Monday, June 17, 2024

ಸತ್ಯ | ನ್ಯಾಯ |ಧರ್ಮ

ಕೊರಗ ಸಮುದಾಯದ ಕಲಾವತಿ ಅವರಿಗೆ ಡಾಕ್ಟರೇಟ್ : ಪಿಎಚ್ಡಿ ಪಡೆದ ಸಮುದಾಯದ ಎರಡನೆಯ ಮಹಿಳೆ

ವಿಜಯನಗರ: ಕೊರಗ ಸಮುದಾಯದ ಕುರಿತು ಕೆ ಎಂ ಮೇತ್ರಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನ ಪ್ರಬಂಧ ಮಂಡಿಸಿದ ಕಲಾವತಿಯವರಿಗೆ ವಿಜಯನಗರ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪಿಎಚ್‌ಡಿ (ಡಾಕ್ಟರೇಟ್)‌ ಪದವಿ ನೀಡಿ ಗೌರವಿಸಿದೆ.

ʼಕೊರಗ ಆದಿಮ ಬುಡಕಟ್ಟಿನ ಸಮಾಜೋ – ಸಾಂಸ್ಕೃತಿಕ ಅಧ್ಯಯನʼ ಎನ್ನುವ ವಿಷಯದ ಕುರಿತು ಕಲಾವತಿಯವರು ಡಾ. ಕೆ ಎಮ್‌ ಮೇತ್ರಿಯವರ ಮಾರ್ಗದರ್ಶನದಲ್ಲಿ ಸಂಶೋಧನಾ ಪ್ರಬಂಧವನ್ನು ಮಂಡಿಸಿ ಡಾಕ್ಟರೇಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಕೊರಗ ಸಮುದಾಯಕ್ಕೆ ಸೇರಿದವರಾದ ಕಲಾವತಿಯವರು ಈ ಸಂಶೋಧನಾ ಪ್ರಬಂದ ಮಂಡಿಸುವುದರೊಂದಿಗೆ ಈ ಸಮುದಾಯದಿಂದ ಸಂಶೋಧನಾ ಪ್ರಬಂಧ ಮಂಡಿಸಿ ಡಾಕ್ಟರೇಟ್‌ ಪಡೆದ ಎರಡನೇ ಮಹಿಳೆಯಾಗಿ ಹೊರಹೊಮ್ಮಿದ್ದಾರೆ.

ಈ ಹಿಂದೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಸಾಸ್ತಾನ ಸಮೀಪದ ಗುಂಡ್ಮಿಯ ಸಬಿತಾ ಕೊರಗ ಇವರು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರವಿಭಾಗದ ಪ್ರಾದ್ಯಾಪಕ ಪ್ರೊ.ಜೋಗನ್ ಶಂಕರ್ ಇವರ ಮಾರ್ಗದರ್ಶನದಲ್ಲಿ ಮಂಡಿಸಿದ್ದ ʼಇವ್ಯಾಲುವೇಶನ್ಸ್ ಆಫ್ ಪಾಲಿಸಿಸ್ ಆ್ಯಂಡ್ ಪ್ರೋಗ್ರಾಮ್ಸ್ ಆಫ್ ಟ್ರೈಬಲ್ ಡೆವೆಲಪ್‌ಮೆಂಟ್ ಆಫ್ ಕರ್ನಾಟಕ ಸ್ಟೇಟ್ ಎ ಸಿಚುವೇಷನಲ್ ಅನಾಲಿಸಿಸ್ʼ ಎನ್ನುವ ವಿಷಯದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿವಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತ್ತು.

ಕರಾವಳಿಯ ಮೂಲನಿವಾಸಿಗಳೆಂದೇ ಪರಿಗಣಿತವಾದ ಬುಡಕಟ್ಟು ಕೊರಗ ಸಮುದಾಯದಲ್ಲಿ ಡಾಕ್ಟರೇಟ್ ಪದವಿ ಪಡೆದ ಮೊತ್ತಮೊದಲ ಮಹಿಳೆಯೆನ್ನಿಸಿಕೊಂಡಿರುವ ಡಾ. ಸಬಿತಾ ಗುಂಡ್ಮಿ ಪ್ರಸ್ತುತ ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತಿದ್ದಾರೆ.

ಕಲಾವತಿಯವರು ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕರ್ಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಕಡoಗೋಡು ಎನ್ನುವ ಊರಿನವರಾಗಿದ್ದು, ಪ್ರಾಥಮಿಕ ವಿದ್ಯಾಭ್ಯಾಸವನ್ನು ಸೂರಾಲು ಎನ್ನುವ ಊರಿನಲ್ಲಿ ಮುಗಿಸಿರುತ್ತಾರೆ. ರೋಶನಿ ನಿಲಯ ಮಂಗಳೂರು ಸಂಸ್ಥೆಯಲ್ಲಿ ಅವರು BSW ಪದವಿಯನ್ನು ಮುಗಿಸಿರುತ್ತಾರೆ. ಕಲಾವತಿಯವರ ತಂದೆಯ ಹೆಸರು ದಿ. ಗುಂಬಳ ಕೊರಗ.

ತಮ್ಮ ಡಾಕ್ಟರೇಟ್‌ ಪದವಿಯ ಕುರಿತು ಪೀಪಲ್‌ ಮಿಡಿಯಾಕ್ಕೆ ಪ್ರತಿಕ್ರಿಯಿಸಿದ ಅವರು, “ನಾನು ಕೂಡ ಓರ್ವ ಶಾಲೆಯಿಂದ ಹೊರಗುಳಿದ ವಿದ್ಯಾರ್ಥಿ ಆಗಿದ್ದು, ಚಿಕ್ಕನಿಂದಲೂ ಸಮುದಾಯ ಸಂಘಟನೆಯೊಂದಿಗೆ ತೊಡಗಿಸಿಕೊಂಡಿದ್ದರ ಪರಿಣಾಮವಾಗಿ ಹಾಗೂ ನನ್ನ ಕುಟುಂಬ (ಅಕ್ಕ ಭಾವ) ಇವರ ಸಹಕಾರದಿಂದಾಗಿ ನಾನು phd ಹಂತಕ್ಕೆ ತಲುಪಲು ಸಾದ್ಯವಾಯಿತು. ಸಮುದಾಯದ ಹೋರಾಟಗಳಲ್ಲಿ ಭಾಗವಹಿಸಿದ್ದು ಕಳತ್ತುರು ಭೂಮಿ ಚಳುವಳಿಯಲ್ಲಿ 29 ಮಂದಿ ಜೈಲು ವಾಸ ಅನುಭವಿಸಿದ್ದು ಅದರಲ್ಲಿ ಒಬ್ಬಳು ನಾನು ಎನ್ನುವುದು ಹೆಮ್ಮೆಯಿದೆ. ನಾನು ನನ್ bsw ಪದವಿಯನ್ನು 2008ರಲ್ಲಿ ಮುಗಿಸಿದ್ದು ನಂತರ 8 ವರುಷಗಳ ಕಾಲ ಸಮಗ್ರ ಗ್ರಾಮೀಣ ಆಶ್ರಮ, ಪರ್ನಲ್, organization for the development of people, mysore, ಮಕ್ಕಳ ಸಹಾಯವಾಣಿ ಮೈಸೂರು ಇಲ್ಲಿ, ಸಮಾಜ ಸೇವಾ ಸಂಸ್ಥೆ ಗಳಲ್ಲಿ ಕೆಲಸವನ್ನು ನಿರ್ವಹಿಸಿದ್ದೇನೆ. 8 ವರ್ಷಗಳ ನಂತರ ಸಮಾಜಶಾಸ್ತ್ರ ವಿಷಯದಲ್ಲಿ MA ಪದವಿಯನ್ನು ಪಡೆದು, ಪ್ರಸ್ತುತ phD ಮುಗಿಸಿರುವುದು ಸಂತಸವನ್ನು ತಂದಿದೆ.” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು