Sunday, June 16, 2024

ಸತ್ಯ | ನ್ಯಾಯ |ಧರ್ಮ

NCERT ಪಠ್ಯಪುಸ್ತಕಗಳಲ್ಲಿ ಬಿಜೆಪಿಯ ರಾಜಕೀಯದ ಆಟಗಳು!

ಪಠ್ಯಪುಸ್ತಕಗಳಲ್ಲಿ ಏನನ್ನು ಬೋಧಿಸಬೇಕು ಎಂಬುದನ್ನು ಆಯಾಯ ಕಾಲಘಟ್ಟದಲ್ಲಿ ಅಧಿಕಾರದಲ್ಲಿರುವ ಸರ್ಕಾರಗಳು ನಿರ್ಧರಸುತ್ತವೆ. ಬಿಜೆಪಿಯದ್ದು ಇದರಲ್ಲಿ ಎತ್ತಿದ ಕೈ. 2000ರಲ್ಲಿ NCERT ಪಠ್ಯಗಳಲ್ಲಿ ವ್ಯಾಪಕ ಕೇಸರೀಕರಣದ ಆರೋಪಗಳು ಕೇಳಿ ಬಂದ ನಂತರ, 2005ರಲ್ಲಿ ತರಲಾದ ಪಠ್ಯಪುಸ್ತಕಗಳಲ್ಲೂ ಬಿಜೆಪಿ ತನ್ನ ಕೈಯಾಡಿಸಿತು. ಕೋವಿಡ್-‌19 ಕಾರಣವನ್ನು ನೀಡಿ ಗಾಂಧಿ ಹತ್ಯೆಯಲ್ಲಿ ಹಿಂದುತ್ವವಾದಿಗಳ ಕೈವಾಡವನ್ನು ತಿಳಿಸುವ ಪಠ್ಯವನ್ನು ಬಿಜೆಪಿ ಸರ್ಕಾರ ಕೈ ಬಿಟ್ಟಿತ್ತು. ಇದೀಗ, NCF 2023ರನ್ನು ಜಾರಿಗೆ ತರಲು ಹೊರಟಿದ್ದು, ಇದರಲ್ಲಿ ತನ್ನ ಹಳೆ-ಹೊಸ ಅಜೆಂಡಾಗಳನ್ನು ತೂರಿಸಿದೆ. 

ಬೆಂಗಳೂರು,ಅಕ್ಟೋಬರ್.‌30: NCERT ಇದ್ದಕ್ಕಿದ್ದಂತೆ ಶಾಲೆಯ ಪಠ್ಯ ಪುಸ್ತಕಗಳಿಂದ ಇಂಡಿಯಾ ಎಂಬ ಹೆಸರನ್ನು ಕಿತ್ತು ಹಾಕಿ, ಭಾರತ್ ಎಂದು ಬದಲಾಯಿಸಲು ಶಿಫಾರಸ್ಸು ಮಾಡಿದ್ದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

ಡಿಸೆಂಬರ್ 28, 2021 ರಂದು ನ್ಯಾಷನಲ್ ಕೌನ್ಸಿಲ್ ಆಫ್ ಎಜುಕೇಶನಲ್ ರಿಸರ್ಚ್ ಅಂಡ್ ಟ್ರೈನಿಂಗ್ (NCERT) ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳ ಅಭಿವೃದ್ದಿಗಾಗಿ ತಜ್ಞರ 25 ಸಮಿತಿಗಳ ರಚನೆಯನ್ನು ಸದ್ದಿಲ್ಲದೆ ಘೋಷಿಸಿತು. ಆರಂಭ ಆದದ್ದು ಎಲ್ಲವೂ ಇಲ್ಲಿಂದಲೇ!

ನೋಡಿ: National Curriculum Framework For Social Education 2023

ಇಂತಹ ಒಂದು ಸಮಿತಿ Education in social science ಯ ನೇತೃತ್ವ ವಹಿಸಿದ್ದು ಸಿ ಐ ಐಸಾಕ್ ಎಂಬ ಕೇರಳ ಮೂಲದ ಇತಿಹಾಸ ಪ್ರಾಧ್ಯಾಪಕರು. ಸಿ ಐ ಐಸಾಕ್ ಆರ್.ಎಸ್.ಎಸ್ ಹಾಗೂ ಅದರ ಅಂಗ ಸಂಸ್ಥೆಗಳ ಜೊತೆಗೆ ಒಡನಾಟವನ್ನು ಇಟ್ಟುಕೊಂಡವರು. ಇಡೀ ಕಮಿಟಿಯಲ್ಲಿ ಇರುವ ಏಳು ಜನ ಶಿಕ್ಷಣ ತಜ್ಞರೂ ಆರ್. ಎಸ್. ಎಸ್ ಜೊತೆಗೆ ನಂಟನ್ನು ಹೊಂದಿದ್ದವರೇ ಆಗಿದ್ದಾರೆ.

ಈ ಸಮಾಜ ವಿಜ್ಞಾನ ಅನುಸರೊಸಬೇಕಾದ ಕಾರ್ಯಸೂಚಿಯನ್ನು ತಯಾರಿಸಿ 2021ರ ಸಪ್ಟೆಂಬರ್‌ನಲ್ಲಿ ಇಸ್ರೋವಿನ ಮಾಜೀ ಅಧ್ಯಕ್ಷ ಕಸ್ತೂರಿರಂಗನ್‌ ನೇತೃತ್ವದ ಹನ್ನೆರಡು ಮಂದಿ ಸದಸ್ಯರ ಸಮಿತಿಗೆ ಸಲ್ಲಿಸಿದೆ. ಆದರೆ ಈ ಸಿ ಐ ಐಸಾಕ್‌ ಸಮಿತಿಯ ಈ ಶಿಫಾರಸ್ಸುಗಳು ಇನ್ನೂ ಸಾರ್ವಜನಿಕರಿಗೆ ಲಭ್ಯವಾಗಿಲ್ಲ, ಮೊದಲ ಬಾರಿಗೆ Education in social scienceನಂತಹ ಉಪಸಮಿತಿಗಳ ಶಿಫಾರಸ್ಸುಗಳು ಬಹಿರಂಗಗೊಂಡಿದ್ದು, ಪಠ್ಯಪುಸ್ತಕಗಳಲ್ಲಿ ದೇಶದ ಹೆಸರನ್ನು ಇಂಡಿಯಾದಿಂದ ಭಾರತ್‌ ಎಂದು ಬದಲಿಸಲು ತಿಳಿಸಿದ್ದು ದೇಶದಾದ್ಯಂತ ಚರ್ಚೆಯಲ್ಲಿದೆ.

ಸದ್ಯದ NCERT ಯ ರಾಜ್ಯಶಾಸ್ತ್ರ ಪಠ್ಯಪುಸ್ತಕಗಳ ರಚನೆಯಲ್ಲಿದ್ದ ಯೋಗೇಂದ್ರ ಯಾದವ್ 1975 ರ ತುರ್ತು ಪರಿಸ್ಥಿತಿ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ ಎಂಬ ಸಮಿತಿಯ ಆರೋಪಕ್ಕೆ ಅಸಮಧಾನ ವ್ಯಕ್ತಪಡಿಸಿ ಐಸಾಕ್‌ ವಿರುದ್ಧ ಟ್ವೀಟ್‌ ಮಾಡಿದ್ದರು.  

 “NCERT ಸಮಿತಿಯ ಅಧ್ಯಕ್ಷರು ಸರಿಯಾಗಿ ಪಠ್ಯಪುಸ್ತಕವನ್ನು ಓದಿಲ್ಲ ಎಂದು ಕಾಣುತ್ತದೆ. ಹತ್ತನೇ ತರಗತಿಗೆ ಪೊಲಿಟಿಕಲ್‌ ಸೈನ್ಸ್‌ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿಯ ಒಂದು ಪೂರ್ಣ ಅಧ್ಯಾಯವಿದೆ. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಸಾಂವಿಧಾನಿಕ, ಕಾನೂನು ಮತ್ತು ಮಾನವ ಹಕ್ಕುಗಳ ಉಲ್ಲಂಘನೆಯ ಎಲ್ಲಾ ವಿವರಗಳನ್ನು ಒದಗಿಸಲಾಗಿದೆ. ಆದರೆ, ಈ ಬಿಜೆಪಿ ಸರ್ಕಾರವು ಅದಕ್ಕೆ ಕತ್ತರಿಹಾಕಿದೆ,” ಯಾದವ್ ಅಕ್ಟೋಬರ್ 26 ರಂದು ಟ್ವೀಟ್ ಮಾಡಿದ್ದಾರೆ.

ಐಸಾಕ್ ಸಮಿತಿ ಪಠ್ಯಪುಸ್ತಕಗಳಲ್ಲಿ ಮುಸ್ಲೀಂ ದೊರೆಗಳ ವಿಜಯಗಳ ಬಗ್ಗೆ ಕಡಿಮೆ ಪಾಠವಿಟ್ಟು, ಹಿಂದೂಗಳ ಗೆಲುವನ್ನು ಪಾಠ ಮಾಡಬೇಕು ಎಂದು ಶಿಫಾರಸ್ಸು ಮಾಡಿದೆ. ತುರ್ತು ಪರಿಸ್ಥಿತಿಯ ಬಗ್ಗೆ ಹೆಚ್ಚಿನ ಮಾಹಿತಿ ಯಾಕಿಲ್ಲ? ಎಂದು ಪ್ರಶ್ನೆ ಮಾಡಿತ್ತು.

ಆಗಸ್ಟ್ 2022 ರಲ್ಲಿ, ಕೇಂದ್ರವು ಕಸ್ತೂರಿರಂಗನ್‌ ಸಮಿತಿಯ National Curriculum Framework – NCF ಬಿಡುಗಡೆ ಮಾಡಿತು. ಇದರಲ್ಲಿ ವರ್ಷದಲ್ಲಿ ಎರಡು ಬಾರಿ ಬೋರ್ಡ್ ಪರೀಕ್ಷೆಗಳನ್ನು ನಡೆಸುವುದು ಮತ್ತು ಸೆಮಿಸ್ಟರ್ ವ್ಯವಸ್ಥೆಯನ್ನು ಪರಿಚಯಿಸುವಂತಹ ರಚನಾತ್ಮಕ ಸುಧಾರಣೆಗಳ ಸರಣಿಯನ್ನು ಪ್ರಸ್ತಾಪಿಸಿದೆ.

ಬಿಜೆಪಿಯ ಪಠ್ಯಕ್ರಮ ಪರಿಷ್ಕರಣೆಯ ಇತಿಹಾಸ

ಸ್ವಾತಂತ್ರ್ಯ ನಂತರ ದೇಶದಲ್ಲಿ 1975, 1988, 2000 ಮತ್ತು 2005 ರಲ್ಲಿ ನಾಲ್ಕು ಪಠ್ಯಕ್ರಮದ ಪರಿಷ್ಕರಣೆ ನಡೆದಿದೆ. ರಾಜಕೀಯ ಹಸ್ತಾಕ್ಷೇಪವಿಲ್ಲ ಎನ್ನಲಾಗದು.

2000ರಲ್ಲಿ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಸರ್ಕಾರ ರಚಿಸಿದಾಗ NCERTಯ ಆಗಿನ ನಿರ್ದೇಶಕ ಜೆ ಎಸ್‌ ರಜಪೂತ್‌ ನೇತೃತ್ವದ ಆರು ಸದಸ್ಯರ ಸಮಿತಿ 2000ರ NCF ಜಾರಿಗೆ ತಂದಿತು. ಆಗ ಮಾನವ ಸಂಪನ್ಮೂಲ ಸಚಿವರಾಗಿದ್ದ ಮುರಳಿ ಮನೋಹರ ಜೋಶಿಯವರ ಮೇಲೆ ಪಠ್ಯಪುಸ್ತಕಗಳ ʼಕೇಸರೀಕರಣದ ಆರೋಪಗಳು ಎದ್ದವು. 

NCF  2000ರ ‘Context and Concerns’ ಎಂಬ ಅಧ್ಯಾಯದಲ್ಲಿ  “ವಿರೋಧಾಭಾಸ ಎನಿಸಿದರೂ ನಮ್ಮ ಮಕ್ಕಳಿಗೆ ನ್ಯೂಟನ್ ಬಗ್ಗೆ ಗೊತ್ತಿದೆ, ಆರ್ಯಭಟ್ಟನ ಬಗ್ಗೆ ಗೊತ್ತಿಲ್ಲ, ಕಂಪ್ಯೂಟರ್ ಬಗ್ಗೆ ಗೊತ್ತಿದೆ ಆದರೆ ಸೊನ್ನೆ ಅಥವಾ ದಶಮಾಂಶ ಪದ್ಧತಿಯ ಪರಿಕಲ್ಪನ ಬಂದಿದ್ದು ಹೇಗೆ ಎಂಬುದು ತಿಳಿದಿಲ್ಲ… ಅಂತಹ ಅಸಮತೋಲನಗಳನ್ನು, ದೇಶದ ಪಠ್ಯಕ್ರಮವನ್ನು ಸರಿಪಡಿಸಬೇಕು,” ಎಂದು ಹೇಳಲಾಗಿದೆ. ಅಲ್ಲದೇ, ಇದರಲ್ಲಿ “ಮಾನವೀಯ ಮತ್ತು ರಾಷ್ಟ್ರೀಯ ದೃಷ್ಟಿಕೋನವನ್ನು ಉತ್ತೇಜಿಸಬೇಕು ಮತ್ತು ಭಾರತೀಯನಾಗಿರುವುದರಲ್ಲಿ ಹೆಮ್ಮೆಯ ಭಾವವನ್ನು ಮೂಡಿಸಬೇಕು” ಎಂದು ಹೇಳಲಾಗಿದೆ.

ಈ NCF 2000ದಲ್ಲಿ ಛಾಂದೋಗ್ಯ ಉಪನಿಷತ್‌ನಿಂದ ಅಂಶಗಳನ್ನು ಅಳವಡಿಸಲು, ವೇದ ಗಣಿತದ ಪರಿಚಯ ಮತ್ತು ಆಯುರ್ವೇದ ಹಾಗೂ ಯೋಗದ ಜ್ಞಾನವನ್ನು ಶಿಫಾರಸು ಮಾಡಲಾಗಿತ್ತು.

2004 ರಲ್ಲಿ, ಬಿಜೆಪಿ ಸರ್ಕಾರ ಹೋಗಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ, ಬಿಜೆಪಿ ಸರ್ಕಾರ ತಂದ ಬದಲಾವಣೆಗಳನ್ನು ರದ್ದುಗೊಳಿಸಲು ಕ್ರಮಗಳನ್ನು ಕೈಗೊಳ್ಳಲಾಯಿತು. ಮೊದಲಿಗೆ, ಬಿಜೆಪಿ ಅಧಿಕಾರಾವಧಿಯಲ್ಲಿ ಎನ್‌ಸಿಇಆರ್‌ಟಿಯಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸಲು ನಿವೃತ್ತ ಅಧಿಕಾರಿ ಎಸ್ ಸತ್ಯಂ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಯಿತು.

ಈ ಸಮಿತಿಯು NCF 2000 ಪರಿಶೀಲನಾ ವರದಿಯಲ್ಲಿ ಅನ್ನು “ಸರಿಯಾದ ಕಾರ್ಯವಿಧಾನಗಳನ್ನು ಅನುಸರಿಸದೆ ಇದನ್ನು ನಡೆಸಲಾಯಿತು ಮತ್ತು ಅದನ್ನು ಬಿಡುಗಡೆ ಮಾಡಿದಾಗ, ಅದು ಕಾರ್ಯಕಾರಿ ಸಮಿತಿಯ ಅಥವಾ NCERT ಯ ಆಡಳಿತ ಮಂಡಳಿಯ ಒಪ್ಪಿಗೆಯನ್ನು ಪಡೆದಿರಲಿಲ್ಲ. ಇದನ್ನು ಸೆಂಟ್ರಲ್ ಅಡ್ವೈಸರಿ ಬೋರ್ಡ್ ಆಫ್ ಎಜುಕೇಶನ್ (CABE) ಮುಂದೆ ಇಡಲಾಗಿಲ್ಲ,” ಎಂದು ತಿಳಿಸಿತು.

 ಆದರೆ, ಸುಪ್ರೀಂ ಕೋರ್ಟ್‌ನ ಮೂವರು ನ್ಯಾಯಾಧೀಶರ ಪೀಠವು ಸೆಪ್ಟೆಂಬರ್ 2002 ರಲ್ಲಿ, 2:1 ಬಹುಮತದ ತೀರ್ಪಿನಲ್ಲಿ, ಪಠ್ಯಕ್ರಮದ ಬದಲಾವಣೆಗಳನ್ನು ಎತ್ತಿಹಿಡಿದು, NCF 2000 ಅನ್ನು ಅಸಂವಿಧಾನಿಕ ಎಂದು ಘೋಷಿಸಲು ಯಾವುದೇ ಆಧಾರವಿಲ್ಲ ಎಂದು ಘೋಷಿಸಿತು.

ಸತ್ಯಂ ವರದಿಯ ಮೇಲೆ ಟೀಕೆಗಳು ಬಂದಂತೆ, ಪ್ರೊ.ಯಶ್ ಪಾಲ್ ನೇತೃತ್ವದ ಸಮಿತಿಯೊಂದು NCF 2005 ರಚನೆಗೆ ಸಿದ್ಧವಾಯಿತು. NCF 2005 ಪರಿಷ್ಕರಣೆಯಲ್ಲಿ 280 ಕ್ಕೂ ಹೆಚ್ಚು ತಜ್ಞರು ಇದ್ದರು. 35 ಸದಸ್ಯರ ಸ್ಟೀರಿಂಗ್ ಕಮಿಟಿಯಲ್ಲಿ ಪ್ರೊ.ಯಶ್ ಪಾಲ್, ಕವಿ ಅಶೋಕ್ ವಾಜಪೇಯಿ, ಪ್ರೊ.ವಲ್ಸನ್ ಥಂಪು, ಎನ್‌ಸಿಪಿಸಿಆರ್‌ನ ಮಾಜಿ ಮುಖ್ಯಸ್ಥ ಪ್ರೊ.ಶಾಂತ ಸಿನ್ಹಾ, ಮಾಜಿ ಇಪಿಡಬ್ಲ್ಯೂ ಸಂಪಾದಕ ಪ್ರೊ.ಗೋಪಾಲ್ ಗುರು ಮತ್ತು ಇತಿಹಾಸಕಾರ ರಾಮಚಂದ್ರ ಗುಹಾ ಸೇರಿದಂತೆ ಕೆಲವು ಪ್ರಮುಖರ ಹೆಸರುಗಳಿದ್ದವು

ಜೊತೆಗೆ ಇಪ್ಪತ್ತು ಉಪ-ಸಮಿತಿಗಳನ್ನು ಸಹ ಸ್ಥಾಪಿಸಲಾಯಿತು. ಫೋಕಸ್ ಗ್ರೂಪ್‌ಗಳ ಸುಮಾರು 250 ಸದಸ್ಯರಲ್ಲಿ ದೆಹಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಅಪೂರ್ವಾನಂದ್, ಪರಿಸರಶಾಸ್ತ್ರಜ್ಞ ಮಾಧವ್ ಗಾಡ್ಗೀಲ್, ಕಲಾವಿದೆ ಶುಭಾ ಮುದ್ಗಲ್, ಶಿಕ್ಷಣತಜ್ಞರಾದ ಯೋಗೇಂದ್ರ ಯಾದವ್ ಮತ್ತು ಸುಹಾಸ್ ಪಾಲ್ಶಿಕರ್, ಜೆಎನ್‌ಯು ಪ್ರೊಫೆಸರ್ ನಿವೇದಿತಾ ಮೆನನ್ ಮುಂತಾದ ಶಿಕ್ಷಣ ತಜ್ಞರು ಇದ್ದರು.

ಆಗ ಸಿದ್ಧಪಡಿಸಲಾದ NCERT ಪಠ್ಯಕ್ರಮ ಮತ್ತು ಪಠ್ಯಪುಸ್ತಕಗಳನ್ನು ಪ್ರಸ್ತುತ ದೇಶಾದ್ಯಂತ CBSE ಶಾಲೆಗಳಲ್ಲಿ ಕಲಿಸಲಾಗುತ್ತಿದೆ. ಶಿಕ್ಷಣವು ಸಮಕಾಲೀನ ಪಟ್ಟಿಯ (Concurrent List) ಅಡಿಯಲ್ಲಿ ಬರುವುದರಿಂದ, ಕೇಂದ್ರವು ರಾಜ್ಯಗಳಿಗೆ NCERT ಪಠ್ಯಕ್ರಮವನ್ನು ತಮ್ಮ ರಾಜ್ಯಗಳಲ್ಲಿ ಜಾರಿಗೊಳಿಸಲು ಒತ್ತಾಯಿಸಲು ಸಾಧ್ಯವಿಲ್ಲ. ಆದರೆ ಅನೇಕ ರಾಜ್ಯಗಳು ತಮ್ಮಲ್ಲಿ ಈ ಪಠ್ಯಕ್ರಮಗಳನ್ನು ಅಳವಡಿಸಿಕೊಂಡರು

ಆದರೆ, ಆ ಪಠ್ಯಪುಸ್ತಕಗಳು ಈಗಾಗಲೇ ಅನೇಕ ಸುತ್ತಿನ ಪರಿಷ್ಕರಣೆಗಳಿಗೆ ಒಳಗಾಗಿವೆ, 2022 ರಲ್ಲಿ, ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಉಂಟಾದ ಪ್ರಭಾವದ ಕಾರಣದಿಂದಾಗಿ ಕಲಿಕೆಯ ಹೊರೆಯನ್ನು ಕಡಿಮೆ ಮಾಡಲು ಅನೇಕ ಬದಲಾವಣೆಗಳನ್ನು ಮಾಡಲಾಗಿತ್ತು. ಆ ಸಂದರ್ಭದಲ್ಲಿ ಗಾಂಧಿ ಹತ್ಯೆಯ ಬಗೆಗಿನ ಪಠ್ಯಗಳನ್ನು ಕೈಬಿಡಲಾಗಿತ್ತು.  

ಈ ವರ್ಷ ಬಿಜೆಪಿ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಐಸಾಕ್ ಅವರಂತಹ ಶಿಕ್ಷಣತಜ್ಞರನ್ನು ಒಳಗೊಂಡ ಸಮಿತಿಗಳು ವಿನ್ಯಾಸಗೊಳಿಸುವ ಪಠ್ಯಪುಸ್ತಕಗಳು ಮಾರುಕಟ್ಟೆಗೆ ಬರುವ ಮೊದಲೇ ಚರ್ಚೆಗೆ ಕಾರಣವಾಗಿವೆ. ಸರ್ಕಾರದ ಅಜೆಂಡಾಗಳನ್ನು ತುರುಕುವ ಮತ್ತು ಅವೈಜ್ಞಾನಿಕ, ತಿರುಚಿದ ಇತಿಹಾಸವನ್ನು ಕಲಿಸುವ ಸಾಧ್ಯತೆಗಳ ಬಗ್ಗೆ ಈಗಾಗಲೇ ಶಿಕ್ಚಣ ತಜ್ಞರು ದನಿಯೆತ್ತಲು ಆರಂಭಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು