Saturday, June 15, 2024

ಸತ್ಯ | ನ್ಯಾಯ |ಧರ್ಮ

ಮನುವಾದಿ ಹಿಂಸೆ ಮತ್ತು ಗಾಂಧೀಜಿ ಅಹಿಂಸೆ

ಗಾಂಧಿ ಜಯಂತಿಯಂದು ಗಾಂಧೀಜಿಯವರನ್ನು ನಾಮಕಾವಸ್ತಾ ನೆನಪಿಸಿಕೊಂಡು ಮರೆಯುವ ಬದಲು, ಮುಂಬರುವ ಸರ್ವಾಧಿಕಾರಿ ಸರಕಾರದ ವಿರುದ್ದ ಹೇಗೆ ಸಂಘಟಿತ ಅಹಿಂಸಾತ್ಮಕ ಜನಾಂದೋಲನವನ್ನು ಕಟ್ಟಿ ಮುನ್ನಡೆಸಬೇಕು ಎನ್ನುವುದರ ಕುರಿತು ಗಾಂಧಿವಾದಿಗಳು, ಸಂವಿಧಾನದ ಬೆಂಬಲಿಗರು, ಪ್ರಜಾಪ್ರಭುತ್ವದ ಪ್ರತಿಪಾದಕರು, ಪ್ರಗತಿಪರರು, ರೈತ ಕಾರ್ಮಿಕ ಮಹಿಳಾ ಸಂಘ ಸಂಸ್ಥೆಗಳು ಯೋಚಿಸಿ ಕಾರ್ಯತತ್ಪರವಾಗಬೇಕಿದೆಶಶಿಕಾಂತ ಯಡಹಳ್ಳಿ

ಪ್ರತಿ ವರ್ಷದಂತೆ ಈ ಸಲವೂ ಅಕ್ಟೋಬರ್ 2 ರಂದು ಮತ್ತೊಂದು ಗಾಂಧಿ ಜಯಂತಿ ಆಚರಣೆ ಮುಗಿಯಿತು. ಗಾಂಧೀಜಿಯವರು ಪ್ರತಿಪಾದಿಸಿದ ತತ್ವಾದರ್ಶಗಳನ್ನು ಎಂದೋ ಮರೆತ ಜನತೆ ಗಾಂಧಿ ಜನ್ಮ ದಿನವನ್ನು ಸರಕಾರಿ ಕಾರ್ಯಕ್ರಮಕ್ಕೆ ಸೀಮಿತಗೊಳಿಸಿದ್ದಾರೆ. ಹಾಗೂ ಸರಕಾರಿ ರಜೆಯನ್ನು ಆಸ್ವಾದಿಸುತ್ತಾ ಗಾಂಧಿ ವಿಚಾರಧಾರೆಯಿಂದ ದೂರ ಉಳಿದಿದ್ದಾರೆ. ಮಹಾತ್ಮರ ಜಯಂತಿ ನೆಪದಲ್ಲಾದರೂ ಅವರ ಅಹಿಂಸಾ ತತ್ವದ ಬಗ್ಗೆ ಒಂದಿಷ್ಟು ಚರ್ಚಿಸುವ ಅಗತ್ಯವಿದೆ.

ಬುದ್ದ, ಮಹಾವೀರ, ಜೀಸಸ್, ಬಸವಣ್ಣ ಮುಂತಾದ ಮಹನೀಯರೆಲ್ಲಾ ಪ್ರತಿಪಾದಿಸಿದ ಅಹಿಂಸೆಯನ್ನು ಪ್ರತಿಭಟನಾ ಮಾಧ್ಯಮವಾಗಿ ಸಮರ್ಥವಾಗಿ ಬಳಸಿಕೊಂಡ ಗಾಂಧೀಜಿಯವರು, ಸ್ವಾತಂತ್ರ್ಯ ಆಂದೋಲನವನ್ನು ಅಹಿಂಸಾ ತತ್ವದ ಆಧಾರದಲ್ಲಿ ಮುನ್ನಡೆಸಿದವರು. ಎದುರಾಳಿ ಅದೆಷ್ಟೇ ಕ್ರೂರಿಯಾಗಿರಲಿ, ಹಿಂಸಾವಾದಿಯಾಗಿರಲಿ, ಆಕ್ರಮಣಕಾರಿಯಾಗಿರಲಿ ಅಂತವರ ವಿರುದ್ದ ಹೋರಾಡಲು ಅಹಿಂಸೆಯನ್ನು ಅಸ್ತ್ರವಾಗಿ ಬಳಸಿ ಗೆಲುವನ್ನು ಸಾಧಿಸಿದವರು ಗಾಂಧೀಜಿ.

ಆಕ್ರಮಣಕೋರ ಬ್ರಿಟೀಷರು ದಂಗೆ ಎದ್ದವರಿಗಿಂತ, ಸಶಸ್ತ್ರ ಹೋರಾಟಗಾರರಿಗಿಂತ ಹೆಚ್ಚು ಹೆದರಿದ್ದು ಗಾಂಧೀಜಿಯವರ ಅಹಿಂಸಾ ಸತ್ಯಾಗ್ರಹಕ್ಕೆ. ತಮ್ಮ ಆಡಳಿತದ ವಿರುದ್ದ ಹಿಂಸೆಗಿಳಿದವರನ್ನು ಹಿಂಸೆಯಿಂದ ಹತ್ತಿಕ್ಕುವುದು ಬಲಾಢ್ಯರಾದ ಬ್ರಿಟೀಷರಿಗೆ ದೊಡ್ಡ ಸವಾಲೇನಾಗಿರಲಿಲ್ಲ. ಅವರಲ್ಲಿ ಸೈನ್ಯ ಶಸ್ತ್ರ ಕರಾಳ ಕಾನೂನುಗಳಿಗೇನೂ ಕೊರತೆ ಇರಲಿಲ್ಲ. ಆದರೆ ಹಿಂಸೆಗಿಳಿಯದೇ ಹಿಂಸೆಯನ್ನು ವಿರೋಧಿಸುವ ಮೂಲಕ ದಮನಿತ ಜನರನ್ನು ಒಂದು ಗೂಡಿಸಲು ಗಾಂಧೀಜಿಯವರು ಬಳಸಿದ ಬಲವಾದ ಅಹಿಂಸಾಸ್ತ್ರ ಬ್ರಿಟೀಷರನ್ನೇ ದಂಗುಪಡಿಸಿದ್ದಂತೂ ಸತ್ಯ. ಕೊನೆಗೂ ಬಲಾಢ್ಯರಾದ ಬ್ರಿಟೀಷರು ಹಲವಾರು ಅನಿವಾರ್ಯ ಕಾರಣಗಳಿಂದಾಗಿ ಗಾಂಧಿಯವರ ಅಹಿಂಸಾತ್ಮಕ ಸತ್ಯಾಗ್ರಹ ಹೋರಾಟಕ್ಕೆ ಮಣಿಯಬೇಕಾಯ್ತು. ಸಂಧಾನ ಮಾತುಕತೆಗೆ ಕರೆಯಬೇಕಾಯ್ತು. ಹಿಂಸೆ ಅದೆಷ್ಟೇ ಪ್ರಬಲವಾಗಿರಲಿ ಅಹಿಂಸೆಯಿಂದ ಎದುರಿಸಿ ಸೋಲಿಸಬಹುದು ಎನ್ನುವುದನ್ನು ಗಾಂಧಿಗಿರಿ ಸಾಬೀತುಪಡಿಸಿತು. ಹಿಂಸೆಯ ವಿರುದ್ಧ ಆಗಬಹುದಾದ ಪ್ರತಿಹಿಂಸೆಯನ್ನು ಅಹಿಂಸಾ ಮಾರ್ಗದ ಮೂಲಕ ತಡೆದ ಗಾಂಧೀಜಿಯವರ ನಡೆ ಸಾಮ್ರಾಜ್ಯಶಾಹಿ ಬ್ರಿಟೀಷರಿಗೆ ವರವಾಗಿದ್ದೂ ಅಷ್ಟೇ ಸತ್ಯ.

ಪ್ರಕೃತಿಯಲ್ಲಿ ಹಿಂಸೆ ಎನ್ನುವುದು ಸಹಜ, ಪ್ರಾಣಿಗಳಲ್ಲಿ ಹಿಂಸೆ ಅನಿವಾರ್ಯ. ಒಂದನ್ನು ಕೊಂದು ಇನ್ನೊಂದು ತಿಂದು ಬದುಕುವುದೇ ನಿಸರ್ಗ ನಿಯಮ. ಮನುಷ್ಯರೂ ಪ್ರಾಣಿ ಪ್ರಬೇಧಗಳೇ ಆಗಿರುವುದರಿಂದ ಹಿಂಸೆ ಅಂತರ್ಗತವಾಗಿದೆ. ಜಾತಿ ಮತ ಧರ್ಮ ದೇವರ ವಿಚಾರಕ್ಕೆ ಉಂಟಾಗುವ ಸಂಘರ್ಷದಿಂದಾಗುವ ಹಿಂಸೆಗೆ ಇಡೀ ಜಗತ್ತೇ ತಲ್ಲಣಿಸಿದೆ. ಹೊನ್ನು, ಮಣ್ಣು ಅಧಿಕಾರ ಸಂಪತ್ತಿಗಾಗಿ ನಡೆವ ಮೇಲಾಟದ ಹೋರಾಟಗಳಿಂದಾಗುವ ಹಿಂಸೆಗಳಿಗಂತೂ ಲೆಕ್ಕವಿಲ್ಲ. ಹೀಗಾಗಿ ಮನುಷ್ಯರಿಂದ ಹಿಂಸೆಯನ್ನು ಬೇರ್ಪಡಿಸುವುದು ಅಷ್ಟು ಸುಲಭವಲ್ಲ. ಅನೇಕಾನೇಕ ದಾರ್ಶನಿಕರು ಪ್ರಯತ್ನಿಸಿದರೂ ಹಿಂಸೆ ಸಂಪೂರ್ಣವಾಗಿ ನಾಶವಾಗಿಲ್ಲ, ಆಗುವ ಸಾಧ್ಯತೆಗಳೂ ಇಲ್ಲ.

ಯಾಕೆಂದರೆ ಹಿಂಸೆಗೆ ಪ್ರತಿಯಾಗಿ ಪ್ರತಿಹಿಂಸೆಯೂ ಅಸ್ತಿತ್ವಕ್ಕಾಗಿ ನಡೆವ ಹೋರಾಟದ ಭಾಗವೇ ಆಗಿದೆ. ಪ್ರಭುತ್ವ ಪ್ರಜೆಗಳ ಮೇಲೆ ನಡೆಸುವ ಹಿಂಸೆಯನ್ನು ವಿರೋಧಿಸಿ ದಮನಿತರು ಪ್ರತಿಹಿಂಸೆಗೆ ಇಳಿಯುವುದು ಪ್ರಭುತ್ವದ ಕಣ್ಣಲ್ಲಿ ಅಮಾನ್ಯವಾದರೂ, ದಮನಿತರಿಗೆ ಅಸ್ತಿತ್ವದ ಪ್ರಶ್ನೆಯಾಗಿದೆ. ಪೋಲೀಸ್ ಹಾಗೂ ಮಿಲಿಟರಿಯ ಬಲಪ್ರಯೋಗ ಅತಿಯಾದರೆ ತೊಂದರೆಗೊಳಗಾದವರು ತಿರುಗಿ ಬಿದ್ದು ಪ್ರತಿಹಿಂಸೆಗೆ ಇಳಿಯುವುದು ಸರಿಯೋ ತಪ್ಪೋ ಎನ್ನುವುದು ಚರ್ಚಾರ್ಹ ಸಂಗತಿ. ಅಂತಹ ಸಂದರ್ಭದಲ್ಲಿ ಗಾಂಧೀಜಿಯವರ ಅಹಿಂಸೆ ಕೆಲಸಕ್ಕೆ ಬರಲು ಸಾಧ್ಯವೇ? ದಲಿತರು ತಮ್ಮ ಮೇಲೆ ಈಗಲೂ ನಿತ್ಯ ನಡೆಯುತ್ತಿರುವ ಮೇಲ್ವರ್ಗದವರ ಹಿಂಸೆಯನ್ನು ಸಹಿಸಿಕೊಂಡು ಬದುಕಬೇಕಾ ಅಥವಾ ದಲಿತರು ಒಂದಾಗಿ ತಿರುಗೇಟು ಕೊಡಬೇಕಾ? ಎನ್ನುವುದೂ ಹಿಂಸೆ ಪ್ರತಿಹಿಂಸೆಯ ಕುರಿತ ವಾದಕ್ಕೆ ಆಕರವಾಗಿದೆ.

ಬಲಾಢ್ಯರು ಕೊಡುವ ಹಿಂಸೆಗೆ ವಿರುದ್ದವಾಗಿ ದಮನಿತರು ಮಾಡುವ ಪ್ರತಿಹಿಂಸೆಯ ಸಂಘರ್ಷದಲ್ಲಿ ಅಹಿಂಸೆ ಅನಾಥವಾಗಿರುತ್ತದೆ. ಆಗ ಗಾಂಧಿಯವರ ನೆನಪಾಗುತ್ತದೆ. ಎಲ್ಲಾ ಸಮಯದಲ್ಲೂ ಅಹಿಂಸೆ ಎನ್ನುವುದು ಎಷ್ಟು ಪ್ರಾಕ್ಟಿಕಲ್‌ ಅನ್ನುವುದು ಯೋಚಿಸುವ ಸಂಗತಿ. ಶತಶತಮಾನಗಳಿಂದ ಮನುವಾದಿಗಳಿಂದಾದ ಮಾನಸಿಕ ಹಾಗೂ ದೈಹಿಕ ಹಿಂಸೆಗೆ ಈಡಾದ ಅಗಣಿತ ಶೂದ್ರ ದಲಿತ ಸಮುದಾಯ ಇನ್ನೂ ಎಷ್ಟು ಶತಮಾನಗಳ ಕಾಲ ಅಪಮಾನದ ಬದುಕನ್ನು ಬಾಳಲು ಸಾಧ್ಯ? ಹಿಂಸೆಯ ವಿರುದ್ದ ಒಂದಾಗಿ ಪ್ರತಿಹಿಂಸೆಗೆ ಇಳಿಯಬೇಕು ಇಲ್ಲವೇ ಅಹಿಂಸೆಯನ್ನು ನಂಬಿ ಅವಮಾನ ಅನುಭವಿಸಬೇಕು. ಅಹಿಂಸಾತ್ಮಕ ಹೋರಾಟದಿಂದ ಹೊರಗಿನ ಶತ್ರುಗಳನ್ನು ಓಡಿಸಬಹುದಾದರೂ ದೇಶದೊಳಗಿನ ವರ್ಗ ವರ್ಣ ಜಾತಿ ಶ್ರೇಷ್ಟತೆಯಿಂದಾಗುವ ಹಿಂಸೆಯನ್ನು ಎದುರಿಸುವುದು ಹೇಗೆ ಎನ್ನುವುದೇ ಪ್ರಶ್ನೆ? ನಿಜವಾಗಿಯೂ ಅಹಿಂಸೆ ಎನ್ನುವುದು ಹಿಂಸೆಯ ವಿರುದ್ದ ಗೆಲುವನ್ನು ಸಾಧಿಸಲು ಸರಿಯಾದ ಮಾರ್ಗವೇ ಎನ್ನುವುದೇ ಸದ್ಯದ ಸವಾಲು.

ನಮ್ಮ ಪ್ರಜಾಪ್ರಭುತ್ವ ಇನ್ನೂ ಗಟ್ಟಿಯಾಗಿ ನಿಂತಿರುವುದಕ್ಕೆ ಪ್ರಮುಖ ಕಾರಣವೇ ಗಾಂಧೀಜಿ ಹಾಕಿಕೊಟ್ಟ ಅಹಿಂಸಾತ್ಮಕ ಚಳುವಳಿ ಎನ್ನುವುದೂ ನಿಜ. ಪ್ರಭುತ್ವದ ವಿರುದ್ದ ನಿತ್ಯ ಎಷ್ಟೊಂದು ಅಹಿಂಸಾತ್ಮಕ ಧರಣಿ ಸತ್ಯಾಗ್ರಹ ಚಳುವಳಿಗಳು ಈ ದೇಶದಲ್ಲಿ ನಡೆಯುತ್ತಲೇ ಇರುತ್ತವೆ. ಆಳುವ ವರ್ಗವನ್ನು ಮಣಿಸಿ ತಮ್ಮ ಆಶೋತ್ತರಗಳನ್ನು ಈಡೇರಿಸಿಕೊಳ್ಳಲು ಈ ಗಾಂಧಿಗಿರಿ ಹಲವಾರು ಸಂದರ್ಭದಲ್ಲಿ ಯಶಸ್ವಿಯೂ ಆಗಿದೆ. ಅಧಿಕಾರಿಶಾಹಿಗಳ ಭ್ರಷ್ಟಾಚಾರವನ್ನು ನಿಯಂತ್ರಿಸಲು, ಆಳುವವರ ದೌರ್ಜನ್ಯವನ್ನು ಎದುರಿಸಲು, ಮೇಲ್ವರ್ಗದವರ ಶೋಷಣೆಯನ್ನು ಪ್ರಶ್ನಿಸಲು ಈ ಸಂಘಟಿತ ಧರಣಿ ಸತ್ಯಾಗ್ರಹಗಳು ಪ್ರಯೋಜನಕ್ಕೆ ಬರುತ್ತವೆ. ಕೆಲವೊಂದು ಸಂದರ್ಭದಲ್ಲಿ ಜನಾಗ್ರಹಕ್ಕೆ ಮಣಿದು ಹಿಂಸಾಪೀಡಿತರಿಗೆ ಶಿಕ್ಷೆಯಾಗಿದ್ದೂ ಇದೆ. ಇದು ಪ್ರಜಾಪ್ರಭುತ್ವದ ಸೌಂದರ್ಯ ಹಾಗೂ ಸಂವಿಧಾನದ ತಾಕತ್ತು.

ಪ್ರಜಾಪ್ರಭುತ್ವ ಇರುವವರೆಗೂ ಗಾಂಧೀಜಿಯವರ ಅಹಿಂಸಾತ್ಮಕ ಹೋರಾಟಗಳು ದಮನಪೀಡಿತರಿಗೆ ಒಂದಿಷ್ಟು ಗೆಲುವನ್ನು ತಂದುಕೊಡಲು ಸಾಧ್ಯ. ಆದರೆ ಸರ್ವಾಧಿಕಾರ ಅಸ್ತಿತ್ವಕ್ಕೆ ಬಂದರೆ ಗಾಂಧಿಗಿರಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಸಂಕಟಕ್ಕೆ ಪ್ರಭುತ್ವ ಸ್ಪಂದಿಸಲೇ ಬೇಕಾಗುತ್ತದೆ. ಅದಕ್ಕೆ ಚುನಾವಣೆ ವ್ಯವಸ್ಥೆ ಹಾಗೂ ರಾಜಕೀಯ ಪಕ್ಷಗಳಿಗೆ ಸೋಲಿನ ಭಯಗಳೂ ಕಾರಣವಾಗಿವೆ. ಸರ್ವಾಧಿಕಾರ ಬಂದರೆ, ಚುನಾವಣೆಗಳೇ ಇಲ್ಲವಾದರೆ, ಜನರ ಓಟಿನ ಅಗತ್ಯವೇ ಬೇಕಿಲ್ಲವಾದರೆ ಜನತೆಯ ಹಕ್ಕಿನ ಹೋರಾಟಕ್ಕೆ ಬೆಲೆಯೇ ಇಲ್ಲವಾಗುತ್ತದೆ. ಶೂದ್ರರು ದಲಿತರು ರೈತರು ಕಾರ್ಮಿಕರು ಮಹಿಳೆಯರ ಸಂಕಟಕ್ಕೆ ಸ್ಪಂದಿಸುವ ಸರಕಾರವೇ ಇಲ್ಲವಾಗುತ್ತದೆ. ಪ್ರತಿರೋಧವನ್ನು ಪ್ರಭುತ್ವ ಹಿಂಸಾತ್ಮಕವಾಗಿ ಹತ್ತಿಕ್ಕುತ್ತದೆ.

ಈಗ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಅಳಿಸಿ ಹಿಂದುತ್ವವಾದಿ ಸರ್ವಾಧಿಕಾರವನ್ನು ಜಾರಿಗೆ ತರುವ ಪ್ರಯತ್ನ ಮನುವಾದಿ ಸಂಘ ಪರಿವಾರದಿಂದ ತೀವ್ರಗೊಂಡಿದೆ. ಸರ್ವರಿಗೂ ಸಮಾನತೆಯನ್ನು ಕೊಟ್ಟ ಸಂವಿಧಾನವನ್ನು ಬದಲಾಯಿಸುವ ಮಾತುಗಳು ಸಂಘಿಗಳ ಬಾಯಲ್ಲಿ ಪ್ರತಿಧ್ವನಿಸುತ್ತಿದೆ. ಸಂವಿಧಾನವನ್ನು ಸಾರ್ವಜನಿಕವಾಗಿ ಸುಡುವ ದುಷ್ಟ ಯತ್ನಗಳು ನಡೆಯುತ್ತಿವೆ. ಹಿಂದುತ್ವಕ್ಕಾಗಿ ಹಿಂಸೆಯನ್ನು ಸಮರ್ಥಿಸಿದ ಸಾವರ್ಕರ್ ಗೋಡ್ಸೆಯನ್ನು ವೈಭವೀಕರಿಸಲಾಗುತ್ತಿದೆ, ಇದಕ್ಕೆ ಸಂಘೀ ಸರಕಾರದ ಬೆಂಬಲವೂ ವ್ಯಕ್ತವಾಗುತ್ತಿದೆ. ಕಾನೂನುಗಳನ್ನು ಬದಲಾಯಿಸಲಾಗುತ್ತಿದೆ, ಸಮಾಜವಾದಿ, ಜಾತ್ಯತೀತ, ಧರ್ಮ ನಿರಪೇಕ್ಷ ಪದಗಳನ್ನು ಸಂವಿಧಾನದ ಪೀಠಿಕೆಯಿಂದಲೇ ತೆಗೆದುಹಾಕಲಾಗುತ್ತದೆ. ಇವೆಲ್ಲವೂ ಮನುವಾದಿ ಸರ್ವಾಧಿಕಾರದ ಸ್ಥಾಪನೆಗೆ ಮುನ್ನುಡಿಯಾಗಿವೆ.

ಪರಕೀಯರಾದ ಬ್ರಿಟೀಷರ ವಿರುದ್ದ ಅಹಿಂಸಾತ್ಮಕ ಜನಾಂದೋಲನ ಕಟ್ಟಿ ಗೆಲ್ಲುವುದು ಗಾಂಧಿಯವರಿಗೆ ಸಾಧ್ಯವಾಯಿತು. ಆದರೆ ಜನರ ಭಾವತೀವ್ರತೆಯನ್ನೇ ಬಂಡವಾಳ ಮಾಡಿಕೊಂಡು, ಹುಸಿ ರಾಷ್ಟ್ರೀಯತೆಯನ್ನು ಜರ್ಮನಿಯ ಹಿಟ್ಲರ್ ನಂತೆ, ಇಟಲಿಯ ಮುಸಲೋನಿಯಂತೆ ಸರ್ವಾಧಿಕಾರವನ್ನು ಜಾರಿ ಮಾಡುವ ಮನುವಾದಿ ಸಂಘಪರಿವಾರದ ಹುನ್ನಾರದ ವಿರುದ್ದ ಗಾಂಧಿಗಿರಿ ಹೇಗೆ ಯಶಸ್ಸು ಪಡೆಯಲು ಸಾಧ್ಯ ಎನ್ನುವುದೇ ಪ್ರಶ್ನೆಯಾಗಿದೆ.

ಗಾಂಧಿ ಜಯಂತಿಯಂದು ಗಾಂಧೀಜಿಯವರನ್ನು ನಾಮಕಾವಸ್ತಾ ನೆನಪಿಸಿಕೊಂಡು ಮರೆಯುವ ಬದಲು, ಮುಂಬರುವ ಸರ್ವಾಧಿಕಾರಿ ಸರಕಾರದ ವಿರುದ್ದ ಹೇಗೆ ಸಂಘಟಿತ ಅಹಿಂಸಾತ್ಮಕ ಜನಾಂದೋಲನವನ್ನು ಕಟ್ಟಿ ಮುನ್ನಡೆಸಬೇಕು ಎನ್ನುವುದರ ಕುರಿತು ಗಾಂಧಿವಾದಿಗಳು, ಸಂವಿಧಾನದ ಬೆಂಬಲಿಗರು, ಪ್ರಜಾಪ್ರಭುತ್ವದ ಪ್ರತಿಪಾದಕರು, ಪ್ರಗತಿಪರರು, ರೈತ ಕಾರ್ಮಿಕ ಮಹಿಳಾ ಸಂಘ ಸಂಸ್ಥೆಗಳು ಯೋಚಿಸಿ ಕಾರ್ಯತತ್ಪರವಾಗಬೇಕಿದೆ. ದುರ್ಬಲಗೊಳಿಸಲಾಗುತ್ತಿರುವ ಸಂವಿಧಾನವನ್ನು ಗಾಂಧಿಜಿಯವರ ಅಹಿಂಸಾತ್ಮಕ ಮಾರ್ಗದ ಮೂಲಕ ಭದ್ರಗೊಳಿಸಬೇಕಿದೆ. ಸಂವಿಧಾನ ವಿರೋಧಿ ಹಿಂದುತ್ವವಾದಿಗಳ ಷಡ್ಯಂತ್ರವನ್ನು ಸೋಲಿಸಬೇಕಿದೆ. ಇದಕ್ಕೆ ಗಾಂಧೀಜಿಯವರ ತತ್ವಾದರ್ಶಗಳು, ಅಹಿಂಸಾ ಸತ್ಯಾಗ್ರಹಗಳು ಇಂದಿನ ತುರ್ತು ಅಗತ್ಯವಾಗಿವೆ. ಹಿಂಸಾವಾದಿ ಗೋಡ್ಸೆವಾದವನ್ನು ಅಹಿಂಸಾವಾದಿ ಗಾಂಧಿಗಿರಿಯಿಂದ ಎದುರಿಸಬೇಕಿದೆ. ಇದನ್ನು ಜನಾಂದೋಲನಗಳಿಂದ, ಜನರಲ್ಲಿ ಜಾಗೃತಿ ಮೂಡಿಸುವುದರಿಂದ, ಚುನಾವಣಾ ಕಣದಲ್ಲಿ ಹಿಂದುತ್ವವಾದಿ ಪಕ್ಷವನ್ನು ಸೋಲಿಸುವ ಮೂಲಕ ಸಾಧಿಸಬಹುದಾಗಿದೆ. ಹುಸಿ ರಾಷ್ಟ್ರೀಯವಾದಿಗಳು ಹಾಗೂ ನಕಲಿ ದೇಶಭಕ್ತರ ಮುಖವಾಡವನ್ನು ಕಳಚಬೇಕಿದೆ. ಮನುವಾದಿ ಹಿಂಸೆಯ ವಿರುದ್ಧ ಗಾಂಧೀಜಿಯವರ ಅಹಿಂಸೆ ಗೆಲ್ಲಬೇಕಿದೆ.

ಶಶಿಕಾಂತ ಯಡಹಳ್ಳಿ

ಇದನ್ನೂ ಓದಿ-ಗಾಂಧಿ ಮತ್ತು ಸನಾತನ ಧರ್ಮ:

Related Articles

ಇತ್ತೀಚಿನ ಸುದ್ದಿಗಳು