Monday, September 2, 2024

ಸತ್ಯ | ನ್ಯಾಯ |ಧರ್ಮ

ಎಲ್ಲಾ ಭಾಷೆಗಳ ತಾಯಿ ಸಂಸ್ಕೃತ ಎಂಬ ಸುಳ್ಳು!

ಉಡುಪಿ ಪುತ್ತಿಗೆ ಮಠದ ಸ್ವಾಮಿಗಳಾದ ಸುಗುಣೇಂದ್ರ ತೀರ್ಥರು ಸಂಸ್ಕೃತ ಮಾತನಾಡಲು ಬಾರದವರಿಗೆ ಸ್ವರ್ಗ ಪ್ರಾಪ್ತಿಯಾಗುವುದಿಲ್ಲ, ಸಂಸ್ಕೃತ ವಿಶ್ವ ಭಾಷೆ, ಎಲ್ಲಾ ಭಾಷೆಗಳ ತಾಯಿ, ತಮಿಳು, ತುಳು, ಕನ್ನಡದಂತಹ ದೇಶದ ಭಾಷೆಗಳಿಗೆ ಮಾತ್ರವಲ್ಲ, ಇಂಗ್ಲೀಷಿನ ಮೂಲವೂ ಸಂಸ್ಕೃತ ಎಂದು ಹೇಳಿದ್ದಾರೆ.

ಪುತ್ತಿಗೆ ಮಠದ ಈ ಸ್ವಾಮಿ ಅಷ್ಟ ಮಠಗಳ ಸ್ವಾಮಿಗಳಲ್ಲಿ ವಿಭಿನ್ನವಾಗಿ ನಿಂತವರು. ಸಮುದ್ರ ದಾಟಿ ಬೇರೆ ದೇಶಗಳಿಗೆ ಹೋಗಿ ಬಂದ ಮೇಲೆ ಮಾತ್ರವಲ್ಲ, ತಮ್ಮ ಅನೇಕ ನಡೆಗಳಿಂದಾಗಿ ಉಳಿದ ಸ್ವಾಮಿಗಳಿಂದ ಟೀಕೆಗೆ ಒಳಗಾದವರು. ಈಗ ಸಂಸ್ಕೃತವೇ ಎಲ್ಲಾ ಭಾಷೆಗಳ ತಾಯಿ ಎಂದಿದ್ದಾರೆ. ಈ ಸುಳ್ಳನ್ನು ಈ ದೇಶದಲ್ಲಿ ಮತ್ತೆ ಮತ್ತೆ ಹರಡಲಾಗುತ್ತಿದೆ. ಈಗ ಸಂಸ್ಕೃತ ಗೊತ್ತಿಲ್ಲದೇ ಇದ್ದರೆ ಸ್ವರ್ಗಕ್ಕೆ ಹೋಗುವುದೂ ಕಷ್ಟವಾಗಿದೆ. 

ಸಂಸ್ಕೃತ ಒಂದು ಅಗಾದ ಜ್ಞಾನ ಪರಂಪರೆ ಇರುವ ಭಾಷೆ. ಇದರಲ್ಲಿ ಕೇವಲ ವೈದಿಕರು ಮಾತ್ರವಲ್ಲ, ಅವೈದಿಕ ಪರಂಪರೆಗಳೂ ತಮ್ಮ ಕೃತಿಗಳನ್ನು ಬರೆದಿವೆ. ಮಾಳವಿಕಾಗ್ನಿಮಿತ್ರಂ, ಅಭಿಜ್ಞಾನ ಶಾಕುಂತಲಂ, ವಿಕ್ರಮೋರ್ವಶೀಯಂ ಬರೆದ ಕಾಳಿದಾಸ, ಕಿರತಾರ್ಜುನೀಯ ಬರೆದ ಭಾರವಿ, ಉತ್ತರರಾಮಚರಿತ ಬರೆದ ಎಂಟನೇ ಶತಮಾನದ ಕವಿ – ನಾಟಕಕಾರ ಭವಭೂತಿ, ಕ್ರಿ.ಪೂ 7 ರಿಂದ 4 ನೇ ಶತಮಾನದ ವರೆಗೆ ಜೀವಿಸಿದ್ದ ಅಷ್ಟಾಧ್ಯಾಯಿ ಬರೆದ ಮಹಾವೈಯಾಕರಣಿ ಪಾಣಿನಿ…ಇವರೆಲ್ಲರೂ ಸಂಸ್ಕೃತದಲ್ಲಿ ಬರೆದರು. ಇವರೆಲ್ಲರ ಬಗ್ಗೆ ಅಪಾರ ಗೌರವವಿದೆ. 

ಬೌದ್ಧರು ಜನಸಾಮಾನ್ಯನನ್ನು ತಲುಪಲು, ವರ್ಣಾಶ್ರಮವನ್ನು ಪ್ರತಿಪಾದಿಸಲು ಬಳಸಲ್ಪಟ್ಟ ಸಂಸ್ಕೃತವನ್ನು ಬಿಟ್ಟು ಪ್ರಾಕೃತವನ್ನು ಬಳಸಿದರು. ದೇವನಾಂಪಿಯ ಪಿಯದಸಿ ಅಸೋಕ ಸೇರಿದಂತೆ ಮೌರ್ಯರೂ, ಶಾತವಾಹನರು ಪ್ರಾಕೃತದಲ್ಲಿಯೇ ಶಾಸನಗಳನ್ನು ಬರೆದರು. ಆ ನಂತರ ಬಂದ ಕದಂಬರು ಬ್ರಾಹ್ಮಣರಿಗೆ ಹೇರಳವಾಗಿ ಊರುಗಳನ್ನು, ಭೂಮಿಯನ್ನು ದಾನ ಕೊಡುತ್ತಾ, ದಕ್ಷಿಣ ಭಾರತದಲ್ಲಿ ಅವರನ್ನು ನೆಲೆಯೂರಿಸುವಾಗ ತಮ್ಮ ಆರಂಭಿಕ ಶಾಸನಗಳನ್ನು ಸಂಸ್ಕೃತದಲ್ಲಿ ಹಾಕಿಸಿದರು. 

ಸಂಸ್ಕೃತದ ಬಗ್ಗೆ ವೈಯಕ್ತಿಕವಾಗಿ ಕನ್ನಡ, ತುಳು, ತಮಿಳು, ಮಲಯಾಳಂ, ಹಿಂದಿ, ಇಂಗ್ಲೀಷ್‌ ಭಾಷೆಗಳನ್ನು ಮಾತನಾಡಲು ಬರುವ ನಂಗೆ ಆ ಭಾಷೆಗಳಿಗೆ ಕೊಡುವಷ್ಟೇ ಗೌರವವವನ್ನು, ಎಲ್ಲಾ ಭಾಷೆಗಳಿಗೆ ಕೊಡುವ ಗೌರವವನ್ನು ಸಂಸ್ಕೃತಕ್ಕೂ ಕೊಡುತ್ತೇನೆ. ನನಗೆ ಇಲ್ಲಿ ಯಾವ ಭಾಷೆಯೂ ಮೇಲಲ್ಲ, ಕೀಳಲ್ಲ. ಯಾವದೇ ಭಾಷೆಯನ್ನು ಮಾತನಾಡಿದರೂ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯೂ ಇಲ್ಲ. ಬದಲಾಗಿ, ಯಾವುದೇ ಭಾಷೆಯನ್ನು ಮಾತನಾಡಲು ಕಲಿತರೆ ಅದರಲ್ಲಿ ಇರುವ ಜ್ಞಾನ ಸಂಪತ್ತನ್ನು ದಕ್ಕಿಸಿಕೊಳ್ಳುವುದೇ ಒಂದು ಸ್ವರ್ಗ. ಕನ್ನಡದಲ್ಲಿ ಪಂಪನ ಆದಿಪುರಾಣ, ರನ್ನನ ಗದಾಯುದ್ಧ ಮೊದಲಾದ ಕಾವ್ಯಗಳೂ, ಮಂಟೇಸ್ವಾಮಿ ಕಾವ್ಯ ಮೊದಲಾದ ಹೇರಳವಾದ ಜಾನಪದ ಪರಂಪರೆಯಿದೆ. ತುಳುನಾಡಿನಲ್ಲಿ ತುಳು ಪಾಡ್ದನ ಹಾಡುವ ಕನಿಷ್ಟ ಒಬ್ಬ ಕವಿಯಾದರೂ ಸಿಗುತ್ತಾನೆ. ತಮಿಳಿನಲ್ಲಿ ತಮಿಳಕಂನ ಇತಿಹಾಸವನ್ನು ಬಿಚ್ಚಿಡುವ ಅಗನಾನೂರು, ಪುರನಾನೂರು, ಕುರುತ್ತೊಕೈ, ಮಣಿಮೇಖಲೈ ಮೊದಲಾದ ಸಂಗಂ ಸಾಹಿತ್ಯವಿದೆ, ತೋಳ್ಕಾಪ್ಪಿಯಂನಂತಹ ವ್ಯಾಕರಣವಿದೆ. ಎಲ್ಲದರ ಮೇಲೂ ಗೌರವ, ಆಸಕ್ತಿ ನನಗಿದೆ.

ಆದರೆ ಸಂಸ್ಕೃತ ಮಾತನಾಡಿದರೆ ಸ್ವರ್ಗ ಸಿಗುತ್ತದೆ ಎಂಬ ನಂಬಿಕೆಯಿಲ್ಲ. ನಾನು ಸ್ವರ್ಗದ ಮೇಲೆ ನಂಬಿಕೆಯಿಲ್ಲದ ಸಮುದಾಯದಿಂದ ಬಂದವನು. ನಮ್ಮ ಮನೆಯಲ್ಲಿ ಯಾರಾದರು ಸತ್ತರೆ ಅವರು ಹಿಂದೆ ಸಂದಿಹೋಗಿರುವ ಹದಿನಾರು ಮಂದಿ ಹಿರಿಯರ ಜೊತೆಗೆ ಸೇರುತ್ತಾನೆ ಎಂದು ನಂಬಿದ್ದೇವೆಯೇ ಹೊರತು, ಸ್ವರ್ಗಕ್ಕೆ ಹೋಗುತ್ತಾನೆ ಎಂಬ ನಂಬಿಕೆ ನಮ್ಮಲ್ಲಿ ಇಲ್ಲ. ಬಹುತೇಕ ಭಾರತೀಯ ಸಮುದಾಯಗಳಲ್ಲಿ ಸ್ವರ್ಗದ ಪರಿಕಲ್ಪನೆಯೇ ಇಲ್ಲ.

ಇರುವುದು ಒಂದೇ ಸ್ವರ್ಗ, ಅದು ಕಾಸರಗೋಡಿನಿಂದ ಸುಮಾರು ಮೂಮತ್ತಮೂರು ಕಿಲೋಮೀಟರ್‌ ದೂರದಲ್ಲಿ ಇರುವ ಸ್ವರ್ಗವೆಂಬ ಊರು. ಅದೂ ಎಂಡೋಸಲ್ಫಾನ್‌ ಬಾಧೆಗೆ ತುತ್ತಾಗಿ ನರಕವಾಗಿದೆ! ಅಲ್ಲಿಗೆ ಹೋಗುವವರಿಗೆ ಸಂಸ್ಕೃತ ಬರಬೇಕಾಗಿಲ್ಲ, ಕನ್ನಡ, ತುಳು, ಮಲಯಾಳಂ ಮಾತನಾಡಲು ಬಂದರೆ ಸಾಕು. 

ಸಂಸ್ಕೃತ ಎಲ್ಲಾ ಭಾಷೆಗಳ ತಾಯಿಯೇ?

ಸಂಸ್ಕೃತ ಇಂಡೀ-ಯುರೋಪಿಯನ್‌ ಭಾಷಾವರ್ಗಕ್ಕೆ ಸೇರಿದ ಭಾಷೆ. ಭಾರತದಲ್ಲಿ ಸಂಸ್ಕೃತ ಹೇಗೋ, ಯುರೋಪಿನಲ್ಲಿ ಗ್ರೀಕ್‌, ಲ್ಯಾಟಿನ್‌ ಭಾಷೆಗಳೂ ಅದೇ ಸ್ಥಾನವನ್ನು ಹೊಂದಿವೆ. ಋಗ್ವೇದದಲ್ಲಿ ಇರುವ ಸಂಸ್ಕೃತವೇ ಬೇರೆ, ಈಗ ಬಳಕೆಯಲ್ಲಿ ಇರುವ ಸಂಸ್ಕೃತವೇ ಬೇರೆ ಎಂಬಂತೆ ಬದಲಾವಣೆಗಳಾಗಿವೆ. ಋಗ್ವೇದದ ಭಾಷೆಯನ್ನು “ಋಗ್ವೇದಿಕ್‌ ಸಂಸ್ಕೃತ” ಅಥವಾ “ಹಳೆಯ ಇಂಡಿಕ್‌ ಭಾಷೆ” ಎಂದು ಕರೆಯುತ್ತೇವೆ. ಈ  ಋಗ್ವೇದಿಕ್‌ ಸಂಸ್ಕೃತದ ಮೊದಲ ಶಾಸನ ಪತ್ತೆಯಾಗಿದ್ದು ಭಾರತದಲ್ಲಿ ಅಲ್ಲ, ಉತ್ತರ ಸಿರಿಯಾದಲ್ಲಿ. 

ಪ್ರಾಚೀನ ಕಾಲದಲ್ಲಿ ಧಾರ್ಮಿಕ ಜಿಜ್ಞಾಸೆಗಳಿಗೆ ಬಳಸಲಾಗುತ್ತಿದ್ದ ಸಂಸ್ಕೃತಕ್ಕೂ ಆಗ ಮಾತನಾಡಲು ಬಳಸುತ್ತಿದ್ದ ಬೇರೆ ಬೇರೆ ಸಂಸ್ಕೃತಗಳಿಗೂ ವ್ಯತ್ಯಾಸವಿತ್ತು. ನಮಗೆ ಸದ್ಯ ಲಭ್ಯವಿರುವ ಸಂಸ್ಕೃತದ ಅತ್ಯಂತ ಹಳೆಯ ವ್ಯಾಕರಣವೆಂದರೆ ಕ್ರಿ.ಪೂ ಐದನೇ ಶತಮಾನದಲ್ಲಿ ಪಾಣಿನಿ ಬರೆದ ಅಷ್ಟಾಧ್ಯಾಯಿ. ವೇದಗಳ ಕಾಲದ ನಂತರ ಸಂಸ್ಕೃತವನ್ನು ಧಾರ್ಮಿಕ ಗ್ರಂಥಗಳನ್ನು ಬರೆಯಲು ಮಾತ್ರವಲ್ಲದೆ, ಸ್ವತಂತ್ರ ಸಾಹಿತ್ಯ ರಚನೆಗೂ ಬಳಸಲಾಯಿತು, ನಾಟಕ, ಕಾವ್ಯಗಳು ಬಂದವು. 

ಶಾತವಾಹನರ ಕಾಲದಲ್ಲಿ ಸಂಸ್ಕೃತ ಮೆಲ್ಲನೆ ದಕ್ಷಿಣ ಭಾರತವನ್ನು ಹರಡಲು ಆರಂಭಿಸಿತು. ಕರ್ನಾಟಕದಲ್ಲಿ ಲಭ್ಯವಿರುವ ಅತ್ಯಂತ ಪ್ರಾಚೀನ ಸಂಸ್ಕೃತ ಶಾಸನವೆಂದರೆ ಕದಂಬ ದೊರೆ ಕಾಕುಸ್ಥವರ್ಮನ ಐದನೇ ಶತಮಾನದ ತಾಳೆಗುಂದ ಸ್ಥಂಭ ಶಾಸನ. ಕದಂಬರು ಬ್ರಾಹ್ಮಣರಿಗೆ ಊರು, ಹಳ್ಳಿಗಳನ್ನು ದತ್ತಿಕೊಡುತ್ತಿದ್ದರು. ಕೇರಳ, ತುಳುನಾಡಿಗೆ ಇವರು ಬ್ರಾಹ್ಮಣರನ್ನು ಕರೆತಂದರು. ಐದನೇ ಶತಮಾನದಲ್ಲಿ ಕದಂಬ ದೊರೆ ರವಿವರ್ಮ ಬ್ರಾಹ್ಮಣರಿಗೆ ಊರನ್ನು ದತ್ತಿಕೊಟ್ಟ ಉಲ್ಲೇಖ ಕೇರಳದ ನಿಲಂಬೂರು ತಾಮ್ರಶಾಸನದಲ್ಲಿ ಬರುತ್ತದೆ. ತುಳುನಾಡಿನ ಮತ್ತು ಕೇರಳದ ಬ್ರಾಹ್ಮಣರು ತಮ್ಮನ್ನು ಅಹಿಚ್ಛತ್ರಕ್ಷೇತ್ರದಿಂದ ಕದಂಬ ದೊರೆ ಮಯೂರವರ್ಮ ಕರೆತಂದ ಎಂದು ಈಗಲೂ ಹೇಳಿಕೊಳ್ಳುತ್ತಾರೆ. ಇದೇ ಕಥೆಯನ್ನು ಕೇರಳೋತ್ಪತ್ತಿ, ಗ್ರಾಮಪದ್ಧತಿ, ಸ್ಕಂದಪುರಾಣದ ಸಹ್ಯಾದ್ರಿಖಂಡ ಕೂಡ ಹೇಳುತ್ತದೆ. ಹೀಗೆ ಸಂಸ್ಕೃತ ದಕ್ಷಿಣ ಭಾರತಕ್ಕೆ ಲಗ್ಗೆ ಇಟ್ಟಿತು. 

ಮೌರ್ಯರ ಕಾಲದಿಂದ ಶಾತವಾಹನರ ಕಾಲದ ವರೆಗೆ ಪ್ರಚಾರದಲ್ಲಿದ್ದ ಬೌದ್ಧರು ನಿಧಾನವಾಗಿ ಕಣ್ಮರೆಯಾಗುತ್ತಾ ಬಂದರು. ಕದ್ರಿ ಮೊದಲಾದ ಬೌದ್ಧ ವಿಹಾರಗಳು (ಹತ್ತನೇ ಶತಮಾನದ ಆಲೂಪ ದೊರೆ ಕುಂದವರ್ಮ ಸ್ಥಾಪಿಸಿದ ಕದರಿಯ ಅವಲೋಕಿತೇಶ್ವರ ಪ್ರತಿಮೆಯಲ್ಲಿರುವ ಗ್ರಂಥ ಲಿಪಿಯ ಶಾಸನದಲ್ಲಿ ಇದು ಕದರಿಕಾ ವಿಹಾರ) ದೇವಾಲಯಗಳಾಗಿ ಬದಲಾದವು. ಜನರನ್ನು ಬೆಸೆಯಲು ಪ್ರಯತ್ನಿಸಿದ ಪ್ರಾಕೃತ ಕೂಡ ವಿಫಲವಾಗಿ ದಕ್ಷಿಣ ಭಾರತದಿಂದ ಇಲ್ಲವಾಯಿತು.

ಸಾಮಾನ್ಯವಾಗಿ ಎಲ್ಲಾ ಭಾಷೆಗಳೂ ಸಂಸ್ಕೃತದಿಂದ ಹುಟ್ಟಿದವು ಎಂಬ ವಾದವನ್ನು ಮಾಡುವವರು ಕನ್ನಡ, ತುಳು ಮೊದಲಾದ ಭಾಷೆಗಳಲ್ಲಿ ಇರುವ ಪದಗಳ ಎಟಿಮೊಲಾಜಿಕಲ್‌ ಮೂಲವನ್ನು ಸಂಸ್ಕೃತಕ್ಕೆ ಜೋಡಿಸಿ ಹೇಳುತ್ತಾರೆ.

ಉದಾಹರಣೆಗೆ: ಕನ್ನಡ-ತುಳುವಿನ ಸಕ್ಕರೆ ಸಂಸ್ಕೃತದ ಶರ್ಕರದಿಂದ ಬಂದಿದೆ ಎಂದು. ಇದು ಸಂಸ್ಕೃತದಿಂದಲೇ ಬಂದಿದ್ದು ಎಂದು ಹೇಗೆ ಹೇಳುವುದು? ಇದು ಪ್ರಾಕೃತ ಭಾಷೆಯ ಸಕ್ಕರ ಅಥವಾ ಸುಕ್ಕರ ಎಂಬ ಪದದಿಂದಲೂ ಬಂದಿರಬಹುದು. ತುಳುವರು ಸತ್ತವರನ್ನು ಹೂಳುವ ಅಥವಾ ಸುಟ್ಟ ನಂತರ ಆ ಜಾಗದಲ್ಲಿ ಕಟ್ಟುವ ಸಮಾಧಿಗೆ “ದೂಪೆ” ಎಂದು ಕರೆಯುತ್ತಾರೆ, ಇದು ಬೌದ್ಧರು ಬುದ್ಧನ ಅವಶೇಷಗಳನ್ನು ಇಟ್ಟಿರುವ “ಸ್ತೂಪ” ಎಂಬ ಪದದಿಂದ ಬಂದಿದೆ. ತುಳುವರು ಹೆಣ ಸುಡುವ ಕಟ್ಟಿಗೆಯ ರಾಶಿಗೆ “ಕಾಟ” ಎಂದು ಕರೆಯುತ್ತಾರೆ. ಪ್ರಾಕೃತದಲ್ಲಿಯೂ ಕಾಟ ಎಂದೇ ಕರೆಯುತ್ತಾರೆ.

ಕನ್ನಡ, ತುಳು, ಮಲಯಾಳಂ, ತಮಿಳು, ತೆಲುಗು ಮೊದಲಾದ ದಕ್ಷಿಣ ಭಾರತದ ಭಾಷೆಗಳೂ, ಪಾಕಿಸ್ತಾನದಲ್ಲಿ ಮಾತನಾಡುವ ಬ್ರಾಹುಯಿ, ಉತ್ತರ ಭಾರತದದಲ್ಲಿ ಮಾತನಾಡುವ ಮಾಲ್ಟೋ, ಕುರುಕ್‌, ಮಧ್ಯಭಾರತದಲ್ಲಿ ಮಾತನಾಡುವ ಕೊಲಮಿ, ನೈಕಿ, ಪರ್ಜಿ, ಒಲ್ಲಾರಿ, ಗಡಬ, ಗೊಂಡ, ಮಂಡ, ಕುಯ್‌, ಪೆಂಗೋ ಮೊದಲಾದ ಭಾಷೆಗಳು ದ್ರಾವಿಡ ಭಾಷಾವರ್ಗಕ್ಕೆ ಸೇರಿದ ಭಾಷೆಗಳು. 

ಹಿಂದಿ, ಸಂಸ್ಕೃತ, ಅವಧಿ, ಭೋಜ್‌ಪುರಿ, ಪ್ರಾಕೃತ, ಲ್ಯಾಟಿನ್‌, ಗ್ರೀಕ್‌, ಇಂಗ್ಲೀಷ್ ಮೊದಲಾದವು‌ ಯುರೋಪಿಯನ್‌ ಭಾಷೆಗಳು ಇಂಡೋ ಆರ್ಯನ್‌ ಭಾಷಾವರ್ಗಕ್ಕೆ ಸೇರಿದವರು. 

ಆಗಲೇ ಹೇಳಿದಂತೆ, ಇಂದು ಬಳಕೆಯಲ್ಲಿ ಇಲ್ಲದ ಋಗ್ವೇದದ ಸಂಸ್ಕೃತದ ಮೊದಲ ಶಾಸನ ಸಿಕ್ಕಿದ್ದು ಉತ್ತರ ಸಿರಿಯಾದಲ್ಲಿ . ಇದು 1500 ಮತ್ತು 1350 BC ನಡುವೆ, ಅಪ್ಪರ್‌ ಯೂಫ್ರಟಿಸ್-ಟೈಗ್ರಿಸ್ ಜಲಾನಯನ ಪ್ರದೇಶವನ್ನು ಆಳಿದ ಮಿಟಾನಿ ಎಂಬ ರಾಜವಂಶದ ಶಾಸನ. ಇವರ ಸಾಮ್ರಾಜ್ಯ ಈಗಿನ ಸಿರಿಯಾ, ಇರಾಕ್ ಮತ್ತು ಟರ್ಕಿ ದೇಶಗಳಿಗೆ ಹರಡಿಕೊಂಡಿತ್ತು. ಮಿಟಾನಿಗಳು ಸಂಸ್ಕೃತಕ್ಕೆ ಸಂವಾದಿಯಾದ ಹುರಿಯನ್ ಎಂಬ ಭಾಷೆಯನ್ನು ಮಾತನಾಡುತ್ತಿದ್ದರು. ಮಿಟಾನಿ ರಾಜರು ತಮಗೆ ಸಂಸ್ಕೃತದ ಹೆಸರನ್ನು ಇಟ್ಟುಕೊಂಡಿದ್ದರು. ಉದಾಹರಣೆಗೆ ಪುರುಷ, ತುಸ್ರತ್ತಾ, ಸುವರ್ದತ, ಸುಬಂಧು, ಇಂದ್ರೊತ ಇತ್ಯಾದಿ. ಸಂಖ್ಯೆಗಳು ಕೂಡ  ಐಕ ಅಂದ್ರೆ ಏಕ, ತೇರಾ ಅಂದ್ರೆ ಮೂರು, ಸತ್ತಾ ಎಂದರೆ ಸಪ್ತ.  ಸಂಸ್ಕೃತಗಳನ್ನು ಮಾತನಾಡುವ ಆರ್ಯನ್‌ ಬುಡಕಟ್ಟಿನಂತೆ ಇವರಲ್ಲೂ ಕುದುರೆಗಳಿಗೆ ಅಸುವಾ ಎಂದು ಕರೆಯುತ್ತಾರೆ. 

ಕ್ರಿ.ಪೂ 1380 ರಲ್ಲಿ ಪ್ರತಿಸ್ಪರ್ಧಿ ರಾಜನೊಂದಿಗೆ ಒಪ್ಪಂದಕ್ಕೆ ಸಹಿ ಹಾಕುವಾಗ ಮಿಟಾನಿ ರಾಜನೊಬ್ಬ ಇಂದ್ರ, ವರುಣ, ಮಿತ್ರ ಮತ್ತು ನಾಸತ್ಯರನ್ನು (ಅಶ್ವಿನಿ ದೇವತೆಗಳು) ದೈವಸಾಕ್ಷಿಗಳಾಗಿ ಶಾಸನದಲ್ಲಿ ಹೆಸರಿಸುತ್ತಾನೆ .ಇವರೆಲ್ಲಾ ಋಗ್ವೇದದ ಪ್ರಮುಖ ದೇವರುಗಳು.

ಈ ಲ್ಯಾಟಿನ್‌, ಸಂಸ್ಕತ, ಗ್ರೀಕ್‌ ಮೊದಲಾದ ಭಾಷೆಗಳ ಮೂಲ ಭಾಷೆಯನ್ನು ಪ್ರೋಟೋ ಇಂಡೋ ಯುರೋಪಿಯನ್ ಭಾಷೆ ಎಂದು ಕರೆಯಲಾಗುತ್ತದೆ. ತಮಿಳು, ಕನ್ನಡ, ತುಳು, ತೆಲುಗು, ಕೊರಗ ಮೊದಲಾದ ಭಾಷೆಗಳ ಮೂಲ ಭಾಷೆಯನ್ನು ಪ್ರೋಟೋ ದ್ರಾವಿಡಿಯನ್‌ ಭಾಷೆ ಎಂದು ಕರೆಯಲಾಗುತ್ತದೆ. ಇವೆರಡೂ ಬೇರೆ ಬೇರೆ ಭಾಷಾ ಕುಟುಂಬಗಳು. 

ಈ “ಪ್ರೋಟೋ ಇಂಡೋ ಯುರೋಪಿಯನ್ ಭಾಷೆಯ” ಮಗಳನ್ನು ಅಂದರೆ, ಒಂದು ಕವಲನ್ನು ಭಾಷಾಶಾಸ್ತ್ರದಲ್ಲಿ “ಪ್ರೋಟೋ-ಇಂಡೋ-ಇರಾನಿಯನ್‌” ಎಂದು ಕರೆಯಲಾಗುತ್ತದೆ. ಇದರಿಂದಲೇ ಸಂಸ್ಕೃತ, ಹಿಂದಿ ಮೊದಲಾದ ಉತ್ತರ ಭಾರತದ ಭಾಷೆಗಳೂ, ಇರಾನಿನ ಭಾಷೆಗಳೂ ಹುಟ್ಟಿದ್ದು. 

ಜೆಪಿ ಮಲ್ಲೋರಿ ಮತ್ತು ಡಿಕ್ಯೂ ಆಡಮ್ಸ್‌ ಸಂಪಾದನೆ ಮಾಡಿರುವ “ಎನ್‌ಸೈಕ್ಲೋಪಿಡಿಯಾ ಆಫ್‌ ಇಂಡೋ-ಯುರೋಪಿಯನ್‌ ಕಲ್ಚರ್‌ನಲ್ಲಿ” ಈ ಪ್ರೋಟೋ-ಇಂಡೋ-ಇರಾನಿಯನ್‌ ಭಾಷಿಕರು ಮೊದಲು ಉರಾಲ್ ಶ್ರೇಣಿಗಳ ದಕ್ಷಿಣದಲ್ಲಿ ಮತ್ತು ಕಝಕಿಸ್ತಾನ್‌ನಲ್ಲಿ ಕಾಣಿಸಿಕೊಂಡರು ಎಂದು ಹೇಳಲಾಗಿದೆ. ಕ್ರಿ.ಪೂ 2000 ರ ಮೊದಲು ಜೀವಿಸಿದ್ದ ಈ ಸ್ಟೆಪ್ಪಿ ಜನರು ಆಂಡ್ರೋನೊವೊ ಸಂಸ್ಕೃತಿಯವರು.

ಇವರಿಂದ ಬೇರೆಯಾದ ಒಂದು ಗುಂಪು  ಪ್ರೋಟೋ-ಇಂಡೋ-ಇರಾನಿಯನ್‌ ಭಾಷೆಯನ್ನು ಬಿಟ್ಟು, ತಮ್ಮ ತಾಯ್ನೆಲವಾದ ಮಧ್ಯ ಏಷ್ಯಾವನ್ನು ತೊರೆದು ಸಂಸ್ಕೃತದ ಮೂಲ ಭಾಷೆಯನ್ನು ಮಾತನಾಡಲು ಶುರು ಮಾಡಿದರು. ಇವರ ಒಂದು ಗುಂಪು ಪಶ್ಚಿಮಕ್ಕೆ ನಡೆದು ಸಿರಿಯಾ ಸೇರಿದರೆ, ಇನ್ನೊಂದು ಗುಂಪು ಪೂರ್ವಕ್ಕೆ ನಡೆದು ಭಾರತದ ಪಂಜಾಬ್‌ ಪ್ರದೇಶಕ್ಕೆ ಬಂತು.

The Horse, the Wheel, and Language: How Bronze-Age Riders from the Eurasian Steppes Shaped the Modern World ಯಲ್ಲಿ ಡೇವಿಡ್ ಆಂಥೋನಿ ಹೇಳುವಂತೆ ಪಶ್ಚಿಮದ ಕಡೆಗೆ ಹೋದ ಜನರ ಗುಂಪು ಬಹುಶಃ ಸಿರಿಯಾದ ಹುರಿಯನ್ ರಾಜರಿಂದ ಸಾರಥಿಗಳಾಗಿ ನೇಮಕಗೊಂಡರು. ಈ ಸಾರಥಿಗಳು ಅವರದೇ ಭಾಷೆಯಲ್ಲಿ ಮಾತನಾಡುತ್ತಿದ್ದರು. ಪೂರ್ವಕ್ಕೆ ಬಂದ ಅವರದೇ ಜನರಿಂದ ಋಗ್ವೇದ ರಚನೆಯಾಯಿತು. ಈ ಎರಡೂ ಪಂಗಡಗಳೂ ಋಗ್ವೇದಿಕ್‌ ಸಂಸ್ಕೃತ ಮಾತನಾಡುತ್ತಿದ್ದರು.

ಈ ಋಗ್ವೇದ ಸಂಸ್ಕೃತ ಭಾಷೆಯನ್ನು ಮಾತನಾಡುವ ಜನರು ಸಿರಿಯಾಗೆ ಹೋಗಿ ಅಲ್ಲಿನ ಮೂಲ ರಾಜರನ್ನು ಪತನ ಮಾಡಿ ಅವರ ಸಿಂಹಾಸನದಲ್ಲಿ ಮಿಟಾನಿ ಸಾಮ್ರಾಜ್ಯವನ್ನು ಸ್ಥಾಪಿಸಿದರು. ಕ್ರಮೇಣ ತಮ್ಮ ಮೂಲ ಸಂಸ್ಕೃತಿಯನ್ನು ಕಳೆದುಕೊಂಡರು. ಸ್ಥಳೀಯ ಹುರಿಯನ್ ಭಾಷೆ ಮತ್ತು ಧರ್ಮವನ್ನು ಅಳವಡಿಸಿಕೊಂಡರು. ಆದರೂ ರಾಜಮನೆತನದ ಹೆಸರುಗಳು, ರಥಕ್ಕೆ ಸಂಬಂಧಿಸಿದ ಕೆಲವು ತಾಂತ್ರಿಕ ಪದಗಳು ಮತ್ತು ಸಹಜವಾಗಿಯೇ ಅವರ ಮೂಲದೇವತೆಗಳಾದ ಇಂದ್ರ, ವರುಣ, ಮಿತ್ರ ಮತ್ತು ನಾಸತ್ಯರ ಹೆಸರುಗಳನ್ನು ಹಾಗೆಯೇ ಉಳಿಸಿಕೊಂಡರು. 

ಪೂರ್ವದ ಕಡೆಗೆ ನಡೆದ ಗುಂಪು ಋಗ್ವೇದವನ್ನು ರಚಿಸಿತು. ಅವರು ತಮ್ಮ ಸಂಸ್ಕೃತಿಯನ್ನು ರಕ್ಷಿಸಲು ಮತ್ತು ತಮ್ಮ ಭಾಷೆಯನ್ನು ಹರಡಲು ಸಶಕ್ತರಾದರು. ಅವರ ಭಾಷೆ ಮತ್ತು ಸಂಸ್ಕೃತಿ ಭಾರತದಲ್ಲಿ ಬೇರೂರಿತು. 

ಸುಮಾರು 1500 ವರ್ಷಗಳ ಹಿಂದೆ ದಕ್ಷಿಣ ಭಾರತವನ್ನು ಸಂಸ್ಕೃತ ಪ್ರವೇಶಿಸಿತು. ಇಲ್ಲಿನ ಬ್ರಾಹ್ಮಣರು ತಮ್ಮ ಸಾಹಿತ್ಯಗಳಲ್ಲಿಯೇ ತಮ್ಮನ್ನು ವಲಸೆ ಬಂದವರು ಎಂದು ಕರೆಸಿಕೊಂಡಿದ್ದಾರೆ. ತುಳುವ ಬ್ರಾಹ್ಮಣರೂ ತಮ್ಮನ್ನು ಅಹಿಚ್ಛತ್ರ ಕ್ಷೇತ್ರದಿಂದ ಕದಂಬರ ಅರಸ  ಮಯೂರವರ್ಮನೇ ಕರೆತಂದು ಘಟ್ಟದ ಕೆಳಗಿನ ದೇಶವನ್ನು ಅರವತ್ನಾಲ್ಕು ಭಾಗಗಳಾಗಿ ಹಂಚಿಕೊಟ್ಟಿದ್ದಾಗಿ ನಂಬುತ್ತಾರೆ.

ಕೇರಳ ನಂಬೂದಿರಿ ಬ್ರಾಹ್ಮಣರೂ ಕೇರಳೋತ್ಪತಿ ಮತ್ತು ಕೇರಳಮಾಹಾತ್ಮ್ಯ ವೃತ್ತಾಂತಗಳನ್ನು ಆಧರಿಸಿ ತಮ್ಮದೇ ಆದ ಕಥನವನ್ನು ಹೊಂದಿದ್ದಾರೆ. ಕೇರಳೋತ್ಪತಿಯ ಪ್ರಕಾರ ಪೌರಾಣಿಕ ವೀರನಾದ ಪರಶುರಾಮನು ಪಶ್ಚಿಮ ಕರಾವಳಿಯಲ್ಲಿ ಬ್ರಾಹ್ಮಣರಿಗಾಗಿ ಗ್ರಾಮಗಳನ್ನು ಸ್ಥಾಪಿಸಿದನು, ಅದರಲ್ಲಿ 32 ತುಳು ದೇಶದಲ್ಲಿಯೂ ಮತ್ತು ಉಳಿದವು ಕೇರಳದಲ್ಲಿಯೂ ಇದ್ದವು. ಅಯ್ಯಪುರಂ ಅಥವಾ ಅಹಿಚ್ಛತ್ರವು ಅವರ ಪೂರ್ವಜರ ಮನೆಯಾಗಿತ್ತು ಎಂದು ಅವರು ನಂಬುತ್ತಾರೆ. 

ನಂಬೂದಿರಿ ಬ್ರಾಹ್ಮಣರು ಪರಶುರಾಮನ ನಂತರ ಮಯೂರವರ್ಮನ್  ತಮಗೆ ಆಶ್ರಯ ನೀಡಿದವನು ಎಂದು ಹೇಳುತ್ತಾರೆ. ಕೇರಳದಲ್ಲಿ ಕದಂಬರು ಬ್ರಾಹ್ಮಣರನ್ನು ನೆಲೆಗೊಳಿಸಿದ್ದಕ್ಕೆ ಪೂರಕವಾದ ಮಾಹಿತಿಯನ್ನು ಐದನೇ ಶತಮಾನದ ಕದಂಬ ದೊರೆ ರವಿಮರ್ಮನ ನಿಲಂಬೂರಿನ ತಾಮ್ರಶಾಸನ ನೀಡುತ್ತದೆ.

ಹೀಗಿರುವಾಗ ಪುತ್ತಿಗೆ ಸ್ವಾಮಿಗಳು ಮಾತ್ರವಲ್ಲ, ಹಿಂದುತ್ವ ಕಟ್ಟುವ ಸುಳ್ಳು ಚರಿತ್ರೆಗಳು ಯಾವ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ ಎಂದು ಹೇಳುತ್ತಿವೆ? ತುಳುವಿನ ಮದಿಮೆ, ಹೆಣ್ಣು, ಗಂಡು, ಅಣ್ಣ, ಅಕ್ಕ ಮೊದಲಾದ ಪದಗಳ ಸಂಸ್ಕೃತ ಮೂಲ ಏನು? ಎಲ್ಲಾ ಭಾಷೆಗಳೂ ಬೇರೆ ಭಾಷೆಗಳಿಂದ ಪದಗಳನ್ನು ಎರವಲು ಪಡೆದು ಬೆಳೆಯುತ್ತವೆ. ಇಡೀ ಜಗತ್ತೇ ಬಳಸುವ ರಿಕ್ಷಾ ಎಂಬ ಪದ ಜಪಾನಿ ಭಾಷೆಯ ಜಿನ್‌ರಿಕಿಶಾ (Jinrikisha) ಎಂಬ ಪದದಿಂದ ಬಂದಿದೆ. ಜಿನ್‌ ಅಂದ್ರೆ ಮನುಷ್ಯ, ರಿಕಿ ಅಂದ್ರೆ ಶಕ್ತಿ, ಶಾ ಅಂದ್ರೆ ಗಾಡಿ.

ಮಲಯಾಳಂ, ತುಳು, ಕನ್ನಡ ಭಾಷೆಗಳ ಅಡಕೆ, ಅರಕ್ಕವನ್ನು ಇಂಗ್ಲೀಷ್‌ ಅರೇಕಾ ಮಾಡಿಕೊಂಡಿದೆ. ತಮಿಳು, ಮಲಯಾಳಂನ ವೆತ್ತಲೈ, ವೆತ್ತಲೆ ಎಂಬ ವೀಳ್ಯದೆಲೆಯನ್ನು ಇಂಗ್ಲೀಷರು ಮತ್ತು ಪೋರ್ಜುಗೀಸರು ಬೀಟೆಲ್‌ ಎಂದು ಬಳಸಿದರು. ತಮಿಳಿನಿ ಅರ್ಸಿ, ತುಳುವಿನ ಅರಿ ಇಂಗ್ಲೀಷಿನ ರೈಸ್‌ ಆಗಿದೆ. ನಾವು ಬಳಸುವ ತಾಂಬೂಲ ಎಂಬ ಪದವೇ ಫರ್ಷಿಯನ್‌ ಪದ. ಈ ರೀತಿ ಸಂಸ್ಕೃತವನ್ನು ಎಲ್ಲಾ ಭಾಷೆಗಳ ತಾಯಿ. ಎಲ್ಲಾ ಭಾಷೆಗಳೂ ಅದರಿಂದಲೇ ಹುಟ್ಟಿದ್ದು ಎನ್ನುವುದು ಅಪ್ಪಟ ಸುಳ್ಳು. ಅದು ಸಂಸ್ಕೃತಕ್ಕೆ ಮಾಡಿದ ಅವಮಾನ.

ಚರಣ್‌ ಐವರ್ನಾಡು, ಬೆಂಗಳೂರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page