Wednesday, May 1, 2024

ಸತ್ಯ | ನ್ಯಾಯ |ಧರ್ಮ

ಬಿಜೆಪಿ ಜೊತೆ ಮೈತ್ರಿ: ಜೆಡಿಎಸ್‌ ತೊರೆದ ಇನ್ನೋರ್ವ ನಾಯಕ

ಬೆಂಗಳೂರು: ಬಿಜೆಪಿ ಜತೆಗಿನ ಮೈತ್ರಿಯನ್ನು ವಿರೋಧಿಸಿ ಜೆಡಿಎಸ್ ಪಕ್ಷದ ಭದ್ರಕೋಟೆ ಎಂದೇ ಪರಿಗಣಿಸಲಾಗಿದ್ದ ತುಮಕೂರು ಜಿಲ್ಲೆಯ ಜೆಡಿಎಸ್ ಉಪಾಧ್ಯಕ್ಷರು ಬುಧವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಪ್ರಮುಖ ಅಲ್ಪಸಂಖ್ಯಾತ ನಾಯಕ ಎಸ್.ಶಫಿ ಅಹ್ಮದ್ ಅವರು ತಮ್ಮ ರಾಜೀನಾಮೆ ಪತ್ರವನ್ನು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರಿಗೆ ವಾಟ್ಸಪ್ ಮೂಲಕ ರವಾನಿಸಿದ್ದಾರೆ.

ಜೆಡಿ (ಎಸ್) ಪಕ್ಷಕ್ಕೆ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ರಾಜೀನಾಮೆ ನೀಡುತ್ತಿರುವುದಾಗಿ ಅಹ್ಮದ್ ತಮ್ಮ ಎರಡು ಸಾಲಿನ ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅವರು ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದರು.

ಆದರೆ, ಅವರ ಮುಂದಿನ ನಡೆಯ ಬಗ್ಗೆ ಸುಳಿವು ನೀಡಿಲ್ಲ.

ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಜತೆ ಕೈಜೋಡಿಸಲು ಪಕ್ಷ ನಿರ್ಧರಿಸಿದ ಬೆನ್ನಲ್ಲೇ ಜೆಡಿಎಸ್‌ನ ಅಲ್ಪಸಂಖ್ಯಾತ ಮುಖಂಡರು ಸಭೆ ನಡೆಸಿದ್ದಾರೆ.

ಇದೇ ವೇಳೆ ಪಕ್ಷದ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಈ ಬೆಳವಣಿಗೆಯ ಬಗ್ಗೆ ಇನ್ನೂ ಪ್ರತಿಕ್ರಿಯಿಸಿಲ್ಲ ಆದರೆ ಅವರು ಕೂಡ ಪಕ್ಷವನ್ನು ತೊರೆಯಲು ಯೋಚಿಸುತ್ತಿದ್ದಾರೆ ಎಂದು ಮೂಲಗಳು ಹೇಳುತ್ತಿವೆ.

ಮೈತ್ರಿ ಘೋಷಣೆಗೂ ಮುನ್ನ ಇಬ್ರಾಹಿಂ ಅನುಪಸ್ಥಿತಿಯಲ್ಲಿ ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ ದೇವೇಗೌಡರ ಕುಟುಂಬದ ನಡೆ ಅಲ್ಪಸಂಖ್ಯಾತ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.

ಕಳೆದ ಶನಿವಾರ ಜನತಾದಳ (ಜಾತ್ಯತೀತ) ಕರ್ನಾಟಕ ಘಟಕದ ಉಪಾಧ್ಯಕ್ಷ ಸೈಯದ್ ಶಫಿವುಲ್ಲಾ ಸಾಹೇಬ್ ಅವರು ಕೇಸರಿ ಪಕ್ಷದೊಂದಿಗಿನ ಮೈತ್ರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

“ಭವಿಷ್ಯದ ಕ್ರಮ” ಕ್ಕೆ ಸಂಬಂಧಿಸಿದಂತೆ ಅವರು ಪಕ್ಷದ ಇತರ ಮುಸ್ಲಿಂ ನಾಯಕರೊಂದಿಗೆ ಸಭೆಗಳನ್ನು ನಡೆಸಿದ್ದರು.

ಮೂಲಗಳ ಪ್ರಕಾರ, ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಮೇಲೆ ಜೆಡಿ (ಎಸ್) “ಗಣನೀಯ ಪ್ರಭಾವ” ಹೊಂದಿದೆ. ಅನೇಕ ಸಂದರ್ಭಗಳಲ್ಲಿ, ಮುಸ್ಲಿಮರು ಸಹ ಕಾಂಗ್ರೆಸ್‌ಗಿಂತ ಜೆಡಿಎಸ್‌ಗೆ ಹೆಚ್ಚು ಹತ್ತಿರವಿದ್ದರು.

ಆದರೆ, ಈ ಮೈತ್ರಿ ಮುಸ್ಲಿಂ ಸಮುದಾಯಕ್ಕೆ ಆಘಾತವನ್ನುಂಟು ಮಾಡಿದೆ, ಕೆಲವು ರಾಜಕೀಯ ವೀಕ್ಷಕರು ಪಕ್ಷವು ತನಗಿರುವ ಬೆಂಬಲವನ್ನು ಕಳೆದುಕೊಳ್ಳುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.

ಪಕ್ಷವು ಸೆಕ್ಯುಲರ್‌ ತತ್ವಗಳಿಗೆ ಬದ್ಧವಾಗಿದೆಯೆನ್ನುವ ಕಾರಣಕ್ಕೆ ಪಕ್ಷದ ಸಲುವಾಗಿ ಹಾಗೂ ಜನರ ಸಲುವಾಗಿ ದುಡಿದಿದ್ದೆ ಆದರೆ ಈಗ ಕುಮಾರಸ್ವಾಮಿಯವರು ಬಿಜೆಪಿ ಜೊತೆ ಕೈಜೋಡಿಸಿರುವುದು ನಿರಾಶೆ ಮೂಡಿಸಿರುವ ಕಾರಣ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಶಫಿವುಲ್ಲಾ ತನ್ನ ರಾಜೀನಾಮೆ ಸಂದರ್ಭದಲ್ಲಿ ಉಲ್ಲೇಖಿಸಿದ್ದರು.

ಈಗಾಗಲೇ ಲಿಂಗಾಯತರೊಡನೆ ಮುನಿಸಿಕೊಂಡಿರುವ ಬಿಜೆಪಿ ಒಕ್ಕಲಿಗರ ಸಖ್ಯ ಬೆಳೆಸಲೆಂದು ಹೊರಟಿದ್ದರೆ, ಇತ್ತ ಜೆಡಿಎಸ್‌ ತನ್ನನ್ನು ಮುಸ್ಲಿಮರಿಂದ ಬಿಡಿಸಿಕೊಂಡು ಹಿಂದುತ್ವದ ತೆಕ್ಕೆಗೆ ಒಪ್ಪಿಸಿಕೊಳ್ಳಲು ಹೊರಟಿರುವುದು ರಾಜಕೀಯವಾಗಿ ಕುತೂಹಲ ಮೂಡಿಸಿದೆ.

Related Articles

ಇತ್ತೀಚಿನ ಸುದ್ದಿಗಳು