Thursday, June 13, 2024

ಸತ್ಯ | ನ್ಯಾಯ |ಧರ್ಮ

ಕ್ರೀಡೆಯ ಮೂಲಕ ದೇಹಕ್ಕೆ ಕಸರತ್ತು, ಮನಸ್ಸಿಗೆ ಉಲ್ಲಾಸ ಸಿಗುತ್ತದೆ: ಪಿ. ರವಿಕುಮಾರ್

ಮಂಡ್ಯ, ಮಾರ್ಚ್‌ 10: ಸರ್ಕಾರಿ ನೌಕರರು ಕೆಲಸದ ಕಾರಣದಿಂದ ಬಹಳ ಒತ್ತಡದಲ್ಲಿರುತ್ತಾರೆ. ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಒತ್ತಡ ದೂರವಾಗಿ ದೇಹಕ್ಕೆ ಕಸರತ್ತು, ಮನಸ್ಸಿಗೆ ಉಲ್ಲಾಸ ಸಿಗುತ್ತದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಪಿ. ರವಿಕುಮಾರ್ ತಿಳಿಸಿದರು.

ಅವರು ಇಂದು ಮಂಡ್ಯ ಸರ್. ಎಂ. ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದೊಂದಿಗೆ ಮಂಡ್ಯ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು 2023- 24ರ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ, ಕ್ರೀಡಾ ಜ್ಯೋತಿಯನ್ನು ಸ್ವೀಕರಿಸಿ ಮಾತನಾಡಿದರು.

ಪ್ರತಿ ದಿನ ವ್ಯಾಯಮ, ನಡಿಗೆಗೆ ಸಮಯ ಮೀಸಲಿಡುವುದರಿಂದ ಆರೋಗ್ಯ ವೃದ್ಧಿಸುತ್ತದೆ. ಆರೋಗ್ಯವಾಗಿದ್ದರೆ ದೈನಂದಿನ ಕೆಲಸಗಳನ್ನು ಕ್ರಿಯಾಶೀಲರಾಗಿ ಮಾಡಬಹುದು ಎಂದರು.

75 ವರ್ಷದ ರಾಜ್ಯದ ಇತಿಹಾಸದಲ್ಲಿ ಮಾತುಕೊಟ್ಟಂತೆ ನಡೆದುಕೊಂಡ ಸರ್ಕಾರ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರವಾಗಿದೆ. ಜನಸಾಮಾನ್ಯರ ಅಭಿವೃದ್ಧಿಗೆ ಸರ್ಕಾರದ 5 ಗ್ಯಾರಂಟಿ ಯೋಜನೆಗಳಿಗೆ 53,000 ಕೋಟಿ ರೂ ಅನುದಾನವನ್ನು ಮೀಸಲಿಟ್ಟು, ನುಡಿದಂತೆ ನಡೆದಿದ್ದೇವೆ ಎಂದರು.

ಕ್ರೀಡೆ ಪ್ರತಿಯೊಬ್ಬರ ಬದುಕಿನಲ್ಲಿ ಒಂದು ಅವಿಭಾಜ್ಯ ಅಂಗವಾಗಬೇಕು: ಡಾ. ಕುಮಾರ

ಜಿಲ್ಲಾಧಿಕಾರಿ ಡಾ. ಕುಮಾರ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಕ್ರೀಡಾಸಕ್ತಿ ಮತ್ತು ಕ್ರೀಡಾ ಮನೋಭಾವನೆ ಇರುವವರು ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿರುತ್ತಾರೆ. ಕ್ರೀಡೆ ಪ್ರತಿಯೊಬ್ಬರ ಬದುಕಿನಲ್ಲಿ ಒಂದು ಅವಿಭಾಜ್ಯ ಅಂಗವಾಗಬೇಕು ಎಂದು ತಿಳಿಸಿದರು.

ಪ್ರತಿಯೊಬ್ಬರೂ ಆರೋಗ್ಯವಾಗಿರಲು ಯೋಗಾಭ್ಯಾಸ, ಕ್ರೀಡಾ ಚಟುವಟಿಕೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಒಳ್ಳೆಯ ಅಭಿರುಚಿ ಹಾಗೂ ಹವ್ಯಾಸ ಬೆಳೆಸಿಕೊಳ್ಳಬೇಕು‌ . ದಿನದ 24 ಗಂಟೆಯಲ್ಲಿ ಪ್ರತಿದಿನ ಬೆಳಿಗ್ಗೆ 1 ಗಂಟೆಯನ್ನು ಯೋಗ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವುದಕ್ಕೆ ಮೀಸಲಿಟ್ಟರೆ, ಉಳಿದ 23 ಗಂಟೆಗಳ ಕಾಲ ಕ್ರಿಯಾತ್ಮಕವಾಗಿ, ಸರಾಗವಾಗಿ ಕೆಲಸವನ್ನು ನಿರ್ವಹಿಸಬಹುದು. ಈ ಮೂಲಕ ದೇವರು ಕೊಟ್ಟಂತಹ ದೇಹವನ್ನು ಸರಿಯಾಗಿ ಬಳಸಿಕೊಳ್ಳುವುದು ಎಲ್ಲರ ಕೈಯಲ್ಲಿದೆ ಎಂದರು.

“ನಕ್ಕಷ್ಟು ದಿನ ನಿನ್ನದು, ಅತ್ತ ದಿನ ನಿನ್ನದಲ್ಲ, ನೀ ನಗುವ ಹೂವಾಗು ಜಗದ ವನದಲ್ಲಿ” ಎಂಬ ಕವಿಯ ಮಾತಿನಂತೆ ಎಲ್ಲರೂ ಬದುಕಿನಲ್ಲಿ ನಗು ನಗುತ್ತಾ ಜೀವಿಸಬೇಕು. ಯಾವುದೇ ಕ್ರೀಡೆಯಲ್ಲಿ ಸೋಲು, ಗೆಲುವು ಸಾಮನ್ಯವಾಗಿದ್ದೂ, ಪಾಲ್ಗೊಳ್ಳುವುದು ಮುಖ್ಯವಾಗಿರುತ್ತದೆ. ಆದ್ದರಿಂದ ಎಲ್ಲರೂ ಸಂತೋಷದಿಂದ ಕ್ರೀಡೆಯಲ್ಲಿ ಭಾಗವಹಿಸಿ ಎಂದರು.

ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜು ಅವರು ಮಾತನಾಡಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಸಹಯೋಗದೊಂದಿಗೆ ಮಂಡ್ಯ ಜಿಲ್ಲಾ ಮಟ್ಟದ ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು 2 ದಿನಗಳ ಕಾಲ ಹಮ್ಮಿಕೊಂಡಿದೆ. ಪ್ರಸ್ತುತದ ದಿನಗಳಲ್ಲಿ 15 ಲಕ್ಷ ಜನರು ನಿರ್ವಹಿಸಬೇಕಾದ ಕೆಲಸವನ್ನು ಕೇವಲ 5 ಲಕ್ಷ ಜನ ಮಾಡುತ್ತಿರುವುದರಿಂದ ಸರ್ಕಾರಿ ನೌಕರರಲ್ಲಿ ಒತ್ತಡ ಜಾಸ್ತಿ ಇದೆ. ಒತ್ತಡ ಕಡಿಮೆ ಮಾಡಲು ಪ್ರತಿ 3 ತಿಂಗಳಿಗೊಮ್ಮೆ 1 ಅಥವಾ 2 ದಿನಗಳ ಕಾಲ ಸರ್ಕಾರಿ ನೌಕರರಿಗೆ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳ ಕಾರ್ಯಕ್ರಮವನ್ನು ಆಯೋಜಿಸಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ ಎಂದರು.

ಕಳೆದ 6 ತಿಂಗಳಲ್ಲಿ ನಮ್ಮ ಜಿಲ್ಲೆಯ ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ನ್ಯಾಯಾಲಯ, ಎ.ಸಿ. ನ್ಯಾಯಾಲಯ ಹಾಗೂ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ 7-8 ವರ್ಷಗಳಿಂದ ಇದ್ದಂತಹ ಹಳೆಯ ಪ್ರಕರಣಗಳು ಸೇರಿ ಸುಮಾರು 7000 ಪ್ರಕರಣಗಳನ್ನ ಬಹಳ ಒತ್ತಡದಿಂದ ವಿಲೇವಾರಿ ಮಾಡಲಾಗಿದ್ದು, ಇಡೀ ರಾಜ್ಯದಲ್ಲಿ ನಮ್ಮ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಜಿಲ್ಲೆಯ ತಹಶೀಲ್ದಾರ್, ಅಸಿಸ್ಟೆಂಟ್ ಕಮಿಷನರ್ ಹಾಗೂ ಡೆಪ್ಯೂಟಿ ಕಮಿಷನರ್ ಗಳಿಗೆ ಅಭಿನಂದನೆಗಳನ್ನು ತಿಳಿಸಿದರು.

ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಶೇಖ್ ತನ್ವಿರ್ ಆಸೀಫ್ ಅವರು ಮಾತನಾಡಿ ಪ್ರತಿಯೊಬ್ಬರೂ ಆರೋಗ್ಯಯುತ ಶೈಲಿಯ ಜೀವನವನ್ನು ನಡೆಸಿ, ಮುಂದಿನ ಪೀಳಿಗೆ ಅನುಸರಿಸುವಂತೆ ಮಾದರಿಯಾಗಿ ಬದುಕಬೇಕು. ಎಲ್ಲರೂ ತಮ್ಮ ಮಕ್ಕಳಿಗೆ ಮೊಬೈಲ್ ಗೇಮ್ಸ್ ಅನ್ನು ಆಡುವ ಬದಲು ದೈಹಿಕ ಕ್ರೀಡೆಗೆ ಗಮನವಹಿಸುವಂತೆ ಮಾಡಬೇಕು ಎಂದರು.

ಇದೇ ಸಂದರ್ಭದಲ್ಲಿ ಕ್ರೀಡಾ ಪ್ರತಿಜ್ಞಾವಿಧಿಯನ್ನು ಬೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಓಂಪ್ರಕಾಶ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಶಾಖೆಯ ಜಿಲ್ಲಾಧ್ಯಕ್ಷರು ಎಸ್. ಶಂಭುಗೌಡ, ಕಾರ್ಯಾಧ್ಯಕ್ಷರು, ಕ್ರೀಡಾ ಕಾರ್ಯದರ್ಶಿಗಳು, ಸಾಂಸ್ಕೃತಿಕ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Related Articles

ಇತ್ತೀಚಿನ ಸುದ್ದಿಗಳು