Saturday, June 15, 2024

ಸತ್ಯ | ನ್ಯಾಯ |ಧರ್ಮ

ಮತ್ತೊಮ್ಮೆ ಮುಂಬೈ ಇಂಡಿಯನ್ಸ್‌ ಗೂಡು ಸೇರಿದ ಅಂಬಟಿ ರಾಯುಡು

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಅಂಬಟಿ ತಿರುಪತಿ ರಾಯುಡು ಮತ್ತೊಮ್ಮೆ ಮುಂಬೈ ಇಂಡಿಯನ್ಸ್ ಕುಟುಂಬವನ್ನು ಸೇರಿಕೊಂಡಿದ್ದಾರೆ. ರಾಯುಡು 2010ರಿಂದ 2017ರವರೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಪ್ರತಿನಿಧಿಸಿದ್ದರು.

ಯುಎಇಯಲ್ಲಿ ನಡೆಯಲಿರುವ ಇಂಟರ್ನ್ಯಾಷನಲ್ ಲೀಗ್ T20 ಸೀಸನ್-2 (2024) ಗಾಗಿ ಅವರು ಮತ್ತೆ ಮುಂಬೈ ಇಂಡಿಯನ್ಸ್ ಜೊತೆ ಸೇರಿಕೊಂಡಿದ್ದಾರೆ. ಅಂತರಾಷ್ಟ್ರೀಯ ಲೀಗ್ T20 ನಲ್ಲಿ MI ಎಮಿರೇಟ್ಸ್ ಆಗಿ ಆಡುವ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಮುಂದಿನ ಋತುವಿಗಾಗಿ 8 ಹೊಸ ಆಟಗಾರರೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.

ರಾಯುಡು ಜೊತೆಗೆ ಕೋರಿ ಆಂಡರ್ಸನ್ (ನ್ಯೂಜಿಲೆಂಡ್), ಓಡಿಯನ್ ಸ್ಮಿತ್ (ವೆಸ್ಟ್ ಇಂಡೀಸ್), ಅಕೀಲ್ ಹೊಸೈನ್ (ವೆಸ್ಟ್ ಇಂಡೀಸ್), ಕುಶಾಲ್ ಪೆರೇರಾ (ಶ್ರೀಲಂಕಾ) ಅವರಂತಹ ಸ್ಟಾರ್ ಆಟಗಾರರಿದ್ದಾರೆ. ಇವರೊಂದಿಗೆ ಶ್ರೀಲಂಕಾದ ಯುವ ಆಟಗಾರ ವಿಜಯಕಾಂತ್ ವಿಯಾಸ್ಕಾಂತ್, ವಕಾರ್ ಸಲಾಮ್ಕಿಯೆಲ್ ಮತ್ತು ನೋಶ್ತುಶ್ ಕೆಂಜಿಗೆ ಅವರಂತಹ ಹೊಸ ಆಟಗಾರರು ಎಂಐ ಕುಟುಂಬಕ್ಕೆ ಸೇರ್ಪಡೆಗೊಂಡಿದ್ದಾರೆ. ಮೇಲೆ ತಿಳಿಸಿದ 8 ಆಟಗಾರರ ಸೇರ್ಪಡೆಯೊಂದಿಗೆ ಎಂಐ ಎಮಿರೇಟ್ಸ್ ತಂಡದ ಆಟಗಾರರ ಸಂಖ್ಯೆ 20ಕ್ಕೆ ತಲುಪಿದೆ.

ವಿಂಡೀಸ್ ಆಟಗಾರರಾದ ಕೀರನ್ ಪೊಲಾರ್ಡ್, ಡ್ವೇನ್ ಬ್ರಾವೋ, ನಿಕೋಲಸ್ ಪೂರನ್, ಆಂಡ್ರೆ ಫ್ಲೆಚರ್, ನ್ಯೂಜಿಲೆಂಡ್ ಸ್ಟಾರ್ ವೇಗಿ ಟ್ರೆಂಟ್ ಬೌಲ್ಟ್, ಫಜಲ್ ಹಕ್ ಫಾರೂಕಿ, ಮುಹಮ್ಮದ್ ವಾಸಿಂ, ಜಹೂರ್ ಖಾನ್, ಜೋರ್ಡಾನ್ ಥಾಂಪ್ಸನ್, ವಿಲಿಯಂ ಸ್ಮೀಡ್, ಮೆಕೆನ್ನಿ ಕ್ಲಾರ್ಕ್, ಡೇನಿಯಲ್ ಮೊಸ್ಲೆ ಅವರನ್ನು ಮತ್ತೆ ತಂಡಕ್ಕೆ ಕರೆಸಲಾಗಿದೆ. ಏತನ್ಮಧ್ಯೆ, ಮುಂದಿನ ವರ್ಷ ಜನವರಿ 13ರಿಂದ ಇಂಟರ್ನ್ಯಾಷನಲ್ ಲೀಗ್ ಟಿ20 ಸೀಸನ್-2 ಪ್ರಾರಂಭವಾಗಲಿದೆ ಎಂದು ಹೇಳಲಾಗಿದೆ.

ಐಪಿಎಲ್‌ನಿಂದ ನಿವೃತ್ತಿ ಘೋಷಿಸಿದ ನಂತರ, ಐಪಿಎಲ್ ಸೂಪರ್‌ಸ್ಟಾರ್ ಅಂಬಟಿ ರಾಯುಡು ಸ್ವಲ್ಪ ಕಾಲ ಗ್ಯಾಪ್ ತೆಗೆದುಕೊಂಡು ಈಗ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿದ್ದಾರೆ. ರಾಯುಡು ಈ ಲೀಗ್‌ನಲ್ಲಿ ಸೇಂಟ್ ಕಿಟ್ಸ್ ನೆವಿಸ್ ಪೇಟ್ರಿಯಾಟ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಪ್ರವೀಣ್ ತಾಂಬೆ ನಂತರ ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡುತ್ತಿರುವ ಎರಡನೇ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ರಾಯುಡು ಪಾತ್ರರಾಗಿದ್ದಾರೆ. 2020ರ ಋತುವಿನಲ್ಲಿ, ಪ್ರವೀಣ್ ತಾಂಬೆ ಟ್ರಿನ್‌ಬಾಗೊ ನೈಟ್ ರೈಡರ್ಸ್‌ ಪರವಾಗಿ ಆಡಿದ್ದರು.

Related Articles

ಇತ್ತೀಚಿನ ಸುದ್ದಿಗಳು