ತಂಗಲಾನ್ (ಚಿನ್ನದ ಮಗ), “ಬಾಬಾಸಾಹೇಬ್ ಅಂಬೇಡ್ಕರ್ ಬರಹಗಳು ಮತ್ತು ಭಾಷಣಗಳು” ಸಂಪುಟಗಳ ಪುಸ್ತಕಗಳ ಸಂಕಲನದ ಚಲನಚಿತ್ರವಾಗಿದೆ. ಈ ಸಿನಿಮಾದಲ್ಲಿ ಕಥೆಯಿಲ್ಲ ಆದರೆ ಈ ನೆಲದ ಹಲವು ‘ಮೂಲನಿವಾಸಿಗಳ’ ಕಥೆಗಳಿವೆ. ಪಾ ರಂಜಿತ್ ಅವರು ಕಾಲ್ಪನಿಕ ಕಥೆಗಳನ್ನು ಸೊಗಸಾದ ಮಾಂತ್ರಿಕ ದೃಶ್ಯಗಳೊಂದಿಗೆ ಕೌಶಲ್ಯದಿಂದ ಹೆಣೆದಿದ್ದಾರೆ.
ಬುದ್ಧನ ಪೂರ್ವದಲ್ಲಿ ಮತ್ತು ಶಂಕರಾಚಾರ್ಯರ ನಂತರ ವಸಾಹತುಶಾಹಿ ಆಳ್ವಿಕೆ ಪ್ರಾರಂಭವಾಗುವವರೆಗೆ ಸವರ್ಣೀಯರು ನಡೆಸಿದ ರಾಜಕೀಯ ಸಂಘರ್ಷದ ವಿರುದ್ಧ ಅಸ್ಪೃಶ್ಯರೆಂದು ವರ್ಗೀಕರಿಸಲ್ಪಟ್ಟ ಈ ನೆಲದ ಮೂಲನಿವಾಸಿಗಳ ಬಗ್ಗೆ ಡಾ. ಅಂಬೇಡ್ಕರ್ ಅವರು ಬರೆದ ಕ್ರಾಂತಿಕಾರಿ ಇತಿಹಾಸವನ್ನು ನಿರ್ದೇಶಕ ಪಾ ರಂಜಿತ್ ಅದ್ಭುತವಾಗಿ ಹೊರತೆಗೆದು ಚಿತ್ರಿಕರಿಸಿದ್ದಾರೆ.
ಡಾ. ಅಂಬೇಡ್ಕರ್ ಅವರು ಬರೆದ “ಕ್ರಾಂತಿ ಮತ್ತು ಪ್ರತಿ-ಕ್ರಾಂತಿ” ಯಂತಹ ಪಠ್ಯಗಳನ್ನು ಪಾ ರಂಜಿತ್ ಪರಿಣಾಮಕಾರಿಯಾಗಿ ಬಳಸಿದ್ದಾರೆ, ಅದರಲ್ಲಿ ಬ್ರಾಹ್ಮಣ ಧರ್ಮದಿಂದಾದ ಬೌದ್ಧಧರ್ಮದ ಸೋಲನ್ನು ಅಸ್ಪೃಶ್ಯತೆಯ ಆಳವಾದ ಇತಿಹಾಸವಾಗಿ ಸಾಬೀತಾಗಿಸಲಾಗಿತ್ತು. ಅದರಲ್ಲಿ ಅಂಬೇಡ್ಕರ್ ಅವರು “ಬೌದ್ಧ ಧರ್ಮ ಮತ್ತು ಬ್ರಾಹ್ಮಣ್ಯದ ನಡುವಿನ ಮಾರಣಾಂತಿಕ ಸಂಘರ್ಷವೇ ಭಾರತದ ಇತಿಹಾಸವಾಗಿದೆ” ಎಂದು ಬರೆದಿದ್ದರು. ಮತ್ತು “ಅಸ್ಪೃಶ್ಯರು: ಅವರು ಯಾರು ಮತ್ತು ಅವರು ಏಕೆ ಅಸ್ಪೃಶ್ಯರಾದರು”, “ಶೂದ್ರರು ಯಾರು?”, “ಹಿಂದೂ ಧರ್ಮದಲ್ಲಿನ ಒಗಟುಗಳು” ಮುಂತಾದ ಪಠ್ಯಗಳಿಂದ ಕೂಡ.
ಶಂಕರಾಚಾರ್ಯರ ಅನುಯಾಯಿಗಳು ಈ ನೆಲದಾದ್ಯಂತ ಬುದ್ಧನ ಪ್ರತಿಮೆಗಳನ್ನು ಧ್ವಂಸಗೊಳಿಸುವುದು, ಬೌದ್ಧಧರ್ಮದ ಅವನತಿ ಮತ್ತು ಅದರ ಮೇಲೆ ಬ್ರಾಹ್ಮಣ್ಯದ ರಾಜಕೀಯ ಪ್ರಾಬಲ್ಯ, ಎಲ್ಲವನ್ನೂ ಸಂಕೇತಗಳೊಂದಿಗೆ ಗಾಢವಾಗಿ ಚಿತ್ರಿಸಲಾಗಿದೆ.
ಈ ಸಿನಿಮಾ ಕೇವಲ ಬುಡಕಟ್ಟು ಗುಂಪು ಮತ್ತು ಭೂಮಿ ಅಥವಾ ಸಂಪನ್ಮೂಲಗಳಿಗಾಗಿ ಅವರ ವಿರೋಧಿಗಳೊಡನೆ ಆದ ಸಂಘರ್ಷದ ಕಥೆಯಲ್ಲ. ಅಥವಾ ಆಳುವ ವರ್ಗಗಳಿಂದ ಕ್ರೂರ ಗುಲಾಮರಾಗಿರಿ ಅನುಭವಿಸಿದ ಗಣಿ ಶ್ರಮಿಕರ ಹಕ್ಕುಗಳ ಅಥವಾ ಕೂಲಿಗಾಗಿ ಹೋರಾಡಿದ ಕಥೆಯಲ್ಲ.
ತಂಗಲಾನ್ ಸಿನಿಮಾ ಬಹಿಷ್ಕೃತ ಸಮುದಾಯದ (ಅಸ್ಪೃಶ್ಯರ) ಕಥೆಗಳನ್ನು ಮತ್ತು ಅವರ ಘನತೆಯ ಅಸ್ತಿತ್ವಕ್ಕಾಗಿ ದಮನಿತರ ವಿರುದ್ಧದ ಅವರ ನಿರಂತರ ಹೋರಾಟಗಳನ್ನು ನಿರೂಪಿಸುತ್ತದೆ.
ಚಿತ್ರಕ್ಕೆ ಜಿ.ವಿ. ಪ್ರಕಾಶ್ ಕುಮಾರ್ ಅವರ ಸಿನಿಮಾಗೆ ಪೂರಕವಾದ ಅದ್ಭುತ ಬಿಜಿಎಂ ಮತ್ತು ಹಾಡುಗಳು, ಸಿನಿಮಾಟೋಗ್ರಾಫರ್ ಎ. ಕಿಶೋರ್ ಕುಮಾರ್ ಅವರು ಭೂದೃಶ್ಯವನ್ನು ದೃಶ್ಯೀಕರಿಸಲು ಸೆರೆಹಿಡಿಯಲಾದ ಫ್ರೇಂಗಳು ಹಾಗು ಸೀನ್ ಗಳ ತೀವ್ರತೆ ಮತ್ತು ಭಾವಗಳನ್ನು ತೋರಲು ಬಳಸಿರುವ ಬಣ್ಣಗಳ ಪರಿಕಲ್ಪನೆ ಅದ್ಭುತವಾಗಿದೆ ಮತ್ತು ಸಿನಿಮಾವನ್ನು ಶ್ರೇಷ್ಟ ಮಟ್ಟಕ್ಕೇರಿಸಿದೆ.
ಸಿನಿಮಾಗಾಗಿ ಅತ್ಯುತ್ತಮ ತಾರಾ ಬಳಗವನ್ನು ಆಯ್ದುಕೊಂಡಿದ್ದು, ತಂಗಲಾನ್ ಆಗಿ ವಿಕ್ರಮ್, ಗಂಗಮ್ಮನಾಗಿ ಪಾರ್ವತಿ ತಿರುವೋತ್ತು, ಆರತಿಯಾಗಿ ಮಾಳವಿಕಾ ಮೋಹನನ್ ಸಿನಿಮಾದ ಪಾತ್ರಗಳಲ್ಲಿ ಜೀವಿಸುವ ಮೂಲಕ ದೈತ್ಯ ಅಭಿನಯ ಮಾಡಿದ್ದಾರೆ, ಮತ್ತು ಇತರರ ನಟನೆಯು ಸಹ ಸಿನಿಮಾವನ್ನು ನೈಜವಾಗಿಸಿದೆ.
ತಂಗಲಾನ್ ಸಿನಿಮಾ ಪಾ ರಂಜಿತ್ ಅವರು ಸಮಾನತೆಗಾಗಿ ನಡೆಸುತ್ತಿರುವ ಸಾಂಸ್ಕೃತಿಕ ಆಂದೋಲನದ ಒಂದು ಭಾಗವಾಗಿದ್ದರೂ, ಇದು “ದಲಿತರ ಕೊಡುಗೆಗಳನ್ನು ಮರುಪಡೆಯುವುದನ್ನು” ಮಹಾಕಾವ್ಯವಾಗಿ ಪುನರ್ರಚಿಸಲಾಗಿದೆ ಮತ್ತು ಈ ಸಿನಿಮಾ ಇಲ್ಲಿಯವರೆಗಿನ ಅವರ ಮೇರು ಸಿನಿಮಾ ಆಗಿದೆ
ಇಲ್ಲಿಯವರೆಗೆ ನೀವು ಆ ನಿಮ್ಮ ಕಟ್ಟು ಕಥೆಗಳನ್ನು ನಮಗೆ ಹೇಳುತ್ತಿದ್ದಿರಿ, ಇನ್ನು ಮುಂದೆ ನನ್ನದನ್ನು ಕೇಳಿ ಎಂದು ಪಾ ರಂಜಿತ್ ದೃಢವಾಗಿ ಉದ್ಗರಿಸಿದಂತಿದೆ…
ನೋಡಲೆ ಬೇಕಾದ ಸಿನಿಮಾ… ಮುಖ್ಯವಾಗಿ ಈ ಮಣ್ಣಿನ ದಮನಿತರು…
- ರಮೇಶ್ ಆರ್ (ರಮ್ಮಿ)