Thursday, June 13, 2024

ಸತ್ಯ | ನ್ಯಾಯ |ಧರ್ಮ

ಯಡಿಯೂರಪ್ಪನವರಿಗೆ Z+ ಸೆಕ್ಯುರಿಟಿ: ಭದ್ರತೆಯ ಹೆಸರಿನಲ್ಲಿ ಅವರ ಚಟುವಟಿಕೆಗಳ ಮೇಲೆ ಕಣ್ಣಿಡುತ್ತಿರುವ ಕೇಂದ್ರ?

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಕೇಂದ್ರ ಗೃಹ ಮಂತ್ರಾಲಯವು ಇದ್ದಕ್ಕಿದ್ದಂತೆ Z+ ಸೆಕ್ಯುರಿಟಿ ನೀಡಿ ಆದೇಶ ಹೊರಡಿಸಿದೆ. ಕೇಂದ್ರ ಗುಪ್ತಚರ ಇಲಾಖೆ (IB) ಅವರ ಭದ್ರತೆಗೆ ಬೆದರಿಕೆಯಿರುವುದಾಗಿ ತಿಳಿಸಿದ ಕಾರಣ ಹೈ ಸೆಕ್ಯುರಿಟಿ ಒದಗಿಸಲಾಗಿದೆ ಎಂದು MHA ಹೇಳಿದೆ.

ಯಡಿಯೂರಪ್ಪ ಅವರ ಭದ್ರತೆಗೆ ಒಟ್ಟು 33 ಝಡ್ ಕೆಟಗರಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಹೆಚ್ಚುವರಿಯಾಗಿ 10 ಶಸ್ತ್ರಸಜ್ಜಿತ ಸ್ಟ್ಯಾಟಿಕ್ ಗಾರ್ಡ್‍ಗಳನ್ನು ಅವರ ನಿವಾಸದಲ್ಲಿ ಇರಿಸಲಾಗುವುದು, ಅವರಿಗೆ ಪೂರಕವಾಗಿ ಆರು ವೈಯಕ್ತಿಕ ಭದ್ರತಾ ಅಧಿಕಾರಿಗಳು ದಿನದ 24 ಗಂಟೆ ಕಾಯುತ್ತಿರುತ್ತಾರೆ.

ಪ್ರಸ್ತುತ ಇಂತಹದ್ದೊಂದು ಭದ್ರತಾ ವ್ಯವಸ್ಥೆಯನ್ನು ಹೊಂದಿರುವ ಕರ್ನಾಟಕದ ಏಕೈಕ ರಾಜಕಾರಣಿ ಯಡಿಯೂರಪ್ಪ ಎನ್ನಲಾಗುತ್ತಿದೆ. ಆದರೆ ರಾಜ್ಯ ಬಿಜೆಪಿಯಲ್ಲಿನ ಇತ್ತೀಚಿನ ಬೆಳವಣಿಗೆಗಳು ಬೇರೆಯದೇ ಕತೆಯನ್ನು ಹೇಳುತ್ತಿವೆ. ಯಡಿಯೂರಪ್ಪನವರ ವಾಹನ ಚಾಲನೆಗೂ ಕೇಂದ್ರ ನಿಯೋಜಿತ ಡ್ರೈವರ್‌ ಇರಿಸಿರುವುದು ಆ ಅನುಮಾನಗಳು ಇನ್ನಷ್ಟು ಬಲವಾಗುವಂತೆ ಮಾಡುತ್ತಿವೆ.

ರಾಜ್ಯದಲ್ಲಿ ಬಿಜೆಪಿ ಅಧ್ಯಕರ ಮತ್ತು ವಿರೋಧ ಪಕ್ಷದ ಅಧ್ಯಕ್ಷನ ಸ್ಥಾನ ಖಾಲಿಯಿದ್ದು ಅದರ ಭರ್ತಿಗಾಗಿ ಬಿಜೆಪಿಯಲ್ಲಿ ದೆಹಲಿ ಮತ್ತು ಬೆಂಗಳೂರನ್ನು ಕೇಂದ್ರವಾಗಿರಿಸಿಕೊಂಡು ಹಲವು ಚಟುವಟಿಕೆಗಳು ನಡೆಯುತ್ತಿವೆ. ಇವೆರಡು ಸ್ಥಾನಗಳಿಗೆ ತಕ್ಕ ಅಭ್ಯರ್ಥಿಗಳನ್ನು ಆರಿಸಲು ಬಿಜೆಪಿ ಕಳೆದ ಜೂನ್‌ ತಿಂಗಳಿನಿಂದ ಪರದಾಡುತ್ತಿದೆ.

ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪನವರ ಬಣದಲ್ಲಿದ್ದ ಶೋಭಾ ಕರಂದ್ಲಾಜೆ ಸಂತೋಷ್‌ ಬಣಕ್ಕೆ ಹೋಗಿದ್ದಾರೆ ಎನ್ನಲಾಗುತ್ತಿದ್ದು, ಒಕ್ಕಲಿಗ ಕೋಟಾದಡಿ ಅವರನ್ನು ಅಥವಾ ಅಶ್ವಥನಾರಾಉಣ್‌ ಅವರನ್ನು ಅಧ್ಯಕ್ಷರನ್ನಾಗಿ ಆರಿಸಲು ಹೈಕಮಾಂಡ್‌ ಯೋಜಿಸುತ್ತಿದೆ. ಇವರಿಬ್ಬರೂ ಸಂತೋಷ ಕೂಟಕ್ಕೆ ಸೇರಿದವರಾಗಿರುವ ಕಾರಣ ಯಡಿಯೂರಪ್ಪ ಬಣ ಲಿಂಗಾಯತರೊಂದಿಗೆ ಸೇರಿ ಬಂಡಾಯ ಏಳುವ ಸಾಧ್ಯತೆ ಪಕ್ಷವನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

ಇತ್ತ ವಿರೀಧ ಪಕ್ಷದ ನಾಯಕನ ಸ್ಥಾನಕ್ಕಾದರೂ ತನ್ನ ಮಗ ವಿಜಯೇಂದ್ರ ಅವರನ್ನು ತರಬೇಕು ಎನ್ನುವುದು ಯಡಿಯೂರಪ್ಪ ಅವರ ಪ್ರಯತ್ನವಾಗಿದೆ. ಆದರೆ ಆ ಪ್ರಯತ್ನಕ್ಕೆ ಯತ್ನಾಳ್‌ ಅಡ್ಡಿಯಾಗುವ ಸಾಧ್ಯೆಯನ್ನೂ ಅಲ್ಲಗಳೆಯುವಂತಿಲ್ಲ. ಈಗಾಗಲೇ ಮಗನ ಭವಿಷ್ಯಕ್ಕಾಗಿ ತನ್ನ ಶಾಸಕ ಸ್ಥಾನವನ್ನೂ ಬಿಟ್ಟುಕೊಟ್ಟಿರುವ ಯಡಿಯೂರಪ್ಪ ಇನ್ನಷ್ಟು ಶರಣಾಗುವುದು ಅನುಮಾನ. ಹೀಗಾಗಿಯೇ ಕೇಂದ್ರ ಬಿಜೆಪಿ ಅವರ ಮೇಲೆ ಕ‍ಣ್ಣಿಡಲು ಈ ವ್ಯವಸ್ಥೆ ಮಾಡಲಾಗಿದೆಯೆನ್ನುವುದು ರಾಜಕೀಯ ವಲಯದ ಅಭಿಪ್ರಾಯ.

ಯಡಿಯೂರಪ್ಪ ಬಣವನ್ನು ಮೂಲೆಗುಂಪು ಮಾಡುವ ಸಲುವಾಗಿ ಕಳೆದ ವಿಧಾನಸಭಾ ಚುನಾವಣೆಯಿಂದಲೂ ಲಿಂಗಾಯತರಿಂದ ಅಂತರ ಕಾಯ್ದುಕೊಂಡು ಒಕ್ಕಲಿಗರ ಓಲೈಕೆಯಲ್ಲಿ ತೊಡಗಿರುವ ಸಂತೋಷ್‌ ಬಣ ಕಳೆದ ಚುನಾವಣೆಯಲ್ಲಿ ಹೀನಾಯವಾಗಿ ಮುಗ್ಗರಿಸಿತ್ತು. ಪ್ರತಾಪಸಿಂಹರಂತಹ ವಿಪರೀತ ಮಾತಿನ ನಾಯಕರನ್ನು ನಂಬಿಕೊಂಡು ಬಿಜೆಪಿ ಬ್ರಾಹ್ಮಣ ನೇತ್ರತ್ವದ ಗುಂಪು ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗರನ್ನು ಸೆಳೆಯಲು ಹೊರಟಿದೆ. ಆದರೆ ಒಕ್ಕಲಿಗ ಮತವನ್ನು ಸೆಳೆಯಲು ಹಿಂದುತ್ವಕ್ಕಿಂತಲೂ ಹೆಚ್ಚು ಒಕ್ಕಲಿಗತನ ಬೇಕು. ಅದು ಪ್ರತಾಪಸಿಂಹ ಅವರಲ್ಲಿ ಇಲ್ಲ. ಅದನ್ನು ಶೋಭಾ ಕರಂದ್ಲಾಜೆ ಅಥವಾ ಅಶ್ವತ್ಥ ನಾರಾಯಣ ಅವರ ಮೂಲಕ ತುಂಬಿಕೊಳ್ಳಲು ಹೊರಟಿರುವ ಬಿಜೆಪಿ ಆ ಪ್ರಯತ್ನದಲ್ಲಿಯೂ ಮುಗ್ಗರಿಸುವ ಸಾಧ್ಯತೆಯೇ ಹೆಚ್ಚು ಕಾಣುತ್ತಿದೆ. ಯಾಕೆಂದರೆ ಅವರಿಬ್ಬರಲ್ಲಿಯೂ ಒಕ್ಕಲಿಗರು ಇದುವರೆಗೆ ತ್ಮ ಸಮುದಾಯದ ನಾಯಕತ್ವವನ್ನು ಕಂಡಿಲ್ಲ.

ಅನಂತಕುಮಾರ್‌ ಅವರ ಕಾಲದಿಂದಲೂ ಲಿಂಗಾಯತ ವರ್ಸಸ್‌ ಬ್ರಾಹ್ಮಣ ಯುದ್ಧ ಚಾಲ್ತಿಯಲ್ಲಿದೆ. ಆದರೆ ಕರ್ನಾಟಕದಲ್ಲಿ ಹಿಂದುತ್ವ ರಾಜಕಾರಣ ಬೇರು ಬಿಡುವುದರೊಂದಿಗೆ ಬ್ರಾಹ್ಮಣ ಗುಂಪು ಮೇಲುಗೈ ಸಾಧಿಸಿದಂತೆ ಕಾಣುತ್ತದೆಯಾದರೂ, ಮೂಲದಲ್ಲಿ ಇಲ್ಲಿನ ಪ್ರಬಲ ಜಾತಿಗಳು ಆಂತರ್ಯದಲ್ಲಿ ಧರ್ಮಕ್ಕಿಂತಲೂ ಹೆಚ್ಚು ಜಾತಿಗೆ ಪ್ರಾಮುಖ್ಯತೆ ನೀಡುತ್ತಾರೆನ್ನುವುದು ನಿತ್ಯ ಸತ್ಯ.

ಇದೆಲ್ಲದರ ನಡುವೆ ಬಿಜೆಪಿಯ ಮೇಲೆ ಯಡಿಯೂರಪ್ಪನವರ ಕುಟುಂಬಕ್ಕೆ ಇರುವ ಹಿಡಿತವನ್ನು ಬಿಡಿಸಿಕೊಳ್ಳಲು ಬಿಜೆಪಿ ಅಥವಾ ಅದರ ಬ್ರಾಹ್ಮಣರ ಗುಂಪು ಬಹಳವಾಗಿ ಪ್ರಯತ್ನಿಸುತ್ತಿದೆ. ಸದಾನಂದ ಗೌಡ, ಈಶ್ವರಪ್ಪ ಮೊದಲಾದ ಹಿರಿಯ ಬಿಜೆಪಿ ನಾಯಕರನ್ನು ಮೂಲೆಗುಂಪು ಮಾಡುವಲ್ಲಿ ಸಫಲರಾಗಿರುವ ಅವರು ಯಡಿಯೂರಪ್ಪ ವಿಷಯದಲ್ಲಿ ಪದೇ ಪದೇ ಎಡವುತ್ತಿದ್ದಾರೆ. ಈ ಬಾರಿ ಯಡಿಯೂರಪ್ಪ ಕುಟುಂಬದ ಮೇಲೆ ಇನ್ನೊಮ್ಮೆ ಹಿಡಿತ ಬಿಗಿಮಾಡಲು ಹೈಕಮಾಂಡ್‌ ಪ್ರಯತ್ನಿಸುತ್ತಿರುವಂತಿದೆ. ಲೋಕಸಭಾ ಚುನಾವಣೆ ಹೊಸ್ತಿಲಿನಲ್ಲಿ ಇದು ಅವರಿಗೆ ಗೆಲುವನ್ನು ತಂದುಕೊಡುತ್ತದೋ ಎನ್ನುವುದನ್ನು ತಿಳಿಯಲು ಕೇವಲ ಇನ್ನೊಂದು ಏಳೆಂಟು ತಿಂಗಳಷ್ಟೇ ಕಾಯಬೇಕಿದೆ.

Related Articles

ಇತ್ತೀಚಿನ ಸುದ್ದಿಗಳು