Friday, April 26, 2024

ಸತ್ಯ | ನ್ಯಾಯ |ಧರ್ಮ

ಲಿಂಗಾಯತ ಧರ್ಮ ವಿರೋಧಿಗಳಿಗೆ ಮಣೆ ಹಾಕಿರುವುದು ಸರಿಯೆ? : ರಮಣಶ್ರೀ ಷಡಕ್ಷರಿ ಅವರಿಗೆ ಬಹಿರಂಗ ಪತ್ರ

ರಮಣಶ್ರೀ ಶರಣ ಪ್ರಶಸ್ತಿ – 2023 ಸುತ್ತ ಕೆಲವು ವಾಸ್ತವ ಸಂಗತಿ
ಬಸವಾದಿ ಪ್ರಮಥರು ಅಂದು ಸಮಸಮಾಜಕ್ಕಾಗಿ ಪ್ರಾಣವನ್ನ ಲೆಕ್ಕಿಸದೆ ಕಲ್ಯಾಣದಲ್ಲಿ ಅಪರೂಪದ ಕ್ರಾಂತಿಯನ್ನ ಮಾಡಿ ಲಿಂಗಾಯತ ಧರ್ಮ ದೀಪವನ್ನ ಬೆಳಗಿಸಿದ್ದಾರೆ. ಅದು ಇಂದಿಗೂ ಬೆಳಗುತ್ತಿದೆ ಅಂದರೆ ಅದಕ್ಕೆ ಅನೇಕ ಶರಣ – ಶರಣೆಯರ ಕಾಯಕ, ಅರಿವು, ವೈಚಾರಿ ದೃಷ್ಟಿಕೋನ,  ಬಲಿದಾನ ಮತ್ತು ದೊಡ್ಡ ಶ್ರಮ ಅದರ ಹಿಂದಿದೆ. ಆದರೆ, ಕೆಲವು ಕುಬ್ಜರ ಕೈಯಲ್ಲಿ ಅದು ನಲುಗುತ್ತಿರುವ ಆತಂಕ ಮನೆ ಮಾಡಿದೆ.

೧೨ ಶತಮಾನದಲ್ಲಿ ಜರುಗಿದ ಈ ಮಹೊನ್ನತ ಕ್ರಾಂತಿಯನ್ನ   ಕಗ್ಗೊಲೆ ಮಾಡಿದ್ದು ಮತಾಂಧ ಹಾಗೂ ವೈದಿಕ, ಪುರೋಹಿತ  ದುಷ್ಟ ಶಕ್ತಿಗಳು. ಆ ದುಷ್ಟ ಶಕ್ತಿಗಳ ಕೈಯಿಂದ ವಚನ ಸಾಹಿತ್ಯವನ್ನ ರಕ್ಷಣೆ ಮಾಡಲು ರಕ್ತವನ್ನ ಹರಿಸಿ ಮುಂದಿನ ಪೀಳಿಗೆಗೆ ಅದನ್ನ ಸುರಕ್ಷಿತವಾಗಿ ಸಾಗಿಸಿದ ಶರಣರ ಬಲಿದಾನ ನಾವು ನೆನೆಯಲೇಬೇಕು. ನಂತರ ಬಸವತತ್ವದ ಜಂಗಮದಾರಿಗಳು ಊರೂರು ಅಲೆಯುತ್ತ ದಕ್ಷಿಣ ಭಾರತದಲ್ಲಿ ಲಿಂಗಾಯತ ಧರ್ಮವನ್ನ ಹರಡುತ್ತ ಶರಣ ಧರ್ಮವನ್ನ ಪಸರಿಸಿದ ರೀತಿ ಅಮೋಘವಾದದ್ದು. ೧೫ ನೇ ಶತಮಾನದ ನಂತರ ಜಂಗಮಧಾರಿಗಳು ಊರೂರಲ್ಲಿ ನೆಲೆ ನಿಂತು ಮಠಗಳನ್ನ ಕಟ್ಟಿ ಶರಣಧರ್ಮದ ಪ್ರಸಾರವನ್ನ ಮಂದುವರೆಸಿದರು.  ಅಂದಿನಿಂದ ಇಂದನಿವರೆಗೂ ಸಾವಿರಾರು ಮಠಗಳು ಉದ್ಭವಿಸಿ ಜನರ ಕಲ್ಯಾಣಕ್ಕಾಗಿ ನಿರಂತರವಾಗಿ ದುಡಿಯುತ್ತಲೆ ಬಂದಿವೆ!. ಜಗತ್ತಿಲ್ಲಿ ಸರ್ವಧರ್ಮದ ಜನರನ್ನ ಸಮಾನವಾಗಿ ಕಾಣುತ್ತ ಎಲ್ಲರಿಗೂ ಆಶ್ರಯ ನೀಡುವ ಏಕೈಕ ಸ್ಥಳವೇನಾದರು ಇದ್ದರೆ ಅದು ಲಿಂಗಾಯತ ಮಠಗಳು ಮಾತ್ರ.

ಆದರೆ ಇಂದಿನ ಕಾಲಗಟ್ಟದಲ್ಲಿ ಮತಾಂದ ಶಕ್ತಿಗಳ ರಾಜಕೀಯ ಕಪಿಮುಷ್ಠಿಗೆ ಸಿಲುಕಿ ಬಸವ ತತ್ವವನ್ನು ಮರೆತು ಪರ ಸಾಂಸ್ಕೃತಿಕ ಹೆರಿಕೆಗೆ ಒಳಗಾಗಿ ಸ್ವಾತಂತ್ರ್ಯ ಕಳೆದುಕೊಂಡು ಸ್ವಾರ್ಥ ಬದುಕುಗಳಿಗೆ ಒಗ್ಗಿರುವ ಅನೇಕ ಮಠ ಮತ್ತು ಮಠಾಧೀಶರ ಮದ್ಯ ನಮ್ಮ ಸಾಣೆಹಳ್ಳಿಯ ಮಠ ಕುಂದಣದ ರತ್ನದಂತೆ ಶೋಭಾಯಮಾನವಾಗಿ ಬೆಳಗುತ್ತಿದೆ. ಬಸವ ತತ್ವವನ್ನ ಬೆಳಗಿಸುತ್ತಿದೆ!.

ಸಾಣೆಹಳ್ಳಿಯ ಶ್ರೀ ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮಿಗಳು ಶರಣ ತತ್ವದ ಆಶಯದಂತೆ ನುಡಿದಂತೆ ನಡೆಯುತ್ತ, ರಂಗಭೂಮಿ ಹಾಗೂ ವಚನ ಸಾಹಿತ್ಯದ ಮೂಲಕ ಶರಣಧರ್ಮವನ್ನ ಪಸರಿಸುತ್ತ ಸರ್ವರನ್ನ ತನ್ನಂತೆ ನೋಡುತ್ತ ಸಮಾನತೆಯ ಗಂಟೆಯನ್ನು ಮೊಳಗಿಸುತ್ತಿದ್ದಾರೆ.  ಸ್ಥಾವರ ಲಿಂಗವನ್ನ ಧಿಕ್ಕರಿಸುತ್ತ  ಬಸವತತ್ವ, ಶರಣ ಧರ್ಮವನ್ನ ಎತ್ತಿಹಿಡಿಯುವಲ್ಲಿ ನಾಡಿನಲ್ಲಿ ಪ್ರಮುಖರಾಗಿರುವ ಸಾಣೇಹಳ್ಳಿ ಶ್ರೀಗಳ ವಿರುದ್ದ ಈಗ ಮತ್ತೆ ಮತಾಂದ ಶಕ್ತಿ ಅಟ್ಟಹಾಸಗೈಯ್ಯುತ್ತಿದೆ!, ಹೇಗಾದರು ಮಾಡಿ ಇವರ ಶರಣ ಶಕ್ತಿಯನ್ನ ಕುಗ್ಗಿಸಲು ನಿರಂತರ ಪ್ರಯತ್ನ ಮಾಡುತ್ತಿದೆ.

ಸಾಣೆಹಳ್ಳಿಯ ಶ್ರೀಗಳು ಲಿಂಗಾಯತ ಧರ್ಮದ ಆತ್ಮಾಭಿಮಾನದ ಪ್ರತೀಕ. ಲಿಂಗಾಯತ ಧರ್ಮೀಯರಿಗೆ, ಬಸವ ಭಕ್ತರಿಗೆ ಶರಣ ಸಂಸ್ಕೃತಿಯಲ್ಲಿ ನಡೆಯುವಂತೆ ಹೇಳಬೇಕಾದದ್ದು ಶ್ರೀಗಳ ಕರ್ತವ್ಯ.  ಇದನ್ನ ಅವರು ಹಲವು ದಶಕಗಳಿಂದ ಮಾಡುತ್ತಲೆ ಬಂದಿದ್ದಾರೆ. ಲಿಂಗಾಯತ ಧರ್ಮದ ಆಚರಣೆಗಳನ್ನ ಮರೆತಿರುವ ಜನರನ್ನ ತಮ್ಮ ಶರಣ ಉಪದೇಶದ ಮೂಲಕ ಜಾಗೃತಿಗೊಳಿಸುತ್ತಿದ್ದಾರೆ. ಹೀಗಾಗಿ ಮೊನ್ನೆಯ ದಿನ ಲಿಂಗಾಯತ ಧರ್ಮೀಯರಿಗೆ ಮೌಢ್ಯಕ್ಕೆ ಬಲಿಯಾಗಬೇಡಿ. ಪುರಾಣದ ಕಟ್ಟುಕತೆ ನಂಬಬೇಡಿ ಎಂದು ಕರೆಕೊಟ್ಟಿದ್ದಾರೆ. ಪರಧರ್ಮದ ಸಂಸ್ಕೃತಿಯನ್ನ ತ್ಯಜಿಸಿ ಮತ್ತು ಶರಣರ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ ಎಂದು ಯಥಾ ಪ್ರಕಾರದಂತೆ ಹೇಳಿದ್ದಾರೆ. ಆದರೆ ಇದು ಪರಸಂಸ್ಕೃತಿಯ ಮತಾಂಧರಿಗೆ ಸಹಿಸಲು ಸಾಧ್ಯವಾಗಿಲ್ಲ. ಅದರಲ್ಲಿ ಒಬ್ಬರಾದ ವಿಶ್ವವಾಣಿಯ ಸಂಪಾದಕ ವಿಶ್ವೇಶ್ವರ ಭಟ್ಟ ಎಂಬುವನು ಸಾಣಿಹಳ್ಳಿ ಶ್ರೀಗಳ ವಿರುದ್ದ ತನ್ನ ಸಂಸ್ಕೃತಿಯ ನಾಲಿಗೆನ್ನು ಹರಿಬಿಟ್ಟು ಮಾತನಾಡಿದ್ದಾನೆ. ಶ್ರೀಗಳಿಗೆ ಅಗೌರವ ತೋರಿ ಲಿಂಗಾಯತರ ಸ್ವಾಭಿಮಾನವನ್ನ ಕೆಣಕಿದ್ದಾನೆ.

ಆದರೆ ಇಂತಹ ಲಿಂಗಾಯತ ವಿರೋಧಿಗೆ; ಲಿಂಗಾಯತ ಪ್ರಚಾರಕರು ನಾವು,  ಬಸವ ಅನುಯಾಯಿಗಳು – ಶರಣ ತತ್ವ ತಿಳಿದವರು ಎಂದು ಉದ್ಗರಿಸುವ ರಮಣಶ್ರೀ ಎಸ್. ಷಡಕ್ಷರಿ ಅವರು ಶರಣ ಸಾಹಿತ್ಯ ಪರಿಷತ್ತಿನ ವೇದಿಕೆಯಲ್ಲಿ ಲಿಂಗಾಯತ ವಿರೋಧಿ ವಿಶ್ವೇಶ್ವರ ಭಟ್ಟನನ್ನ ಅತಿಥಿಯಾಗಿ ಕರೆದಿರುವುದು ಲಿಂಗಾಯತರಿಗೆ ಮತ್ತು ಬಸವಣ್ಣನಿಗೆ ಮಾಡಿರುವ ದೊಡ್ಡ ಅವಮಾನ!

ಜೊತೆಗೆ ಲಿಂಗಾಯತವನ್ನ ವಿರೋಧಿಸಿ ನಮ್ಮವರಿಗೆ ಅವಮಾನ ಮಾಡಿದ್ದ ಲೇಖಕಿ ವೀಣಾ ಬನ್ನಂಜೆ ಅವರಿಗೆ ರಮಣಶ್ರೀ ಶರಣ ಪ್ರಶಸ್ತಿ ಕೊಡುತ್ತಿರುವುದು ಹಾಸ್ಯಾಸ್ಪದವಾಗಿದೆ.  ಜೊತೆಗೆ ಈ ಸಮಾರಂಭಕ್ಕೆ ಲಿಂಗಾಯತರೆನಿಸಿಕೊಂಡವರು ಹೋಗುವುದೆಂದರೆ ಅದು ಬಸವಾದಿ ಪ್ರಮಥರಿಗೆ ಮಾಡುವ ಅವಮಾನ.

ಎಸ್. ಷಡಕ್ಷರಿಯವರು ತಮಗೆ ಅಷ್ಟೊಂದು ಆಸೆ ಇದ್ದರೆ ತಮ್ಮದೆ ಹೆಸರಿನಲ್ಲಿ ತಮ್ಮದೆ ವೇದಿಕೆಯಲ್ಲಿ ಯಾರಿಗಾದರು ಪ್ರಶಸ್ತಿ ಕೊಟ್ಟುಕೊಳ್ಳಲಿ ಅದಕ್ಕೆ ಯಾರಿಗೂ ಅಭ್ಯಂತರವಿಲ್ಲ ಆದರೆ ಬಾಯಲ್ಲಿ ಬಸಪ್ಪ ಹೊಟ್ಟೆಲಿ ನಾಗಪ್ಪ ಎನ್ನುವಂತೆ ಬಸವಾದಿ ಶರಣರ ಹೆಸರೆಳಿಕೊಂಡು ಬದುಕಿ ಅವರ ಹೆಸರಿನಲ್ಲಿ ಇಂದು ಬಸವ ವಿರೋಧಿಗಳಿಗೆ ಮಣೆ ಹಾಕುವವರಿಗೆ ಏನೆನ್ನಬೇಕೊ ತಿಳಿಯುತ್ತಿಲ್ಲ.
ಆಣೆಮುತ್ತು ಖ್ಯಾತಿಯ ಎಸ್. ಷಡಕ್ಷರಿಯವರೆ,  ನಿಮ್ಮ ಈ ನಡೆಯಿಂದ ಶರಣ ಸಮುದಾಯಕ್ಕೆ ಅವಮಾನವಾಗಿದೆ, ಅಪಾರ ನೋವುಂಟಾಗಿದೆ. ಈಗಲಾದರೂ ವಿಷಭಟ್ಟ ಸಮಾರಂಭದಲ್ಲಿ ಭಾಗಿಯಾಗದಂತೆ ನೋಡಿಕೊಳ್ಳಿ.  ನಿಮ್ಮ ಈ ಇಬ್ಬಂದಿ ಆಟವನ್ನು ಇಲ್ಲಿಗೆ ನಿಲ್ಲಿಸಿ ಎಂದು ಒಬ್ಬ ಬಸವ ಭಕ್ತನಾಗಿ ಹೇಳುತ್ತಿದ್ದೇನೆ. ಬಸವ ವಿರೋಧಿಗಳನ್ನ ದೂರ ಇಡಿ, ಬಸವ ಧರ್ಮವನ್ನ ಉಳಿಸಿ ಬೆಳೆಸಿ! ನೀವು ನಿಜ ಲಿಂಗಾಯತರಾದರೆ ಲಿಂಗಾಯತ ವಿರೋಧಿಗಳನ್ನು ಶರಣ ಸಾಹಿತ್ಯ ಪರಿಷತ್ತಿನಡಿ ತರಬೇಡಿ.
ಇಲ್ಲವಾದಲ್ಲಿ ಶರಣ ಸಮೂಹ ಎಚ್ಚರವಾಗುತ್ತಿದೆ. ಎಚ್ಚರಿಸುತ್ತಿದ್ದೇವೆ. ಎಚ್ಚರಿಕೆಯಿಂದಿರಿ.
ಇಲ್ಲವಾದರೆ, ಸಭೆಯಲ್ಲೇ ಪ್ರತಿಭಟನೆ ಎದುರಿಸಬೇಕಾಗುತ್ತದೆ.
ದಯವಿಟ್ಟು ನಿಜ ಬಸವ ಅನುಯಾಯಿಗಳಿಗೆ ನೋವು ಕೊಡಬೇಡಿ. ನಿಮ್ಮ ಒಳ್ಳೆಯ ಕೆಲಸದ ಜೊತೆ ನಾವಿರುತ್ತೇವೆ.
ಜೈ ಬಸವ.

ಶಿವಾನಂದ ಗುಂಡಾನವರ

Related Articles

ಇತ್ತೀಚಿನ ಸುದ್ದಿಗಳು