Friday, June 14, 2024

ಸತ್ಯ | ನ್ಯಾಯ |ಧರ್ಮ

ದಕ್ಷಿಣ ಕನ್ನಡ: ಐವರು ಬಜರಂಗದಳ ಕಾರ್ಯಕರ್ತರಿಗೆ ಗಡೀಪಾರು ನೋಟಿಸ್‌

ಮಂಗಳೂರು: ಕೋಮು ಘರ್ಷಣೆ, ಹಲ್ಲೆ ಪ್ರಕರಣಗಳಲ್ಲಿ ಗೋವು ಸಾಗಾಟ, ನೈತಿಕ ಪೊಲೀಸ್‌ಗಿರಿ ಮತ್ತಿತರ ಪ್ರಕರಣಗಳಲ್ಲಿ ಭಾಗಿಯಾದ ಆರೋಪದ ಮೇಲೆ ದಕ್ಷಿಣ ಕನ್ನಡ ಜಿಲ್ಲೆಯ ಐವರು ಬಜರಂಗದಳ ಕಾರ್ಯಕರ್ತರಿಗೆ ಅಧಿಕಾರಿಗಳು ಗಡೀಪಾರು ನೊಟೀಸ್ ಜಾರಿ ಮಾಡಿದ್ದಾರೆ.

ಅವರನ್ನು ಬೇರೆ ಜಿಲ್ಲೆಗಳಿಗೆ ಏಕೆ ಗಡೀಪಾರು ಮಾಡಬಾರದು ಎಂದು ನೋಟಿಸ್‌ನಲ್ಲಿ ಕೇಳಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ದಿನೇಶ್, ಪ್ರಜ್ವಲ್, ಲತೇಶ್ ಗುಂಡ್ಯ, ನಿಶಾಂತ್ ಮತ್ತು ಪ್ರದೀಪ್ ಅವರಿಗೆ ನೋಟಿಸ್ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಲತೇಶ್ ಗುಂಡ್ಯ ಅವರು ಪುತ್ತೂರು ಜಿಲ್ಲೆಯ ಬಜರಂಗದಳದ ಸಹ ಸಂಯೋಜಕರಾಗಿದ್ದಾರೆ.

ಪ್ರಜ್ವಲ್ ಮತ್ತು ದಿನೇಶ್ ಬಜರಂಗದಳದಲ್ಲಿ ತಾಲೂಕು ಮಟ್ಟದ ಜವಾಬ್ದಾರಿಯನ್ನು ಹೊಂದಿದ್ದು, ಇನ್ನಿಬ್ಬರು ಬಲಪಂಥೀಯ ಸಂಘಟನೆಯ ಸ್ವಯಂಸೇವಕರು.

ಅವರನ್ನು ಏಕೆ ಗಡೀಪಾರುಗೊಳಿಸಬಾರದು ಎಂದು ಪ್ರಶ್ನಿಸಿ ನವೆಂಬರ್ 22ರಂದು ಪುತ್ತೂರಿನಲ್ಲಿ ಸಹಾಯಕ ಆಯುಕ್ತರ ಮುಂದೆ ಹಾಜರಾಗುವಂತೆ ನೋಟಿಸ್‌ನಲ್ಲಿ ತಿಳಿಸಲಾಗಿದೆ.

ಕರ್ನಾಟಕ ಪೊಲೀಸ್ ಕಾಯಿದೆ, 1953ರ ಸೆಕ್ಷನ್ 55ರ ಅಡಿಯಲ್ಲಿ ಈ ನೋಟಿಸ್ ನೀಡಲಾಗಿದೆ. ಒಮ್ಮೆ ಅವರು ಪ್ರಾಧಿಕಾರದ ಮುಂದೆ ಹಾಜರಾದ ನಂತರ ಅವರ ವಿರುದ್ಧ ಒಂದು ವರ್ಷದ ಕಾಲ ಗಡೀಪಾರು ಆದೇಶವನ್ನು ಜಾರಿಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

ಜುಲೈ ತಿಂಗಳಿನಲ್ಲಿ ಮೂವರು ಬಜರಂಗದಳ ಕಾರ್ಯಕರ್ತರನ್ನು ಮಂಗಳೂರು ನಗರದಿಂದ ಗಡೀಪಾರು ಮಾಡಲಾಗಿತ್ತು. ಆದರೆ, ಸಂಘಟನೆಯು ಸರಕಾರವನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿ ತಡೆಯಾಜ್ಞೆ ಪಡೆದಿತ್ತು.

Related Articles

ಇತ್ತೀಚಿನ ಸುದ್ದಿಗಳು