Thursday, June 13, 2024

ಸತ್ಯ | ನ್ಯಾಯ |ಧರ್ಮ

ಪೆಗಾಸಸ್‌ ಮಾದರಿಯಲ್ಲಿ ವಿರೋಧ ಪಕ್ಷದ ನಾಯಕರ ಫೋನ್‌ಗಳ ಮೇಲೆ ಕೇಂದ್ರದ ಕಣ್ಗಾವಲು?: ಆಪಲ್‌ ಎಚ್ಚರಿಕೆ

ಬೆಂಗಳೂರು,ಅಕ್ಟೋಬರ್.‌31: ಆಪಲ್ ಟೆಕ್ನಾಲಜಿ ಕಂಪನಿ ಭಾರತದ ಅನೇಕ ವಿರೋಧ ಪಕ್ಷದ ನಾಯಕರಿಗೆ ಹಾಗೂ ಕೆಲವು ಪತ್ರಕರ್ತರಿಗೆ  ಐಫೋನ್ ಅನ್ನು ಗುರಿಯಿಟ್ಟು ʼಸರ್ಕಾರಿ ಪ್ರಾಯೋಜಿತ ದಾಳಿಕೋರರುʼ ದಾಳಿ ನಡೆಸುತ್ತಿದ್ದಾರೆ ಎಂಬ ಎಚ್ಚರಿಕೆಯ ಸಂದೇಶವೊಂದನ್ನು ಕಳಿಸಿದೆ.

ತೃಣಮೂಲ ಕಾಂಗ್ರೆಸ್ ಸಂಸದೆ ಮೋಹುವ ಮೋಯಿತ್ರ, ಕಾಂಗ್ರೆಸ್ ನಾಯಕ ಶಶಿ ತರೂರ್ ಮತ್ತು ಪವನ್ ಖೇರಾ, ಕಾಂಗ್ರೆಸ್ ನ ಸಾಮಾಜಿಕ ಜಾಲತಾಣದ ಸಂಚಾಲಕಿ ಸುಪ್ರಿಯಾ ಶ್ರೀನಾಥೆ, ಶಿವಸೇನಾ ಸಂಸದೆ ಪ್ರಿಯಾಂಕ ಚತುರ್ವೇದಿ, Observer Research Foundation ಅಧ್ಯಕ್ಷ ಸಮೀರ್ ಸರನ್, ಡೆಕನ್ ಕ್ರಾನಿಕಲ್ ನ ರೆಸಿಡೆಂಟ್ ಎಡಿಟರ್ ಶ್ರೀರಾಮ್ ಕರ್ರಿ ತಮ್ಮ X ನಲ್ಲಿ ತಮಗೆ ಆಪಲ್ ಸಂದೇಶವನ್ನು ಕಳಿಸಿರುವ ಬಗ್ಗೆ ಹೇಳಿಕೊಂಡಿದ್ದಾರೆ

ದಿ ವೈರ್ ನ ಸಂಸ್ಥಾಪಕ ಸಂಪಾದಕ ಸಿದ್ದಾರ್ಥ್ ವರದರಾಜನ್, ಸಿಪಿಐ(ಎಂ) ನಾಯಕ ಸೀತಾರಾಮ ಯೆಚೂರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್ ನಾಯಕ ಅಸಾದುದ್ದೀನ್ ಓವೈಸಿ, ಆಮ್ ಆದ್ಮಿ ಪಾರ್ಟಿಯ ನಾಯಕ ರಾಘವ್ ಛಡ್ಡರಿಗೂ ಆಪಲ್ ಸಂದೇಶವನ್ನು ಕಳಿಸಿದೆ.

INDIA ಮೈತ್ರಿ ಕೂಟದ ನಾಯಕರಾಗಿರುವ ಇವರು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಪ್ರಬಲ ಟೀಕಾಕಾರರಾಗಿದ್ದಾರೆ.

“ನಿಮ್ಮ ಫೋನ್ ಹಾಗೂ ಇತರ ಸಾಧನಗಳ ಮೇಲೆ ಸರ್ಕಾರಿ ಪ್ರಾಯೋಜಿತ ದಾಳಿಕೋರರ (State-Sponsored Attackers) ನಿಯಂತ್ರಣವನ್ನು ಸಾಧಿಸಿದರೆ, ನಿಮಗೆ ಸಂಬಂಧಿಸಿದ ಸೂಕ್ಷ್ಮ ಮಾಹಿತಿಗಳು, ಸಂವಹನಗಳು ಮಾತ್ರವಲ್ಲ, ಕ್ಯಾಮರಾ ಮೈಕ್ರೋಫೋನ್‌ಗಳ ಮೇಲೂ ಹಿಡಿತ ಸಾಧಿಸಬಹುದು,” ಎಂದು ಈ ಸಂದೇಶದಲ್ಲಿ ಎಚ್ಚರಿಸಲಾಗಿದ್ದು, “ಈ ಎಚ್ಚರಿಕೆಯನ್ನು ಗಂಭೀರವಾಗಿ ಪರಿಗಣಿಸಿ” ಎಂದು ಆಪಲ್‌ ತಿಳಿಸಿದೆ.

ಆಪಲ್ ತನ್ನ ವೆಬ್‌ಸೈಟ್‌ನಲ್ಲಿ “ಸಾಮಾನ್ಯ ಸೈಬರ್ ಅಪರಾಧಿಗಳಿಗಿಂತ ಭಿನ್ನವಾಗಿ, ದಾಳಿಕೋರರು ಬಹಳ ಕಡಿಮೆ ಸಂಖ್ಯೆಯ ನಿರ್ದಿಷ್ಟ ವ್ಯಕ್ತಿಗಳು ಮತ್ತು ಅವರ ಸಾಧನಗಳನ್ನು ಅಸಾಧಾರಣ ಸಂಪನ್ಮೂಲಗಳನ್ನು ಬಳಸಿ ಗುರಿಯಾಗಿಸುತ್ತಾರೆ. ಇದರಿಂದ ಈ ದಾಳಿಗಳನ್ನು ಪತ್ತೆಹಚ್ಚಲು ಮತ್ತು ತಡೆಯಲು ಹೆಚ್ಚು ಕಷ್ಟ. ಸರ್ಕಾರಿ ಪ್ರಾಯೋಜಿತ ದಾಳಿಗಳು ಹೆಚ್ಚು ಸಂಕೀರ್ಣ. ಇದನ್ನು ತಡೆಯಲು ಲಕ್ಷಾಂತರ ಡಾಲರ್‌ಗಳು ವೆಚ್ಚವಾಗುತ್ತವೆ ಮತ್ತು ಸಾಮಾನ್ಯವಾಗಿ ಕಡಿಮೆ ಶೆಲ್ಫ್ ಲೈಫನ್ನು ಹೊಂದಿರುತ್ತವೆ,” ಎಂದು ಬರೆದುಕೊಂಡಿದೆ.

ಈ ಆರೋಪದ ಬಗ್ಗೆ ಕೇಂದ್ರ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪವನ್ ಖೇರಾ ಕೇಂದ್ರ ಸರ್ಕಾರದ ಮೇಲೆ ಆರೋಪವನ್ನು ಹೊರಿಸಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಈ ಬಗ್ಗೆ ತನಿಖೆ ನಡೆಸುತ್ತದೆಯೇ ಎಂದು ಪ್ರಿಯಾಂಕ ಚತುರ್ವೇದಿ ಪ್ರಶ್ನಿಸಿದ್ದಾರೆ.

ಪತ್ರಕರ್ತೆ ರೇವತಿ ತನ್ನ Xನಲ್ಲಿ “ಕಳೆದ ಕೆಲವು ದಿನಗಳಿಂದ ಫೋನ್ ಬ್ಯಾಟರಿ ಖಾಲಿಯಾಗುತ್ತಿತ್ತು ಮತ್ತು ವಿಚಿತ್ರವಾಗಿ ವರ್ತಿಸುತ್ತಿತ್ತು. ಕಳೆದ ರಾತ್ರಿ ಈ ಮೆಸೆಜ್‌ ಬಂತು. ಮೊದಲ ಬಾರಿ ಅಲ್ಲ! ಆದರೆ ಮತ್ತೆ ನಿಮಗೆ ಅಸುರಕ್ಷತೆ ಭಾವ ಉಂಟಾಗುತ್ತಿದೆ, ಮತ್ತು ಕೋಪ ಬರುತ್ತಿದೆ,” ಎಂದು ಬರೆದುಕೊಂಡಿದ್ದಾರೆ.

ಜುಲೈ 2021 ರಲ್ಲಿ, 17 ಮಾಧ್ಯಮ ಸಂಸ್ಥೆಗಳು ಮತ್ತು ಅಮ್ನೆಸ್ಟಿ ಇಂಟರ್‌ನ್ಯಾಶನಲ್ ನಡೆಸಿದ ತನಿಖೆಯು ಭಾರತ ಸೇರಿದಂತೆ ವಿಶ್ವದಾದ್ಯಂತ ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳ ಮೇಲೆ ಅನಧಿಕೃತ ಕಣ್ಗಾವಲು ಇಡಲು ಪೆಗಾಸಸ್ ಸಾಫ್ಟ್‌ವೇರ್‌ ಬಳಸಿದ್ದು ಬಯಲಾಗಿತ್ತು.  ಇಸ್ರೇಲಿ ಮೂಲದ ಸೈಬರ್‌ ಗುಪ್ತಚರ ಕಂಪನಿ ಎನ್‌ಎಸ್‌ಒ ಗ್ರೂಪ್‌ ಪ್ರಪಂಚದಾದ್ಯಂತ ಅನೇಕ ದೇಶಗಳ ಸರ್ಕಾರಗಳಿಗೆ ಈ ಸಾಫ್ಟ್‌ವೇರನ್ನು ನೀಡಿತ್ತು.

ಇದನ್ನೂ ಓದಿ: ವಿರೋಧ ಪಕ್ಷಗಳ ನಾಯಕರ ಐಫೋನ್‌ ಹ್ಯಾಕ್!:‌ ಆಪ್‌ ನಾಯಕ ರಾಘವ್‌ ಛಡ್ಡಾ ಹೇಳಿದ್ದೇನು?

ಭಾರತದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಚುನಾವಣಾ ಆಯುಕ್ತ ಅಶೋಕ್ ಲಾವಾಸಾ, ಕೇಂದ್ರ ಸಚಿವರಾದ ಅಶ್ವಿನಿ ವೈಷ್ಣವ್ ಮತ್ತು ಪ್ರಹ್ಲಾದ್ ಸಿಂಗ್ ಪಟೇಲ್, ಅನಿಲ್ ಅಂಬಾನಿ ಮತ್ತು ಮಾಜಿ ಕೇಂದ್ರೀಯ ತನಿಖಾ ದಳದ ನಿರ್ದೇಶಕ ಅಲೋಕ್ ವರ್ಮಾರವರ ಮೇಲೂ ಪೆಗಾಸಸ್‌ ಬಳಸಿದ ಬಗ್ಗೆ ವರದಿಯಾಗಿತ್ತು.

ಆದರೆ, ಕೇಂದ್ರ ಸರ್ಕಾರ ಈ ಆರೋಪಗಳನ್ನು ತಳ್ಳಿಹಾಕಿತ್ತು. ಸ್ವತಃ ತನ್ನ ಮೇಲೆಯೇ ಪೆಗಾಸಸ್‌ ಪ್ರಯೋಗಿಸಿದ ಬಗ್ಗೆ ವರದಿಯಾಗಿಯೂ, ಭಾರತದಲ್ಲಿ ಈ ರೀತಿಯ ಅಕ್ರಮ ಕಣ್ಗಾವಲು ಸಾಧ್ಯವಿಲ್ಲ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನ್‌ ವೈಷ್ಣವ್ ಜುಲೈ 2021 ರಲ್ಲಿ ಸಂಸತ್ತಿನಲ್ಲಿ ತಿಳಿಸಿದ್ದರು.

ಇಸ್ರೇಲಿ ಕಂಪನಿ NSO ಗ್ರೂಪ್ ಮಾನವ ಹಕ್ಕುಗಳ ದಾಖಲೆಗಳೊಂದಿಗೆ “ಪರಿಶೀಲಿಸಿದ (vetted) ಸರ್ಕಾರಗಳಿಗೆ” ಮಾತ್ರ ಸಾಫ್ಟ್‌ವೇರನ್ನು ಮಾರಾಟ ಮಾಡಲಾಗಿದೆ ಮತ್ತು ಪೆಗಾಸಸ್ ಅಪರಾಧಿಗಳನ್ನು ಗುರಿಯಾಗಿಸಲು ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿತ್ತು.  

ಪೆಗಾಸಸ್‌ ಬಗ್ಗೆ ವ್ಯಾಪಕ ಟೀಕೆ, ವರದಿಗಳು ಬಂದಂತೆ, ಸುಪ್ರೀಂ ಕೋರ್ಟ್ ಆರೋಪಗಳನ್ನು ಪರಿಶೀಲಿಸಲು ತಜ್ಞರ ಸಮಿತಿಯನ್ನು ನೇಮಿಸಿತು. ಆಗಸ್ಟ್ 2022 ರಲ್ಲಿ, ಸಮಿತಿಯು ತನಿಖೆ ನಡೆಸಿ 29 ಫೋನ್‌ಗಳಲ್ಲಿ ಐದರಲ್ಲಿ ಕೆಲವು ಮಾಲ್‌ವೇರ್ ಕಂಡುಬಂದಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿತ್ತು. ಆದರೆ, ಈ ಮಾಲ್‌ವೇರ್‌ ಪೆಗಾಸಸ್‌ ಎಂಬುದು ಸ್ಪಷ್ಟವಾಗಿರಲಿಲ್ಲ. ಮಾತ್ರವಲ್ಲ, ಕೇಂದ್ರ ಸರ್ಕಾರ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಈ ಸಮಿತಿ ಸುಪ್ರೀಂ ಕೋರ್ಟ್‌ಗೆ ದೂರನ್ನು ನೀಡಿತ್ತು.

ಮಾರ್ಚ್‌ನಲ್ಲಿ, ಫೈನಾನ್ಷಿಯಲ್ ಟೈಮ್ಸ್ ಅಪರಿಚಿತ ವ್ಯಕ್ತಿಗಳನ್ನು ಉಲ್ಲೇಖಿಸಿ ಭಾರತ ಸರ್ಕಾರವು ಪೆಗಾಸಸ್‌ಗಿಂತ “ಕಡಿಮೆ ಪ್ರೊಫೈಲ್” ಹೊಂದಿರುವ ಸಾಫ್ಟ್‌ವೇರನ್ನು ಹುಡುಕುತ್ತಿದೆ ಎಂದು ವರದಿ ಮಾಡಿತ್ತು. ಇದನ್ನು ಪಡೆಯಲು ಕೇಂದ್ರವು 120 ಮಿಲಿಯನ್ ಡಾಲರ್‌ ವರೆಗೆ ಖರ್ಚು ಮಾಡಲು ಸಿದ್ಧವಾಗಿದೆ ಎಂದು ವರದಿ ಫೈನಾನ್ಷಿಯಲ್‌ ಟೈಮ್ಸ್ ವರದಿ ಮಾಡಿತ್ತು. ಆದರೆ ಈ ವರದಿಯ ಬಗ್ಗೆ ರಕ್ಷಣಾ ಸಚಿವಾಲಯ ಪ್ರತಿಕ್ರಿಯೆ ನೀಡಲು ನಿರಾಕರಿಸಿತ್ತು.

Related Articles

ಇತ್ತೀಚಿನ ಸುದ್ದಿಗಳು