Thursday, June 20, 2024

ಸತ್ಯ | ನ್ಯಾಯ |ಧರ್ಮ

ಕೋಮು ದ್ವೇಷ ಹರಡದಂತೆ ಮೆಟಾ-ಗೂಗಲ್‌ಗೆ INDIA ಪತ್ರ

ಬೆಂಗಳೂರು,ಅಕ್ಟೋಬರ್.‌13: ಇಂಡಿಯಾ ಮೈತ್ರಿಕೂಟವು ಸಾಮಾಜಿಕ ಜಾಲತಾಣಗಳ ಸಂಸ್ಥೆಗಳಾದ ಮೆಟಾ ಮತ್ತು ಆಲ್ಫಾಬೆಟ್‌ಗೆ ಭಾರತದಲ್ಲಿ ಸೌಹಾರ್ದತೆಯನ್ನು ಕದಡುವುದರಲ್ಲಿರುವ ಇವುಗಳ ಪಾತ್ರದ ಬಗ್ಗೆ ಆಕ್ಷೇಪವೆತ್ತಿ ಪತ್ರವನ್ನು ಬರೆದಿದೆ.

ಮೆಟಾದ ಸಿಇಒ ಮಾರ್ಕ್ ಜುಕರ್‌ಬರ್ಗ್ ಮತ್ತು ಆಲ್ಫಾಬೆಟ್ ಸಿಇಒ ಸುಂದರ್ ಪಿಚೈ ಅವರಿಗೆ ಬುಧವಾರ ಪ್ರತ್ಯೇಕವಾಗಿ ಪತ್ರಗಳನ್ನು ಬರೆಯಲಾಗಿದೆ. Facebook ಮತ್ತು Instagram – Metaದ ಒಡೆತನದಲ್ಲಿದ್ದರೆ, ಆಲ್ಫಾಬೆಟ್ Google ಮತ್ತು YouTube ನ ಮೂಲ ಕಂಪನಿಯಾಗಿದೆ.

ಅಕ್ಟೋಬರ್ 8ರಂದು ದಿ ವಾಷಿಂಗ್ಟನ್ ಪೋಸ್ಟ್ ತನ್ನ ಸಂಪಾದಕೀಯಲ್ಲಿ  ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರದ ಭಾರತದಲ್ಲಿ ಸಾಮಾಜಿಕ ಮಾಧ್ಯಮಗಳು ದ್ವೇಷ ಹರಡುವ ವೇದಿಕೆಗಳಾಗಿವೆ (conveyor belts for hate) ಎಂದು ಆರೋಪಿಸಿತ್ತು. ಇದರ ಬೆನ್ನಲ್ಲೇ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಅವರು ಎರಡು ಕಂಪನಿಗಳಿಗೆ ಪತ್ರಗಳನ್ನು ಬರೆದಿದ್ದಾರೆ.

ಭಾರತದಲ್ಲಿ ಕೋಮು ದ್ವೇಷವನ್ನು ಪ್ರಚೋದಿಸಿ ತಪ್ಪಿತಸ್ಥವಾಗಿದೆ ಎಂದು ಮೆಟಾಗೆ ಬುಧವಾರ ಬರೆದ ಪತ್ರದಲ್ಲಿ ಆರೋಪಿಸಲಾಗಿದೆ. “ಇದಲ್ಲದೆ, ನಿಮ್ಮ ಜಾಲತಾಣಗಳಲ್ಲಿ ಆಡಳಿತ ಪಕ್ಷದ ವಿಚಾರವನ್ನು ಪ್ರಚಾರ ಮಾಡುತ್ತಾ ವಿರೋಧ ಪಕ್ಷದ ನಾಯಕರ ವಿಚಾರಗಳನ್ನು ಅಲ್ಗಾರಿದಮಿಕ್ ಆಗಿ ಮಿತಗೊಳಿಸುವ (algorithmic moderation) ಮತ್ತು ನಿಗ್ರಹಿಸುವ ಬಗ್ಗೆ ನಮ್ಮಲ್ಲಿ ಡೇಟಾವಿದೆ” ಎಂದು INDIA ಆರೋಪಿಸಿದೆ.

“ಖಾಸಗಿ ವಿದೇಶಿ ಕಂಪನಿಯೊಂದು ರಾಜಕೀಯ ಸಂರಚನೆಯಲ್ಲಿ ಅಸ್ಪಷ್ಟ ಪಕ್ಷಪಾತ ನಿಲಯವನ್ನು ಹೊಂದಿರುವುದು ಮತ್ತು ಭಾರತದ ಪ್ರಜಾಪ್ರಭುತ್ವದಲ್ಲಿ ಮೂಗುತೂರಿಸುವುದನ್ನು INDIA ಮೈತ್ರಿಕೂಟ ಲಘುವಾಗಿ ಪರಿಗಣಿಸುವುದಿಲ್ಲ,” ಟೀಕಿಸಿದೆ.

2024 ರ ಲೋಕಸಭಾ ಚುನಾವಣೆಯಲ್ಲಿ ಭಾರತದಲ್ಲಿ ಮೆಟಾದ ಚಟುವಟಿಕೆಗಳನ್ನು ತಟಸ್ಥಗೊಳಿಸಲು ಪತ್ರದಲ್ಲಿ ಜುಕರ್‌ಬರ್ಗ್ ಅವರನ್ನು INDIA ಒತ್ತಾಯಿಸಿದೆ.

ಸೆಪ್ಟೆಂಬರ್ 26 ರಂದು ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ಲೇಖನ “Under India’s pressure, Facebook let propaganda and hate speech thrive ” ವನ್ನು ಸಹ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಸುಮಾರು ಮೂರು ವರ್ಷಗಳ ಹಿಂದೆ, ಕಾಶ್ಮೀರದಲ್ಲಿ ಭದ್ರತಾ ಪಡೆಗಳ ದಮನವನ್ನು ಹೊಗಳಲು ಮತ್ತು ಕಾಶ್ಮೀರಿ ಪತ್ರಕರ್ತರ ಮೇಲೆ ಪ್ರತ್ಯೇಕತಾವಾದ ಮತ್ತು ದೇಶದ್ರೋಹದ ಆರೋಪ ಮಾಡಲು ನೂರಾರು ನಕಲಿ ಖಾತೆಗಳನ್ನು ಬಳಸಿರುವ ಬೃಹತ್ ಸೋಷಿಯಲ್‌ ಮಿಡಿಯಾ ಆಪರೇಷನ್ ಹಿಂದೆ ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಇದೆ ಎಂದು ಫೇಸ್‌ಬುಕ್‌ನ ತಂಡವೊಂದು ಆರೋಪಿಸಿರುವ ಬಗ್ಗೆ ಈ  ಲೇಖನದಲ್ಲಿ ವರದಿ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಹೊಸದಿಲ್ಲಿಯಲ್ಲಿರುವ ಫೇಸ್‌ಬುಕ್ ಅಧಿಕಾರಿಗಳು ಭಾರತ ಸರ್ಕಾರದ ವಿರುದ್ಧ ಹೋಗಲು ಅಸಾಧ್ಯವೆಂದು ಈ ಕಾರ್ಯಾಚರಣೆಯಲ್ಲಿ ಬಳಸಿದ ಫೇಸ್‌ಬುಕ್‌ ಪೇಜ್‌ಗಳನ್ನು ಡಿಲಿಟ್‌ ಮಾಡಲು ಹಿಂಜರಿದರು ಎಂದು ಲೇಖನದಲ್ಲಿ ಹೇಳಲಾಗಿದೆ.

ಪಿಚೈ ಅವರಿಗೆ ಬರೆದ ಪತ್ರದಲ್ಲಿ He live-streamed his attacks on Indian Muslims. YouTube gave him an award ಎಂಬ ದಿ ವಾಷಿಂಗ್ಟನ್ ಪೋಸ್ಟ್‌ನ ಲೇಖನವನ್ನು ಉಲ್ಲೇಖಿಸಲಾಗಿದೆ.

ಈ ಲೇಖನದಲ್ಲಿ “emerging phenomenon of cow vigilante streamers” ಬಗ್ಗೆ ಹೇಳುತ್ತಾ ಬಜರಂಗ ದಳದ ಸದಸ್ಯ ಮತ್ತು ಡಬಲ್ ಮರ್ಡರ್ ಆರೋಪಿ ಮೋನು ಮಾನೇಸರ್‌ ಬಗ್ಗೆ ಬರೆಯಲಾಗಿದೆ. ಕಳೆದ ಅಕ್ಟೋಬರ್‌ನಲ್ಲಿ, 10,000 ಸಬ್‌ಸ್ಕ್ರೈಬರ್‌ ಗಳಿಸಿದಕ್ಕಾಗಿ ಮೋನು ಮನೇಸರ್‌ಗೆ ಯೂಟ್ಯೂಬ್‌ ‘ಸಿಲ್ವರ್ ಕ್ರಿಯೇಟರ್’ ಪ್ರಶಸ್ತಿ ನೀಡಿತ್ತು. ಈತ ಹಸುವಿನ ಪಕ್ಕದಲ್ಲಿ ಅದನ್ನು ಹಿಡಿದುಕೊಂಡು ಪೋಸ್ ನೀಡಿದ್ದ ಎಂದು ಲೇಖನದಲ್ಲಿ ತಿಳಿಸಲಾಗಿದೆ.

ಈ ಲೇಖನವು “ಬಿಜೆಪಿ ಸದಸ್ಯರು ಮತ್ತು ಬೆಂಬಲಿಗರು ಯೂಟ್ಯೂಬ್  ಬಳಸಿಕೊಂಡು ಹೇಗೆ ಇಂತಹ ನೀಚ, ಕೋಮು ದ್ವೇಷದ ಪ್ರಚಾರವನ್ನು ಮಾಡುತ್ತಾರೆ” ಎಂಬುದರ ಚಿತ್ರಣವನ್ನು ನೀಡುತ್ತದೆ ಎಂದು INDIA ಪತ್ರದಲ್ಲಿ ತಿಳಿಸಿದೆ. ಆದರೂ ಮೆಟಾ ಮತ್ತು ಆಲ್ಫಾಬೆಟ್ ಈ ದೇಶದ ಮಹಾತ್ಮ ಬಯಸಿದ ಸಾಮರಸ್ಯದ ಭಾರತವನ್ನು ಕಟ್ಟುತ್ತವೆ ಎಂದು ಪತ್ರದಲ್ಲಿ ವಿಶ್ವಾಸ ವ್ಯಕ್ತಪಡಿಸಲಾಗಿದೆ.  

Related Articles

ಇತ್ತೀಚಿನ ಸುದ್ದಿಗಳು