Sunday, June 23, 2024

ಸತ್ಯ | ನ್ಯಾಯ |ಧರ್ಮ

ನೀವು ಕಂಪ್ಯೂಟರ್ ಮತ್ತು ಫೋನ್ ಹೆಚ್ಚು ಬಳಸುತ್ತೀರಾ..? ಹಾಗಿದ್ದರೆ ಕಣ್ಣಿನ ಕುರಿತು ಎಚ್ಚರಿಕೆ ವಹಿಸಿ…

ತಂತ್ರಜ್ಞಾನದ ಬೆಳವಣಿಗೆಯೊಂದಿಗೆ, ಸ್ಮಾರ್ಟ್ ಫೋನ್, ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ಗಳಂತಹ ಎಲೆಕ್ಟ್ರಾನಿಕ್ ಸಾಧನಗಳ ಬಳಕೆ ಅಪಾರವಾಗಿ ಹೆಚ್ಚಾಗಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳಿಂದ ಹಿಡಿದು ಮುದುಕರವರೆಗೆ ಎಲ್ಲರೂ ಸ್ಮಾರ್ಟ್ ಫೋನ್ ಮತ್ತು ಆಂಡ್ರಾಯ್ಡ್ ಫೋನ್ ಬಳಸುತ್ತಿದ್ದಾರೆ.

ಇವುಗಳಿಂದ ಚಿಕ್ಕವಯಸ್ಸಿನಲ್ಲಿ ಕನ್ನಡಕ ಬರುವುದು, ಕಣ್ಣಿನ ದೃಷ್ಟಿಯನ್ನು ಸಂಪೂರ್ಣವಾಗಿ ಕಳೆದುಕೊಳ್ಳಲು ಆಪರೇಷನ್ ಮಾಡಿಸಿಕೊಳ್ಳಬೇಕಾದಂತಹ ಸಮಸ್ಯೆಗಳು ಉದ್ಭವಿಸುತ್ತಿವೆ. ದೃಷ್ಟಿ ಚೆನ್ನಾಗಿದ್ದಾಗ ಅದನ್ನು ಕಾಪಾಡಿಕೊಳ್ಳುವುದರ ಕಡೆ ಗಮನವಹಿಸದೆ ನಿರ್ಲಕ್ಷಿಸುತ್ತೇವೆ ಮತ್ತು ಕಣ್ಣುಗಳ ಮೇಲೆ ಅನಗತ್ಯ ಒತ್ತಡವನ್ನು ಹಾಕುತ್ತೇವೆ. ಇದರಿಂದಾಗಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ ‌ಎನ್ನುವ ಸಮಸ್ಯೆಯೊಂದು ಎದುರಾಗಿದೆ.

ಜನರು ಈಗ ದಿನದ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಕಳೆಯುತ್ತಾರೆ. ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವ ಕನಿಷ್ಠ 50-90 ಪ್ರತಿಶತ ಜನರು ಕೆಲವು ರೀತಿಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕಂಪ್ಯೂಟರ್ ಬಳಕೆಯಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳನ್ನು ಕಂಪ್ಯೂಟರ್ ವಿಷನ್ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ. ಇದು ಕಣ್ಣಿನಲ್ಲಿ ಒತ್ತಡ ಮತ್ತು ನೋವನ್ನು ಉಂಟುಮಾಡುತ್ತದೆ. ಡಿಜಿಟಲ್ ಪರದೆಯ ಬೆಳಕು ಕಣ್ಣುಗಳ ಮೇಲೆ ಬಿದ್ದಾಗ, ಕಣ್ಣುಗಳು ತಮ್ಮ ದೃಷ್ಟಿಯನ್ನು ಅದಕ್ಕೆ ಸರಿಹೊಂದಿಸುತ್ತವೆ. ಆಗ ಮಾತ್ರ ಕಣ್ಣಿನ ರೆಟಿನಾದ ಮೇಲೆ ಬೆಳಕು ಸರಿಯಾಗಿ ಬೀಳುತ್ತದೆ.ಇದು ನಮಗೆ ಪರದೆಯ ಮೇಲಿರುವುದನ್ನು ನೋಡಲು ಅನುಕೂಲ ಮಾಡಿಕೊಡುತ್ತದೆ. ಕಂಪ್ಯೂಟರ್ ವಿಷನ್ ಸಿಂಡ್ರೋಮ್ ತಲೆನೋವು, ಒಣ ಕಣ್ಣುಗಳು, ದೃಷ್ಟಿ ಮಂದವಾಗುವುದು, ಓದುವಲ್ಲಿ ತೊಂದರೆ, ಏಕಾಗ್ರತೆಯ ಕೊರತೆ ಮತ್ತು ಸಣ್ಣ ಬೆಳಕನ್ನು ಸಹಿಸಿಕೊಳ್ಳಲು ಅಸಮರ್ಥತೆಯಂತಹ ಸಮಸ್ಯೆಗಳನ್ನು ಉಂಟುಮಾಡುತ್ತದೆ.

ಓದುವಾಗ ರೀಡಿಂಗ್‌ ಗ್ಲಾಸ್‌ ಧರಿಸದಿರುವುದು, ವಯಸ್ಸಿನೊಂದಿಗೆ ಬರಬಹುದಾದ ಕಣ್ಣಿನ ಸಮಸ್ಯೆಗಳನ್ನು ನಿರ್ಲಕ್ಷ್ಯ ಮಾಡುವುದು, ಬಹಳ ಹೊತ್ತು ಪರದೆಯನ್ನು ದಿಟ್ಟಿಸುವುದು, ಕಳಪೆ ಬೆಳಕು, ಮಂದ ಬೆಳಕಿನಲ್ಲಿ ಮಿನುಗುವ ಸ್ಕ್ರೀನ್‌ ನೋಡುವುದು ಇವೆಲ್ಲವೂ ಸಮಸ್ಯೆಯ ಮೂಲಗಳಾಗಿವೆ.

ಇದಕ್ಕೆ ಪರಿಹಾರವೆಂದರೆ 20-20-20 ನಿಯಮವನ್ನು ಅನುಸರಿಸಿ ಕಣ್ಣಿನ ಆಯಾಸವನ್ನು ಕಡಿಮೆ ಮಾಡುವುದು. ಅಂದರೆ ಪ್ರತಿ 20 ನಿಮಿಷಗಳಿಗೊಮ್ಮೆ ವಿರಾಮ ತೆಗೆದುಕೊಳ್ಳಿ. ವಿರಾಮದ ಸಮಯದಲ್ಲಿ 20 ಅಡಿ ದೂರದಲ್ಲಿರುವ ವಸ್ತುಗಳನ್ನು 20 ಸೆಕೆಂಡುಗಳ ಕಾಲ ನೋಡಿ. ಹೀಗೆ ಮಾಡುವುದರಿಂದ ಕಣ್ಣುಗಳಿಗೆ ಉಪಶಮನ ಸಿಗುತ್ತದೆ.ಸ್ಕ್ರೀನ್ ಬ್ರೈಟ್ ನೆಸ್ ತೀವ್ರತೆಯನ್ನು ಕಡಿಮೆ ಮಾಡಿ. ಇದು ನೀಲಿ ಬೆಳಕಿನ ತೀವ್ರತೆಯನ್ನು ಕಡಿಮೆ ಮಾಡುತ್ತದೆ. ನೀಲಿ ಬೆಳಕಿನ ನಿರೋಧಕ ಹೊಂದಿರುವ ಕನ್ನಡಕ ಧರಿಸುವುದರಿಂದ ಡಿಜಿಟಲ್ ಪರದೆಯ ಬೆಳಕಿನ ಒತ್ತಡವನ್ನು ಕಡಿಮೆ ಮಾಡಬಹುದು. ಕಣ್ಣಿನ ಪರೀಕ್ಷೆಯನ್ನು ವರ್ಷಕ್ಕೊಮ್ಮೆ ಮಾಡಿಸಬೇಕು. ಇದು ನಿಮ್ಮ ದೃಷ್ಟಿಯಲ್ಲಿ ಯಾವುದೇ ದೋಷಗಳನ್ನು ಪತ್ತೆಹಚ್ಚುವುದು ಮಾತ್ರವಲ್ಲದೆ ಇತರ ಕಣ್ಣಿನ ಸಮಸ್ಯೆಗಳನ್ನು ಸಹ ತಡೆಯುತ್ತದೆ.

Related Articles

ಇತ್ತೀಚಿನ ಸುದ್ದಿಗಳು