Tuesday, July 2, 2024

ಸತ್ಯ | ನ್ಯಾಯ |ಧರ್ಮ

ವಾಲ್ಮೀಕಿ ನಿಗಮದ ಹಗರಣ ವಿರೋದಿಸಿ ಡಿಸಿ ಕಚೇರಿಗಳಿಗೆ BJP ಮುತ್ತಿಗೆ: ವಿಜಯೇಂದ್ರ

ನವದೆಹಲಿ: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ಹಗರಣಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ನೇರ ಹೊಣೆಗಾರರು. ಏಕೆಂದರೆ ಅವರೇ ಹಣಕಾಸು ಸಚಿವರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಆರೋಪಿತರಾಗಿರುವ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲ್ ಮತ್ತು ನಿಗಮದ ಅಧ್ಯಕ್ಷರು ಕೂಡಲೇ ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ರಾಜ್ಯ ಘಟಕ ಅಧ್ಯಕ್ಷ, ಶಾಸಕ ಬಿ.ವೈ. ವಿಜಯೇಂದ್ರ ಆಗ್ರಹಿಸಿದ್ದಾರೆ.

ನವದೆಹಲಿಯಲ್ಲಿ ಬುಧವಾರ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟ ಹಣ ಪೋಲಾಗಿದೆ. ಕಾಂಗ್ರೆಸ್ ಸರ್ಕಾರವೇ ಈ ಹಣವನ್ನು ದೋಚಿದೆ. ಈ ಪ್ರಕರಣದಲ್ಲಿ ಪರಿಶೀಷ್ಟರಿಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ. ಇದೇ 28ರಂದು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲಿದ್ದೇವೆ ಎಂದರು.

ನಿಗಮದ ಹಗರಣ ಸಂಬಂಧ ಯೂನಿಯನ್ ಬ್ಯಾಂಕ್ ಆಫ್ ಇಂಡಿಯ ಪತ್ರದನ್ವಯ ಸಿಬಿಐ ತನಿಖೆ ನಡೆಯುತ್ತಿದೆ. ರಾಜ್ಯ ಸರ್ಕಾರ ಆತುರಾತುರವಾಗಿ ಎಸ್‍ಐಟಿಯನ್ನೂ ರಚಿಸಿ ತನಗೆ ಬೇಕಾದಂತೆ ತನಿಖೆ ನಡೆಸುತ್ತಿದೆ ಎಂದು ಅವರು ಆರೋಪಿಸಿದರು.

ಅಲ್ಲಿ ಇಲ್ಲಿ ಅಧಿಕಾರಿ ಮನೆಯಲ್ಲಿ ಒಂದಷ್ಟು ಹಣ ಲಭಿಸಿದೆ ಎನ್ನುವ ಮೂಲಕ ಕಣ್ಣೊರೆಸುವ ತಂತ್ರವನ್ನು ಎಸ್‍ಐಟಿ ಮಾಡುತ್ತಿದೆ. ಸಚಿವ ನಾಗೇಂದ್ರ ಅವರು ರಾಜೀನಾಮೆ ಕೊಟ್ಟಿದ್ದಾರೆ. ತೆಲಂಗಾಣಕ್ಕೆ ಬೇನಾಮಿ ಖಾತೆಗೆ ಹಣ ವರ್ಗಾವಣೆ ಮಾಡಿ ವಿತ್‍ಡ್ರಾ ಮಾಡಿದ್ದಾರೆ. ಈ ಹಣವನ್ನು ಲೋಕಸಭಾ ಚುನಾವಣೆಗೆ ಬಳಸಿದ್ದಾರೆ ಎಂದು ವಿಜಯೆಂದ್ರ ದೂರಿದರು.

ಗ್ಯಾರಂಟಿ ಹೆಸರಲ್ಲಿ ಜನತೆಯ ಕಿವಿಗೆ ಹೂ: ಪೆಟ್ರೋಲ್- ಡೀಸೆಲ್ ದರ ಏರಿಸಿದ್ದಾರೆ. ಹಾಲಿನ ದರ ಹೆಚ್ಚಿಸಿದ್ದಾರೆ. ಪೆಟ್ರೋಲ್- ಡೀಸೆಲ್ ದರ ಏರಿಸಿದ್ದರಿಂದ ರಾಜ್ಯದೆಲ್ಲೆಡೆ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಸ್ಟ್ಯಾಂಪ್ ಡ್ಯೂಟಿ ಹೆಚ್ಚಿಸಲಾಗಿದೆ. ವಿದ್ಯುತ್ ದರ ಏರಿಸಿದ್ದಾರೆ. ರೈತರು ತಮ್ಮ ಹೊಲಕ್ಕೆ ಟ್ರಾನ್ಸ್ ಫಾರ್ಮರ್ ಹಾಕಿಸಲು 25 ಸಾವಿರ ಇದ್ದುದನ್ನು 2.5 ಲಕ್ಷಕ್ಕೆ ಏರಿಸಿದ್ದಾರೆ. ಗ್ಯಾರಂಟಿ ಹೆಸರಿನಲ್ಲಿ ಜನರ ಕಿವಿಗೆ ಹೂ ಮುಡಿಸಿದ್ದಾರೆ. ಸ್ಪಷ್ಟ ಬಹುಮತದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವು ನಾಡಿನ ಜನತೆಗೆ ದ್ರೋಹ ಬಗೆಯುತ್ತಿದೆ ಎಂದು ವಿಜಯೇಂದ್ರ ದೂರಿದರು.

ರಾಜ್ಯದ ರೈತರು ಬರದಿಂದ ನರಳಿ ಸಂಕಷ್ಟದಲ್ಲಿದ್ದಾರೆ. ಇಂಥ ಸಂದರ್ಭದಲ್ಲಿ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದೆ. ಟ್ರ್ಯಾಕ್ಟರ್- ಟಿಲ್ಲರ್ ಬಳಸುವ ರೈತರೂ ತೊಂದರೆ ಅನುಭವಿಸುತ್ತಿದ್ದಾರೆ. ಬಿತ್ತನೆ ಬೀಜದ ದರ ಶೇ 40- 50ರಷ್ಟು ಹೆಚ್ಚಾಗಿದೆ. ಇಂಥ ಸಂಕಷ್ಟದ ಸಂದರ್ಭದಲ್ಲೂ ಜನರಿಗೆ ಸ್ಪಂದಿಸುತ್ತಿಲ್ಲ. ಮುಖ್ಯಮಂತ್ರಿಗಳು ಮತ್ತು ಕಾಂಗ್ರೆಸ್ ಸರ್ಕಾರ ಯಾಕೆ ಇಷ್ಟು ಕಟುವಾಗಿ ನಡೆದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದರು. ಜನವಿರೋಧಿ ತೀರ್ಮಾನಗಳೇಕೆ ಎಂದು ಕೇಳಿದರು. ಅನುಭವಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ನೋಡಿದರೆ ಅಯ್ಯೋ ಅನಿಸುತ್ತಿದೆ ಎಂದು ಅವರು ತಿಳಿಸಿದರು. ಹಾಲಿನ ದರದ ಬಳಿಕ ಬಸ್ ಪ್ರಯಾಣದರವೂ ದುಬಾರಿ ಆಗಲಿದೆ ಎಂದು ಅವರು ತಿಳಿಸಿದರು.

Related Articles

ಇತ್ತೀಚಿನ ಸುದ್ದಿಗಳು