Friday, June 21, 2024

ಸತ್ಯ | ನ್ಯಾಯ |ಧರ್ಮ

ಕೆಟ್ಟು ಅಪ್ಪುನ್ಮನೆಗ್ ಮಾತ್ರ ಹೋಗ್ಬಾರ್ದು”

ಕುಡಿದ ಹುಳಿ ಮಜ್ಜಿಗೆ, ಬೆಣ್ಣೆಯ ಜಿಡ್ಡಿನ ಸಲುವಾಗಿ ರಾತ್ರಿ ಇಡೀ  ಕಕ್ಕಿ ಕಕ್ಕಿ ಸುಸ್ತಾಗಿ ಮಲಗಿದ್ದ ಗಂಗೆಗೆ ಮುಂಜಾನೆ ಅತ್ತೆ ಚಿಕ್ಕತಾಯಮ್ಮ ಬಂದು ಕಾಲಿನಲ್ಲಿ ತಿವಿದು ತಿವಿದು ಎಬ್ಬಿಸಿದಾಗಲೆ ಎಚ್ಚರ. “ಎಷ್ಟೊತ್ಕಂದ್ರೆ ಅಷ್ಟೊತ್ತಿಗೆದ್ದೇಳಕ್ಕೆ ಇದೇನು ನಿಮ್ಮಪ್ಪುನ್ ಮನೆ ಕೆಟ್ಟೋಯ್ತಾ .. ಎದ್ದೋಗಿ ಕೊಟ್ಟಿಗೆ ಕಸ ಹಾಕು ನಡಿ” ಕಣ್ಣು ಬಿಡುತ್ತಿದ್ದಂತೆ ಕಿವಿಗಪ್ಪಳಿಸಿದ ಅತ್ತೆಯ ಮಾತಿಗೆ ಎರಡಾಡದ ಗಂಗೆ  ಸಣ್ಣಗೆ ನರಳಿ ಮಗ್ಗುಲು ಬದಲಾಯಿಸಿ ಮತ್ತೆ ಕಣ್ಣು ಮುಚ್ಚಲೆತ್ನಿಸಿದಳು . 

ಮಲಗುವ ಕೋಣೆಯಿಂದೆದ್ದು ಬಂದ ಮೈದುನ ಪರಮೇಶ “ಏನ್ರತ್ಗೆ ಅಕ್ಕ ಹೇಳ್ತಿರೋದು ಕೇಳ್ತಿಲ್ವ ಏಳೇಳಿ ಮ್ಯಾಕೆ” ಎನ್ನುತ್ತಿದ್ದಂತೆ  ಮೈಮೇಲೆ ಕುದಿನೀರು ಬಿದ್ದವಳಂತೆ ದಡ್ಡನೆ ಮೇಲೆದ್ದು, ಅವನ ಕೊರಳ ಪಟ್ಟಿಹಿಡಿದು “ನಾನೇನು ನೀನ್ ಕಟ್ಕೊಂಡಿರೋ ಹೆಂಡ್ತಿನೇನ್ಲಾ. ಇಷ್ಟು ದಿನ ಅತ್ಗೆ ಅತ್ಗೆ ಅಂತ ಬೆನ್ನಿಂದೆ  ಸುತ್ಕೊಂಡ್ ಓಡಾಡ್ತಿದ್ದೋನು ಈಗೇನು ಮೈ ಮೇಲೆ ದಯ್ಯ ಬಡ್ಕೊಂಡೋನಂಗ್ ಮಾತಾಡ್ತಿ.  ಬೇಕಾದ್ರೆ ನೀನೇ ಆ ಕಸ ಬಾಚಾಕೋ ಹೋಗು”…. ಗಂಗೆಯ ಮಾತಿನ್ನೂ ಮುಗಿದಿರಲಿಲ್ಲ. ಉಸಿರು ತಿರುಗಿಸಿಕೊಳ್ಳಲು ಆಗದಷ್ಟು ಬಲವಾಗಿ ಅವಳ ಬೆನ್ನಿನ ಮೇಲೆ  ದಪ್ ಎಂದು ಗುದ್ದಿದಳು ಚಿಕ್ಕತಾಯಮ್ಮ. “ಏನೇ ಮಾರಾಜುನ್ ಮೊಮ್ಮಗ್ಳೆ ಈ ಧಿಮಾಕ್ನೆಲ್ಲ ಬುಟ್ಟು ನಾವು ಹೇಳ್ದಂಗೆ ಕೇಳ್ಕೊಂಡಿರಂಗಿದ್ರೆ ಇರು. ಇಲ್ಲ ನಿಮ್ಮಪ್ಪುನ್ ಮನೆಗೆ ಗಾಡಿ ಬುಡ್ತಾ ಇರು” ಕಡ್ಡಿ ಮುರಿದಂತೆ ಹೇಳಿ ಪೊರಕೆ ತಂದು ಗಂಗೆಯ ಮುಂದೆಸೆದು ಹೋದಳು.

“ಕೆಟ್ಟು ಅಪ್ಪುನ್ಮನೆಗ್ ಮಾತ್ರ ಹೋಗ್ಬಾರ್ದು” ಎಂದು ಎಂದೋ ನಿರ್ಧರಿಸಿದ್ದ ಗಂಗೆ, ತನ್ನ ಮೊಂಡಾಟ ಬದಿಗೊತ್ತಿ ಪೊರಕೆ ಹಿಡಿದು ಕೊಟ್ಟಿಗೆಗೆ ನಡೆದಳು. ಚಿಕ್ಕವಳಿದ್ದಾಗ ಅಣ್ಣ ಚಂದ್ರಹಾಸ ತನ್ನ ಹೆಗಲಿಗೆ ಬಿದ್ದಿದ್ದ ಈ ಕೆಲಸವನ್ನು ಐದು ಪೈಸೆಯ ಆಸೆ ತೋರಿಸಿ ಇವಳ ಕೈಯಲ್ಲಿ ಮಾಡಿಸುತ್ತಿದ್ದ ದಿನಗಳು ನೆನಪಾದವು ಗಂಗೆಗೆ. ತುಂಬು ಹೊಟ್ಟೆ ಹೊತ್ತು ಅಸ್ ಉಸ್ ಎಂದು ಕೆಲಸ ಮುಗಿಸಿದವಳಿಗೆ ಬಾಯಿ ಬಡಿದುಕೊಳ್ಳುವಂತಹ ಹಸಿವು ಶುರುವಾಯಿತು. ಕೈಕಾಲು ತೊಳೆದು ಸೀದಾ ಅಡಿಗೆ ಕೋಣೆಗೆ ನುಗ್ಗಿದವಳೆ ಅನ್ನಕ್ಕಿಟ್ಟುಕೊಳ್ಳಲು ಅಕ್ಕಿ ಡಬ್ಬಕ್ಕೆ ಕೈ ಹಾಕಿದಳು. ಪಕ್ಕದಲ್ಲಿಯೇ ಒಲೆ ಮುಂದೆ ಕೂತಿದ್ದ ಚಿಕ್ಕ ತಾಯಮ್ಮ ಚಂಗನೆದ್ದು  “ಈ ಅಕ್ಕಿ ಮಕ್ಳಿಗೆ ಮಾತ್ರ, ಹಿಟ್ಗೆ ಎಸ್ರಿಟ್ಟಿದಿನಿ ತಿರ್ವೊ ತನ್ಕ ವಸಿ ತಡ್ಕೊ ರಾಕ್ಷಸಿ ಹಂಗಾಡ್ಬೇಡ” ಗಬಕ್ಕನೆ ಅಕ್ಕಿ ಡಬ್ಬವನ್ನು ಕಿತ್ತುಕೊಂಡು ತನ್ನ ಅಂಡಿನ ಕೆಳಗಿಟ್ಟುಕೊಂಡು ಒಲೆ ಉರುಬುತ್ತಾ ಕೂತಳು.

ತಪ್ಪಲೆ ಕೆರೆದು ತೆಗೆದ ಕೊನೆಯ ಮುದ್ದೆಯೊಂದಿಗೆ, ಉಪ್ಪು ಹಸಿರು ಮೆಣಸು, ಹುಣಸೆ ಹಣ್ಣನ್ನು ತಂದು ಗಂಗೆಯ ಮುಂದೆ ಕುಕ್ಕಿ “ತಗೋ ಕಿವ್ಕೊಂಡುಂಡು  ಎಮ್ಮೆ ಮೇಯ್ಸಕೋಗು” ಎಂದು ತಾಕೀತು ಮಾಡಿ ಹೋದಳು ಚಿಕ್ಕತಾಯಮ್ಮ. ಅತ್ತೆಯ ಮಾತು ಕೇಳಿ ಕ್ಷಣ ಗರ ಬಡಿದಂತಾದ ಗಂಗೆ  ಸಾವರಿಸಿಕೊಂಡು ” ನಂಗೆ ನಾಚ್ಕೆ ಆಯ್ತದೆ ಕಣ್ ಅತ್ಯಮ್ಮ ನಿಮ್ ದಮ್ಮಯ್ಯ ಎಮ್ಮೆ ಮೇಸಕ್ ಮಾತ್ರ ಕಳುಸ್ಬೇಡಿ” ಎಂದು ಗೋಗರೆದುಕೊಂಡಳು. ಚಂಡಿಯಂತೆ ಮುನಿದು ನಿಂತ ತಾಯಮ್ಮ “ಏನಂದೆ ಎಮ್ಮೆ ಮೇಸದು ನಾಚಿಗೆಟ್ ಕೆಲಸ ಅಂತಿಯೇನೆ ರಂಡೆ. ನಾನು ಅದುನ್ ಮಾಡಿ ಮಗುನ್ ಬೆಳೆಸಿದ್ದುಕ್ಕೆ ನೀನು ಇವತ್ತು ಹೊಟ್ಟೆ ಹೊತ್ಕೊಂಡ್ಬಂದು ಕೂತಿರದು ತಿಳ್ಕೊ. ನಿಮ್ಮಪ್ಪುನ್ ಮನೆಗ್ಹೋಗಿ ಆಸ್ತಿ ಇಸ್ಕೊಂಡ್ ಬಾ ಮತ್ತೆ ಕೂರ್ಸಿ ಅನ್ನ ಹಾಕ್ತೀನಿ. ಇಲ್ದಿದ್ರೆ ನನ್ ಮಗ ಹೇಳ್ದಂಗೆ ಕೇಳ್ಕೊಂಡು ಸಂಪಾದ್ನೆಗಿಳಿ, ಅಪ್ಪುನಂತ ಸೊಸೆ ಅಂತ ಊರ್ತುಂಬಾ ಮೆರುಸ್ತೀನಿ. ಆರ್ಕಾಸ್ಗಿಲ್ಲ ಮೂರ್ಕಾಸ್ಗಿಲ್ಲ ಮರ್ಯಾದೆ ಬೇರೆ ಕೇಡು ನಿನ್ ಮಕ್ಕೆ. ಬಾಯ್ಮುಚ್ಕೊಂಡು ಉಂಡು ನಡಿಯೇ” ಕಿವಿಗಡಚಿಕ್ಕುವಂತೆ ಚೀರಿಳು. 

ನುಂಗಿದ ಹಿಟ್ಟು ಗಂಟಲಲ್ಲಿ ಸಿಕ್ಕಿಕೊಂಡಂತೆ ಒದ್ದಾಡುತ್ತಿದ್ದ ಗಂಗೆ, ತಡೆಹಿಡಿಯಲಾರದ ಕಣ್ಣೀರನ್ನು ಮರೆಮಾಡಲು ತಲೆ ತುಂಬಾ ಸೆರಗೊದ್ದು, ಎಮ್ಮೆಯ ಹಗ್ಗ ಹಿಡಿದು ಕೊಟ್ಟಿಗೆಯಿಂದ ಹೊರ ಬಂದಳು. ದಡ್ಡನೆ ಮಂಕರಿಯೊಂದಿಗೆ ಪ್ರತ್ಯಕ್ಷಳಾದ ತಾಯಮ್ಮ  “ನೋಡು ಎಮ್ಮೆ ಹಾಕಿದ್ ಸಗಣಿ ನೆಲುಕ್ ಬೀಳ್ದಂಗೆ ಇದ್ರೊಳಕೆ ಹಿಡಿಬೇಕು. ಮಣ್ಣಿಗೇನಾರ ಬಿತ್ತೊ  ಹೊಟ್ಟೆಗ್ ತಣ್ಣೀರ್ ಬಟ್ಟೆನೆ ಗತಿ  ತಿಳ್ಕೊ. ಭುಸುಗುಟ್ಟಿ  ಮಂಕರಿ ಕುಕ್ಕಿ ಒಳ ನಡೆದಳು.

ಮದುವೆಯಾದ ಹೊಸತಿನಲ್ಲಿ ಸಂಪಿಗೆ ಕಟ್ಟೆಯ ಎಸ್. ಐ ನ ದೆಸೆಯಿಂದ ಇಡೀ ಊರಿನವರ ಗೌರವಕ್ಕೆ ಪಾತ್ರಳಾಗಿದ್ದ ಗಂಗೆ, ಈಗ ಅದೇ ಊರಿನವರೆದುರು ಗತಿ ಕೆಟ್ಟವಳಂತೆ ಕಂಕುಳಲ್ಲಿ ಮಂಕರಿ ಇರುಕಿ, ಒಂದು ಕೈಲಿ ಎಮ್ಮೆಗಳ ಹಗ್ಗವನ್ನೂ, ಇನ್ನೊಂದು ಕೈಲಿ ಬಾರುಕೋಲನ್ನು ಹಿಡಿದು ತಲೆ ಎತ್ತದಂತೆ ಮಗುಮ್ಮಾಗಿ ಬಂದು ಹೊಲ ಸೇರಿದಳು. 

ಸಂಜೆಯ ಹೊತ್ತಿಗಾಗಲೇ, ಎಮ್ಮೆಯ ಹಿಂದೆ ಹೋದ ತುಂಬು ಬಸುರಿ ಗಂಗೆಯ ಚಿತ್ರ ಬಾಯಿಂದ ಬಾಯಿಗೆ ತಲುಪಿ ಊರವರ ಎದೆಯಲ್ಲಿ ಅನುಕಂಪದ ಹೊಳೆಯೇ ಹರಿದಿತ್ತು.  ಘಟವಾಣಿ ತಾಯಮ್ಮನಿಗೆ ಸಾಲುಮುನ್ನಾಗಿ ಶಾಪಹಾಕಿ ಸಮಾಧಾನ ಗೊಳ್ಳಲೆತ್ನಿಸಿದರು ಊರ ಜನ. ಕೆಲವರಂತೂ ಕುತೂಹಲ ತಾಳಲಾರದೆ ಏನೇನೋ ನೆಪ ಹುಡುಕಿ ಬಂದು ಗಂಗೆಯನ್ನು ಮಾತಾಡಿಸಿ ಹೋದರು. 

ಹಿಂದಿನ ಕಂತು ಓದಿದ್ದೀರಾ? “ಹಂಗಿದ್ರೆ ನಾನು ಈ ಮನೆಗೆ ಏನು ಅಲ್ವಾ ಅತ್ಯಮ್ಮ?”

ಮೊದಮೊದಲು ಗಂಗೆಗೆ ಇವೆಲ್ಲ ಸಂಕೋಚ ಎನ್ನಿಸಿದರು  ಊರಿನವರು ಅವಳಿಗೆ ತೋರುತ್ತಿದ್ದ  ಪ್ರೀತಿ ಮತ್ತು ಕಾಳಜಿಗಳು,  ನೀರಸವಾಗಿದ್ದ ಆ ಮನೆಯಲ್ಲಿ ಉಸಿರು ಕಟ್ಟಿ ಬದುಕಲು ಅವಳಿಗೆ ಇಂಬಾಗಿ ನಿಂತವು.  ಒಂದು ನಾಲ್ಕು ದಿನ ಮಧ್ಯಾಹ್ನದ ಹೊತ್ತು  ಹಿಟ್ಟು ತಂದು ಕೊಟ್ಟು ಹೋದ ರತ್ನ ಐದನೆಯ ದಿನಕ್ಕೆ ಇತ್ತ ತಲೆಹಾಕಲೇ ಇಲ್ಲ. ಗಂಗೆಯ ತೊಳಲಾಟ ನೋಡಲಾರದ ಜೊತೆಯೊಂದಿಗರು ತಾವು ತಂದ ಬುತ್ತಿಯನ್ನೇ ಅವಳೊಂದಿಗೆ ಹಂಚಿ ಉಣ್ಣುತ್ತಾ ಹಸಿವು ತಣಿಸುತ್ತಿದ್ದರು.  ಊರಿನ ಹಿರೇಗೌಡರ ಮನೆಯ ಕೆಲಸದಾಳು ಹದಿಮೂರರ ಪೋರಿ ಶಿವಿಲಿಂಗಿ ಕೂಡ ಗಂಗೆ ಎಷ್ಟು ಬೇಡವೆಂದರು ಕೇಳದೆ ಕದ್ದು ಮುಚ್ಚಿ ಕೋಳಿಮೊಟ್ಟೆ ತಂದು  ತಿನ್ನಿಸಿ, ಅವಳ ಹೊಟ್ಟೆಯ ಕೂಸಿನ ಮೇಲೊಮ್ಮೆ ಕೈಯಾಡಿಸಿ ಮುದಗೊಳ್ಳುತ್ತಿದ್ದಳು. ಒಂದು ದಿನ  ಹೀಗೆ ಕದ್ದು ಮೊಟ್ಟೆ ಹೊತ್ತು ತರುತ್ತಿದ್ದ ಹುಡುಗಿ ಹಿರೇಗೌಡರ ಹೆಂಡತಿ ಕೈಗೆ ಸಿಕ್ಕಿಬಿದ್ದಿತು. ಅವಳಿಂದ ಗಂಗೆಯ ಪರಿಸ್ಥಿತಿಯನ್ನೆಲ್ಲಾ  ತಿಳಿದುಕೊಂಡ ಹಿರೇಗೌಡರ ಹೆಂಡತಿ, ಅನುಕಂಪಗೊಂಡು  ತಾನೇ  ಪ್ರತೀ ದಿನ  ಮುತುವರ್ಜಿ ವಹಿಸಿ ಗಂಗೆಗಾಗಿ ಬೇಯಿಸಿದ ಕಾಳು ಸೊಪ್ಪು ಸೆದೆ ಹಣ್ಣು ಹಂಪಲುಗಳನ್ನು ಇದೇ ಶಿವಲಿಂಗಿ ಕೈಯಲ್ಲಿ ಕೊಟ್ಟು  ಕಳುಹಿಸ ತೊಡಗಿದಳು. ತುಸು ಬಡಕಲಾಗಿ ಹೊಟ್ಟೆ ಮಾತ್ರ ಎದ್ದು ಕಾಣುತ್ತಿದ್ದ ಗಂಗೆಯ ದೇಹ ಈಗ ನೋಡ ನೋಡುತ್ತಿದ್ದಂತೆ  ತುಂಬಿಕೊಳ್ಳ ಹತ್ತಿತ್ತು. ಗಂಗೆಯನ್ನು ಸೂಕ್ಷ್ಮವಾಗಿ ಗಮನಿಸಿದ  ಚಿಕ್ಕತಾಯಮ್ಮ ಮಾತ್ರ ಒಳಗೊಳಗೆ ಕುದಿಯುತ್ತಾ, ಆಗಾಗ ಆವಿಹೊರ ಚೆಲ್ಲಿದಂತೆ “ಯಾವ ಮಿಂಡ್ಗಾರುನ್ ಆರೈಕೆಯೋ ಏನೋ ಕನೇ ರತ್ನ, ನಿಮ್ಮ್ ಅತ್ಗೆ ಮೈಕೈ ತುಂಬ್ಕೊಂಡು ಕುಣಿತಾವ್ಳಪ್ಪಾ ” ಎಂದು ಉಜ್ಜಾಡುತ್ತಾ ಕೊಂಕಾಡಿ ತಣಿಯುತ್ತಿದ್ದಳು. 

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

Related Articles

ಇತ್ತೀಚಿನ ಸುದ್ದಿಗಳು