Sunday, June 23, 2024

ಸತ್ಯ | ನ್ಯಾಯ |ಧರ್ಮ

ಮೌಢ್ಯತೆಯನ್ನು ಹೋಗಲಾಡಿಸುವ, ಧರ್ಮದ ಅಮಲನ್ನು ಇಳಿಸುವ ಶಿಕ್ಷಣ ಅಗತ್ಯ

ಬುದ್ಧಿವಂತರ ಜಿಲ್ಲೆ ಎಂದು ನಮ್ಮ ಜಿಲ್ಲೆಯನ್ನು ಕರೆಯುತ್ತಾರೆ‌. ಹೀಗಿರುವಾಗ, ಮನುಜ ಧರ್ಮವನ್ನು ಬಿಟ್ಟು ಅಸಮಾನತೆ, ಕೋಮುಗಲಭೆ ಸೃಷ್ಟಿಸುವ, ಒಂದು ಸಮುದಾಯವನ್ನು ಕ್ರೂರಿಗಳಂತೆ ಕಾಣುವ ಧರ್ಮ ಬೇಕೆ? ಯುವಜನರಾದ ನಮ್ಮನ್ನು ಧಾರ್ಮಿಕವಾಗಿ ಪ್ರಚೋದಿಸುತ್ತಾರೆ, ಇವರುಗಳಿಗೆಲ್ಲಾ ನಾವು ತಲೆಬಾಗಬೇಕೆ? ಇವರ ಕುತಂತ್ರಗಳಿಗೆ ನಾವು ಬಲಿಯಾಗಬೇಕೇ? ಯೋಚಿಸೋದು ಒಳ್ಳೆದು ಪ್ರದೀಪ್ ಕೊಲ್ಪೆದಬೈಲ್‌, ಪತ್ರಿಕೋದ್ಯಮ ವಿದ್ಯಾರ್ಥಿ

ಶಿಕ್ಷಣವು ಪ್ರತಿಯೊಬ್ಬರು ಪಡೆದುಕೊಳ್ಳ ಬೇಕಾದ ಹಕ್ಕು. ಮತ್ತು ಶಿಕ್ಷಣವು ಒಂದು ಕಲಿಕಾ ಪ್ರಕ್ರಿಯೆ. ಶಿಕ್ಷಣವು ಪ್ರಾಥಮಿಕ, ಹೈಸ್ಕೂಲ್, ಪದವಿ ಪೂರ್ವ, ಪದವಿ, ಡಿಪ್ಲೊಮಾ, ಐಟಿಐ, ಸ್ನಾತಕೋತ್ತರ ಪದವಿ, ಹೀಗೆ ಹಲವು ರೀತಿಯ ಹಂತಗಳಲ್ಲಿ ಇದೆ. ಈ ಎಲ್ಲಾ ಹಂತಗಳ ಶಿಕ್ಷಣವನ್ನು ಪಡೆಯುವ ವ್ಯವಸ್ಥೆ  ನನ್ನ ಜಿಲ್ಲೆ ದಕ್ಷಿಣ ಕನ್ನಡದಲ್ಲೂ‌ ಇದೆ. ದಕ್ಷಿಣ ಕನ್ನಡ ಶಿಕ್ಷಣಕ್ಕೆ ಪ್ರಸಿದ್ಧವಾದ ಜಿಲ್ಲೆ. ಇಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಉತ್ತಮವಾದ ಭೋದನಾ ಶೈಲಿ ಇದೆ. ಹತ್ತನೇ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಾಗಿ ಮುಂಚೂಣಿಯಲ್ಲಿರುವುದೂ ದ.ಕ ಜಿಲ್ಲೆಯೇ.

ನನ್ನೂರು ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಮಾಲಾಡಿ ಎಂಬ ಗ್ರಾಮದಲ್ಲಿದೆ. ಈ ಗ್ರಾಮದಿಂದ ಜಿಲ್ಲೆಯ ವಿವಿಧ ಭಾಗಗಳಿಗೆ ಶಿಕ್ಷಣ ಪಡೆಯಲು ವಿದ್ಯಾರ್ಥಿಗಳು ಹೋಗುತ್ತಾರೆ‌. ಮಾತ್ರವಲ್ಲದೆ, ಬೇರೆ ಜಿಲ್ಲೆ, ರಾಜ್ಯದವರೂ ಸಹ ನಮ್ಮ ಜಿಲ್ಲೆಗೆ ಶಿಕ್ಷಣಕ್ಕೆಂದು ಬರುತ್ತಾರೆ‌. ಇಲ್ಲಿ ಸರ್ಕಾರಿ ಶಾಲಾ-ಕಾಲೇಜುಗಳ ಜತೆ ಖಾಸಗಿ ಶಾಲಾ-ಕಾಲೇಜುಗಳು ಸಹ ಇವೆ. ಮೊದಲು ಖಾಸಗಿ ಶಾಲಾ- ಕಾಲೇಜುಗಳಲ್ಲಿ ಆಂಗ್ಲ ಶಿಕ್ಷಣ ನೀಡುತ್ತಿದ್ದು ಈಗ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲೂ ಆಂಗ್ಲ ಭಾಷೆಯ ಶಿಕ್ಷಣ ನೀಡುತ್ತಾರೆ.

ಶೈಕ್ಷಣಿಕ ಸಂಸ್ಥೆಗಳು ಕೇವಲ ಕಲಿಕೆಗೆ ಒತ್ತು ನೀಡದೆ, ಸಾಂಸ್ಕೃತಿಕ, ಗೇಮ್ಸ್-ಸ್ಪೋರ್ಟ್ಸ್ ಗಳಿಗೂ ಆದ್ಯತೆ ಕೊಡುತ್ತವೆ. ಕಾಲೇಜುಗಳಲ್ಲಿ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಆಯೋಜಿಸುವುದರಿಂದ ವಿದ್ಯಾರ್ಥಿಗಳ ಕೌಶಲ್ಯ ಸಾಮರ್ಥ್ಯ ಹೆಚ್ಚುತ್ತದೆ. ಕಾಲೇಜು ಹಂತದಲ್ಲಿ ಕೌನ್ಸೆಲಿಂಗ್ ವ್ಯವಸ್ಥೆಯನ್ನೂ ಒದಗಿಸುವುದರಿಂದ ವಿದ್ಯಾರ್ಥಿಗಳಿಗೆ ಕಾಲೇಜು ಆದ ನಂತರ ಏನು ಮಾಡಬೇಕು ಎಂಬ ತಕ್ಕ ಮಟ್ಟಿನ ಸ್ಪಷ್ಟತೆ ಬರಲು ಸಾಧ್ಯವಾಗುತ್ತದೆ.

ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ ಕೆಲವೊಂದೆಡೆ ಇರುವುದು ಸಹ ಮಕ್ಕಳ ಕಲಿಕೆಗೆ ಅಡ್ಡಿಯಾಗಬಹುದು. ಖಾಸಗಿ ಶಾಲಾ ಕಾಲೇಜುಗಳಲ್ಲಿ ಯಾವುದೇ ಮೂಲಭೂತ ಸೌಕರ್ಯಗಳ ಕೊರತೆ ಇರದ ಕಾರಣ ತಮ್ಮ ಹೆಚ್ಚಿನ ಹಣ ನೀಡಿ ತಮ್ಮ ಮಕ್ಕಳಿಗೆ ಖಾಸಗಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಣ ನೀಡುತ್ತಾರೆ‌. ಆದರೆ ಆರ್ಥಿಕವಾಗಿ ಹಿಂದುಳಿದಿರುವವರು ಖಾಸಗಿ ಸಂಸ್ಥೆಗಳ ವೆಚ್ಚವನ್ನು ಭರಿಸಲಾಗದೆ ಸರ್ಕಾರಿ ಶಾಲಾ ಕಾಲೇಜಿಗೇ ದಾಖಲಾಗುತ್ತಾರೆ. ಸರ್ಕಾರಿ ಕಾಲೇಜೇನು ತೀರಾ ಹದಗೆಟ್ಟಿಲ್ಲ. ಶಿಕ್ಷಣ ನೀಡುವುದರಲ್ಲಿ ಅಲ್ಲಿ ಯಾವುದೇ ಕೊರತೆ ಇಲ್ಲ. 

ಇಲ್ಲಿನ ಎಲ್ಲಾ ಶಿಕ್ಷಣ ಸಂಸ್ಥೆಗಳಲ್ಲಿ ಗ್ರಂಥಾಲಯ ಇದೆ. ಇದರಿಂದ ವಿದ್ಯಾರ್ಥಿಗಳಿಗೆ ಇನ್ನಷ್ಟು ಬೇರೆ ಬೇರೆ ಪುಸ್ತಕಗಳನ್ನು ಓದಲೂ ಸಹ ಸಹಾಯಕವಾಗಿದೆ. ಆದರೆ, ಕೆಲವೊಂದು ಸರ್ಕಾರಿ ಕಾಲೇಜುಗಳಲ್ಲಿ ಗ್ರಂಥಾಲಯ ಇದ್ದರೂ ಬೇಕಾದ ಪುಸ್ತಕಗಳು ಇರುವುದಿಲ್ಲ. ಇನ್ನು ಇವುಗಳ ಜತೆಗೆ NSS, ರೋವರ್ಸ್-ರೇಂಜರ್ಸ್, NCC, ರೆಡ್ ಕ್ರಾಸ್ ಗಳಂತಹ ಪಠ್ಯೇತರ ಚಟುವಟಿಕೆಗಳೂ ಇವೆ. ಇವುಗಳ ಕಾರ್ಯಕ್ರಮಗಳಿಂದಾಗಿ ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣ, ಮಾತನಾಡುವ ಕಲೆ ಇತ್ಯಾದಿಗಳು ಬೆಳೆಯುತ್ತವೆ. 

 ಆದರೆ, ಇಲ್ಲಿ ಹೆಚ್ಚಿನ ಹುಡುಗರು ಹತ್ತನೇ ತರಗತಿ, ಪಿಯುಸಿ ಮಧ್ಯದಲ್ಲೇ ಕಾಲೇಜಿಗೆ ಹೋಗೋದು ನಿಲ್ಲಿಸುತ್ತಾರೆ. ಹುಡುಗಿಯರು ಪದವಿ ತನಕ ಹೋದರೆ ಪದವಿಯ ನಂತರ ಮನೆಯವರ ಆಸೆಯಂತೆ ಮದುವೆಯಾಗಿ ಬಿಡುತ್ತಾರೆ. ಹುಡುಗಿಯರು ಹೆಚ್ಚಾಗಿ ಕಲಿಕೆಯ ಕಡೆ ಆಸಕ್ತಿ ತೋರುವುದರಿಂದ ಎಕ್ಸಾಮ್ಸ್ ಗಳಲ್ಲಿ ಅವರೇ ಸಾಧನೆ ಗೈಯುತ್ತಾರೆ. ಇನ್ನು ಕೆಲವು ಹುಡುಗಿಯರು ಅರ್ಧದಲ್ಲಿ ಓದೋದು ನಿಲ್ಲಿಸಿದರೆ ಮನೆಯಲ್ಲಿ ಗಂಡು ಹುಡುಕಲು ಆರಂಭಿಸುತ್ತಾರೆ ಎಂಬ ಕಾರಣಕ್ಕೆ ಉನ್ನತ ಶಿಕ್ಷಣ ಪಡೆಯುವವರೂ ಇದ್ದಾರೆ. ಅದೇನೆ ಇರಲಿ ಇಲ್ಲಿ ಶಿಕ್ಷಣಕ್ಕೆ ಒತ್ತು ನೀಡುವವರು ಹೆಚ್ಚಿದ್ದಾರೆ. 

ಸಾಮರಸ್ಯದ ನಾಡಾಗಿರುವ ಇಲ್ಲಿ ರಾಜಕಾರಣಿಗಳು ಮಾಡುವ ಧಾರ್ಮಿಕ ದ್ವೇಷ ಭಾಷಣದಿಂದಾಗಿ ವಿದ್ಯಾರ್ಥಿ ಯುವಜನರು ಪ್ರೇರೇಪಿತರಾಗುತ್ತಾರೆ. ಇನ್ನು ವಿದ್ಯಾರ್ಥಿಗಳು ಕಾಲೇಜಿನಲ್ಲಿ ಧರ್ಮ, ಜಾತಿ, ಭೇದ ಭಾವ ಇಲ್ಲದೆ ಮಾತನಾಡಿದರೆ, ಅಥವಾ ಕಾಲೇಜಿನಲ್ಲಿ ಮುಸ್ಲಿಂ ಯುವಕ ಹಿಂದು ಯುವತಿಯನ್ನು ಪ್ರೀತಿಸುತ್ತಿದ್ದರೆ ಕೋಮು ಸಂಘಟನೆಗಳು ಕಾಲೇಜಿಗೆ ಭೇಟಿ ನೀಡಿ ಪೊಲೀಸ್ ಗಿರಿಯನ್ನು ಮಾಡುತ್ತಾರೆ. ಹಿಂದು ಧರ್ಮದವರು ಮುಸ್ಲಿಂ ಧರ್ಮಕ್ಕೆ ಸಂಬಂಧ ಪಟ್ಟವರನ್ನು ಪ್ರೀತಿಸಬಾರದು, ಮಾತನಾಡಬಾರದು ಎಂಬ ಸಂಘಿಗಳ ಹೇರಿಕೆ ಅತಿಯಾಗುತ್ತಿದೆ. ಇದರಿಂದ ಸಾಮರಸ್ಯ ಹಾಳಾಗುತ್ತದೆಯೇ ವಿನಃ ಜನಗಳು ಪರಸ್ಪರ ಬೆರೆಯುವುದಿಲ್ಲ. ಇಲ್ಲಿ ಶಿಕ್ಷಣ ಬೋಧನೆಗಿಂತ ಧರ್ಮ ಬೋಧನೆಯೇ ಹೆಚ್ಚಾಗಿದೆ. ಇದು ಸಾಮಾಜಿಕ ಕಲಹಕ್ಕೆ ಕಾರಣವಾಗುವುದರ ಜತೆಗೆ, ಅಸಮಾನತೆಯನ್ನು ಸೃಷ್ಟಿಸುತ್ತದೆ. ಲೈಂಗಿಕ ಶಿಕ್ಷಣದ ಕೊರತೆಯೂ ನಮ್ಮ ಜಿಲ್ಲೆಯಲ್ಲಿದೆ.

ಬುದ್ಧಿವಂತರ ಜಿಲ್ಲೆ ಎಂದು ನಮ್ಮ ಜಿಲ್ಲೆಯನ್ನು ಕರೆಯುತ್ತಾರೆ‌. ಶಿಕ್ಷಣವನ್ನೂ ಪಡೆದುಕೊಂಡಿದ್ದೇವೆ. ಮೌಢ್ಯ, ವಾಸ್ತವತೆಯ ಕುರಿತೂ ಅರಿವಿದೆ. ಹೀಗಿರುವಾಗ ಮನುಜ ಧರ್ಮವನ್ನು ಬಿಟ್ಟು ಅಸಮಾನತೆ, ಕೋಮುಗಲಭೆ ಸೃಷ್ಟಿಸುವ, ಒಂದು ಸಮುದಾಯವನ್ನು ಕ್ರೂರಿಗಳಂತೆ ಕಾಣುವ ಧರ್ಮ ಬೇಕೆ? ಯುವಜನರಾದ ನಮ್ಮನ್ನು ಧಾರ್ಮಿಕವಾಗಿ ಪ್ರಚೋದಿಸುತ್ತಾರೆ, ಇವರುಗಳಿಗೆಲ್ಲಾ ನಾವು ತಲೆಬಾಗಬೇಕೆ? ಇವರ ಕುತಂತ್ರಗಳಿಗೆ ನಾವು ಬಲಿಯಾಗಬೇಕೆ? ಯೋಚಿಸೋದು ಒಳ್ಳೆಯದು. ಶಿಕ್ಷಣ ಪಡೆದ ಯುವಜನರು ಇತ್ತೀಚೆಗೆ ಹೆಚ್ಚಾಗಿ ಕೋಮುಗಲಭೆಗಳಲ್ಲಿ ಪಾಲ್ಗೊಳ್ಳುವುದು ವಿಪರ್ಯಾಸ! ನಾವೆಲ್ಲರೂ ವಿದ್ಯಾವಂತರು. ಸಂವಿಧಾನದ ಆಶಯದಂತೆ ಬದುಕುವುದು ನಮ್ಮ ಕರ್ತವ್ಯ. ಇತರರಿಗೂ ಸಂವಿಧಾನದ ಪಾಠ ಮಾಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕೆ ಹೊರತು, ಕೋಮುವಾದಿಗಳನ್ನು ಸೃಷ್ಟಿಸುವುದಲ್ಲ.

ಪ್ರದೀಪ್ ಕೊಲ್ಪೆದಬೈಲ್, ಬೆಳ್ತಂಗಡಿ

ಪತ್ರಿಕೋದ್ಯಮ ವಿದ್ಯಾರ್ಥಿ

ಇದನ್ನೂ ಓದಿ-https://peepalmedia.com/the-story-of-a-nomad-boy-going-to-school/ http://ಅಲೆಮಾರಿ ಹುಡುಗನೊಬ್ಬ ಶಾಲೆಗೆ ಹೋದ ಕಥೆ-ವ್ಯಥೆ

Related Articles

ಇತ್ತೀಚಿನ ಸುದ್ದಿಗಳು