Thursday, June 13, 2024

ಸತ್ಯ | ನ್ಯಾಯ |ಧರ್ಮ

ಮೈಸೂರು ರಾಜ ಮನೆತನವನ್ನು ಟೀಕಿಸಿ ಪಕ್ಷದ ಗಮನ ಸೆಳೆದ ಸಂಸದ ಪ್ರತಾಪ ಸಿಂಹ, ಹೈಕಮಾಂಡಿನಿಂದ ಬುಲಾವ್

ಮೈಸೂರು: ಟಿಕೆಟ್‌ ಕೈ ತಪ್ಪುವ ಆತಂಕದಿಂದ ಹತಾಶರಾಗಿದ್ದ ಸಂಸದ ಪ್ರತಾಪ ಸಿಂಹ ಕೊನೆಗೂ ಪಕ್ಷದ ಗಮನವನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ರಾಜವಂಶಸ್ಥ ಒಡೆಯರ್ ಕುಟುಂಬದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಮೈಸೂರು ರಾಜವಂಶಸ್ಥರ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ, ವ್ಯಂಗ್ಯ ಬಿಜೆಪಿಯ ಗಮನ ಸೆಳೆದಿದೆ.

ಮುಂಬರುವ ಲೋಕಸಭಾ ಚುನಾವಣೆಗೆ ಮೈಸೂರು-ಕೊಡಗು ಕ್ಷೇತ್ರಕ್ಕೆ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡುವ ಸಾಧ್ಯತೆ ಇದೆ ಎಂಬ ವರದಿಗಳ ನಡುವೆ ಸಿಂಹ ಸಿಡಿದೆದ್ದು ಮೂರ್ನಾಲ್ಕು ದಿನಗಳಿಂದ ದಿನಕ್ಕೊಂದು ರೀತಿಯ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದರು.

ಪಕ್ಷದ ಹಿರಿಯ ನಾಯಕತ್ವದ ರಾಜಮನೆತನದ ಓಲೈಕೆಯನ್ನು ಗಮನಿಸಿದ ಪ್ರತಾಪ ಸಿಂಹ ಇತ್ತ ರಾಜ ಮನೆತನ ಸಿಲುಕಿರುವ ಭೂವಿವಾದಗಳ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ವಿವಾದ ಸೃಷ್ಟಿಸುವುದರ ಜೊತೆಗೆ ತನ್ನ ಸಾಧನೆಯನ್ನೂ ಜನರ ಎದುರು ಹೇಳಿಕೊಂಡಿದ್ದರು.

ಇದೆಲ್ಲವನ್ನೂ ಪಕ್ಷ ಮರೆಯಲ್ಲಿ ನಿಂತು ಗಮನಿಸಿದ್ದು ಕೊನೆಗೂ ಪ್ರತಾಪ ಸಿಂಹ ಅವರಿಗೆ ಪಕ್ಷದ ಉನ್ನತ ನಾಯಕತ್ವ ಸಮನ್ಸ್‌ ನೀಡಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಲೋಕಸಭೆ ಚುನಾವಣೆಯ ಕರ್ನಾಟಕ ಉಸ್ತುವಾರಿ ರಾಧಾ ಮೋಹನ್‌ದಾಸ್ ಅಗರ್ವಾಲ್ ಮಂಗಳವಾರ, ಮಾರ್ಚ್ 12ರಂದು ಮೈಸೂರು ಸಂಸದರಿಗೆ ಸಮನ್ಸ್‌ ನೀಡಿದ್ದಾರೆ.

ಬಿಜೆಪಿಯ ಎರಡನೇ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯ ನಡುವಿನ ಪ್ರತಾಪ ಸಿಂಹ ಅವರ ಆಕ್ರೋಶ ಪಕ್ಷದ ಗಮನ ಸೆಳೆದಿದ್ದು, ಈಗ ಬುಲಾವ್‌ ಬಂದಿರುವುದು ಪಕ್ಷದ ಇತರ ನಾಯಕರ ಕಣ್ಣು ಅಗಲವಾಗುವಂತೆ ಮಾಡಿದೆ.

ಇದೆಲ್ಲದರ ನಂತರ ಮತ್ತೆ ಸಿಂಹ “ಯದುವೀರ್‌ ಎಸಿ ರೂಮ್‌ ಬಿಟ್ಟು ಜನಸೇವೆಗಾಗಿ ರಸ್ತೆಗಿಳಿಯುವುದಾದರೆ ನಾನು ಅವರನ್ನು ಬೆಂಬಲಿಸುವೆ” ಎಂದೂ ಟೋನ್‌ ಬದಲಿಸಿದ್ದು ನೋಡಿದರೆ ಅವರಿಗೆ ಟಿಕೆಟ್‌ ಮಿಸ್‌ ಆಗುವುದು ಬಹುತೇಕ ಖಚಿತ ಆದಂತಿದೆ. ಕರ್ನಾಟಕದ ಸಾಕಷ್ಟು ಸಂಸದರ ಅವಸ್ಥೆ ನೋಡಿದರೆ ಬಹಳಷ್ಟು ಜನರು ಈ ಬಾರಿ ಟಿಕೆಟ್‌ ಕಳೆದುಕೊಳ್ಳುವುದು ಖಚಿತವೆನ್ನಿಸುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು