Saturday, September 21, 2024

ಸತ್ಯ | ನ್ಯಾಯ |ಧರ್ಮ

ಹೈಕೋರ್ಟ್‌ ನ್ಯಾಯಾಧೀಶರ ʼಪಾಕಿಸ್ತಾನʼ ಹಾಗೂ ʼಒಳ ಉಡುಪುʼ ಹೇಳಿಕೆಗಳು ಅವರ ಸ್ಥಾನಕ್ಕೆ ಯೋಗ್ಯವಲ್ಲ- ನಿವೃತ್ತ ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ

ಬೆಂಗಳೂರು: ಕರ್ನಾಟಕ ಹೈಕೋರ್ಟಿನ ನ್ಯಾಯಮೂರ್ತಿ ವೇದವ್ಯಾಸಾಚಾರ್ ಶ್ರೀಶಾನಂದ ಅವರು ಪ್ರಕರಣವೊಂದರ ವಿಚಾರಣೆಯ ಸಂದರ್ಭದಲ್ಲಿ ಮಾಡಿದ ಟಿಪ್ಪಣಿಗಳು ಎಬ್ಬಿಸಿದ ಅಲೆಗಳು ಇನ್ನೂ ಸದ್ದು ಮಾಡುತ್ತಿವೆ.

ಅವರ ʼಗೋರಿಪಾ‍ಳ್ಯ ಪಾಕಿಸ್ಥಾನದಲ್ಲಿದೆʼ ಎನ್ನುವ ಹೇಳಿಕೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದ ಹೊತ್ತಿನಲ್ಲೇ ಇನ್ನೊಂದು ಹೇಳಿಕೆ ಮುನ್ನೆಲೆಗೆ ಬಂದು ಅದು ಸುಪ್ರೀಂ ಕೋರ್ಟ್‌ ಹಿರಿಯ ವಕೀಲರಾದ ಇಂದಿರಾ ಜೈಸಿಂಗ್‌ ಅವರ ಕಣ್ಣಿಗೆ ಬಿದ್ದು ರಾಷ್ಟ್ರವ್ಯಾಪಿ ಟೀಕೆ ಕಾರಣವಾಯಿತು.

ವೇದವ್ಯಾಸಾಚಾರ್ ಶ್ರೀಶಾನಂದ ಅವರು ವಿಚಾರಣೆಯ ನಡುವೆ ವಕೀಲೆಯೊಬ್ಬರ ಮಾತನ್ನು ತಡೆಯುತ್ತಾ ʼನಿಮಗೆ ಅವರ ಕುರಿತು ಎಲ್ಲವೂ ತಿಳಿದಿರುವಂತಿದೆ, ಬಿಟ್ಟರೆ ನಾಳೆ ಬೆಳಗ್ಗೆ ಅವರು ಯಾವ ಬಣ್ಣದ ಒಳ ಉಡುಪು ತೊಟ್ಟಿದ್ದಾರೆ ಎನ್ನುವುದನ್ನು ಸಹ ಹೇಳುತ್ತೀರಿ” ಎಂದಿದ್ದರು. ಇದೊಂದು ಅಸೂಕ್ಷ ಹೇಳಿಕೆಯಾಗಿರುವ ಕಾರಣಕ್ಕೆ ಇಂದಿರಾ ಜೈಸಿಂಗ್‌ ಅವರು “ಸುಪ್ರೀಂ ಕೋರ್ಟ್‌ ಕೆಳಹಂತದ ಕೋರ್ಟುಗಳಿಗೆ ಲಿಂಗ ಸೂಕ್ಷ್ಮತೆಯನ್ನು ಕಲಿಸುವ ಅಗತ್ಯವಿದೆ” ಎಂದು ಹೇಳಿದ್ದರು.

ಅದಾದ ನಂತರ ಸುಪ್ರೀಂ ಕೋರ್ಟ್‌ ವಿಚಾರವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡು ನಿನ್ನೆ (ಸೆ.20) ವಿಚಾರಣೆ ನಡೆಸಿತ್ತು. ನಂತರ ಅದು ಕರ್ನಾಟಕ ಹೈಕೋರ್ಟಿಗೆ ನೋಟೀಸ್‌ ನೀಡಿ ಮುಂದಿನ ವಿಚಾರಣೆಯನ್ನು ಇದೇ ತಿಂಗಳ 25ನೇ ತಾರೀಖಿಗೆ ಮುಂದೂಡಿದೆ.

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಹೇಳಿಕೆಗೆ ತೀವ್ರ ಆಕ್ಷೇವನ್ನೂ ವ್ಯಕ್ತಪಡಿಸಿದೆ.

ಇದೀಗ ಇದೇ ವಿಷಯವಾಗಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಲೋಕಾಯುಕ್ತರಾದ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಪ್ರತಿಕ್ರಿಯಿಸಿದ್ದಾರೆ.

ಅವರು ತಮ್ಮ ಪ್ರತಿಕ್ರಿಯೆಯಲ್ಲಿ, “ನ್ಯಾಯಾಧೀಶರು ಪ್ರಕರಣಕ್ಕೆ ಸಂಬಂಧಿಸಿದ ವಿಚಾರಗಳನ್ನಷ್ಟೇ ಮಾತನಾಡಬೇಕು, ಈ ನಿರ್ದಿಷ್ಟ ಪ್ರಕರಣದಲ್ಲಿ ನ್ಯಾಯಾಧೀಶರು ಮಾಡಿರುವ ಟಿಪ್ಪಣಿಗಳು ಆ ಸ್ಥಾನಕ್ಕೆ ಯೋಗ್ಯವಾದುದಲ್ಲ” ಎಂದು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ನ್ಯಾಯವನ್ನು ಎತ್ತಿ ಹಿಡಿಯಬೇಕಾದ ನ್ಯಾಯಾಧೀಶರೇ ಇಂತಹ ಹೇಳಿಕೆಗಳನ್ನು ನೀಡುವುದು ಬಹಳ ಅಸಮಂಜಸ. ಈ ವಿಷಯವಾಗಿ ನ್ಯಾಯಮೂರ್ತಿ ಕ್ಷಮೆ ಯಾಚಿಸಬೇಕು ಎಂದು ಹಲವು ನ್ಯಾಯವಾದಿಗಳು ಹಾಗೂ ನಿವೃತ್ತ ಅಡ್ವೋಕೇಟ್‌ ಜನರಲ್‌ಗಳು ಆಗ್ರಹಿಸಿದ್ದಾರೆ.

ವಿಡಿಯೋಗಳು ವೈರಲ್‌ ಆಗುತ್ತಿದ್ದಂತೆ ಕೋರ್ಟ್‌ ಎಚ್ಚರವಾಗಿದ್ದು, ಈಗ ಅದು ಕೋರ್ಟ್‌ ಅನುಮತಿಯಿಲ್ಲದ ಯೂಟ್ಯೂಬ್‌ ಲೈವ್‌ ಸ್ಟ್ರೀಮ್‌ ವಿಡಿಯೋಗಳನ್ನು ಕೋರ್ಟಿನ ಅನುಮತಿಯಿಲ್ಲದೆ ಮರುಪ್ರಸಾರವನ್ನು ಎಲ್ಲಿಯೂ ಮಾಡುವಂತಿಲ್ಲ ಎಂದು ಹೇಳಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page