Thursday, August 8, 2024

ಸತ್ಯ | ನ್ಯಾಯ |ಧರ್ಮ

ವಿನೇಶ್ ನಿಜವಾಗಿಯೂ ಭಾರತದ ಚಿನ್ನಮ್ಮ – ನಾಗಾರ್ಜುನ್

ಈ ಬಾರಿ ಭಾರತಕ್ಕೆ ವಿನೇಶ್ ಫೋಗಟ್ ಅವರಿಂದ ಚಿನ್ನ ಬಾರದೆ ಇರಬಹುದು ಆದರೆ ಇವರು ಭಾರತಿಯರಿಗೆ ನಿಜವಾಗಲೂ ಚಿನ್ನಮ್ಮಳೆ ಏಕೆಂದು ವಿವರಿಸುವ ಮೊದಲು .. ಈ ಚಿನ್ನಮ್ಮಳ ಜೀವನದಲ್ಲಿ ಏನೆಲ್ಲಾ ನಡಿದಿತ್ತು ಎಂದು ಒಮ್ಮೆ ಇಣುಕು ಹಾಕೋಣ ಬನ್ನಿ.

ಗೆಲುವು, ಸೋಲು, ನಿಂದನೆ, ಹೋರಾಟ, ಸ್ವಾಭಿಮಾನಿ ಈ ಪದಗಳನ್ನ ನ್ಯೂಸ್ ನಲ್ಲಿ ಓದುವಾಗ, ಸೋಶಿಯಲ್ ಮೀಡಿಯಾದಲ್ಲಿ ಕೇಳುವಾಗ ‘ವಿನೇಶ್ ಫೋಗಟ್’ ಈ ಹೆಸರು ಹಲವಾರು ಬಾರಿ ಕೇಳಿರುತ್ತೀರಿ.

ಏಷ್ಯನ್ ಗೇಮ್ಸ್, ಕಾಮನ್ವೇಲ್ತ್ ಗೇಮ್ಸ್, ಏಷ್ಯನ್ ಚಾಂಪಿಯನ್ ಶಿಪ್ ಕ್ರೀಡಾಕೂಟಗಳಲ್ಲಿ, ಅಷ್ಟೇ ಯಾಕೆ ಕೆಲವೇ ತಿಂಗಳುಗಳ ಹಿಂದೆ ಭಾರತೀಯ ಕುಸ್ತಿ ಸಂಸ್ಥೆಯ ವಿರುದ್ಧ ದಿಲ್ಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ನಡೆಸಿ, ತನಗಾದ ಅನ್ಯಾಯದ ವಿರುದ್ಧ, ಹೆಣ್ಣನ್ನ ದೇವರು ಎನ್ನುವ ತನ್ನ ಭಾರತ ದೇಶದಲ್ಲಿ ಯಾವ ನ್ಯಾಯ ಸಿಗದ ಕಾರಣ ಗೆದ್ದ ಪದಕಗಳನ್ನೇ ನದಿಗೆ ಹಾಕಿದ ಫೋಗಟ್ ಎಂದು ಕೇಳಿಯೇ ಇರ್ತೀರಾ.

ಸದ್ಯಕ್ಕೆ ಅಂದರೆ, ಈಗ ಪ್ಯಾರಿಸ್ ಒಲಂಪಿಕ್ 2024ರಲ್ಲಿ ವಿನೇಶ್ ಫೋಗಟ್ ಚಿನ್ನದ ಕನಸಿಗೆ ಬೆಂಕಿ … ಈ ರೀತಿ ಪದೆ ಪದೆ ಹೆಸರು ಕಿವಿಗೆ ಬೀಳುತ್ತಿರುವ ಕಾರಣವೇನೋ… ಈ ಗಟ್ಟಿಗಿತ್ತಿ ಹೆಸರು ಕೇಳಿದ್ರೆ ಕೆಲವರಿಗೆ ಹೆಮ್ಮೆ, ಇನ್ನೂ ಕೆಲವರಿಗೆ ನಮ್ಮ ದೇಶಕ್ಕೆ ಈ ಮಹಿಳೆ ಸ್ಫೂರ್ತಿ ಎನ್ನುವ ಬಾಯಿಗಳಿಗೆ ನುಂಗಲಾರದ ಬಿಸಿತುಪ್ಪ.

ಈ ಬಾರಿ ಭಾರತಕ್ಕೆ ವಿನೇಶ್ ಫೋಗಟ್ ಅವರಿಂದ ಚಿನ್ನ ಬಾರದೆ ಇರಬಹುದು ಆದರೆ ಇವರು ಭಾರತೀಯರಿಗೆ ನಿಜವಾಗಲೂ ಚಿನ್ನಮ್ಮಳೆ ಏಕೆಂದು ವಿವರಿಸುವ ಮೊದಲು ಈ ಚಿನ್ನಮ್ಮಳ ಜೀವನದಲ್ಲಿ ಏನೆಲ್ಲಾ ನಡಿದಿತ್ತು ಎಂದು ಒಮ್ಮೆ ಇಣುಕಿ ನೋಡೋಣ ಬನ್ನಿ.

ಈ ಚಿನ್ನಮ್ಮಳ ಜೀವನದ ಪರಿಸ್ಥಿತಿ ಹೇಳಿಕೊಳ್ಳುವಷ್ಟು ಶ್ರೀಮಂತವಾಗಿರಲಿಲ್ಲ…25 ಆಗಸ್ಟ್ 1994ರಂದು ಹರಿಯಾಣದ ಚಿಕ್ಕ ಹಳ್ಳಿಯಾದ ಚಾರ್ಖಿ ದಾದ್ರಿಯಲ್ಲಿ ವಿನೇಶ್ ಜನಿಸುತ್ತಾರೆ.

ವಿನೇಶ್ ಗೆ ಚಿಕ್ಕವಯಸ್ಸಿನಲ್ಲಿ ತನ್ನ ಸೋದರ ಸಂಬಂಧಿಗಳ ಕ್ರೀಡಾ ಸ್ಫೂರ್ತಿಯೋ ಅಥವಾ ಅವರಂತೆ ನಾನು ಆಗಬೇಕು ಎಂಬ ಚಲವೋ.. ಈದಿನ ಈ ಸಾಧನೆಗೆ ಕಾರಣವಾಗಿದೆ ಎಂದರೆ ತಪ್ಪಾಗಲಾರದು.

ಈ ಚಿನ್ನಮ್ಮ,ವಿಜೇತ ಕುಸ್ತಿಪಟುಗಳ ಕುಟುಂಬದಿಂದ ಬಂದವಳು. ಅಂತರಾಷ್ಟ್ರೀಯ ಕುಸ್ತಿಪಟುಗಳು ಮತ್ತು ಕಾಮನ್ವೆಲ್ತ್ ಗೇಮ್ಸ್ ಪದಕ ವಿಜೇತರುಗಳಾದ, ಕುಸ್ತಿಪಟು ರಾಜಪಾಲ್ ಫೋಗಟ್ ಅವರ ಮಗಳು ಮತ್ತು ಕುಸ್ತಿಪಟುಗಳಾದ ಗೀತಾ ಮತ್ತು ಬಬಿತಾ ಅವರ ಸೋದರಸಂಬಂಧಿಯೇ ಈ ಚಿನ್ನಮ್ಮ (ವಿನೇಶ್ ಫೋಗಟ್). ಹಾಗಾಗಿ ಇವರ ಜೀವನದಲ್ಲಾದ ಘಟನೆಗಳನ್ನ ತಿಳಿದರೆ ಅಮಿರ್ ಖಾನ್ ಅವರು ನಟಿಸಿರುವ ‘ದಂಗಲ್’ ಸಿನಿಮಾ ನೆನಪಿಗೆ ಬರುತ್ತದೆ.

ಪ್ರತಿಯೊಬ್ಬ ವಿಜೇತರು ಹಿಂದೆ ಕಠಿಣವಾದ ಸಂದರ್ಭಗಳನ್ನ ಹೆದರಿಸಿಯೇ ಯಶಸ್ಸಿನ ಮೆಟ್ಟಿಲೇರಿರುತ್ತಾರೆ ಎಂದು ನಾವು ಕೇಳಿದ್ದೇವೆ. ಹಾಗೇ ವಿನೇಶ್ ಚಿಕ್ಕ ವಯಸ್ಸಿನಲ್ಲಿ ಕುಸ್ತಿಪಟುವಾಗಬೇಕು ಎಂದು ಕನಸು ಹೊತ್ತು ನಿಂತಾಗ ಮೊದಲನೇ ಸವಾಲೇ…ಪುರುಷ ಪ್ರಧಾನ ವ್ಯವಸ್ಥೆ. ಈ ವ್ಯವಸ್ಥೆಯಿಂದಾಗಿ ತಮ್ಮ ಹಳ್ಳಿಯಾದ ಚಾರ್ಖಿ ದಾದ್ರಿಯಲ್ಲಿ ತಮ್ಮ ಸಮುದಾಯದಿಂದ ಅಪಾರ ಒತ್ತಡ ಮತ್ತು ವಿರೋಧವನ್ನು ಎದುರಿಸಬೇಕಾಯಿತು.

ಮಹಿಳೆಯರು ಮನೆ ಕೆಲಸಕ್ಕೆ ಮಾತ್ರ ಸೀಮಿತ ಇವರು ಕುಸ್ತಿ ಆಡಲು ಅನರ್ಹರು ಎಂಬ ಟೀಕೆಗಳಿಗೆ ತಲೆ ಕೊಡದೆ ತನ್ನ ಗುರಿಯತ್ತ ಸಾಗಿದ ವಿನೇಶ್ಗೆ ತನ್ನ ಕುಟುಂಬದ ಬೆಂಬಲ ದೊರಕಿತು. ಅದರಲ್ಲೂ ವಿಶೇಷವಾಗಿ ಆಕೆಯ ಚಿಕ್ಕಪ್ಪ ಮಹಾವೀರ್ ಸಿಂಗ್ ಫೋಗಟ್, ಕುಸ್ತಿಪಟುವಾಗಿ ಆಕೆಯ ತರಬೇತಿ ಮತ್ತು ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ಇದು ವಿನೇಶ್ ಗೆ ಸಿಕ್ಕ ಮೊದಲ ಜಯ ಎನ್ನಬಹುದು.

ಹೀಗೆ ಮುಂದುವರೆದು ತನ್ನ ಗುರಿಯತ್ತ ಹೆಜ್ಜೆ ಹಾಕುತ್ತಿದ್ದ ಚಿನ್ನಮ್ಮಳಿಗೆ (ವಿನೇಶ್ ಫೋಗಟ್) ತನ್ನ ಒಂಬತ್ತನೇ ವಯಸ್ಸಿನಲ್ಲಿ ಎದುರಾದ ಇನ್ನೊಂದು ಕಂಟಕವೇ ತನ್ನ ತಂದೆಯ ಮರಣ. ಇದಾಗಿಯೂ ಚಿನ್ನಮ್ಮ ಕಷ್ಟ ಮತ್ತು ನೋವಿನ ನಡುವೆ, ಯುವ ಕುಸ್ತಿಪಟು ಕ್ರೀಡೆಯಲ್ಲಿ ಆಶ್ರಯ ಪಡೆದಂತೆ ವಿನೇಶ್ ಫೋಗಟ್ ಅವರ ಚಿಕ್ಕಪ್ಪ ಮಹಾವೀರ್ ಮಾರ್ಗದರ್ಶನದ ಬೆಳಕು ಎಂದು ಸಾಬೀತುಪಡಿಸಿದರು.

ವಿನೇಶ್ ಫೋಗಟ್ ಕುಸ್ತಿಯನ್ನು ಪ್ರಾರಂಭಿಸಿದಾಗ, ಈಕೆಯ ಸೋದರ ಸಂಬಂಧಿ ಗೀತಾ ನಿಧಾನವಾಗಿ ರಾಷ್ಟ್ರೀಯ ವೇದಿಕೆಯಲ್ಲಿ ತನ್ನನ್ನು ತಾನು ಗುರುತಿಸಿ ಕೊಂಡಿದ್ದರು.

ನಂತರ 2013ರಲ್ಲಿ ವಿನೇಶ್ ಭಾರತದ ಹೊಸದಿಲ್ಲಿಯಲ್ಲಿ ನಡೆದ ಏಷ್ಯನ್ ಕುಸ್ತಿ ಚಾಂಪಿಯನ್‌ಶಿಪ್‌ನಲ್ಲಿ , ಮಹಿಳೆಯರ ಫ್ರೀಸ್ಟೈಲ್ 52 ಕೆಜಿ ವಿಭಾಗದಲ್ಲಿ, ಥಾಯ್ಲೆಂಡ್‌ನ ಥೋ-ಕೇವ್ ಶ್ರೀಪ್ರಪಾ ವಿರುದ್ಧ ಗೆದ್ದು ವಿನೇಶ್ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು ಬಹುಶಃ ಇದೇ ಅವರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲು ಗುರುತಿಸಿಕೊಂಡದ್ದು.

ತದನಂತರ ಕಾಮನ್‌ವೆಲ್ತ್ ಕುಸ್ತಿ ಚಾಂಪಿಯನ್‌ಶಿಪ್‌ 2013ರಲ್ಲಿ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಲ್ಲಿ ನಡೆದ ವಿಶೇಷ ಪಂದ್ಯಾವಳಿಯಲ್ಲಿ, ನೈಜೀರಿಯಾದ ಒಡುನಾಯೊ ಅಡೆಕುರೊಯೆ ವಿರುದ್ಧ ಸೋತ ವಿನೇಶ್ ಎರಡನೇ ಸ್ಥಾನ ಪಡೆದರು ಮತ್ತು ಮಹಿಳೆಯರ ಫ್ರೀಸ್ಟೈಲ್ 51 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕವನ್ನು ಗೆದ್ದರು.

2014 ಕಾಮನ್ವೆಲ್ತ್ ಗೇಮ್ಸ್ ನಲ್ಲಿ ವಿನೇಶ್ ಫೋಗಟ್ ಮೊದಲ ಚಿನ್ನದ ಪದಕ ಪಡೆದರು. ಇದೇ ಅವರ ಮೊದಲ ಚಿನ್ನದ ಗೆಲುವು, 2014 ರಲ್ಲಿ ಗ್ಲಾಸ್ಗೋದಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ವಿನೇಶ್ ಮಹಿಳೆಯರ ಫ್ರೀಸ್ಟೈಲ್ 48 ಕೆಜಿ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ಭಾರತಕ್ಕೆ ಚಿನ್ನದ ಪದಕವನ್ನು ಗೆದ್ದಕೊಟ್ಟರು.

ಹೀಗೆ ಗೆಲುವಿನ ಹಾದಿ ಇಡಿದ ಚಿನ್ನಮ್ಮ 2014ರ ಏಷ್ಯನ್ ಗೇಮ್ಸ್ ನಲ್ಲಿ ಕಂಚಿನ ಪದಕ, 2015ರ ಏಷ್ಯನ್ ಚಾಂಪಿಯನ್‌ಶಿಪ್ ನಲ್ಲಿ ಬೆಳ್ಳಿ ಪದಕಗೆದ್ದು, 2016 ರಲ್ಲಿ ಇಸ್ತಾನ್‌ಬುಲ್‌ನಲ್ಲಿ ನಡೆದ ಬೇಸಿಗೆ ಒಲಿಂಪಿಕ್ಸ್‌ಗೆ ಅರ್ಹತಾ ಪಂದ್ಯಾವಳಿಯ ಅಂತಿಮ ಸುತ್ತಿನಲ್ಲಿ ಪೋಲಿಷ್ ಕುಸ್ತಿಪಟು ಇವೊನಾ ಮಟ್ಕೊವ್ಸ್ಕಾ ಅವರನ್ನು ಸೋಲಿಸಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದರು. ಆದರೆ 2016 ರ ಬೇಸಿಗೆ ಒಲಿಂಪಿಕ್ಸ್‌ನಲ್ಲಿ , ವಿನೇಶ್ ಕ್ವಾರ್ಟರ್ ಫೈನಲ್‌ಗೆ ತಲುಪಿದರು, ಆದರೆ ಮೊಣಕಾಲಿನ ಗಾಯದಿಂದಾಗಿ ಚೀನಾದ ಸನ್ ಯಾನನ್‌ ವಿರುದ್ಧ ಸೋತರು.

ಆದರೆ ಭರವಸೆ ಕಳೆದು ಕೊಳ್ಳದ ಫೋಗಟ್ 2018 ರ ಗೋಲ್ಡ್ ಕೋಸ್ಟ್‌ನಲ್ಲಿ ನಡೆದ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ವಿನೇಶ್ ಚಿನ್ನದ ಪದಕ ತನ್ನದಾಗಿಸಿಕೊಂಡರು.

ವಿನೇಶ್ ಫೋಗಟ್ 2018 ರ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕವನ್ನು ಗೆದ್ದು, ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನ ಗೆದ್ದ ಮೊದಲ ಭಾರತೀಯ ಮಹಿಳಾ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2019ರ ಏಷ್ಯನ್ ಕುಸ್ತಿ ಚಾಂಪಿಯನ್‌ ಶಿಪ್ ನಲ್ಲಿ ಚಿನ್ನ, 2019ರಲ್ಲಿ ವಾರ್ಸಾದಲ್ಲಿ ನಡೆದ ಪೋಲೆಂಡ್ ಓಪನ್ ಕುಸ್ತಿ ಪಂದ್ಯಾವಳಿಯಲ್ಲಿ ಚಿನ್ನ ಪಡೆದ ಫೋಗಟ್ 53 ಕೆಜಿ ಕುಸ್ತಿ ವಿಭಾಗದಲ್ಲಿ ಸತತ ಮೂರನೇ ಚಿನ್ನವನ್ನು ಪಡೆದರು.

2019ರ ವಿಶ್ವಕುಸ್ತಿ ಚಾಂಪಿಯನ್‌ಶಿಪ್ ನಲ್ಲಿ ಕಂಚಿನ ಪದಕ ಗೆದ್ದು, ಮಹಿಳೆಯರ 53 ಕೆಜಿ ವಿಭಾಗದಲ್ಲಿ ಚೊಚ್ಚಲ ವಿಶ್ವ ಚಾಂಪಿಯನ್‌ಶಿಪ್ ಪದಕವನ್ನು ಪಡೆದರು. ಈ ಮೂಲಕ ತನ್ನ ಅಗ್ರ ಆರು ಸ್ಥಾನಗಳ ಮೂಲಕ ಟೋಕಿಯೊ ಒಲಿಂಪಿಕ್ಸ್ 2020 ಗೆ ಅರ್ಹತೆ ಪಡೆದ ಮೊದಲ ಭಾರತೀಯ ಕುಸ್ತಿಪಟು ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆದರೆ ಆ ಒಲಿಂಪಿಕ್ಸ್‌ನಲ್ಲಿ ಕೆಟ್ಟ ದೈಹಿಕ ಮತ್ತು ಮಾನಸಿಕ ಸ್ಥಿತಿಯಲ್ಲಿದ್ದರಿಂದ ಪದಕ ಗೆಲ್ಲುವಲ್ಲಿ ವಿಫಲರಾದರು. ನಂತರ ಜನವರಿ 2020 ರಲ್ಲಿ, ಫೋಗಾಟ್ ರೋಮ್ ಶ್ರೇಯಾಂಕದ ಸರಣಿಯಲ್ಲಿ ಚಿನ್ನವನ್ನು ಗೆದ್ದರು.

ಫೆಬ್ರವರಿ 2021 ರಲ್ಲಿ ಕೀವ್‌ನಲ್ಲಿ ನಡೆದ ಅತ್ಯುತ್ತಮ ಉಕ್ರೇನಿಯನ್ ಕುಸ್ತಿಪಟುಗಳು ಮತ್ತು ತರಬೇತುದಾರರ ಸ್ಮಾರಕ ಪಂದ್ಯಾವಳಿಯಲ್ಲಿ ಫೋಗಾಟ್ 2017 ರ ವಿಶ್ವ ಚಾಂಪಿಯನ್ ವನೇಸಾ ಕಲಾಡ್ಜಿನ್ಸ್ಕಾಯಾ ಅವರನ್ನು ಸೋಲಿಸಿ ಚಿನ್ನದ ಪದಕವನ್ನು ಗೆದ್ದರು. ತದನಂತರ 2021 ಪೋಲೆಂಡ್ ಓಪನ್ನಲ್ಲಿ ಚಿನ್ನದ ಪದಕ ಪಡೆದರು.

2022 ಕಾಮನ್‌ವೆಲ್ತ್ ಗೇಮ್ಸ್ನಲ್ಲಿ ಚಿನ್ನ…ಹೀಗೆ ಪದಕಗಳ ಸರಮಾಲೆಗಳನ್ನ ತನ್ನದಾಗಿಸಿಕೊಂಡಿದ್ದ ವಿನೇಶ್ ಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಯಿತು.

ವಿನೇಶ್ ಫೋಗಟ್ 2023ರ ಜನವರಿಯಲ್ಲಿ ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI)ದ ತರಬೇತುದಾರರು ಮತ್ತು ಅಧ್ಯಕ್ಷರಾದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು ವರ್ಷಗಳಿಂದ ಮಹಿಳಾ ಆಟಗಾರರಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸದ ಫೋಗಟ್, ಕುಸ್ತಿ ಫೆಡರೇಶನ್ ಆಫ್ ಇಂಡಿಯಾ (WFI) ವಿಸರ್ಜನೆಗೆ ಒತ್ತಾಯಿಸಿದರು.

ತದನಂತರ ತಮಗಾದ ಅನ್ಯಾಯದ ವಿರುದ್ದ ಪ್ರತಿಭಟನೆ ನಡೆಸಿದರೆ, ಅಲ್ಲಿನ ಆಗಿನ ಆಡಳಿತದಲ್ಲಿದ್ದ ರಾಜಕಾರಣಿಗಳು ಮತ್ತು ಕೆಲವರಿಂದ ಪ್ರತಿಭಟನೆ ರದ್ದುಗೊಳಿಸುವಂತೆ ಎಚ್ಚರಿಕೆ ಸಂದೇಶಗಳು ಬರಲು ಪ್ರಾರಂಭಿಸಿದವು.

ಇದನ್ನ ತಿಳಿದ ವಿನೇಶ್ ಏಪ್ರಿಲ್ 2023 ರಲ್ಲಿ ಏಕಾಂಗಿಯಾಗಿ ಪ್ರತಿಭಟನೆ ನಡೆಸಲು ಸಜ್ಜಾದರು. ಆಗ ಕ್ರೀಡಾಪಟುಗಳ ಮೇಲಾಗುತ್ತಿರುವ ಅನ್ಯಾಯವನ್ನ ಖಂಡಿಸಿ, ಮತ್ತಿತರರು ಕುಸ್ತಿಪಟುಗಳು ಫೋಗಟ್‌ ನ ಜೊತೆಗೆ ಕೈ ಜೋಡಿಸಿದರು.

ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಸಿಂಗ್‌ ಅವರ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ದಿಲ್ಲಿಯಲ್ಲಿ ವಿನೇಶ್‌ ಫೋಗಟ್‌, ಬಜರಂಗ್‌ ಪುನಿಯಾ, ಸಾಕ್ಷಿ ಮಲ್ಲಿಕ್‌ ಮತ್ತಿತರ ಕುಸ್ತಿಪಟುಗಳು ಪ್ರತಿಭಟನೆ ನಡೆಸಿದ್ದ ವೇಳೆ ಅವರ ಮೇಲೆ ಪೊಲೀಸರು ದೌರ್ಜನ್ಯ ನಡೆಸಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ತದ ನಂತರ ಹೆಣ್ಣಿನ ರಕ್ಷಣೆ ನಮ್ಮ ಮುಖ್ಯ ಧ್ಯೇಯ ಎಂದು ಹೇಳುತ್ತಿದ್ದ, ಭೇಟಿ ಬಚಾವೋ ಭೇಟಿ ಪಾಡವೋ ಎಂದು ದೇಶಕ್ಕೆ ಸಾರಿದ ಪಕ್ಷ, ತನ್ನ ಪಕ್ಷದ ಸಂಸದನ ಅನ್ಯಾಯವನ್ನು ಮರೆಮಾಚಿ, ಆ ಕ್ರೀಡಾಪಟುಗಳ ಹೋರಾಟಕ್ಕೆ ಕಿವಿಗೊಡದ ಸರ್ಕಾರದ ಕಣ್ಣಾಮುಚ್ಚಾಲೆ ಆಟ ನೋಡಿ, ಬೇಸತ್ತು ತಮಗೆ ಬಂದಿದ್ದ ಪದಕಗಳನ್ನ ನದಿಗೆ ಎಸೆದರು.ಕ್ರೀಡಾಪಟುಗಳ ಗೆಲುವು ಮತ್ತು ಸೋಲಿನ ಸಂದರ್ಭಗಳಲ್ಲಿ ಕಣ್ಣೀರನ್ನ ನೋಡಿದ್ದ ನಾವುಗಳು, ದೇಶದ ಸ್ಪೂರ್ತಿಮಯ ಕ್ರೀಡಾಪಟುಗಳ ಹೋರಾಟಕ್ಕೆ ನ್ಯಾಯ ಸಿಗದಿರುವ ಕಾರಣಕ್ಕೆ ನೊಂದು ಕಣ್ಣೀರಿಡುವುದನ್ನ ನೋಡಬೇಕಾಯಿತು.

ಇಷ್ಟಾದರೂ ಜಗ್ಗದ, ಕುಗ್ಗದ, ಈ ಸಿಂಹಿಣಿ, 2024ರ ಪ್ಯಾರಿಸ್ ಒಲಂಪಿಕ್ ನಲ್ಲಿ ವಿಶ್ವ ಚಾಂಪಿಯನ್‌ಗಳನ್ನು ಮಣಿಸುತ್ತ ಫೈನಲ್‌ಗೆ ಲಗ್ಗೆ ಇಟ್ಟಾಗ, ಚಿನ್ನಮ್ಮಳ ಹೋರಾಟವನ್ನ ದ್ವನಿಗೂಡಿಸಿದವರು ವಿನೇಶ್ ಚಿನ್ನವನ್ನ ತಂದೇ ತರುತ್ತಾಳೆ. ಅವಳನ್ನ ಅವಮಾನಿಸಿದವರಿಗೆ ಗೆಲುವಿನ ಮೂಲಕ ಉತ್ತರ ಕೊಡುತ್ತಾಳೆ ಎಂದು ಕಾದು ಕೂತ ಜನಗಳು ಒಂದು ಕಡೆ, ಅವಳ ಹೋರಟಕ್ಕೆ ಧ್ವನಿಗೂಡಿಸದೆ ಅವಳಿಗಾದ ಅನ್ಯಾಯವನ್ನ ಸಮರ್ಥಿಸಿಕೊಂಡು, ಒಲಂಪಿಕ್ ನಲ್ಲಿ ಸ್ಪರ್ಧಿಸಲು ಅವಕಾಶ ಮಾಡಿಕೊಟ್ಟ ಸರ್ಕಾರಕ್ಕೆ ಮೊದಲು ಅಭಿನಂದನೆ ಸಲ್ಲಬೇಕು ಎನ್ನುವರು ಇನ್ನೊಂದು ಕಡೆ, 2024ರ ಒಲಂಪಿಕ್ ನಲ್ಲಿ ಭಾರತಕ್ಕೆ ಮೊದಲ ಚಿನ್ನ ವಿನೇಶ್ ತಂದು ಕೊಡುತ್ತಾಳೆ ಎಂದುಕೊಂಡವರು ಮತ್ತೊಂದು ಕಡೆ… ಹೀಗೆ ಎಲ್ಲಾರು ವಿನೇಶ್ ಜಪ ಮಾಡುತ್ತಿರುವಾಗ, ವಿನೇಶ್ ಗೆ ಇನ್ನೊಂದು ಅಗ್ನಿಪರೀಕ್ಷೆ ಕಾದಿತ್ತು. ಅದುವೇ 100ಗ್ರಾಂ ತೂಕ ಅವಳ ಮತ್ತು ಎಷ್ಟೋ ಭಾರತೀಯರ ಕನಸಿಗೆ ಬೆಂಕಿ ಇಟ್ಟಿದೆ.

ಚಿನ್ನ ಕೈ ತಪ್ಪಿದರೂ ಕೂಡ, ವಿನೇಶ್ ಫೋಗಟ್ ಚಿಕ್ಕವಯಸ್ಸಿನಿಂದಲೂ ಒಂದಲ್ಲ ಒಂದು ಸಮಸ್ಯೆಗಳನ್ನ ದಾಟುತ್ತಲೇ ಬಂದಿದ್ದಾರೆ. ಮಹಿಳೆಯರು ಕುಸ್ತಿಗೆ ಅನರ್ಹರು ಎಂದವರಿಗೆ ತನ್ನ ಆಟದ ಮೂಲಕ, ಮಹಿಳೆಯರು ಎಲ್ಲದಕ್ಕೂ ಅರ್ಹರು ಎಂದು ಈ ಲಿಂಗ ಅಸಮಾನತೆಯ ಸಮಾಜಕ್ಕೆ ಉತ್ತರ ಕೊಟ್ಟಿದಾಳೆ. ಚಿಕ್ಕವಳಿಂದ ತಾನು ಮಾಡಿದ ದೃಢ ನಿರ್ಧಾರ, ಶಿಸ್ತು, ಶ್ರಮ, ಹೋರಾಟ ಇಂದು ಎಷ್ಟೋ ಯುವಜನತೆಗೆ ಸ್ಪೂರ್ತಿ. ಈ ಕಾರಣವೇ ವಿನೇಶ್ ಪೋಗಟ್‌ ಭಾರತದ ಚಿನ್ನ ಮತ್ತು ಚಿನ್ನಮ್ಮ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page