Thursday, June 20, 2024

ಸತ್ಯ | ನ್ಯಾಯ |ಧರ್ಮ

ಮೈ ಕೊರೆಯಲಿದೆ ಚಳಿ : ಮುಂದಿನ ಎರಡು ವಾರವೂ ಚಳಿ ಪ್ರಮಾಣದಲ್ಲಿ ಏರಿಕೆ

ರಾಜ್ಯದಲ್ಲಿ ಕರಾವಳಿ ಹೊರತುಪಡಿಸಿ ರಾಜ್ಯದ ಬಹುತೇಕ ಕಡೆಗಳಲ್ಲಿ ಚಳಿ ಪ್ರಮಾಣ ಹೆಚ್ಚಿದ್ದು, ಮುಂದಿನ ಎರಡು ವಾರಗಳ ಕಾಲ ಇದೇ ಚಳಿ ಮುಂದುವರಿಯಲಿದೆ ಎಂದು ವರದಿಯಾಗಿದೆ.

ಉತ್ತರ ಕರ್ನಾಟಕದ ಹಲವು ಕಡೆಗಳಲ್ಲಿ ಕನಿಷ್ಠ ತಾಪಮಾನದಲ್ಲಿ 2-3 ಡಿಗ್ರಿ ಸೆಲ್ಸಿಯಸ್‌ ಕುಸಿತ ಕಾಣಲಿದ್ದು, ಚಳಿಯ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ ನೀಡಿದೆ. ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಹುಬ್ಬಳ್ಳಿ, ಹಾವೇರಿ, ಕೊಪ್ಪಳ, ರಾಯಚೂರು ಭಾಗಗಳಲ್ಲೂ ಚಳಿ ಮುಂದುವರೆಯುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರ್ನಾಟಕದ ಗಡಿ ಜಿಲ್ಲೆ ಬೀದರ್‌ನಲ್ಲಿ ಶುಕ್ರವಾರದಂದು ಕನಿಷ್ಠ ಉಷ್ಣಾಂಶ ದಾಖಲಾಗಿದೆ. ಮಲೆನಾಡಿನ ಚಿಕ್ಕಮಗಳೂರಿನಲ್ಲೂ ಚಳಿಯ ವಾತಾವರಣದಲ್ಲಿ ಏರಿಕೆ ಮುಂದುವರಿದಿದೆ. ಬೆಂಗಳೂರು, ಮೈಸೂರು ಭಾಗದಲ್ಲೂ ಚಳಿ ಮುಂದುವರಿದಿದ್ದು, ಮುಂದಿನ ವಾರವೂ ಚಳಿ ಇರಲಿದೆ.

ಈ ತಿಂಗಳಾಂತ್ಯದವರೆಗೆ ಬೆಂಗಳೂರಿನಲ್ಲಿ ಮೈಕೊರೆಯುವ ಚಳಿಯ ವಾತಾವರಣ ಸೃಷ್ಟಿಯಾಗಲಿದೆ. ಸದ್ಯ ನಗರದಲ್ಲಿ ಕನಿಷ್ಠ ತಾಪಮಾನ ಪ್ರಮಾಣ 17-16 ಡಿಗ್ರಿ ಸೆಲ್ಸಿಯಸ್‌ನಷ್ಟಿದೆ. ಇದು ಮುಂದಿನ ದಿನಗಳಲ್ಲಿ 14 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಲಕ್ಷಣಗಳು ಇವೆ.

ಬುಧವಾರ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಗರಿಷ್ಠ 27.3 ಡಿಗ್ರಿ ಸೆಲ್ಸಿಯಸ್‌, ಕನಿ‍ಷ್ಠ 17.7 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (KIA) ಸುತ್ತಮುತ್ತ ಇಂದು ಗರಿಷ್ಠ 27.2 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಬೆಂಗಳೂರು ಎಚ್‌ಎಎಲ್‌ ವ್ಯಾಪ್ತಿಯಲ್ಲಿ ಗರಿಷ್ಠ 27.2 ಮತ್ತು ಕನಿಷ್ಠ 16.1ಡಿಗ್ರಿ ಸೆಲ್ಸಿಯಸ್‌ ತಾಪಮಾನ ಕಂಡು ಬಂದಿದೆ.

ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಪ್ರಾದೇಶಿಕ ಕೇಂದ್ರ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಮುಂದಿನ ವಾರವೂ ಕರ್ನಾಟಕದಲ್ಲಿ ಮಳೆ ಇರುವುದಿಲ್ಲ. ಕ್ರಿಸ್‌ಮಸ್‌ ಹಬ್ಬದ ದಿನ ದಕ್ಷಿಣ ಒಳನಾಡಿನ ಕೆಲವು ಭಾಗದಲ್ಲಿ ಸಾಧಾರಣ ಮಳೆಯಾಗುವ ಮುನ್ಸೂಚನೆ ಮಾತ್ರ ನೀಡಲಾಗಿದೆ.

ಇನ್ನೆರಡು ದಿನದಲ್ಲಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಚಳಿ ಇನ್ನಷ್ಟು ಹೆಚ್ಚಲಿದೆ. ನೆರೆಯ ತೆಲಂಗಾಣ ಭಾಗದಲ್ಲಿ ಕನಿಷ್ಠ ಉಷ್ಣಾಂಶ ಪ್ರಮಾಣದಲ್ಲಿ ಭಾರೀ ಕುಸಿತ ಕಂಡು ಅಧಿಕ ಚಳಿ ಇರುವ ಪ್ರಭಾವ ಕರ್ನಾಟಕದ ಬೀದರ್‌ ಜಿಲ್ಲೆ ಮೇಲೂ ಆಗಿದೆ. ಬೀದರ್‌ನಲ್ಲಿ ಅತೀ ಕಡಿಮೆ ಎಂದರೆ 10.4 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ಕಂಡು ಬಂದಿದೆ. ವಿಜಯಪುರದಲ್ಲಿ 12.1 ಡಿಗ್ರಿ, ರಾಯಚೂರಿಯಲ್ಲಿ 13.8 ಡಿಗ್ರಿ. ಧಾರವಾಡದಲ್ಲಿ 15 ಡಿಗ್ರಿ, ಬಾಗಲಕೋಟೆಯಲ್ಲಿ 15.3 ಡಿಗ್ರಿ, ಕಲಬುರಗಿ ಹಾಗೂ ಬೆಳಗಾವಿ ವಿಮಾನ ನಿಲ್ದಾಣದಲ್ಲಿ 15.6 ಡಿಗ್ರಿ, ಗದಗದಲ್ಲಿ 15.8 ಡಿಗ್ರಿ ಸೆಲ್ಸಿಯಸ್‌ ಉಷ್ಣಾಂಶ ಶುಕ್ರವಾರವಿತ್ತು.

Related Articles

ಇತ್ತೀಚಿನ ಸುದ್ದಿಗಳು