Monday, April 29, 2024

ಸತ್ಯ | ನ್ಯಾಯ |ಧರ್ಮ

ದು:ಖಿತ ಗಂಗೆಗೆ ಬಸುರಿನ ಕೂಸೇ ಸಾಂತ್ವನ

(ಈ ವರೆಗೆ…) ಮನೆಯಲ್ಲಿ ತಿನ್ನಲೇನೂ ಇಲ್ಲದೆ ಕಂಗಾಲಾದ ಗಂಗೆ ಹಸಿವು ತಾಳಲಾರದೆ ಮಣ್ಣಿನುಂಡೆಯನ್ನೇ ತಿನ್ನುತ್ತಾಳೆ. ಆ ಹೊತ್ತಿನಲ್ಲಿ ಮನೆಗೆ ಬಂದ ಮೋಹನನಿಗೆ ಅವಳ ಸ್ಥಿತಿ ನೋಡಿ ತಪ್ಪಿತಸ್ಥ ಭಾವನೆ ಹುಟ್ಟಿ ಮುಂದೆ ಹೀಗಾಗದು ಎಂದು ಆಕೆಯನ್ನು ನಂಬಿಸಿ ತಿನ್ನಲು ತಂದು ಕೊಡುತ್ತಾನೆ. ಹೊಟ್ಟೆಯ ಹಸಿವು ತಗ್ಗಿದಾಗ ಗಂಗೆ ಈ ಬಿಸಿನೆಸ್‌ ಬಿಡುವಂತೆ ಗೋಗರೆಯುತ್ತಾಳೆ. ಸಿಟ್ಟುಗೊಂಡ ಮೋಹನ ಹೀಗೆ ಮಾತಾಡಿದ್ರೆ ತವರು ಮನೆಗೆ ಬಿಟ್ಟು ಬರುವುದಾಗಿ ಗದರುತ್ತಾನೆ. ಗಂಗೆಯ ಮುಂದಿನ ನಡೆ ಏನು? ಓದಿ.. ವಾಣಿ ಸತೀಶ್‌ ಅವರ ʼತಂತಿ ಮೇಲಣ ಹೆಜ್ಜೆʼ ಯ ಐವತ್ಮೂರನೆಯ ಕಂತು.

ನಾರಿಪುರದಲ್ಲಿದ್ದ ಹೆಚ್ಚಿನ ಹೆಣ್ಣುಮಕ್ಕಳೆಲ್ಲಾ ತಮ್ಮ ದಾಂಪತ್ಯವನ್ನು ಅರ್ಧಕ್ಕೆ ಮುರಿದುಕೊಂಡು ಬಂದು ತವರು ಸೇರಿದವರೇ ಆಗಿದ್ದರು. ಇಂತವರ ನಡುವೆಯೇ ಬೆಳೆದು ದೊಡ್ಡವಳಾದ ಗಂಗೆ, ಆ ಹೆಣ್ಣುಮಕ್ಕಳ ಬಗ್ಗೆ ಊರಿನವರು ಆಡುತ್ತಿದ್ದ ತಾತ್ಸಾರದ ಮಾತುಗಳನ್ನು ಕೇಳಿ, ತಾನು ಮಾತ್ರ ಯಾವ ಕಾರಣಕ್ಕೂ ಕೆಟ್ಟು ತವರು ಸೇರಬಾರದೆಂದು  ನಿರ್ಧರಿಸಿದ್ದಳು. ಅಲ್ಲದೆ ಪ್ರೀತಿ ಎಂಬ ಪದದ ಅರ್ಥವೇ ತಿಳಿಯದ ಬರಡೆದೆಯ ಅಣ್ಣಂದಿರು ತನ್ನನ್ನು ಖಂಡಿತ ತವರಿನಲ್ಲಿ ಬಾಳಿಸುವುದಿಲ್ಲ, ಎನ್ನುವುದು ಅವಳಿಗೆ ಸ್ಪಷ್ಟವಾಗಿಯೇ ತಿಳಿದಿತ್ತು. ಹಾಗಾಗಿಯೆ ಮೋಹನ  ನಿಮ್ಮಪ್ಪನ ಮನೆಗೆ ಬಿಟ್ಟು ಬರ್ತೀನಿ ಎಂದ ಮಾತು ಕೇಳಿ ಗಂಗೆ ಜಂಘಾಬಲವೇ ಉಡುಗಿದಂತೆ ಕನಲಿದಳು. 

ಕೈ ಕೊಸರಿ ಮೇಲೆದ್ದವನ ಕಾಲುಗಳನ್ನು ಗಟ್ಟಿಯಾಗಿ ಬಿಗಿದಪ್ಪಿ “ನಿಮ್ಮ ದಮ್ಮಯ್ಯ ಅಂತ ಮಾತ್ ಮಾತ್ರ ಆಡಬ್ಯಾಡಿ ಕನಿ, ಉಪ್ಪೋ ಗಂಜಿನೋ, ಇದ್ರು ನಿಮ್ಜೊತೆಗೆ, ಸತ್ರು ನಿಮ್ಜೊತೆಗೆ ” ಎನ್ನುತ್ತಾ ಬಿಕ್ಕಳಿಸ ತೊಡಗಿದಳು. ಅವಳನ್ನು ತಬ್ಬಿ ಮತ್ತೆ ಸಂತೈಸಿದ ಮೋಹನ “ನಿನ್ನ್ ಅಣ್ತಮ್ಮದಿರ್ ಬೇಜವಾಬ್ದಾರಿತನ ನಂಗೊತ್ತು ಗಂಗೂ. ಅವರು ಸರಿಯಾಗಿದ್ದಿದ್ರೆ ನಿನ್ನ  ನನ್ನಂತೋನಿಗೆ ಯಾಕೆ ಕಟ್ತಿದ್ರು ಹೇಳು. ಅವ್ರಿಗೆ ಆ ಟೈಮ್ಗೆ ತಿನ್ನೋಕೆ ಕುಡಿಯೋಕೆ ಬೇಕಾಗಿತ್ತು, ಖರ್ಚಿಲ್ದಂಗೆ ನಿನ್ನೂ ಸಾಗಾಕ್ ಬೇಕಿತ್ತು, ಹಂಗಾಗಿ ನನ್ಗೆ ಕೊಟ್ಟು ಕೈ ತೊಳ್ಕೊಂಡ್ರು ಅಷ್ಟೇ. 

ಪ್ರಪಂಚ ನಡಿತಿರೋದೆ ಹಾಗೆ ಗಂಗೂ. ನೀನು ಏನು ಕೊಡ್ತಿ… ಅದಕ್ಕೆ ತಿರುಗಿ ನಾನೇನು ಕೊಡ್ಬೇಕು.. ಅನ್ನೋ ಲೆಕ್ಕಾಚಾರದ್ ಮೇಲೆ. ಅಂತದ್ರಲ್ಲಿ ನಿನ್ನ ಈ ವೇದಾಂತ ಯಾವ ಕೆಲ್ಸುಕ್ಕ್ ಬರ್ತದೆ ಹೇಳು. ಯಾವಾಗ್ಲು ಪ್ರಾಕ್ಟಿಕಲ್‌ ಆಗಿ ಇರ್ಬೇಕು ಮಂಗಮ್ಮ. ಎಮೋಷನಲ್ ಆಗಿದ್ರೆ ಬದುಕೋದು ಕಷ್ಟ” ಅವಳ ಕೆನ್ನೆ ತಿವಿದು ಹೇಳಿದ. ಆ ಮಾತುಗಳ ಅರ್ಥ ತಿಳಿಯದ ಗಂಗೆ ” ಅದೇನೋ ಅಂದ್ರಲ್ಲ ಹಂಗದ್ರೇನು ಒಂಚೂರು ಬುಡ್ಸೇಳಿ”  ಎಂದಳು ಮುಗ್ಧವಾಗಿ. ಅವಳನ್ನೆಳೆದುಕೊಂಡು ಹಾಸಿಗೆಯಲ್ಲಿ ಉರುಳಿಕೊಂಡ ಮೋಹನ, ಅವಳ ಉಬ್ಬಿದ ಹೊಟ್ಟೆ ಎದೆಗಳ ಮೇಲೆ  ಕೈಯಾಡಿಸುತ್ತಾ ನೀತಿಪಾಠದಾಚೆಗಿನ ಲೋಕಪಾಠವನ್ನು ಅರ್ಥಮಾಡಿಸಲು ಹೆಣಗಾಡಿದ.

ಮೋಹನ ಏನೇ ಸಮರ್ಥನೆ ನೀಡಿದರು ಗಂಗೆಗೆ ಮಾತ್ರ ಅವನ ದುಡಿಮೆಯ ಮಾರ್ಗ ಅಪಥ್ಯವಾಗಿಯೇ ಉಳಿಯಿತು. ತನ್ನದು ಎನ್ನುವ ಯಾವ ದಾರಿಯು ಕಾಣದ್ದರಿಂದಾಗಿ ಕಣ್ಣು ಮುಚ್ಚಿ ಅವನೊಂದಿಗೆ ಬದುಕುವುದನ್ನು ರೂಢಿಸಿಕೊಳ್ಳಲು ಗುದ್ದಾಡ ಹತ್ತಿದಳು. 

ಹೆಂಡತಿಗೆ ಎಲ್ಲಾ ವಿಚಾರಗಳು ತಿಳಿದ ಮೇಲಂತೂ ಮೋಹನ ಸಂಪೂರ್ಣ ನಿರಾಳನಾಗಿ ಬಿಟ್ಟ. ಚಕಾರವೆತ್ತದ ಅವಳ ಮೌನವನ್ನೇ ಸಮ್ಮತಿ ಎಂದುಕೊಂಡವನಂತೆ, ತಿಂಗಳು ತಿಂಗಳು ಹೊರಗಾಗಿ ಕುಳಿತ ಸುಕನ್ಯಾಳ ಮನೆಯ ಹೆಣ್ಣುಗಳನ್ನೆಲ್ಲಾ ಮೂರು ದಿನದ ಮಟ್ಟಿಗೆ ಗಂಗೆಯ ಮನೆಯಲ್ಲಿ ತಂದಿಟ್ಟು, ಅವರ ಮುಟ್ಟೆಲ್ಲ ತಿಳಿಯಾದ ನಂತರ ಮತ್ತೆ ಸುಕನ್ಯಾಳ ಮನೆಗೆ ಸಾಗಿಸುವ ಪರಿಪಾಠ ಮಾಡಿಕೊಂಡ.

ಮೊದಮೊದಲು ಗಂಗೆ ಇದನ್ನು ಕಂಡು ಇರುಸು ಮುರುಸು ಗೊಳ್ಳುತ್ತಿದ್ದಳಾದರು, ಅವಳಿಗೆ ಮೋಹನನನ್ನು ವಿರೋಧಿಸಿ ನಿಲ್ಲುವ ಧೈರ್ಯವಿಲ್ಲದೆ ತೆಪ್ಪಗಾದಳು. ಹಾಗಾಗಿ ಅವನು ಹೇಳುತ್ತಿದ್ದ ಎಲ್ಲಾ ಕಟ್ಟು ಕತೆಗಳಿಗೆ ತಲೆಯಾಡಿಸುತ್ತಾ  ಕಂಡೂ ಕಾಣದಂತೆ, ಬಂದ ಹೆಣ್ಣುಮಕ್ಕಳನ್ನೆಲ್ಲಾ ಚೆನ್ನಾಗಿ ನೋಡಿಕೊಂಡು ಕಳುಹಿಸುವುದನ್ನು ರೂಢಿಸಿಕೊಂಡಳು. ಆ ಹೆಣ್ಣು ಮಕ್ಕಳು ಕೂಡ ಗಂಗೆಯ ಮುಗ್ಧತೆ, ಒಳ್ಳೆಯತನ ಕಂಡು ಮರುಕ ಗೊಳ್ಳುತ್ತಿದ್ದರು. ಆ ಮೂರು ದಿನದಲ್ಲಿ ಇವಳನ್ನು ಸ್ವಂತ ಅಕ್ಕನಂತೆಯೇ ಭಾವಿಸಿ, ತಾವು ತಪ್ಪಿ ಕಾಲಿಟ್ಟಿರುವ ಈ ಕರಾಳ ಜಗತ್ತಿನ ಹಲವು ಕತೆಯನ್ನು  ಗಂಗೆಯ ಮುಂದೆ ಬಿಚ್ಚಿಡುತ್ತಿದ್ದರು. ಇಲ್ಲಿ ಹೆಣೆದು ಕೊಂಡಿರುವ ದೊಡ್ಡ ಜಾಲ, ತಮ್ಮನ್ನು  ಬಿಡಿಸಿ ಕೊಂಡು ಹೊರ ಹೋಗದಂತೆ ಹೇಗೆ ಸರ್ಪಗಾವಲಾಕಿ ಕಾಯುತ್ತಿದೆ ಎನ್ನುವ ಸಂಕಟವನ್ನೆಲ್ಲಾ ಅವಳ ಮುಂದೆ ತೋಡಿಕೊಂಡು  ಹಗುರಾಗಲು ಪ್ರಯತ್ನಿಸುತ್ತಿದ್ದರು. 

ಇದನ್ನೆಲ್ಲಾ ಕೇಳಿಸಿಕೊಳ್ಳುತ್ತಿದ್ದ ಗಂಗೆ ಹೊರ ಜಗತ್ತಿನ ಬಗ್ಗೆ ಮತ್ತಷ್ಟು ಭಯಭೀತಳಾಗಿ ಮೋಹನನ ತೆಕ್ಕೆಗೆ ಮತ್ತಷ್ಟು ಒರಗ ತೊಡಗಿದಳು. ಅವರೊಳಗೆ ತಾನೂ ಒಬ್ಬ ಸಂತ್ರಸ್ತಳಂತೆನಿಸಿ ಆಗಾಗ ದುಃಖಗೊಳ್ಳುತ್ತಿದ್ದ ಗಂಗೆಯನ್ನು ಬಸುರಲ್ಲಿದ್ದ ಕೂಸು ಮಿಡುಕಾಡಿ ಎಚ್ಚರಗೊಳಿಸಿ, ಎಲ್ಲವನ್ನು ಒಪ್ಪಿಕೊಂಡು ತಣ್ಣಗೆ ನಡೆಯುವಂತೆ ಮಾಡಿ ಬಿಡುತ್ತಿತ್ತು.    

ಒಂದು ದಿನ ಇದ್ದಕ್ಕಿದ್ದಂತೆ, ಗಂಗೆ ಇದುವರೆಗೂ ನೋಡದ ಒಬ್ಬ ಹುಡುಗಿಯ ಕೈ ಹಿಡಿದುಕೊಂಡು ಧುಮುಗುಡುತ್ತಾ ಒಳ ಬಂದ ಮೋಹನ, ಅಲ್ಲಿ ಕೂತಿದ್ದ ತನ್ನ ಹೆಂಡತಿಯನ್ನು ಲೆಕ್ಕಿಸದೆ ಆ ಹುಡುಗಿಯನ್ನು ಸೀದಾ ರೂಮಿನತ್ತ ಎಳೆದೊಯ್ದು ಬಾಗಿಲಿಕ್ಕಿಕೊಂಡ. ಹೀಗೆ ತನ್ನ ಕೋಣೆಗೆ ರಾಜಾರೋಷವಾಗಿ ಇನ್ನೊಂದು ಹೆಣ್ಣನ್ನು ಕರೆದುಕೊಂಡು ಹೋಗಿ ಬಾಗಿಲಿಕ್ಕಿಕೊಂಡಿದ್ದು ಗಂಗೆಗೆ ಸಂಕಟವೆನಿಸಿತು. ಒತ್ತರಿಸಿ ಬಂದ ಕೋಪವನ್ನು ತಡೆಯಲಾರದೆ  ಮನೆಯ ಹೊರ ಬಂದು ನಿಂತು ಮನಸ್ಸನ್ನು ಶಾಂತ ಗೊಳಿಸಲೆತ್ನಿಸಿದಳು. ಆದರೂ ಒಳಗಿನ ಚಡಪಡಿಕೆ ಅವಳನ್ನು ಸುಮ್ಮನಿರಲು ಬಿಡಲಿಲ್ಲ ಆಗಿದ್ದಾಗಲಿ ಎಂದು ಸೀದಾ ಎದ್ದು ರೂಮಿನತ್ತ ದಾಪುಗಾಲಿಟ್ಟಳು.

 ಒಳಗಿನಿಂದ ಇಬ್ಬರ ಜೋರು ಜೋರು ದನಿ ಗಂಗೆಯ ಕಿವಿಗಪ್ಪಳಿಸಿತು. ಸದ್ದಾಗದಂತೆ ಬಾಗಿಲಿಗೆ ಕಿವಿಯಾನಿಸಿ ನಿಂತಳು. “ಆ ಬೆವರ್ಸಿ ನನ್ಗೆ ಇಂಥ ಮೋಸ ಮಾಡ್ತಾನೆ ಅಂದ್ಕೊಂಡಿರಲಿಲ್ಲ….. ನಮ್ಮಪ್ಪ ಮೇಷ್ಟ್ರು…. ನಮ್ದು ಸಂಸ್ಕಾರವಂತ್ರು ಫ್ಯಾಮಿಲಿ… ಹೀಗೆ ಅರ್ಥವಾಗದ ಹರಕು ಮುರುಕು ಮಾತುಗಳು ಗಂಗೆಯ ಕಿವಿ ಮೇಲೆ ಬೀಳುತ್ತಿತ್ತು. ಇದ್ದಕ್ಕಿದ್ದಂತೆ ಆ ಹುಡುಗಿ “ಲೇ ತಲೆಹಿಡುಕ ನನ್ನ ಬಿಟ್ಬಿಡೋ” ಎಂದು ಜೋರಗಿ ಕಿರುಚಿದಳು. ಒಳಗಿನಿಂದ ಛಟೀರನೆ ಸದ್ದು ಬಂದಿತು. ಆ ಹುಡುಗಿಯ ಕೂಗಾಟ ನಿಂತಿತು.

 ದಡಾರನೆ ಬಾಗಿಲು ತೆಗೆದು ಹೊರಬಂದ ಮೋಹನ, ಅಲ್ಲಿ ನಿಂತಿದ್ದ ಗಂಗೆಯನ್ನು ಅಡಿಗೆ ಮನೆಗೆ ಕರೆದುಕೊಂಡು ಹೋಗಿ  “ನೋಡು ಇವ್ಳು ನಮ್ಮೂರ್ ಮೇಷ್ಟ್ರು ಮಗ್ಳು. ಮನೆ ಬಿಟ್ಟು ಓಡಿ ಬಂದಿದ್ದಾಳೆ. ಪಾಪ ಅವ್ರು ನನ್ಗೆ ಫೋನ್ ಮಾಡಿ ನನ್ನ ಮಗ್ಳನ್ನ ಹುಡುಕ್ಕೊಡಪ್ಪ ಅಂತ ಗೋಳಾಡಿದ್ರು. ಕಷ್ಟ ಬಿದ್ದು ಹುಡ್ಕಿ ತಂದಿದ್ದೀನಿ. ಇಲ್ಲೆ ಪಕ್ಕದ ಏರಿಯಾದಲ್ಲಿ ಅವಳ ಅಣ್ಣಂದಿರವ್ರೆ ಕರ್ಕೊಂಡು ಬಂದ್ಬಿಡ್ತೀನಿ. ಯಾವ ಕಾರ್ಣಕ್ಕೂ ರೂಮ್ ಬಾಗ್ಲು ಮಾತ್ರ ತೆಗಿಬೇಡ. ಅಕಸ್ಮಾತ್ತಾಗಿ ತೆಗೆದ್ಯೊ ನಿನ್ನ ಕತೆ ನೆಟ್ಗಿರಲ್ಲ ತಿಳ್ಕೋ” ಎಂದು ಭದ್ರವಾಗಿ ಬಾಗಿಲ ಚಿಲಕ ಹಾಕಿಕೊಳ್ಳುವಂತೆ ತಾಕೀತು ಮಾಡಿ ಹೊರನಡೆದ.

ವಾಣಿ ಸತೀಶ್

ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ‌.‌‌

ಹಿಂದಿನ ಕಂತು-ಬಸುರಿಯ ಹಸಿವೆಗೆ ಮಣ್ಣಿನುಂಡೆಯೇ ಮುದ್ದೆಯಾಯಿತು!

Related Articles

ಇತ್ತೀಚಿನ ಸುದ್ದಿಗಳು