Friday, April 26, 2024

ಸತ್ಯ | ನ್ಯಾಯ |ಧರ್ಮ

“ಹಂಗಿದ್ರೆ ನಾನು ಈ ಮನೆಗೆ ಏನು ಅಲ್ವಾ ಅತ್ಯಮ್ಮ?”

(ಈವರೆಗೆ…) ಮೋಹನ ರೂಮಿನೊಳಗೆ ಕೂಡಿಹಾಕಿದ ಹುಡುಗಿ ತಾನು ಪ್ರೀತಿಸಿದವನ ಬಲೆಗೆ ಬಿದ್ದು ಆತನೊಂದಿಗೆ ಓಡಿ ಬಂದಿರುವುದಾಗಿಯೂ, ಆತ ಮೋಹನನಿಗೆ ಆಕೆಯನ್ನು ಮಾರಿದ್ದಾಗಿಯೂ ಹೇಳಿದ ಕತೆ ಕೇಳಿ ಕರಗಿದ ಗಂಗೆ ಆಕೆಯನ್ನು ಹೊರಬಿಡುತ್ತಾಳೆ. ಮನೆಯಿಂದ ಓಡಿ ಹೋದ ಆಕೆಯನ್ನು  ಮೋಹನ ಮತ್ತೆ ರೂಮಿಗೆ ತಂದು ಕೂಡಿ ಹಾಕುತ್ತಾನೆ. ತಾನು ಅರ್ಜೆಂಟಾಗಿ ಹೈದರಾಬಾದಿಗೆ ಹೋಗಲಿರುವುದರಿಂದ ಗಂಗೆಯನ್ನು ಭೋಗನೂರಲ್ಲಿ ಬಿಟ್ಟು ಹೋಗುವುದಕ್ಕಾಗಿ  ಇಬ್ಬರೂ ತಕ್ಷಣ ಹೊರಡುತ್ತಾರೆ.. ಭೋಗನೂರಿನಲ್ಲಿ ಏನಾಗುತ್ತದೆ ? ಓದಿ.. ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼಯ ಐವತ್ತ ಐದನೆಯ ಕಂತು.

ಕಾರು ಭೋಗನೂರಿನ ಮನೆಯ ಮುಂದೆ ಬಂದು ನಿಂತಾಗ ಅದಾಗಲೇ ಪೂರ್ವದ ಸೂರ್ಯ ಪಶ್ಚಿಮಕ್ಕಿಳಿದು ಇಡೀ ವಾತಾವರಣ ತನ್ನ ರಂಗು ಕಳೆದುಕೊಂಡು ಪೇಲವವಾಗಿತ್ತು. ಮೋಹನನ ಅವ್ವ ಚಿಕ್ಕತಾಯಮ್ಮ ಮುಂದಿನ ಜಗಲಿಕಟ್ಟೆಯ ಮೇಲೆ ಕೂತು ಕಾಲು ನೀವಿಕೊಳ್ಳುತ್ತಾ  ತನ್ನ ತಮ್ಮ ಅಪ್ಪಜ್ಜಣ್ಣನೊಂದಿಗೆ ಮಾತಿಗಿಳಿದಿದ್ದಳು. ಇದ್ದಕ್ಕಿದ್ದಂತೆ ಬರ್ರನೆ ಕಾರು ಬಂದು ಮನೆಯ ಮುಂದೆ ನಿಂತಿದ್ದನ್ನು ಕಂಡು ಅವಳ ಜೀವವೆಲ್ಲಾ ಪುಳಕಗೊಂಡಂತಾಗಿ ” ಅಯ್ಯೋ ನಮ್ಮ್ ಮೋನಿ ಬಂದ ಕಣ್ಲ ಅಪ್ಪಜ್ಜಣ್ಣ ಓಡೋಡು ಸಾಮಾನಿಳುಸ್ಕೊ”  ಎಂದು ಆತುರಾತುರವಾಗಿ ತನ್ನ ತುಟಿಯ ಅಂಚಿನಿಂದ ಸೋರುತ್ತಿದ್ದ ಎಲೆ ಅಡಿಕೆ ರಸವನ್ನು ಉಜ್ಜಿಕೊಳ್ಳುತ್ತಾ ಮೊಣಕಾಲಿಗೆ ಕೈಕೊಟ್ಟು ಮೇಲೆದ್ದಳು. 

ಇತ್ತೀಚೆಗೆ ಪ್ರತಿ ಬಾರಿಯೂ ಮೋಹನ ಊರಿಗೆ ಬರುವಾಗೆಲ್ಲಾ, ಸುಕನ್ಯಾ ಹೊರಿಸಿ ಕಳುಹಿಸುತ್ತಿದ್ದ  ಹಣ್ಣು ಹಂಪಲು, ತರಕಾರಿ, ಮನೆಗೆ ಬೇಕಾಗಿದ್ದ  ವಸ್ತುಗಳನ್ನೆಲ್ಲಾ ಹೊತ್ತು ತಂದು ಬೆಣ್ಣೆ ತುಪ್ಪದಲ್ಲಿ ಕೈ ತೊಳೆದುಕೊಂಡು ಹೋಗುವುದನ್ನು ರೂಢಿಸಿಕೊಂಡಿದ್ದ. ಆದರೆ ಇಂದು ಮೋಹನ ಬಂದ ಸ್ಥಿತಿಯೇ ಬೇರೆಯಾಗಿತ್ತು. ಕಾರಿನ ಹತ್ತಿರ ಬಂದ ಅಪ್ಪಜ್ಜಣ್ಣನ ಕೈಗೆ ಬಟ್ಟೆ ತುಂಬಿದ ಬ್ಯಾಗನ್ನು ಕೊಟ್ಟ ಮೋಹನ “ಈ ಸರಿ ಅಂತದ್ದೇನು ತಂದಿಲ್ಲ ಕಂತ್ ನಡ್ನನಡಿ” ಎಂದು  ಗಂಗೆಯನ್ನು ಇಳಿಸಿಕೊಂಡು ಮನೆ ಬಾಗಿಲಿಗೆ ಬಂದ. ತಮ್ಮ ಅಪ್ಪಜ್ಜಣ್ಣ ಹಿಡಿದ ಬ್ಯಾಗಿನ ಮೇಲೆ ಕಣ್ಣಾಡಿಸಿ ಉಬ್ಬರಿಸಿಕೊಂಡು ನಿಂತ ಚಿಕ್ಕತಾಯಮ್ಮ “ಏನೋ ಮೋನಿ ಈ ಸಂಪನ್ನೆನ್ಬೇರೆ ಬೆನ್ನಿಗ್ ಹಾಕ್ಕೊಂಡ್ ಬಂದ್ಬುಟ್ಟಿದ್ದೀಯಾ” ಎಂದು ಕೊಂಕಾಡಿ ಒಳಮನೆಗೆ ನಡೆದಳು. 

ಬೆಪ್ಪಾಗಿ ಗಂಡನ ಮುಖ ನೋಡಿದ ಗಂಗೆ “ಯಾಕೀ ನಾನ್ ಬರ್ಬಾರ್ದಿತ್ತಾ. ಅತ್ಯಮ್ಮ ಯಾಕೆ ಗಂಟ್ಮಖ ಹಾಕ್ಕೊಂಡ್ ಹೋಯ್ತಲ್ಲ” ಎಂದು ಚಡಪಡಿಸುತ್ತಾ ನಿಂತಳು.  ಸುಮ್ಮನಿರುವಂತೆ ಗಂಗೆಯತ್ತ ಕಣ್ಣು ಮಿಟುಕಿಸಿದ ಮೋಹನ, ಅವ್ವನ ಹಿಂದೆಯೇ ಅಡುಗೆ ಕೋಣೆಗೆ ಹೆಜ್ಜೆ ಹಾಕಿ ” ನೋಡಕ್ಕ ನಾನು ಅರ್ಜೆಂಟಾಗಿ ಹೈದ್ರಾಬಾದಿಗ್ ಹೋಗ್ತಿದ್ದೀನಿ ಬರೋದು ಒಂದೆರಡು ತಿಂಗಳಾಗ್ಬಹುದು ಅಲ್ಲಿ ತನ್ಕ ಗಂಗೂ ಇಲ್ಲೇ ಇರ್ಲಿ”….ಮೋಹನ ಪೂರ್ತಿಯಾಗಿ ಮಾತು ಮುಗಿಸುವ ಮೊದಲೆ ಚಿಕ್ಕ ತಾಯಮ್ಮ ದೊಡ್ಡ ದನಿ ಎತ್ತಿ “ಅವ್ಳಿಂದ ಮೂರ್ಕಾಸೀನ್ ಆದಾಯ ಇಲ್ಲ ಏನಿಲ್ಲ ಯಾಕಂಗ್ ಬೆನ್ಗಾಕ್ಕೊಂಡು ತಿರುಗ್ತಿಯೋ ನಾ ಕಾಣ್ಣಪ್ಪ….. ಗಂಗೆಯ ಕಿವಿ ಗಪ್ಪಳಿಸುವಂತೆ ರಾಗ ಎಳೆದು ಹೇಳಿದಳು. 

ಪಟ್ಟನೆ  ಅವ್ವನ ಬಾಯಿ ಮುಚ್ಚಿ ಹಿಡಿದ ಮೋಹನ ” ಅಯ್ಯೋ ಮೆತ್ತುಗ್ ಮಾತಾಡಕ್ಕ ಗಂಗು ಕೇಳುಸ್ಕೊಂಡ್ರೆ ಬೇಜಾರ್ ಮಾಡ್ಕೊತಳೆ…..” ಮತ್ತಷ್ಟು ದನಿ ಎತ್ತರಿಸಿದ ಚಿಕ್ಕ ತಾಯಮ್ಮ “ಅಯ್ಯೋ.. ಇದ್ದಿದ್ ಇದ್ದಂಗ್ ಹೇಳಿದ್ರೆ ಎದ್ದ್ ಬಂದು ಎದೆಗೊದ್ರಂತೆ. ಅಲ್ಲ ಹಗ್ಲೂ ರಾತ್ರಿ ಕಷ್ಟಪಟ್ಟು ದುಡ್ಡಾಕದೆಲ್ಲಾ ಆ ಹೆಣ್ಣು ಸುಕನ್ನಿ. ಅದ್ರು ಮೇಲೆ ಇಲ್ಲುದ್ ಕರ್ಣೆ ಈ ಅಬ್ಬೆ‌ಪಾರಿ ಮೇಲ್ಯಾಕೆ ಅಂತಿನಿ….” ಜಬ್ಬರ್ ದಸ್ತಿನಿಂದಲೇ ಕೇಳಿದಳು ಚಿಕ್ಕತಾಯಮ್ಮ. 

ಹೆಚ್ಚು ಮಾತಿಗೆ ನಿಲ್ಲದ ಮೋಹನ “ನೋಡಕ್ಕ ಅವ್ಳು ಅವ್ಳೇಯ…. ಇವ್ಳು ಇವ್ಳೇಯ… ಇವ್ಳಿಗೆ ನನ್ನ ಬಿಟ್ರೆ ಬೇರೆ ದಾರಿ ಗೊತ್ತಿಲ್ಲ. ಈಗ ಹೆಚ್ಚಿಗೆ ಮಾತ್ಬೇಡ  ಈ ದುಡ್ಡಿಟ್ಕೊ ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಬಂದು ಗಂಗುನ ಕರ್ಕೊಂಡು ಹೋಗ್ತೀನಿ” ಎಂದು ಅವ್ವನ ಕೈಗಷ್ಟು ದುಡ್ಡು ತುರಿಕಿ ಹೊರಬಂದ. ತನ್ನ ಕೈಲಿದ್ದ ಮಜ್ಜಿಗೆಯನ್ನು ಗಂಗೆಯ ಕೈ ಗಿಟ್ಟ ಮೋಹನ ” ನೋಡು ಹೊತ್ತೊತ್ತಿಗೆ ಸರಿಯಾಗಿ ತಿನ್ನು ಹೆದ್ರುಕೊಬೇಡ. ಎಷ್ಟು ಬೇಗ ಆಗುತ್ತೋ ಅಷ್ಟು ಬೇಗ ಬಂದ್ಬಿಡ್ತೀನಿ..ಎನ್ನುತ್ತಿದ್ದಂತೆ ಗಂಗೆಯ ಕಣ್ಣುಗಳಿಂದ ಪಟಪಟನೆ ಹನಿಗಳುದುರಿ ಮಜ್ಜಿಗೆಯೊಳಗೆ ಸೇರಿ ಕರಗಿಹೋದವು. 

ನಿಂತ ಕಾಲಿನ ಮೇಲೆ ಹೊರಟ ಗಂಡನನ್ನು ಬಿಟ್ಕೊಟ್ಟು, ಭಾರವಾದ ಎದೆ ಹೊತ್ತು ಬಂದು ರೂಮು ಸೇರಿದಳು ಗಂಗೆ. ಪ್ರಯಾಣದ ಆಯಾಸದಿಂದ ಊದಿ ನಿಂತಿದ್ದ ಕಾಲುಗಳನ್ನು ಚಾಚಿ ಹಾಗೆಯೆ ಉರುಳಿ ಕೊಂಡಿದ್ದವಳಿಗೆ ಯಾವಾಗಲೋ ನಿದ್ದೆ ಹತ್ತಿತ್ತು.  ಹೊಟ್ಟೆ ಚುರುಗುಟ್ಟಿ ಒಳಗಿದ್ದ ಕೂಸು ರಣರಂಗ ಎಬ್ಬಿಸಿದಾಗಲೇ ಗಂಗೆಗೆಚ್ಚರ. ಕಣ್ಣು ತೆರೆದು ನೋಡಿದಳು ಕತ್ತಲೆ ಗೌ.. ಎನ್ನುತ್ತಿತ್ತು. ಆಗಲೇ ಊಟದ ಕೆಲಸ ಮುಗಿಸಿ ನಾದಿನಿ ರತ್ನ ಹೊರಗಿನ ಬೀದಿ ಬಾಗಿಲಲ್ಲಿ ಪಾತ್ರೆ ತೊಳೆಯುವ ಸದ್ದು ಕೇಳಿಸಿತು. ಯಾರಾದರು ಊಟಕ್ಕೆ ಕರೆದಾರೇನೋ ಎಂದು ಒಂದಷ್ಟು ಹೊತ್ತು ಕಾದು ಕೂತಳು.

 ಎಷ್ಟೋ ಹೊತ್ತಿನ ಮೇಲೆ ಒಳ ಬಂದ ಚಿಕ್ಕ ತಾಯಮ್ಮ “ಏಳೇಳ್ ಮ್ಯಾಕೆ, ಇಲ್ಲಿ ನಾನು ರತ್ನುನು ಮಲಿಕೊತಿವಿ ಆ ನಡ್ಮನೇಲಿ ಹಾಸ್ಕೊಂಡು ಮಲಿಕೊ ಹೋಗು” ಎಂದು ತಾಕೀತು ಮಾಡಿದಳು. ಸಂಕಟದಿಂದಲೇ ಕಣ್ಣೀರು ತುಂಬಿಕೊಂಡು ಮೇಲೆದ್ದ ಗಂಗೆ ಏನೊಂದು ಮಾತಾಡದೆ ಹೊರನಡೆದಳು.  “ನೋಡು  ನಿನ್ನ ಬಟ್ಟೆಬರಿನೂ ತಕ್ಕೊಂಡೋಗಿ ಆ ಮೂಲೆಲೆ ಇಟ್ಕೊ ಈ ರೂಮಿನ್ಕಡೆ ತಲೆ ಹಾಕ್ಬೇಡ..” ಎನ್ನತ್ತಾ  ಗಂಗೆಯ ಬಟ್ಟೆ ಬರೆಗಳೊಂದಿಗೆ ಕೋಣೆಯ ಮೂಲೆಯಲ್ಲಿದ್ದ ಚಾಪೆಯನ್ನು ತೆಗೆದು ನಡುಮನೆಯತ್ತ ಬೀಸಿ ಬಾಗಿಲು ಮುಚ್ಚಿ ಮಲಗಿದಳು.

ಆ ಕ್ಷಣ ಗಂಗೆಗೆ, ಹೊಟ್ಟೆಯಲ್ಲೆಲ್ಲಾ  ಆಹಾಕಾರ ಎಬ್ಬಿಸಿ ಕುಣಿಯುತ್ತಿದ್ದ ಕೂಸನ್ನು ಸಂಬಾಳಿಸಿದರೆ ಸಾಕು ಎನ್ನುವಂತಾಗಿತ್ತು. ತನ್ನ ಭಯ ಸಂಕೋಚಗಳನ್ನೆಲ್ಲ ಬದಿಗೊತ್ತಿ ಅಡುಗೆ ಕೋಣೆಗೆ ನಡೆದಳು. ಪಾತ್ರೆಗಳೆಲ್ಲ ಖಾಲಿಯಾಗಿ ಬಣಗುಟ್ಟ ತೊಡಗಿದ್ದವು. ಸುತ್ತಲೂ ಕಣ್ಣಾಡಿಸಿದವಳಿಗೆ ತೊಲೆಯ ನೆಲುವಿನಲ್ಲಿ ತೂಗಾಡುತ್ತಿದ್ದ ಕರ್ರನೆಯ ಮಡಕೆ ಕಣ್ಣಿಗೆ ಬಿದ್ದಿತು. ಮೆಲ್ಲಗೆ ಅದನ್ನು ಇಳಿಸಿ ನೋಡಿದಳು ಹುಳಿ ಮಜ್ಜಿಗೆಯೊಳಗೆ ಮುದ್ದೆ ಗಾತ್ರದ ಬೆಣ್ಣೆ ತೇಲಾಡುತ್ತಿತ್ತು. ಹಸಿವು ತಾಳಲಾರದೆ ಒಂದೇ ಉಸಿರಿಗೆ ಬೆಣ್ಣೆ ಮುಕ್ಕಿ  ಹುಳಿ ಮಜ್ಜಿಗೆಯನ್ನು  ಗಟಗಟನೆ ಕುಡಿದು ತೆಗೀದಳು.

ಪಾತ್ರೆ ತೊಳೆದುಕೊಂಡು ಒಳ ಬಂದ ರತ್ನ ಖಾಲಿಯಾದ ಮಡಕೆಯನ್ನು ಕಂಡು ಅವ್ವನನ್ನು ಎಬ್ಬಿಸಿಕೊಂಡು  ಬಂದಳು.  ಚಿಕ್ಕತಾಯಮ್ಮನ ಕೋಪ ನೆತ್ತಿಗೇರಿ ಗಂಗೆಯ ಬೆನ್ನಿನ ಮೇಲೆ ಬಡ್ಡನೆ ಗುದ್ದಿ ” ನೀನೇನು ಮನ್ಸೆನೋ ರಾಕ್ಷಸಿನೋ ಮಕ್ಳುಗೂ ಹಾಕ್ದಂಗೆ, ತುಪ್ಪ ಕಾಸನ ಅಂತ ಕೂಡಿಟ್ಟಿದ್ ಬೆಣ್ಣೆನೆಲ್ಲಾ ನುಂಗಿ ನೀರ್ಕುಡ್ದಿದ್ದಿಯಲ” ಎಂದು ಮನೆಯ ಮಾಡು ಹಾರಿಹೋಗುವಂತೆ ಅರಚಿದಳು. ಆಯಾಸ, ಹಸಿವು, ಗಂಡನಿಲ್ಲದ ಖಾಲಿತನದಿಂದ ದಿಕ್ಕೆಟ್ಟಂತಾಗಿದ್ದ ಗಂಗೆಯ ತಾಳ್ಮೆಯು ಕೆಟ್ಟಿತು.  ಅತ್ತೆಯ ದನಿ ಮೀರಿಸುವಂತೆ “ಹಂಗಿದ್ರೆ ನಾನು ಈ ಮನೆಗೆ ಏನು ಅಲ್ವಾ ಅತ್ಯಮ್ಮ, ಒಂದು ತುತ್ತು ಅನ್ನ ಇಟ್ಟಿದ್ರೆ ನಿಮ್ಮ ಗಂಟೇನೋಗದು.  ನನ್ಗೆ ಹಸುವು ತಡೆಯಾಕ್ ಆಗ್ಲಿಲ್ಲ ಅದುಕ್ಕೆ ತಿಂದೆ ಏನೀಗ” ಎಂದು ತಿರುಗಿ ನಿಂತಳು. “ಹೂಂ ಮತ್ತೆ…..ನೀನು ಮಾರಾಜನ್ ಮೊಮ್ಮಗ್ಳು ನೋಡು ಮಾಡ್ಬೇರೆ ಇಕ್ತರೆ. ಬೇಕಾದ್ರೆ ಅಂಡ್ಬಗ್ಸಿ ಮಾಡ್ಕೊಂಡುಣ್ಣು.  ಬೆಣ್ಣೆ ಹಾಲು ಮೊಸ್ರು ತಿನ್ನೋ ಕಂತ್ರಿ ಕೆಲ್ಸ ಮಾಡ್ಬೇಡ” ಎಂದು ಕೆಂಗಣ್ಣು ಬಿಟ್ಟು ದಡ್ಡನೆ ರೂಮಿನ ಬಾಗಿಲಾಕಿಕೊಂಡು ಮಲಗಿದಳು.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು ಓದಿದ್ದೀರಾ? “ನಿಮ್ಮ್ ದಮ್ಮಯ್ಯ ಆ ಹುಡ್ಗಿನ ಬುಟ್ಬುಡಿ”

Related Articles

ಇತ್ತೀಚಿನ ಸುದ್ದಿಗಳು