Sunday, April 28, 2024

ಸತ್ಯ | ನ್ಯಾಯ |ಧರ್ಮ

“ನಿಮ್ಮ್ ದಮ್ಮಯ್ಯ ಆ ಹುಡ್ಗಿನ ಬುಟ್ಬುಡಿ”

“ನಂಗೆ ಈ ಕೆಲ್ಸ ಮಾಡೋಕೆ ಇಷ್ಟ ಇಲ್ಲ.. ಪ್ಲೀಸ್ ನಿನ್ನ ಕಾಲ್ ಹಿಡಿತೀನಿ.. ನನ್ನ ಬಿಟ್ಟು ಬಿಡು” ಒಳಗಿನಿಂದ ಒಂದೇ ಸಮನೆ ಬಾಗಿಲು ಬಡಿಯುತ್ತಾ ಅಳುತ್ತಿದ್ದಳು ಆ ಹುಡುಗಿ. ಅವಳ ಗೋಳಾಟ ಕೇಳಲಾರದ ಗಂಗೆ “ಅಲ್ಲ ಕನವ್ವ ನೀ ಹಿಂಗೆ ಯಾರಿಗೂ ಹೇಳ್ದೆ ಕೇಳ್ದೆ ಮನೆ ಬುಟ್ಟು ಬಂದಿರದು ಸರಿಯ ಹೇಳು? ಈ ದೊಡ್ಡ್ ಸಿಟಿಲಿ ನಿನ್ನ ಸುಮ್ನೆ ಬುಟ್ಟಾರ ಕೆಟ್ಟ್ ಜನಗೊಳು. ಇರು, ನಮ್ಮನೆಯವ್ರು ನಿನ್ನ ಅಣ್ಣದಿರ್ನ ಕರ್ಕೊಂಡು ಬರಕ್ಕ್ ಹೋಗವ್ರೆ, ಸುಮ್ನೆ ಅವ್ರ್ ಜೊತೆ ಊರಿಗೆ ಹೋಗಿ ಮರ್ಯಾದಿಲಿ ಬಾಳದ್ ನೋಡು” ಬಾಗಿಲ ಹೊರ ನಿಂತು ಆ ಹುಡುಗಿಗೆ ತಿಳಿ ಹೇಳಲು ಪ್ರಯತ್ನಿಸಿದಳು.

ಮೋಹನ ಮನೆಯಲ್ಲಿಲ್ಲ ಎಂದು ಅರಿತ ಹುಡುಗಿ ಇನ್ನಷ್ಟು ಚುರುಕಾದಳು “ಪ್ಲೀಸ್ ಮೇಡಂ ಒಂದು ನಿಮಿಷ ಬಾಗಿಲು ತೆಗೆದು ನನ್ನ ಮಾತು ಕೇಳಿಸಿಕೊಳ್ಳಿ” ಗೋಗರೆದ ಹುಡುಗಿಯ ಮಾತಿಗೆ ಕರಗಿ ಬಾಗಿಲು ತೆಗೆದಳು ಗಂಗೆ. ಆ ಹುಡುಗಿ ಒಂದೇ ಉಸಿರಿಗೆ “ತನ್ನ ಪ್ರಿಯಕರನನ್ನು ನಂಬಿ ಓಡಿ ಬಂದಿದ್ದು, ಆತ ಮೋಹನನಿಗೆ ತನ್ನನ್ನು ಮಾರಾಟ ಮಾಡಿ ಕಣ್ಣು ತಪ್ಪಿಸಿ ಓಡಿ ಹೋದದ್ದು, ಮೋಹನ ಈಗ ತನ್ನನ್ನು ಬಾಂಬೆಗೆ ಸಾಗಿಸಲು ಹವಣಿಸುತ್ತಿರುವುದು ಎಲ್ಲವನ್ನು ಹೇಳಿ “ನನ್ನಾಣೆಗೂ ನನಗಿಲ್ಲಿ ಯಾವ ಅಣ್ಣಂದಿರು ಇಲ್ಲ ಮೇಡಂ. ವಾಪಸ್ ಊರಿಗೆ ಹೋಗಿ ಬಿಡ್ತೀನಿ ಪ್ಲೀಸ್ ನನ್ನ ಇಲ್ಲಿಂದ ಬಿಟ್ಟುಬಿಡಿ” ಎನ್ನುತ್ತಾ ಗಂಗೆಯ ಕಾಲಿಗೆ ಬಿದ್ದು ಗೋಳಾಡಿದಳು.  

ಗಂಡನ ಮೇಲಿದ್ದ ಕುರುಡು ಪ್ರೀತಿಯೋ, ಅನಿವಾರ್ಯತೆಯೋ ಒಟ್ಟಿನಲ್ಲಿ ಅವನು ಹೇಳುತ್ತಿದ್ದದ್ದನ್ನೆಲ್ಲಾ ಚಾಚೂ ತಪ್ಪದೆ ನಂಬಿ ಪಾಲಿಸುತ್ತಿದ್ದ ಗಂಗೆ, ಕೂಡಲೇ ಎಚ್ಚೆತ್ತವಳಂತೆ  ತರಾತುರಿಯಲ್ಲಿ  ಬಾಗಿಲು ತೆಗೆದು “ಜ್ವಾಪಾನ ಬಿರ್ನ್ ಹೋಗ್ಬುಡವ್ವಾ” ಎಂದು ಆ ಹುಡುಗಿಯನ್ನು ಕಳುಹಿಸಿಯೇ ಬಿಟ್ಟಳು. ಬಾಗಿಲು ಹಾಕಿಕೊಂಡು ಒಳ ಬಂದವಳಿಗೆ ಮೋಹನನನ್ನು ನೆನೆದು, ಒಮ್ಮೆಲೆ ತಳಮಳ ಆರಂಭವಾಯಿತು. ಹೊಟ್ಟೆ ಕಲಸಿದಂತಾಗಿ ಓಡಿಹೋಗಿ ಬಾತ್ರೂಮು ಸೇರಿ ಬಾಗಿಲು ಮುಚ್ಚಿ ಕೂತಳು. ಗಂಡನ ಬಿರುಗಣ್ಣಿನಿಂದ ತಪ್ಪಿಸಿಕೊಳ್ಳಲು ಹೊಸ ಕಥೆಯೊಂದನ್ನು ಹೊಸೆಯುವುದರಲ್ಲಿ ತಲ್ಲೀನಳಾಗಿದ್ದ ಗಂಗೆಗೆ, ಇದ್ದಕ್ಕಿದ್ದಂತೆ ಹೊರಗಿನಿಂದ ದಬದಬನೇ ಬಾಗಿಲು ಬಡಿದ ಸದ್ದು ಕೇಳಿತು.

ಭಯದಿಂದ ತತ್ತರಿಸಿದ್ದ ಗಂಗೆಯ ದೇಹ ನಡುಗುತ್ತಿತ್ತು.  ಹೃದಯ ಸಿಡಿದು ಚೂರಾಗಿ ಬಿಡುವುದೋ ಎಂಬಂತೆ ಜೋರಾಗಿ ಬಡಿದು ಕೊಳ್ಳುತ್ತಿತ್ತು. ಶಕ್ತಿಕಳೆದುಕೊಂಡ ಕಾಲುಗಳು ರಚ್ಚೆ ಹಿಡಿದಂತೆ ಮುಂದಡಿಯಿಡಲಾರದೆ ಗಂಗೆಯನ್ನು ಪರದಾಡುವಂತೆ ಮಾಡಿತು. ಹೊರಗಿನಿಂದ ” ಎಲ್ಲ್ ಸತ್ತೆ ಗಂಗೂ, ಬೇಗ ಬಂದು ಬಾಗ್ಲು ತೆಗಿ” ಎನ್ನುವ ಗಡುಸು ದನಿ ಕೇಳಿಸಿತು. ತನ್ನ ಶಕ್ತಿಯನ್ನೆಲ್ಲಾ ಒಟ್ಟುಗೂಡಿಸಿ ಬಂದು ಬಾಗಿಲು ತೆಗೆದ ಗಂಗೆಯ ಎದುರು,  ಇಬ್ಬರು ದಾಂಡಿಗರ ಬಿಗಿಮುಷ್ಠಿಯನ್ನು ಕೊಸರಿಕೊಳ್ಳುತ್ತಿದ್ದ ಆ ಹುಡುಗಿ ಕಂಡಳು.  ಅವಳ ಹಿಂದೆ ಕೋಪದಿಂದ ಉರಿಯುತ್ತಾ ನಿಂತಿದ್ದ ಮೋಹನ  ಅನಾಮತ್ತಾಗಿ ಬಂದು, ಗಂಗೆಯ ಜಡೆಗೆ ಕೈ ಹಾಕಿ ” ಹೇಳಿದ್ದೊಂದು ಕೆಲ್ಸಾನ ನೆಟ್ಟುಗ್ ಮಾಡೋಕೆ ಏನ್ ರೋಗ ನಿನ್ಗೆ” ಎಂದು ಗದರಿ ರೂಮಿಗೆ ಎಳೆದು ಕೊಂಡು ಹೋಗಿ ಚಿಲಕ ಹಾಕಿಕೊಂಡು ಹೊರಬಂದ. 

ಮುಂದಿನ ಬಾಗಿಲು ಭದ್ರಗೊಳಿಸಿ ಆ ಹುಡುಗಿಯ ಮೇಲೆ ಹರಿ ಹಾಯ್ದ ಮೋಹನ “ಲೋಫರ್ ಮುಂಡೆ ನಿನ್ನ್ ಮೇಲೆ ಎಷ್ಟು ಬಂಡವಾಳ ಹಾಕಿದ್ದೀನಿ ಗೊತ್ತೇನೆ. ನನ್ ಕಣ್ಣಿಗೆ ಮಣ್ಣೆರ್ಚಿ ಹೋಗಕ್ಕ್ ನೋಡ್ತಿಯ” ಎನ್ನುತ್ತಾ ಅವಳ ಬೆನ್ನಿನ ಮೇಲೆ ದಪ್ಪನೆ ಗುದ್ದಿದ. ಅದುವರೆಗೂ ದಾಂಡಿಗರ ಬಿಗಿ ಮುಷ್ಟಿಯಿಂದ ಬಿಡಿಸಿಕೊಳ್ಳಲು ಕೊಸರಾಡುತ್ತಿದ್ದ ಹುಡುಗಿ ಒಮ್ಮೆಗೆ  ಕೋಪ ನೆತ್ತಿಗೇರಿ “ಲೇ ಪಿಂಪ್, ನಾನಲ್ಲ ಕಣೋ ಲೋಫರ್ ನೀನು” ಎಂದು ಗಟ್ಟಿಯಾಗಿ ಚೀರಾಡ ತೊಡಗಿದಳು. ಅವಳ ಚೀರಾಟ ಕೇಳಿ ಮತ್ತಷ್ಟು ಸೆಟೆದು ನಿಂತ ಮೋಹನ, ಅವಳ ಬಾಯಿಗೆ ಭದ್ರವಾಗಿ ಬಟ್ಟೆ ತುರುಕಿ ತನ್ನ ಕೈ ಸೋಲುವವರೆಗೂ ಹೊಡೆದ.

ಈ ಹಾರಾಟ ಚೀರಾಟಗಳನ್ನೆಲ್ಲಾ ಒಳಗಿನಿಂದಲೇ ಕೇಳಿಸಿಕೊಳ್ಳುತ್ತಿದ್ದ ಗಂಗೆ, ತನ್ನ ಗರ್ಭವೇ ಜಾರಿ ಬಿದ್ದಂತೆ ತತ್ತರಿಸಿ “ನಿಮ್ಮ್ ದಮ್ಮಯ್ಯ ಆ ಹುಡ್ಗಿನ ಬುಟ್ಬುಡಿ  ಏನು ಮಾಡಬೇಡಿ” ಎಂದು ತನ್ನ ಶಕ್ತಿ ಮೀರಿ  ಬಾಗಿಲು ಬಡಿಯುತ್ತಲೇ ಇದ್ದಳು. ಅವಳ ಮಾತು ಕೇಳಿಸಿ ಕೊಳ್ಳುವ ವ್ಯವಧಾನವಾಗಲಿ, ಅಕ್ಕಪಕ್ಕದ ಮನೆಯವರ ಬಗೆಗಿನ ಎಚ್ಚರವಾಗಲಿ ಯಾವುದೊಂದರ ಬಗ್ಗೆಯೂ ಗಮನವಿಲ್ಲದ  ಮೋಹನ, ಉಸಿರು ನಿಂತು ಉರುಳಿ ಬಿದ್ದಿದ್ದ ಆ ಹುಡುಗಿಯನ್ನು ದಾಂಡಿಗರೊಂದಿಗೆ ಸೇರಿ  ಎತ್ತಿ ತಂದು ಕಾರಿಗೆ ಹಾಕಿ ಕೊಂಡು ಹೊರಟೆ ಹೋದ. ಬರ್ರ್ ಎಂದು ಹೋದ ಕಾರಿನ ಸದ್ದಿನೊಂದಿಗೆ ಎಲ್ಲವೂ ಸ್ತಬ್ಧವಾದಂತಾಗಿ ಗಂಗೆ ಏನೊಂದನ್ನು ಊಹಿಸಲಾರದೆ ತಳಮಳದಿಂದ ಕಂಪಿಸಿದಳು.

ಎಷ್ಟೋ ತಾಸಿನ ಮೇಲೆ ಮನೆಗೆ ಬಂದ ಮೋಹನ ರೂಮಿನ ಬಾಗಿಲು ತೆಗೆದು “ನೋಡು ಅರ್ಜೆಂಟ್ ಕೆಲ್ಸದ ಮೇಲೆ ನಾನು ಹೈದರಾಬಾದಿಗೆ ಹೋಗ್ತಿದ್ದೀನಿ ಬರೋದು ಎಷ್ಟು ದಿನ ಆಗುತ್ತೋ ಗೊತ್ತಿಲ್ಲ. ನಿನ್ನ ಭೋಗನೂರಿಗೆ ಬಿಟ್ಟು ಬರ್ತೀನಿ   ಬೇಗ ನಿನ್ನ ಬಟ್ಟೆ ಬರೆಗಳನ್ನೆಲ್ಲಾ  ಪ್ಯಾಕ್ ಮಾಡ್ಕೊಂಡ್ ಬಾ    ಕಾರ್‌ ನಲ್ಲಿರ್ತೀನಿ”  ಎಂದು ಯಾವ ಉದ್ವೇಗವು ಇಲ್ಲದೆ ತಣ್ಣಗೆ ಹೇಳಿ ಹೊರ ನಡೆದ.

ಬಾಯಾರಿಕೆಯಿಂದ ತತ್ತರಿಸಿ ಹೋಗಿದ್ದ ಗಂಗೆಗೆ ಗಂಟಲೊಣಗಿ   ದನಿ ಏಳದಂತಾಗಿತ್ತು. ಅಡಿಗೆ ಕೋಣೆಗೆ ಓಡಿದವಳೆ ಗಟಗಟನೆ ಒಂದು ಚಂಬು ನೀರು ಕುಡಿದು ಸುಧಾರಿಸಿಕೊಂಡು ಹೊರಬಂದಳು. ನಡುಮನೆಯಲ್ಲಿ ಹೆಪ್ಪುಗಟ್ಟಿದ್ದ ರಕ್ತದ ಹನಿ ಅವಳ ಕಣ್ಣಿಗೆ ಬಿತ್ತು, ಒಂದು ರೀತಿಯ ತಳಮಳ ಅವಳನ್ನು ಆವರಿಸಿ ಎದೆ ಭಾರವಾದಂತೆನಿಸಿತು. ಕೂಡಲೇ  ಹೊರಗಿದ್ದ ಮೋಹನನನ್ನು ಕೂಗಿಕೊಂಡಳು. “ಏನೀ ಇದು ರಕ್ತ…. ಆ ಹುಡ್ಗಿನ ಏನ್ ಮಾಡುದ್ರಿ ಹೇಳಿ” ಎಂದು ಅಳುತ್ತಾ ಕೂತಳು. ಗಂಗೆಯ ಮಾತಿಗೆ ನಿರ್ಲಕ್ಷ್ಯ ದಿಂದಲೇ ಉತ್ತರಿಸಿದ  ಮೋಹನ “ನೋಡು ಗಂಗೂ ನಿನ್ಗೆ ಸಂಬಂಧ ಪಡದ ವಿಷಯದಲ್ಲಿ ತಲೆ ಹಾಕಬೇಡ. ನಿನ್ನ ಹೊಟ್ಟೆ ಬಟ್ಟೆಗ್ ತೊಂದ್ರೆ ಆದ್ರೆ ಮಾತ್ರ ನಿನ್ಗೆ ಕೇಳೋ ಅಧಿಕಾರ ಇರೋದು. ಟೈಮ್ ಕಮ್ಮಿ ಇದೆ ಇನ್ನು ಹತ್ತು ನಿಮಿಷದಲ್ಲಿ ಹೊರ್ಡು ಎಂದು ತಾಕೀತು ಮಾಡಿದ. ಅವನ ನಿರ್ಲಕ್ಷ್ಯದ ಮಾತು ಕೇಳಿ ಅಸಮಾಧಾನಗೊಂಡ ಗಂಗೆ “ನಿಂತ್ ಕಾಲಿನ ಮೇಲೆ ಹೊಂಡು ಅಂದ್ರೆ ಹೆಂಗ್ ಹೊಂಡದು ನನ್ಗೂ ಸುಸ್ತಾಗೈತೆ ಬಂದು ವಸಿ ಕೈ ಜೋಡ್ಸಿ” ಎಂದು ಹೇಳಿ ಅಡುಗೆ ಮನೆಯ ದಿನಸಿಯೊಂದಿಗೆ ತನ್ನ ಬಟ್ಟೆಬರೆಗಳನ್ನೆಲ್ಲಾ ಜೋಡಿಸಿಕೊಂಡು ಕಾರು ಹತ್ತಿ ಕುಳಿತಳು.   

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು- ದು:ಖಿತ ಗಂಗೆಗೆ ಬಸುರಿನ ಕೂಸೇ ಸಾಂತ್ವನ

Related Articles

ಇತ್ತೀಚಿನ ಸುದ್ದಿಗಳು