Saturday, June 15, 2024

ಸತ್ಯ | ನ್ಯಾಯ |ಧರ್ಮ

ಬ್ಯಾರಿ ಸೌಹಾರ್ದ ಭವನ ಉದ್ಘಾಟನೆ: ಹೆಂಗಸರ ಹೆಸರೇ ಇಲ್ಲ, ಇಲ್ಲಿ ಗಂಡಸರೇ ಎಲ್ಲಾ!!

ಬೆಂಗಳೂರು: ಪರವೂರಿನಿಂದ ಬಂದು ಬೆಂಗಳೂರಿನಲ್ಲಿ ನೆಲೆ ನಿಂತು ನಂತರ ಎಲ್ಲರೂ ಒಟ್ಟುಗೂಡಿ ತಮ್ಮದೇ ಸಮುದಾಯದ, ಊರಿನ ಹೆಸರಿನಲ್ಲಿ ಸಂಘಟಿತರಾಗುವುದು ಸಾಮಾನ್ಯ ವಿಚಾರ. ಹಾಗೆ ಒಗ್ಗೂಡಿದವರು ತಮ್ಮ ಒಗ್ಗೂಡುವಿಕೆಗೆ ಬೇಕಾಗಿ ಒಂದು ನೆಲೆಯನ್ನು ಸಮುದಾಯ ಭವನಗಳ ಹೆಸರಿನಲ್ಲಿ ಕಟ್ಟುವುದು ಸಹ ಸಹಜ.

ಹಾಗೆ ಅಂತಹ ಕನಸಿನ ಭವನ ಸಾಕಾರಗೊಂಡಿದ್ದನ್ನು ಕಣ್ತುಂಬಿಕೊಳ್ಳುವ ದಿನ, ಅದರ ಉದ್ಘಾಟನೆಯ ದಿನ ವೇದಿಕೆಯ ಮೇಲೆ ಯಾವುದೋ ಶತಮಾನದಲ್ಲಿ ನಡೆಯುವಂತೆ ಈಗಲೂ ಬರೀ ಗಂಡಸರೇ ತುಂಬಿಕೊಳ್ಳುವುದು ಖಂಡಿತ ಸಹಜವಲ್ಲ, ಅದು ಅಸಹಜವಾಗುತ್ತದೆ.

ಯಾವುದೇ ಸಮಾಜ, ಸಮುದಾಯವಾದರೂ ಅದು ಪೂರ್ಣಗೊಳ್ಳುವುದು ಗಂಡು ಮತ್ತು ಹೆಣ್ಣು ಇಬ್ಬರೂ ತಮ್ಮ ಕೊಡುಗೆಗಳನ್ನು ನೀಡಿದಾಗಲೇ. ಹಾಗೆಯೇ ಆ ಸಮುದಾಯವನ್ನು ಪ್ರತಿನಿಧಿಸುವವರು ಕೂಡಾ ಕೇವಲ ಗಂಸರಾಗಿದ್ದರೆ ಸಾಲದು, ಅಲ್ಲೂ ಹೆಣ್ಣಿರಬೇಕೆಂದು ಬಯಸುವುದು ಸಹಜವಾದದ್ದು.

ಬೆಂಗಳೂರಿನಲ್ಲಿ ಬ್ಯಾರಿ ಸಮುದಾಯವು ತಾನು ನಿರ್ಮಿಸಿದ ಬ್ಯಾರಿ ಸಮುದಾಯದವರು ಒಟ್ಟಾಗಿ ಕಟ್ಟಿರುವ ಬ್ಯಾರಿ ಸೌಹಾರ್ದ ಭವನದ ಉದ್ಘಾಟನೆಯ ಆಹ್ವಾನ ಪತ್ರಿಕೆಯಲ್ಲಿ ಈಗ ಅಂತಹದ್ದೇ ಒಂದು ಅಪಸವ್ಯವನ್ನು ಕಾಣಬಹುದಾಗಿದೆ.

ಬೆಂಗಳೂರಿನ ಎಚ್‌ಬಿಆರ್ ಲೇಔಟ್‌ನಲ್ಲಿ ಬ್ಯಾರೀಸ್ ಸೌಹಾರ್ದ ಭವನ – ಬ್ಯಾರೀಸ್ ಎಮಿಟಿ ಎಂಬ ಕಟ್ಟಡ ಸಿದ್ಧಗೊಂಡಿದ್ದು, ಸೆ.30ರ ಶನಿವಾರದಂದು ಉದ್ಘಾಟನೆಯಾಗಲಿದೆ. ಈ ಭವ್ಯ ಭವನವನ್ನು 16 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದ್ದು, ಇದು ಸಮುದಾಯವೇ ಸಂಭ್ರಮಪಡುವಂತಹ ಸಾಧನೆಯಾಗಿದೆ.

2015ರಲ್ಲಿ ಪ್ರಾರಂಭಗೊಂಡಿದ್ದ ಭವನದ ನಿರ್ಮಾಣದ ಉದ್ಘಾಟನೆಯನ್ನು ಸಿದ್ದರಾಮಯ್ಯನವರು ಮಾಡಲಿದ್ದಾರೆ. ಬಿ ಎ ಮೊಹಿದ್ದೀನ್ ಸ್ಮಾರಕ ಸಭಾಂಗಣವನ್ನು ಡಿಸಿಎಂ ಡಿ ಕೆ ಶಿವಕುಮಾರ್ ಉದ್ಘಾಟಿಸಲಿದ್ದಾರೆ. ಸ್ಪೀಕರ್ ಯು ಟಿ ಖಾದರ್, ಮಾಜಿ ಸಿಎಂಗಳಾದ ಹೆಚ್‌ ಡಿ ಕುಮಾರಸ್ವಾಮಿ, ಬಿ ಎಸ್ ಯಡಿಯೂರಪ್ಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಬೆಂಗಳೂರಿನ ಬ್ಯಾರೀಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಿ ಎಂ ಫಾರೂಕ್ ವಹಿಸಲಿದ್ದಾರೆ. ಬ್ಯಾರಿ ಸೌಹಾರ್ದ ಭವನ ಕಟ್ಟಡ ಸಮಿತಿ ಅಧ್ಯಕ್ಷ ಸೈಯದ್ ಮೊಹಮ್ಮದ್ ಬ್ಯಾರಿ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿರಲಿದ್ದಾರೆ.

ಬ್ಯಾರಿ ಸಮುದಾಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ಮಹಿಳಾ ಸಾಧಕಿಯರಿದ್ದರೂ ಒಬ್ಬರನ್ನೂ ಉದ್ಘಾಟನಾ ಸಮಾರಂಭಕ್ಕೆ ಅತಿಥಿಯಾಗಿ ಕರೆಸದಿರುವುದು ಈಗ ಅಸಮಾಧಾನಕ್ಕೆ ಕಾರಣವಾಗಿದೆ.

ವಿವಿಧ ಪಕ್ಷಗಳ ಹಾಗೂ ಸಮುದಾಯಗಳ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದ್ದು, ಅವರಲ್ಲಿಯೂ ಒಬ್ಬರು ಸಹ ಮಹಿಳೆಯರಿಲ್ಲ. ಇಂತಹ ಪುರುಷ ಪ್ರಧಾನ ಮನಸ್ಥಿಯಿಂದ ಕಾರ್ಯಕ್ರಮದ ಆಯೋಜಕರು ಹೊರಬರಬೇಕಿದೆ.

ಈ ಕುರಿತು ಬ್ಯಾರಿ ಸಮುದಾಯದವರಾದ, ಹಾಗೂ ರಾಜಕೀಯ ನಾಯಕಿಯಾಗಿರುವ ಯು.ಟಿ. ಫರ್ಝಾನ ಅವರನ್ನು ಪೀಪಲ್‌ ಮೀಡಿಯಾ ಸಂಪರ್ಕಿಸಿದಾಗ ಅವರು, “ಬ್ಯಾರಿ ಭವನ‌ ಲೋಕಾರ್ಪಣೆಯ ಸಂದರ್ಭದಲ್ಲಿ ಒಬ್ಬೇ ಒಬ್ಬ ಹೆಣ್ಣು ಮಕ್ಕಳ ಪ್ರಾತಿನಿಧ್ಯವಿಲ್ಲದೆ ಇರುವುದು ಬಹಳ ವಿಷಾದದ ಸಂಗತಿ. ಅದೂ ಕೂಡಾ 33 ಪರ್ಸೆಂಟ್ ರಾಜಕೀಯ ಮೀಸಲಾತಿ ಇಷ್ಟೊಂದು ಮುನ್ನೆಲೆಗೆ ಬಂದಿರುವಂತಹ ಈ ಸಂದರ್ಭದಲ್ಲಿ ಈ ಒಂದು ಸಂವೇದನಾರಾಹಿತ್ಯತೆ ಬಹಳ ಖೇದ ಮೂಡಿಸಿದೆ. ಸಹಜವಾಗಿ ಮಹಿಳೆಯರನ್ನು ಎಲ್ಲಾ ರಂಗದಲ್ಲಿ ಒಳಗೊಳ್ಳುವುದು ಇವರಿಗೆ ಸಾಧ್ಯವಾಗದೇ ಇರಬಹುದೇನೋ ? ಆದರೆ ಪ್ರಜ್ಞಾಪೂರ್ವಕವಾಗಿಯಾದರೂ ಇಂತಹ ಕನಿಷ್ಟ ಕಡ್ಡಾಯ ತತ್ವಗಳನ್ನು ಒಳಗೊಳ್ಳುವ ಕೆಲಸವನ್ನು ನಾಯಕರು ಮಾಡಬೇಕು ಎಂದು ಹೇಳಲು ಇಚ್ಚಿಸುವೆ. ಬ್ಯಾರಿಭವನಕ್ಕೆ ಶುಭವಾಗಲಿ” ಎಂದು ಬೇಸರದಿಂದ ನುಡಿದರು.

Related Articles

ಇತ್ತೀಚಿನ ಸುದ್ದಿಗಳು