೆ ಮುಳುಗಿದ್ದ ಅವ್ವ ಮಗಳನ್ನು ತಟ್ಟನೆ ಹೊರಗೆಳೆದು ತಂದಿತು. ಅವ್ವ ಆಶ್ಚರ್ಯ ಚಕಿತಳಾಗಿ ಅಷ್ಟು ದೂರಕ್ಕೆ ಕಣ್ಣಾಯಿಸಿ ನೋಡಿದಳು. ಬಿಳಿಯ ಕಚ್ಚೆ, ಕಪ್ಪನೆಯ ಕೋಟು, ಹಣೆಗೆ ಮೂರು ನಾಮ,  ಎಡ ಹೆಗಲಿಗೆ ಜೋತು ಬಿದ್ದ  ಬವನಾಸಿ,  ಬಲಗೈಯಲ್ಲಿ ಶಂಕ, ಎಡಗೈಯಲ್ಲಿ ಜಾಗಟೆ… ಅರೇ….! ಲಕ್ಷ್ಮಿ ರಾತ್ರಿ ವರ್ಣಿಸಿದ ಅದೇ ಚಿತ್ರ. ಲಕ್ಷ್ಮಿ ಸಡಗರದಿಂದ ಮೇಲೆದ್ದು‌ ಹೆಗಲ ತುಂಬಾ ಸೆರಗೊದ್ದು  ಮೊರದ ರಾಗಿಯನ್ನು ದಾಸಯ್ಯನ ಬವನಾಸಿಗೆ ತುಂಬಿ ಕೈ ಮುಗಿದು ನಿಂತಳು.ಅವಳ ತಲೆಯ ಮೇಲೆ ಜಾಗಟೆ ಇಟ್ಟು ಆಶೀರ್ವಾದ ಮಾಡಿ ಹೊರಡಲನುವಾದ ದಾಸಯ್ಯನನ್ನು ತಡೆದು ನಿಲ್ಲಿಸಿದ ಅವ್ವ “ಅಲ್ ಕನ್ ದಾಸಯ್ಯ ಇಲ್ಲಿ ಗಂಟ ಈ ಊರಲ್ಲಿ ಒಂದಪನು ನಿನ್ ಮಕಾ  ಕಂಡೋಳಲ್ಲ ನಾನು. ಇನ್ನು ಊರೇ ಕಣ್ ಬುಟ್ಟಿಲ್ಲ ಅದ್ಯಾವ್ ಧೈರ್ಯದ್ ಮೇಲೆ ಈ ಬೆಳ್ಗಾ ಮುಂಚೆನೆ ಭಿಕ್ಷ ಸಿಕ್ತದೆ ಅಂತ ಈ ಕಡಿಗ್ ಬಂದೆ” ಎಂದು ಕುತೂಹಲದಿಂದ ಕೇಳಿದಳು. ದಾಸಯ್ಯ ಅವ್ವನ ಮಾತು ಕೇಳಿ ನಸುನಗುತ್ತಾ ” ಹೊಟ್ಟೆ ಪಾಡು ಕಣ್ರ್ ಅಮ್ಮೋರೆ. ದೈವ ದಾರಿ ತೋರ್ದತ್ತ ಹೆಜ್ಜೆ ಹಾಕೋರು ನಾವು ನೀವು ಕಾಯ್ಕೊಂಡು ಕೂತಿದ್ರಿ ಅಂತ್ಲೆ ಆ ಮೇಲಿರೋನು ನನ್ನ  ಕಳ್ಸಿರ್ಬೋದು ಅಲುವ್ರ” ಎಂದು ಅವ್ವನಿಗೆ ಮರು ಪ್ರಶ್ನೆ ಹಾಕಿ ದಡ ದಡನೇ ದಾಪುಗಾಲಿಡುತ್ತಾ ಹೊರಟೇ ಬಿಟ್ಟ. ದಾಸಯ್ಯನಿಂದ ಒಂದಿಷ್ಟು ಧೈರ್ಯದ ಮಾತು ಕೇಳಲು ಹಾತೊರೆಯುತ್ತಿದ್ದ ಅವ್ವನಿಗೆ ಅವನು ಸುಂಟರಗಾಳಿಯಂತೆ ಹಾಗೆ ಬಂದು ಹೀಗೆ ಹೊರಟು ಹೋದದ್ದನ್ನು ಕಂಡು ನಿರಾಸೆ ಆವರಿಸಿಕೊಂಡಿತು. ಗೊಂದಲದ ಗೂಡಾಗಿದ್ದ ಅವ್ವ ಪೆಚ್ಚು ಮೋರೆ ಹೊತ್ತು ದಾಸಯ್ಯ ಹೋದ ದಾರಿಯನ್ನೇ ನೋಡತೊಡಗಿದಳು.

 ಗರಬಡಿದವಳಂತೆ ನಿಂತ ಅವ್ವನನ್ನು ಗಟ್ಟಿಯಾಗಿ ಅಲುಗಿಸಿದ ಲಕ್ಷ್ಮಿ “ನೋಡ್ದ ನಾನು ಹೇಳ್ಳಿಲ್ವಾ ದಾಸಯ್ಯ ಬಂದೇ ಬತ್ತನೆ ಅಂತ. ಈಟೊತ್ನಲ್ಲಿ ಯಾವ್ ದಾಸಯ್ಯ ಬಂದಾನು ಅಂತಿದ್ದಲ್ಲ ಈಗ ಸಮಾಧಾನ ಆಯ್ತೇನವ್ವ” ಎಂದು ಅಣಕವಾಡಿ ನಕ್ಕಳು. ಅವ್ವನ ಕೆಂಪಗೆ ಊದಿದ ಕಣ್ಣನ್ನು ಗಮನಿಸಿ “ಬೆಳಗಾನ ನನ್ಜೊತೆ ಕೂತು ನೀನು ಸಾಕಾಗಿದ್ದಿ ಒಂದೀಟೊತ್ತು ಅಡ್ಡಾಗಿವಂತೆ ಬಾವ್ವ” ಎಂದು ಕೈ ಜಗ್ಗುತ್ತಾ ಒಳಗೆಳೆದುಕೊಂಡು ಹೊರಟಳು. ಹೆಂಡತಿಯ ಸುಪರ್ದಿಗೆ ಮಗಳನ್ನೊಪ್ಪಿಸಿ ಒಂದಷ್ಟು ಹೊತ್ತು ವಿಶ್ರಮಿಸಿ ಬಂದ ಅಪ್ಪ ಲವ ಲವಿಕೆಯಿಂದ ಎದುರಾದ ಮಗಳನ್ನು ಕಂಡು ” ಲಕ್ಷ್ಮು ಬೆಳಗ್ಗೆನೆ ಸ್ನಾನ ಮಾಡಿ ಹೆಂಗೊ ರೆಡಿಯಾಗಿದ್ದಿ. ನಾವು ಒಂದೆಂಡ್ ಚೊಂಬು ನೀರ್ ಹುಯ್ಕೊಂಡ್ ಬಂದ್ಬುಡ್ತಿವಿ ಹಂಗೆ ಅರ್ಸಿಕಟ್ಟೆ ಅಮ್ಮುಂಗೆ ಪೂಜೆ ಮಾಡಿಸ್ಕೊಂಡು ಬಂದುಬುಡನ ಬಾವ್ವ ಎಂದು ಹೇಳಿದ. 

ಅಲ್ಲಿಯವರೆಗೆ ಲವಲವಿಕೆಯಿಂದ ಇದ್ದ ಲಕ್ಷ್ಮಿ, ಅಪ್ಪನ ಮಾತು ಕಿವಿ ಮೇಲೆ ಬೀಳುತ್ತಿದ್ದಂತೆ ತನಗರಿವಿಲ್ಲದೆ ಬದಲಾಗ ತೊಡಗಿದಳು. ತನ್ನ ಮುಖ, ಕೈ, ತೋಳುಗಳನ್ನು ಆಸೆಗಣ್ಣಿನಿಂದ ನೋಡುತ್ತಾ ಮುದ್ದಿಸ ತೊಡಗಿದಳು. ಇದರ ಜಾಡು  ಹಿಡಿದ ಅವ್ವ ಅನಾಮತ್ತಾಗಿ ಲಕ್ಷ್ಮಿಯ ಕಾಲಿಗೆ ಅಡ್ಡ ಬಿದ್ದು “ನಿನ್ನ್ ದಮ್ಮಯ್ಯ ನಿಂಗೆ ಬೇಕಾದ್ದ್ ಕೊಡ್ತಿನಿ ನನ್ ಮಗ್ಳುನ್ನ್ ಬುಟ್ಟು ಹೋಗಪ್ಪ” ಎಂದು ಗೋಳಾಡುತ್ತಾ ಹೊರಳ ಹತ್ತಿದಳು. ಅವ್ವನ ಸಂಕಟವನ್ನು ಕಂಡ ಲಕ್ಷ್ಮಿ “ಏನ್ ಮಾಡ್ಲಮ್ಮ ನಿನ್ ಸಂಕ್ಟ ನೋಡುದ್ರೆ ಬುಟ್ಟು ಹೋಗನ ಅನ್ನುಸ್ತದೆ. ಆದ್ರೆ  ಈ ನಿನ್ನ ಮಗ್ಳು ನೋಡಮ್ಮ ಹೆಂಗವ್ಳೆ. ಟಮಟೆ ಹಣ್ಣು ಟಮಟೆ ಹಣ್ಣಂಗವ್ಳಲ್ಲ ಹೆಂಗ್ ಬುಟ್ಟೋಗ್ಲಿ ಹೇಳು” ಎಂದು ತನ್ನ ಕೆನ್ನೆ, ತೋಳುಗಳನ್ನು ಚಿವುಟಿ ಕೊಳ್ಳುತ್ತಾ,  “ಆಹಾ ಚಿವುಟುದ್ರೆ ರಕ್ತನೇ ಚಿಮ್ಮಂಗವ್ಳೆ ಬುಟ್ಟೋಗು ಅನ್ನದೊಂದು ಬುಟ್ಟು ಬ್ಯಾರೆ ಏನಾದ್ರು ಹೇಳು ಕೇಳ್ತೀನಿ” ಎಂದು ಸಣ್ಣ ಮಗುವಿನಂತೆ ಮುಖ ಊದಿಸಿ ಕೊಂಡು ಒಂದು ಬದಿಗೆ ತಿರುಗಿ ಕೂತಳು. 

ಇದಕ್ಕೂ ಕರಗುವ ಮನಸ್ಸಿದೆ ಎಂದು ಅರಿತು ಕೊಂಡ ಅವ್ವ ಪಟ್ಟು ಬಿಡದೆ ಇನ್ನಷ್ಟು ಕಣ್ಣೀರು ಸುರಿಸುತ್ತಾ,  ಕರುಳು ಕಿತ್ತು ಬರುವಂತೆ ಗೋಗರೆಯ ತೊಡಗಿದಳು. ಕೊನೆಗೂ ಅವ್ವನ ಈ ರೋದನೆಗೆ ಮರುಕ ಗೊಂಡ ಲಕ್ಷ್ಮಿ, “ಹೋಗ್ಲಿ ಬುಡಮ್ಮ ನಿನ್ನ ರೋದ್ನೆ ನಿಲ್ಸು. ಒಂದು ಕೆಲ್ಸ ಮಾಡು ಗಟ್ಟಿ ಮೊಸ್ರಾಕಿ ಅನ್ನನುವೆ, ಒಂದು ಕಟ್ಟು ಬೀಡಿ, ಬೆಂಕಿ ಪಟ್ನ, ಒಂದು ಹೊಸ ಪಂಚೆ, ಹೆಗ್ಲು ಮೇಲಾಕ್ಕೊಳಕೆ ಒಂದು ಟವಲ್ಲುನುವೆ ಕೊಟ್ ಬುಡು.. ಈಗ್ಲೆ ಬುಟ್ ಹೊಂಟ್ ಬುಡ್ತಿನಿ ಅತ್ಲಗೆ” ಎಂದು ಹೇಳಿ ನಡುಮನೆಯ ಬಾಗಿಲ ಹಿಂದೆ ಕುಕ್ಕರು ಗಾಲಿನಲ್ಲಿ ಕೂತು ಬೇಸರದಿಂದ ಲೊಚಗುಟ್ಟುತ್ತಾ ಮುಖದ ಮೇಲೆ ಕೈ ಆಡಿಸ ತೊಡಗಿದಳು.

ಲಕ್ಷ್ಮಿಯ ಬಾಯಿಂದ “ಹೋಯ್ತಿನಿ” ಅನ್ನುವ ಮಾತು ಹೊರ ಬಿದ್ದಿದೆ ತಡ ಅವ್ವ  ಒಂದು ದೊಡ್ಡ ಯುದ್ಧ  ಗೆದ್ದವಳಂತೆ ಅಡಿಗೆ ಕೋಣೆಗೆ ಓಡಿ ಒಲೆಗೆ ಉರಿ ಹಾಕಿ ಅನ್ನಕ್ಕಿಟ್ಟು ಬಂದಳು. ಅಪ್ಪ ತುಸುವೂ ತಡ ಮಾಡದೆ ಸೈಕಲ್ ಏರಿ ಮತ್ತೆ ಹೊಸ ನಾರಿ ಪುರದ ಮನೋಬಣ್ಣನ ಬಟ್ಟೆ ಅಂಗಡಿಯತ್ತ ದೌಡಾಯಿಸಿದ. ಹೀಗೆ ಅಪ್ಪ ಗಡಿಬಿಡಿಯಲ್ಲಿ ಸೈಕಲ್ಲೇರಿ ಬರ್ರನೆ ಹೋದುದನ್ನು ಕಂಡ ಆಚೆ ಮನೆಯ ದೊಡ್ಡಮ್ಮ “ಏನಾಯ್ತೇ ಸಾಕವ್ವ” ಎಂದು ಅವ್ವನ ಹೆಸರು ಕೂಗುತ್ತಾ ಮನೆಗೋಡಿ ಬಂದಳು. ಈ ದೊಡ್ಡಮ್ಮ ಹರಿ ಬಿರಿಯಲ್ಲಿ ತಾರಾಡಿಕೊಂಡು ಓಡಿ ಬಂದುದನ್ನು ಕಂಡ ಅಕ್ಕ ಪಕ್ಕದ ಗಂಡಸರು ಹೆಂಗಸರು ಕುತೂಹಲ ತಾಳಲಾರದೆ ನಾ ಮುಂದು ತಾ ಮುಂದು ಎಂಬಂತೆ ಒಬ್ಬೊಬ್ಬರೇ ಮನೆಯ ಮುಂದೆ ಸಾಲುಗಟ್ಟ ತೊಡಗಿದರು.

ವಾಣಿ ಸತೀಶ್‌

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು