Thursday, August 29, 2024

ಸತ್ಯ | ನ್ಯಾಯ |ಧರ್ಮ

ಬೊಗಸೆಗೆ ದಕ್ಕಿದ್ದು – 35 : ಊರ ಹೆಸರುಗಳ ಮೇಲೂ ಪುರೋಹಿತಶಾಹಿ ಆಕ್ರಮಣ!

“ಏಕಾಏಕಿಯಾಗಿ ಮತೀಯ ಸ್ಥಳಪುರಾಣಗಳನ್ನು ಹುಟ್ಟುಹಾಕಿ, ಸಂಸ್ಕೃತಮಯ, ಧರ್ಮಸಂಬಂಧಿ ಹೆಸರುಗಳನ್ನು ಶೋಧಿಸುವ ಮೂಲಕ ಸೂಕ್ಷ್ಮವಾಗಿ ಸ್ಥಳೀಯ ಸಂಸ್ಕೃತಿಗಳ ಮೇಲೆ ನಡೆಸಲಾಗುತ್ತಿರುವ ಆಕ್ರಮಣ ಅಪಾಯಕಾರಿ..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ಪುರೋಹಿತಶಾಹಿಗಳು ಹೇಗೆ ಜನರಿಗೆ ಹೆಸರಿಡುವುದರಲ್ಲಿಯೂ ಕೊಳಕು ಬುದ್ಧಿ ತೋರಿ, ತಮ್ಮ ತಣ್ಣಗಿನ ಕ್ರೌರ್ಯವನ್ನು ತೋರಿಸಿದ್ದಾರೆ ಎಂಬ ಬಗ್ಗೆ ಬೊಗಸೆಗೆ ದಕ್ಕಿದ್ದು- 34ರಲ್ಲಿ ಬರೆದಿದ್ದೆ. ಜೊತೆಗೆ ವಿದ್ಯಾಭ್ಯಾಸ ಹೆಚ್ಚಾಗುತ್ತಾ ಬಂದಂತೆ ಜನರು ಆಧುನಿಕ ಹೆಸರುಗಳನ್ನು ಹೊಂದಿರುವುದು ಮತ್ತು ಈಗಿನ ಬದಲಾದ ಪರಿಸ್ಥಿತಿಯಲ್ಲಿ ಆ ಬಗ್ಗೆ ಪುರೋಹಿತಶಾಹಿಗಳಿಗೆ ಯಾವುದೇ ಆಕ್ಷೇಪ ಇಲ್ಲದಿರುವುದು, ಇದಕ್ಕೆ ಕಾರಣಗಳು ಇತ್ಯಾದಿಗಳ ಬಗ್ಗೆಯೂ ಬರೆದಿದ್ದೆ. ಆದರೆ, ಈ ರೀತಿಯ ಹೆಸರುಗಳ ತಾರತಮ್ಯವು ಬ್ರಾಹ್ಮಣೇತರರಲ್ಲಿ ತಮ್ಮ ಹೆಸರಿನ ಬಗ್ಗೆ ಯಾವ ಮಟ್ಟದ ಕೀಳರಿಮೆ ಮೂಡಿಸಿತು ಮತ್ತು ಅದನ್ನು ಪುರೋಹಿತಶಾಹಿಗಳು ಹೇಗೆ ತಮ್ಮ ರಾಜಕೀಯ ಅಜೆಂಡಾಕ್ಕಾಗಿ ಬಳಸಿಕೊಂಡರು, ಬಳಸಿಕೊಳ್ಳುತ್ತಲೇ ಇದ್ದಾರೆ ಎಂಬುದನ್ನು ನೋಡೋಣ.

ಬ್ರಾಹ್ಮಣರು ಆಧುನಿಕ ಶಿಕ್ಷಣದ ಅವಕಾಶವನ್ನು ಎಲ್ಲರಿಗಿಂತ ಮೊದಲಿಗೇ ಪಡೆದು ಮೊಗಲರೂ ಸೇರಿದಂತೆ ರಾಜಸತ್ತೆಗಳ ಆಸ್ಥಾನಗಳಿಗೆ, ಆಡಳಿತ ಕಚೇರಿಗಳಿಗೆ ನುಸುಳಿ, ಆಯಕಟ್ಟಿನ ಸ್ಥಾನಗಳಲ್ಲಿ ವಿರಾಜಮಾನರಾದಂತೆಯೇ, ಬ್ರಿಟಿಷರ ಆಡಳಿತ ಬಂದಾಗಲೂ ನುಸುಳಿದರು. ಅದರ ಪರಿಣಾಮ ಇಂದಿಗೂ ಭಾರತದ ಕಾರ್ಯಾಂಗ, ನ್ಯಾಯಾಂಗ, ಶಿಕ್ಷಣವೂ ಸೇರಿದಂತೆ ಹಲವಾರು ಇಂದಿಗೂ ಕಂಡುಬರುತ್ತಿದೆ. ಆಗ ತಮ್ಮ ಘನ ಹೆಸರುಗಳ ಬಗ್ಗೆ ಅವರಿಗೆ ಹೆಮ್ಮೆ ಇದ್ದಿರಬಹುದಾದರೂ, ಬ್ರಿಟಿಷ್ ಅಧಿಕಾರಿಗಳಿಗೆ ಅದನ್ನು ಉಚ್ಚರಿಸಲು ಕಷ್ಟವಾಗುತ್ತಿತ್ತು. ಮೇಲಾಗಿ ಪಾಶ್ಚಾತ್ಯರು ಹೆಸರುಗಳನ್ನು ಕರೆಯುವಾಗ ಒಂದು ಸಂಪ್ರದಾಯ ಅನುಸರಿಸುತ್ತಾರೆ. ಅವರು ಏಕಾಏಕಿಯಾಗಿ ಮೊದಲ ಹೆಸರು ಕರೆಯುವುದಿಲ್ಲ. ಉದಾಹರಿಸಿ ಹೇಳಬೇಕೆಂದರೆ, ನಾನು ಮೊದಲಿಗೆ ಮಿಸ್ಟರ್ ಕೋಲ್ಪೆಯಾಗುತ್ತೇನೆ, ಸ್ವಲ್ಪ ಪರಿಚಯದ ನಂತರ ಬರೇ ಕೋಲ್ಪೆಯಾಗುತ್ತೇನೆ, ನಂತರ ಆತ್ಮೀಯತೆ ಮೂಡಿದರೆ, ನಿಖಿಲ್ ಆಗುತ್ತೇನೆ. ಗೆಳೆತನವಾದ ಬಳಿಕ ನಿಕ್ ಅಥವಾ ನಿಕ್ಕಿ ಆಗುತ್ತೇನೆ. ಈ ಸಂದರ್ಭದಲ್ಲಿ ಮೋದಿ ಯುಎಸ್ಎ ಭೇಟಿಯ ವೇಳೆ ಅಧ್ಯಕ್ಷ ಬರಾಕ್ ಒಬಾಮಾ ಅವರನ್ನು ಮೈ ಫ್ರೆಂಡ್ ಬರಾಕ್ ಎಂದು ಸಂಬೋಧಿಸಿ ಒಬಾಮಾ ಅವರಿಗೆ ಸಿಡಿಮಿಡಿ ಉಂಟುಮಾಡಿದ್ದಲ್ಲದೆ, ಅಲ್ಲಿನ ಮಾಧ್ಯಮಗಳಲ್ಲಿ ನಗೆಪಾಟಲಿಗೆ ಈಡಾದ ಘಟನೆಯನ್ನು ಉದಾಹರಿಸಬಹುದು.

ಬ್ರಾಹ್ಮಣರು ಇದರಿಂದ ಪೇಚಿಗೆ ಸಿಲುಕಿದರು. ಇದನ್ನು ಕಾಲ್ಪನಿಕ ಹೆಸರುಗಳ ಉದಾಹರಣೆಯ ಮೂಲಕ ವಿವರಿಸುತ್ತೇನೆ. ಕೃಷ್ಣಾಪುರ ವಾಸುದೇವ ಪರಮೇಶ್ವರಯ್ಯ ಭಟ್ ಎಂಬ ಹೆಸರನ್ನು ಬ್ರಿಟಿಷ್ ಅಧಿಕಾರಿಗಳು ಉಚ್ಚರಿಸುವುದು ಸಾಧ್ಯವೇ ಇರಲಿಲ್ಲ. ಹಾಗಾಗಿ ಅವರು ಕೆ.ವಿ‌.ಪಿ. ಭಟ್ ಆದರು. ಮಿಸ್ಟರ್ ಭಟ್ ಎಂದು ಕರೆಯುವುದು ಸುಲಭವಲ್ಲವೆ? (ಬಟ್, “ಬಟ್” ಎಂಬುದಕ್ಕೆ ಈಗ ಹಿಂಭಾಗ ಎಂಬ ಅರ್ಥವೂ ಇದೆ!) ಇದೇ ರೀತಿಯಲ್ಲಿ ನೀವು ಕೆ.ಕೆ. ರಾವ್, ಎಲ್.ಎನ್. ಜೋಶಿ… ಈ ರೀತಿಯ ಹೆಸರುಗಳನ್ನು ಹಳೆಯ ಕಾಲದ ಬ್ರಾಹ್ಮಣ ಅಧಿಕಾರಿಗಳು, ನ್ಯಾಯಾಧೀಶರು, ಶಿಕ್ಷಕರು ಮುಂತಾದವರಲ್ಲಿ ಧಾರಾಳವಾಗಿ ಕಾಣಬಹುದು.

ಆದರೆ, ಶೂದ್ರರ ಇದೇ ರೀತಿಯ ತಳಿ ಹುಟ್ಟಿಕೊಂಡಿತು. ಕಾಲ್ಪನಿಕವಾಗಿ ಎಸ್.ವಿ.ಶೆಟ್ಟಿ, ಟಿ.ಎಸ್. ರೈ, ವಿ.ಎಸ್. ಅಮೀನ್, ಎಚ್.ಎಸ್. ಸುವರ್ಣ ಎಂಬಂತಹ ಹೆಸರುಗಳನ್ನು ನೋಡೋಣ. ಇವರೆಲ್ಲರೂ ಉನ್ನತ ಹುದ್ದೆಗಳಲ್ಲಿ ಇರುವವರು. ಆದರೆ, ಅವರು ತಮ್ಮ ಹೆಸರುಗಳನ್ನು ಚುಟುಕು ಮಾಡಿರುವ ಉದ್ದೇಶ ಮಾತ್ರ ಬೇರೆಯೇ. ಪುರೋಹಿತರು “ಜಾತಕ ಪ್ರಕಾರ” ತಮಗೆ ಇಟ್ಟ ಯಕಶ್ಚಿತ್ ಹೆಸರುಗಳ ಬಗ್ಗೆ ಬೆಳೆಸಿಕೊಂಡ ಆಳವಾದ ಕೀಳರಿಮೆ! ತಿಮ್ಮಪ್ಪ, ಸಂಕಪ್ಪ, ಕುಂಞಪ್ಪ ಮುಂತಾದ ಹೆಸರುಗಳನ್ನು ಬಳಸಲು ನಾಚಿಕೆ. ಇದನ್ನೂ ನೀವು ಹಳೆಯ ತಲೆಮಾರಿನ ಗಣ್ಯರ ಹೆಸರುಗಳನ್ನು ಪರಿಶೀಲಿಸಿದರೆ ಗಮನಿಸಬಹುದು.

ಹೊಸ ಆಧುನಿಕ ಹೆಸರು ಬಂದಾಗ, ಪುರೋಹಿತಶಾಹಿಗಳು ಚಿಂತೆಯೇ ಮಾಡಲಿಲ್ಲ! ಆದರೆ, ಹೆಸರುಗಳ ಬಗ್ಗೆ ಇರುವ ಬ್ರಾಹ್ಮಣೇತರರ ಕೀಳರಿಮೆಯನ್ನು ಅವರು ಸಾಂಸ್ಕೃತಿಕ, ರಾಜಕೀಯ ಮತ್ತು ಕೋಮುವಾದದ ಹೇರಿಕೆಗೆ ಕುಟಿಲತನದಿಂದ ಬಳಸಿಕೊಂಡರು. ತಮ್ಮ ಸ್ವಂತ ಹೆಸರುಗಳ ಬಗ್ಗೆ ಇದ್ದಂತಹ ಕೀಳರಿಮೆಯೇ ಹಲವರಿಗೆ ತಮ್ಮ ಊರುಗಳ ಬಗ್ಗೆ ಇತ್ತು. ಹಾಗಾಗಿ ಅವುಗಳನ್ನು ಉಪಾಯದಿಂದ ಬದಲಿಸಿ, ಸಂಸ್ಕೃತೀಕರಣಗೊಳಿಸುವ ಕುಟಿಲ ಅಭಿಯಾನ ಆರಂಭವಾಯಿತು.

ಊರ ಹೆಸರುಗಳಿಗೆ ಒಂದು ಹಿನ್ನೆಲೆಯಿರುತ್ತದೆ. ಅದು ಐತಿಹಾಸಿಕ, ಭೌಗೋಳಿಕ, ಸಾಂಸ್ಕೃತಿಕ, ಭಾಷಾಸಂಬಂಧಿ ಮತ್ತು ಸ್ಥಳೀಯ ಅಂಶಗಳನ್ನು ಹೊಂದಿರಬಹುದು. ಜನರ ಬಾಯಿಯಲ್ಲಿ ಕಾಲಕ್ರಮೇಣ ಹಲವು ಬದಲಾವಣೆಗಳನ್ನು ಕಂಡಿರಬಹುದು. ಆದರೆ, ಏಕಾಏಕಿಯಾಗಿ ಮತೀಯ ಸ್ಥಳಪುರಾಣಗಳನ್ನು ಹುಟ್ಟುಹಾಕಿ, ಸಂಸ್ಕೃತಮಯ, ಧರ್ಮಸಂಬಂಧಿ ಹೆಸರುಗಳನ್ನು ಶೋಧಿಸುವ ಮೂಲಕ ಸೂಕ್ಷ್ಮವಾಗಿ ಸ್ಥಳೀಯ ಸಂಸ್ಕೃತಿಗಳ ಮೇಲೆ ನಡೆಸಲಾಗುತ್ತಿರುವ ಆಕ್ರಮಣ ಅಪಾಯಕಾರಿ.

ಕೆಲ ಸಮಯದ ಹಿಂದೆ ವಾಟ್ಸಾಪ್ ಯುನಿವರ್ಸಿಟಿಯ ವಿಧ್ವಂಸಕ ವಿದ್ವಾಂಸರೊಬ್ಬರು ಮದ್ದೂರಿನ ಹೆಸರು ಅರ್ಜುನಪುರಿ ಎಂಬ ಭಯಾನಕ ಸಂಶೋಧನೆಯನ್ನು ಫೇಸ್‌ಬುಕ್‌ನಲ್ಲಿ ಹರಿಯಬಿಟ್ಟಿದ್ದರು. ಉತ್ತರದ ಅರ್ಜುನನೆಲ್ಲಿ! ದಕ್ಷಿಣದ ಮದ್ದೂರು ಎಲ್ಲಿ? ಈ ಹಿನ್ನೆಲೆಯಲ್ಲಿ ಊರಿನ ಹೆಸರುಗಳ ಹೆಸರಿನಲ್ಲಿ ನಡೆಸಲಾಗುವ ಸೂಕ್ಷ್ಮ ಸಾಂಸ್ಕೃತಿಕ ಆಕ್ರಮಣಗಳನ್ನು ಇಲ್ಲಿ ಆಳವಾಗಿ ಅಲ್ಲವಾದರೂ, ಸ್ಥೂಲವಾಗಿ ನೋಡೋಣ. ಕರ್ನಾಟಕಕ್ಕೆ ಅಪಾರ ಕೊಡುಗೆ ನೀಡಿರುವ ಟಿಪ್ಪು ಸುಲ್ತಾನ್ ಹೆಸರನ್ನು ಮೊಗಲರ ಇತಿಹಾಸವನ್ನೇ ಪಠ್ಯಗಳಿಂದ ತೆಗೆದುಹಾಕುವ ಕೋಮುವಾದಿ ಮನಸ್ಸುಗಳಲ್ಲಿ ಅಡಗಿರುವ ಪಿತೂರಿಗಳನ್ನು ಗುರುತಿಸಲು ಇದು ಸಹಕಾರಿಯಾಗಬಲ್ಲದು.

ಹಿಂದೆ ರಾಜರುಗಳು, ಸುಲ್ತಾನರು ತಾವು ಕಟ್ಟಿದ ನಗರಗಳಿಗೆ, ಕಟ್ಟಡಗಳಿಗೆ, ಸ್ಮಾರಕಗಳಿಗೆ ತಮಗೆ ಇಷ್ಟಬಂದ ಹೆಸರುಗಳನ್ನು ಇಟ್ಟಿದ್ದರು. ಪ್ರಜಾಪ್ರಭುತ್ವವಿಲ್ಲದ ರಾಜಪ್ರಭುತ್ವದಲ್ಲಿ ಅದು ಅಸಹಜವೇನಲ್ಲ. ಇದನ್ನೇ ಬ್ರಿಟಿಷರೂ ಮುಂದುವರಿಸಿದರು. ಜೊತೆಗೆ, ಅವರು ಮತ್ತು ಇತರ ವಿದೇಶೀಯರು ದೇಶೀಯ ಹೆಸರುಗಳನ್ನು ತಮ್ಮ ಉಚ್ಛಾರಣೆಗೆ ತಕ್ಕಂತೆ ಬದಲಾಯಿಸಿದರು. ನಾವು ನಮ್ಮ ಗುಲಾಮಿ ಬುದ್ದಿಗೆ ತಕ್ಕಂತೆ ಈ ಅಪಭ್ರಂಶಗೊಂಡ ಹೆಸರುಗಳನ್ನೇ ಹೆಮ್ಮೆಯಿಂದ ಉಚ್ಛರಿಸುತ್ತಾ ಖಾಯಂಗೊಳಿಸಿದೆವು. ಉದಾಹರಣೆಗೆ ಡೆಲ್ಲಿ, ಬಾಂಬೆ, ಮಡ್ರಾಸ್, ಬ್ಯಾಂಗಲೋರ್, ಕ್ಯಾಲಿಕಟ್ ಇತ್ಯಾದಿ ಹೆಸರುಗಳು. ಅವರು ಉಡುಪಿಯನ್ನು ಉಡಿಪಿ (Udipi), ಕಾಪು ಎಂಬುದನ್ನು ಕೌಪ್ (Kaup), ಎಲ್ಲಾ “ಡ”ಗಳನ್ನು “ರ” ಮಾಡಿದ್ದರು. ಕೊಲ್ಲಂ- ಕ್ವಿಲಾನ್, ಮುಂಬೈ-ಬಾಂಬೆ, ದಿಲ್ಲಿ-ಡೆಲ್ಲಿ, ಅಲ್ಮೋಡ- ಅಲ್ಮೋರ, ಎಲ್ಲಾ ಘಡ್ (ಕೋಟೆ)ಗಳು ಘರ್ (ಮನೆ) ಆದುದು ಹೀಗೆಯೇ! ಆದರದು ಉದ್ದೇಶಪೂರ್ವಕವಾಗಿರದೆ, ಅವರ ಉಚ್ಛಾರಣೆಯ ಸಮಸ್ಯೆಯಿಂದ ಆಗಿತ್ತು.

ಇಂತಹಾ ಹಲವಾರು ಹೆಸರುಗಳನ್ನು ನಾವೀಗ ಒಂದು ಹಂತಕ್ಕೆ ಮೂಲ ಎನಿಸಬಲ್ಲ(?) ಹೆಸರುಗಳಿಗೆ ಬದಲಿಸಿದ್ದೇವೆ. ಇದರಲ್ಲಿ ತಪ್ಪೇನೂ ಇಲ್ಲ. ಅವು ಅಪಭ್ರಂಶಗೊಂಡ ನಮ್ಮದೇ ಹೆಸರುಗಳು. ಆದರೆ, ರಾಜರಿರಲಿ, ಸುಲ್ತಾನರಿರಲಿ, ಬ್ರಿಟಿಷರೇ ಇರಲಿ- ಅವರೇ ಕಟ್ಟಿದ ನಗರ, ಊರು ಮತ್ತು ನಿರ್ಮಾಣಗಳಿಗೆ ಇಟ್ಟ ಐತಿಹಾಸಿಕ ಹೆಸರುಗಳನ್ನು ಬದಲಿಸುವುದು ಎಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆ ಏಳುತ್ತದೆ. ಅವರೇನು ತಮ್ಮ ಹಣದಿಂದ ಕಟ್ಟಿಲ್ಲ; ಜನರ, ದೇಶದ ಹಣದಿಂದ ಕಟ್ಟಿದರು ಎಂದು ವಾದಿಸಬಹುದು. ಇದನ್ನು ಒಪ್ಪಬಹುದಾದರೆ, ಇದು ಮುಸ್ಲಿಂ ದೊರೆಗಳು ಮತ್ತು ಬ್ರಿಟಿಷರಿಗೆ ಮಾತ್ರ ಅನ್ವಯವಾಗಿ ಹಿಂದೂ ರಾಜರಿಗೆ ಅನ್ವಯವಾಗದಿರುವುದು ಹೇಗೆ? ಆಗ ಬರಬಹುದಾದ ಉತ್ತರವೆಂದರೆ, ಹಿಂದೂ ರಾಜರು ನಮ್ಮವರು; ಉಳಿದವರು ಹೊರಗಿನವರು ಎಂಬುದು. ಇದುವೇ ಹೆಸರು ಬದಲಾವಣೆಯ ಹೂರಣ: “ಅವರು” ಹೊರಗಿನವರು, ನಮ್ಮವರಲ್ಲ ಎಂದು ಜನರ ಮನಸ್ಸಿಗೆ ನುಸುಳುವಂತೆ ಮಾಡುವುದು. ಹಿಂದೂಗಳು, ಮುಸ್ಲಿಮರು ಮತ್ತು ಕ್ರೈಸ್ತರು ಎಂದು ಸೂಕ್ಷ್ಮವಾಗಿ ಸೂಚಿಸಿ, ಪ್ರತ್ಯೇಕಿಸುವ ಹುನ್ನಾರವೇ ಈ ಹೆಸರಿನ ರಾಜಕೀಯದಲ್ಲಿ ಅಡಗಿರುವುದು.

ಇತ್ತೀಚೆಗೆ ಹೆಸರುಗಳನ್ನು ಕೋಮುವಾದಿ ಕಾರಣಗಳಿಗಾಗಿ ಬದಲಿಸುವ ಪರಿಪಾಠ ಹೆಚ್ಚಾಗುತ್ತಿದೆ. ಫಿರೋಜ್ ಶಾ ಕೋಟ್ಲಾ ಮೈದಾನವನ್ನು ಅರುಣ್ ಜೇಟ್ಲಿ ಸ್ಟೇಡಿಯಂ ಎಂದು ಬದಲಿಸಲಾಯಿತು. ಇದೇ ರೀತಿ ಹಲವಾರು ಇಸ್ಲಾಮಿಕ್ ಹೆಸರುಗಳನ್ನು ಬದಲಾಯಿಸಲಾಯಿತು. ಹಿಂದೂ ಧಾರ್ಮಿಕ ಛಾಯೆಯ ಹೆಸರುಗಳನ್ನು ಇಡಲಾಯಿತು. ಇನ್ನೂ ಹಲವಾರು ನಗರ ಪಟ್ಟಣಗಳು ಪಟ್ಟಿಯಲ್ಲಿವೆ. ಟಿಪ್ಪು ಸುಲ್ತಾನ್ ಹೆಸರನ್ನು ಪಠ್ಯಗಳಿಂದ ತೆಗೆಯಲು ಹೊರಟವರು, ಹೈದರಾಲಿ ನಿರ್ಮಿಸಿದ, ಟಿಪ್ಪು ಬೆಳೆಸಿದ ಬೆಂಗಳೂರಿನ ಲಾಲ್‌ಬಾಗ್ ಪುಷ್ಪೋದ್ಯಾನಕ್ಕೆ ಸಾವರ್ಕರ್ ಪುಷ್ಪ ಕಾಶಿ ಎಂದು ಹೆಸರಿಡಲು ಹೇಸುವವರಲ್ಲ. ಇದರ ಹಿಂದೆ ಅಡಗಿರುವುದು ಸಾರಾಸಗಟು ಮುಸ್ಲಿಂ ದ್ವೇಷ. ಅವರು ಈ ದೇಶದವರಲ್ಲ; ಹೊರಗಿನವರು ಎಂಬ ಸೂಕ್ಷ್ಮ ಮನಶ್ಶಾಸ್ತ್ರೀಯ ಸೂಚನೆ (Psychological suggestion) ನೀಡಿ, ಜನರನ್ನು ಒಡೆಯುವ ತಂತ್ರದ ಭಾಗವಿದು. ಇಂತಹ ಪ್ರಯತ್ನಗಳು ಹುಟ್ಟು ಹಾಕುವ ವಿವಾದಗಳು ಕೂಡಾ ಕೋಮುವಾದೀಕರಣದಲ್ಲಿ ನೆರವಾಗುತ್ತದೆ.

ಅದರಲ್ಲೂ ಇವರು ಪ್ರತಿಪಾದಿಸುವ ‘ಹಿಂದೂ’ ಹೆಸರುಗಳು ಯಾವುವು? ಕೆಲಸಮಯದ ಹಿಂದೆ ಗುರ್ಗಾಂವ್ (ಗುರು ಗಾಂವ್) ಹೆಸರನ್ನು ಗುರುಗ್ರಾಮ್ ಎಂದು ಬದಲಿಸಲಾಯಿತು. ಎರಡರ ನಡುವೆ ಇದ್ದಂತಹಾ ಮಹಾನ್ ವ್ಯತ್ಯಾಸ ಏನು? ಗ್ರಾಮ್ಯದಲ್ಲಿ ಗಾಂವ್ ಎಂದರೆ, ಪ್ರಾದೇಶಿಕವಾದ ಹಿಂದಿ, ಹರ್ಯಾಣ್ವಿ ಮತ್ತು ಪಂಜಾಬಿಯಲ್ಲೂ ಗ್ರಾಮವೇ, ಹಳ್ಳಿಯೇ. ಹಾಗಿದ್ದರೂ, ಈ ಬದಲಾವಣೆಗೆ ಪ್ರೇರಣೆ ಎಂದರೆ ಗುರು ಗ್ರಾಮ್ ಎಂಬುದು ಸಂಸ್ಕೃತ! ‘ಹಿಂದೂ’ ಹೆಸರಿನಲ್ಲಿ ಅದೇ ಧರ್ಮ ಅನುಸರಿಸುವ ಬ್ರಾಹ್ಮಣೇತರರ ಸಂಸ್ಕೃತಿ ಭಾಷೆಗಳ ಮೇಲೆ ತಮ್ಮ ಸಂಸ್ಕೃತಿ, ಸಂಸ್ಕೃತವನ್ನು ಹೇರುವ ಯತ್ನವಿದು. ಇದು ದೇಶದಾದ್ಯಂತ ನಡೆಯುತ್ತಲೇ ಬಂದಿದೆ. ಈಗ ಹೆಚ್ಚಾಗಿದೆ ಅಷ್ಟೇ.

ಇನ್ನೊಂದು ಹಳೆಯ ಚಾಳಿ ಎಂದರೆ, ಒಂದು ಧಾರ್ಮಿಕ ಅಥವಾ ಮತೀಯವಾದ ಸ್ಥಳ ಪುರಾಣ ಎಂಬ ಕಟ್ಟುಕತೆಯನ್ನು ಕಟ್ಟಿ, ಊರಿನ ಒಂದು ದೇವಸ್ಥಾನಕ್ಕೆ ಊರಿನ ಹೆಸರಿನ ಜೊತೆ ಸಂಬಂಧ ಕಲ್ಪಿಸಿ, ಅದನ್ನು ಊರ ದೇವಸ್ಥಾನ ಎಂದು ನಂಬಿಸಿ ಲಾಭ ಮಾಡಿಕೊಳ್ಳುವುದು; ಶೂದ್ರ, ದಲಿತರು ಹಿಂದಿನಿಂದಲೂ ಆರಾಧಿಸಿಕೊಂಡು ಬರುತ್ತಿರುವ ಗ್ರಾಮೀಣ ದೇವತೆಗಳಿಗೆ ಪೌರಾಣಿಕ ಬಣ್ಣಹಚ್ಚಿ, ಅವರ ಗುಡಿದೇಗುಲಗಳ ಪಾರುಪತ್ಯ ವಹಿಸಿಕೊಳ್ಳುವುದು; ಅವುಗಳ ಹೆಸರುಗಳನ್ನು ಸಂಸ್ಕೃತೀಕರಣಗೊಳಿಸುವುದು. ಉದಾಹರಣೆಗೆ ಶೂದ್ರ, ದಲಿತರ ಮಾರಿಯಮ್ಮನನ್ನು ಮಾರಿಕಾಂಬಾ ಮಾಡುವುದು. ಗ್ರಾಮೀಣ ದೇವತೆಗಳಿಗೆ ಸಂಬಂಧಿಸಿದಂತೆ ಇರುವ ಗ್ರಾಮಗಳ ಹೆಸರುಗಳನ್ನು ಸಂಸ್ಕೃತಮಯಗೊಳಿಸಿ, ಬದಲಿಸುವುದು. ಈ ಪುರಾಣಗಳನ್ನು ನೋಡಿದರೆ, ರಾಮ, ಲಕ್ಷ್ಮಣ, ಸೀತೆ, ಹನುಮಂತ, ಭೀಮಾರ್ಜುನರಾದಿ ಪಾಂಡವರು ‘ಭೇಟಿ’ ನೀಡದ ಊರುಗಳೇ ಭಾರತದಲ್ಲಿಲ್ಲ! ಮತ್ತು ಆ ಊರಿನ ಮೂಲ ಹೆಸರು ಸಂಸ್ಕೃತದ್ದೇ ಆಗಿರುತ್ತದೆ! ಆದನ್ನೇ ಮತ್ತೆ ಇಡಲು ರಾಜಕೀಯ ಚತುರ ಹಿಂದೂತ್ವವಾದಿಗಳ ಅಭಿಯಾನ ನಡೆಯುತ್ತದೆ!

ಆ ದೇವಾಲಯದಿಂದ ಊರಿಗೆ ಈ ಹೆಸರು ಬಂದಿದೆ; ಈ ದೇವರಿಂದ ಆ ಊರಿಗೆ ಈ ಹೆಸರು ಬಂದಿದೆ ಎಂದು ಹೇಳುವವರು ಒಂದು ತರ್ಕವನ್ನು ಮರೆತುಬಿಡುತ್ತಾರೆ. ಅದೆಂದರೆ, ಊರಿದ್ದರೆ ತಾನೇ ದೇವಾಲಯ! ಊರು ಮೊದಲು ಹುಟ್ಟುತ್ತದೋ, ದೇವಾಲಯವೇ?!

ಕೆಲವರ್ಷಗಳಿಂದ ಇನ್ನೊಂದು ಚಾಳಿ ಬೆಳೆದುಬಂದಿದೆ. ಊರಿನ ಹಳೆಯ ಹೆಸರುಗಳನ್ನು ಕಡೆಗಣಿಸಿ ಶ್ರೀರಾಮ ನಗರ, ಅಯೋಧ್ಯಾ ನಗರ, ದ್ವಾರಕಾ ನಗರ ಎಂದು ಬೇಕಾಬಿಟ್ಟಿಯಾಗಿ ಅನಧಿಕೃತವಾಗಿ ಹೆಸರಿಡುವುದು. ಬೋರ್ಡು ಹಾಕುವುದು.

ಹೊಸ ಬಡಾವಣೆಗಳಿಗೆ ಗತಿಸಿದ ಪ್ರಸಿದ್ಧ ವ್ಯಕ್ತಿಗಳು ಅಥವಾ ಯಾವುದಾದರೂ ಜಾತ್ಯತೀತವಾದ ಹೆಸರಿಡುವುದು ದಶಕಗಳಿಂದ ನಡೆದುಕೊಂಡುಬಂದಿದೆ. ಉದಾಹರಣೆಗೆ ಕುವೆಂಪು ನಗರ, ವಿವೇಕಾನಂದ ನಗರ, ಶಾಂತಿ ನಗರ ಇತ್ಯಾದಿ. ಇವುಗಳಲ್ಲಿ ಜಾತಿ ಧರ್ಮಗಳ ಹಂಗಿಲ್ಲ. ಆದರೆ, ಇದಕ್ಕೆ ಪ್ರತಿಕ್ರಿಯೆಯೋ ಎಂಬಂತೆ ಮುಸ್ಲಿಮರಾಗಲೀ, ಕ್ರೈಸ್ತರಾಗಲೀ, ದಲಿತರಾಗಲೀ ತಮ್ಮ ಬಾಹುಳ್ಯದ ಪ್ರದೇಶಗಳಿಗೆ ಟಿಪ್ಪುನಗರ, ಹಿದಾಯತ್ ನಗರ, ಸೆಬಾಸ್ಟಿಯನ್ ನಗರ, ಅಂಬೇಡ್ಕರ್ ನಗರ, ಭೀಮ ನಗರ ಎಂದು ಹೆಸರಿಟ್ಟರೆ, ಅದು ಕೋಮುವಾದಿ ಅನಿಸಿಕೊಳ್ಳುವುದು ವಿಪರ್ಯಾಸ. ಇವು ಕೂಡಾ ಅಷ್ಟೇ ಜಾತ್ಯತೀತ ಹೆಸರುಗಳು!

ಯಾವುದೇ ಊರಿನ ಹೆಸರು ಬದಲಿಸಬೇಕೆಂದರೆ, ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಿರ್ಣಯವಾಗಿ ಸರಕಾರಿ ಪ್ರಕಟಣೆ ಹೊರಡಬೇಕು. ಆದರೆ, ಈಗ ಮನ ಬಂದಂತೆ ಹೆಸರಿನ ಫಲಕಗಳನ್ನು ಹಾಕಲಾಗುತ್ತಿದೆ. ಹತ್ತಿರ ಹತ್ತಿರವೇ ಮೂರ್ನಾಲ್ಕು ಒಂದೇ ಹೆಸರಿನ ‘ನಗರ’ಗಳು ಕಾಣಸಿಗುತ್ತವೆ. ಅಂಚೆಯವರು ಕೂಡಾ ಪತ್ರದಲ್ಲಿ ಊರಿನ ಮೂಲ ಹೆಸರು ಬರೆಯದೇ ಇದ್ದರೆ, ಯಾವ ಊರಿನ ‘ನಗರ’ವಿದು ಎಂದು ತಲೆ ಕೆರೆದುಕೊಳ್ಳಬೇಕಾದ ಪರಿಸ್ಥಿತಿ!

ಯಾರು ಯಾವ ಊರಿನ ಹೆಸರನ್ನು ಏನೆಂದು ಬೇಕಾದರೂ ಬದಲಿಸಲಿ, ಸಾಮಾನ್ಯ ಜನರು ಮಾತ್ರ ಹಳೆಯ ಹೆಸರುಗಳನ್ನೇ ಬಳಸುತ್ತಾರೆ. ಉದಾಹರಣೆಗೆ ಮಂಗಳೂರು ವಿಶ್ವದಾಖಲೆ ಎನಿಸಬಹುದಾದಷ್ಟು ಹೆಸರುಗಳನ್ನು ಹೊಂದಿದೆ. ಮಂಗಳಾದೇವಿ ದೇವಸ್ಥಾನ ಇರುವುದರಿಂದ ಮಂಗಳೂರು ಎಂಬ ಹೆಸರು ಬಂತೆಂದು ಹೇಳಲಾಗುತ್ತಿದೆ, ನಂಬಲಾಗುತ್ತಿದೆ. ಇದು ಎಷ್ಟು ನಿಜವಿರಬಹುದು? ಏಕೆಂದರೆ, ಬಹುಸಂಖ್ಯಾತರಾಗಿರುವ ತುಳುವರು ಅದನ್ನು ಕುಡಲ ಅಥವಾ ಕುಡ್ಲ ಎಂದು ಇಂದಿಗೂ ಕರೆಯುತ್ತಾರೆ. ಅದೇ ರೀತಿ ಗೌಡ ಸಾರಸ್ವತ ಕೊಂಕಣಿಗರು ಕೊಡಿಯಾಲ, ಕ್ರೈಸ್ತರು ಮಂಗ್ಲೂರು, ಬ್ಯಾರಿ ಭಾಷೆ ಮಾತಾಡುವ ಮುಸ್ಲಿಮರು ಮೈಕಾಲ, ಮಲಯಾಳಿಗಳು ಮಂಗಳಾಪುರಂ ಎಂದು ಇಂದಿಗೂ ಕರೆಯುತ್ತಾರೆ. ಬ್ರಿಟಿಷರು ಇದನ್ನು ಮ್ಯಾಂಗಲೋರ್ ಮಾಡಿದರು. ಇಂಗ್ಲಿಷ್ ಕಲಿತವರೂ ಹಾಗೆಯೇ ಕರೆಯುತ್ತಿದ್ದರು, ಹಾಗೆಯೇ ಕರೆಯುತ್ತಿದ್ದಾರೆ. ಪೋರ್ಚುಗೀಸರು ಮಂಜರೂನ್ ಎಂದರು. ಹಾಗಾದರೆ, ಹೆಸರಿಗೂ, ಭಾಷೆಗೂ, ಸಂಸ್ಕೃತಿಗೂ, ಮಣ್ಣಿಗೂ ಸಂಬಂಧವಿದೆ ಎಂದಾಯಿತು. ಏಕಾಏಕಿ ಊರುಗಳ ಹೆಸರುಗಳನ್ನು ಬದಲಿಸಲು ಅವುಗಳೇನು ಬಣ್ಣ ಬದಲಿಸುವ ಗೋಸುಂಬೆಗಳೆ? ಚಡ್ಡಿ ಬದಲಿಸಿದಷ್ಟು ಸುಲಭವಾಗಿ ಊರ ಹೆಸರು ಬದಲಿಸಬಹುದೆ?

ಇಲ್ಲಿ ಇನ್ನೊಂದು ಗಂಭೀರ ವಿಷಯವನ್ನು ಗಮನಿಸಬೇಕು. ತನ್ನ ಬಹು ಹೆಸರುಗಳ ಮೂಲಕವೇ ಬಹುಭಾಷೆ, ಬಹುಧರ್ಮ, ಬಹುಸಂಸ್ಕೃತಿಗಳನ್ನು ಸಾಕಿಕೊಂಡುಬಂದ ಊರು ತಾನೆಂದು ಸೂಚಿಸುವ ಮಂಗಳೂರೇ ಇಂದು ಏಕಭಾಷೆ, ಏಕ ಸಂಸ್ಕೃತಿ, ಏಕಧರ್ಮವನ್ನು ಪ್ರತಿಪಾದಿಸುವ; ಆದರೆ ಮಾನವರೆಲ್ಲರೂ ಏಕ ಜಾತಿ, ಮಾನವ ಕುಲ ಒಂದೇ ವಲ ಎಂದು ಎಂದೆಂದಿಗೂ ಒಪ್ಪದ ವಿಭಜನಕಾರಿ ಕೋಮುವಾದಿಗಳ ಪ್ರಯೋಗಶಾಲೆಯಾಗಿರುವುದು ದುರಂತ! ಹೆಸರು ಬದಲಿಸುವಿಕೆ ಈ ಪ್ರಯೋಗಗಳಲ್ಲಿ ಒಂದು! ಹೆಸರುಗಳ ಬಗ್ಗೆ ಇನ್ನಷ್ಟು ವಿವರಗಳನ್ನು ಮುಂದೆ ನೋಡೋಣ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page